ಚಿಕ್ಕಮಗಳೂರಿನ ಉಗ್ಗೇಹಳ್ಳಿಯ ದಲಿತ ಕುಟುಂಬಗಳಿಗೆ ಬೆಂಕಿಯೇ ಜೀವಾಧಾರ; ನಾಲ್ಕೈದು ದಶಕದಿಂದ ಅಂತ್ಯವಾಗಿಲ್ಲ ಇವರ ಪಾಡು

ಆ ಗ್ರಾಮಕ್ಕೆ ಬೆಂಕಿಯೇ ಜೀವಾಳ. ಬೆಂಕಿ ಇಲ್ಲದೇ ಅವರಿಗೆ ಬದುಕೇ ಇಲ್ಲ. ಮಳೆಗಾಲದಲ್ಲಿ ಮಲೆನಾಡಿಗರು ಆಹಾರ ಧಾನ್ಯ ಸಂಗ್ರಹಿಸಿಟ್ಟರೆ, ಆ ಗ್ರಾಮದ ಜನ ಸೌದೆಗಳನ್ನು ಒಂದೆಡೆ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ನಿನ್ನೆ-ಮೊನ್ನೆಯಿಂದಲ್ಲ, ಸುಮಾರು ಹತ್ತಾರು ವರ್ಷಗಳಿಂದ. ಸುತ್ತಲೂ ಮಳೆ. ಮನೆಯೊಳಗೆ ಬಿಸಿಯ ಧಗೆ-ಹೊಗೆ. ಸರ್ಕಾರಕ್ಕೆ ಈ ಗ್ರಾಮದೆಂದರೆ ನಿರ್ಲಕ್ಷ್ಯ. ಹೇಮಾವತಿಗೆ ಆಟ, ಜನರಿಗೆ ಪ್ರಾಣಸಂಕಟ. ಇವರ ಆತಂಕದ ಬದುಕಿಗಿದೆ ದಶಕಗಳ ಇತಿಹಾಸ. ಆ ಗ್ರಾಮ ಯಾವುದು, ಯಾಕೆ ಎನ್ನುವ ಕುತೂಹಲಕ್ಕೆ ಮುಂದೆ ಓದಿ.

Latha CG | news18-kannada
Updated:September 11, 2019, 6:36 PM IST
ಚಿಕ್ಕಮಗಳೂರಿನ ಉಗ್ಗೇಹಳ್ಳಿಯ ದಲಿತ ಕುಟುಂಬಗಳಿಗೆ ಬೆಂಕಿಯೇ ಜೀವಾಧಾರ; ನಾಲ್ಕೈದು ದಶಕದಿಂದ ಅಂತ್ಯವಾಗಿಲ್ಲ ಇವರ ಪಾಡು
ಚಿಕ್ಕಮಗಳೂರಿನ ಉಗ್ಗೇಹಳ್ಳಿಯ ಜನರ ಪಾಡು
  • Share this:
ಚಿಕ್ಕಮಗಳೂರು(ಸೆ. 11): ಬಿರುಕು ಬಿಟ್ಟ ಗೋಡೆಗಳು... ಶೀತದಿಂದ ಈಗಲೋ-ಆಗಲೋ ಅಂತಿರೋ ಮನೆಗಳು.... ಆಯಸ್ಸೇ ಇಲ್ಲದ ಗುಡಿಸಲು.... ಮೇಲಿಂದ ಮಳೆಯಬ್ಬರ... ವರುಣದೇವನ ಕಣ್ಣು ಉರಿಯುವಂತೆ ಮನೆಯೊಳಗಿಂದ ಹೊಗೆಯಬ್ಬರ... ಮನೆಯೊಳಗೆ ಕೆಂಡ ಹರಡದಿದ್ದರೆ ಇವರಿಗೆ ಬದುಕೇ ಇಲ್ಲ.... ಇಂತಹ ಬದುಕು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಉಗ್ಗೇಹಳ್ಳಿ ದಲಿತ ಕುಟುಂಬಗಳಿಗೆ ಅನಿವಾರ್ಯ. ಇದು ಇವತ್ತು ನಿನ್ನೆಯ ಜಲಪ್ರವಾಹದ ಪರಿಣಾಮದಿಂದ ಉಂಟಾದ ಸ್ಥಿತಯಲ್ಲ.. ನಾಲ್ಕೈದು ದಶಕಗಳಿಂದಲೂ ಪಡುತ್ತಿರುವ ಪಾಡಾಗಿದೆ.

ಹೇಮಾವತಿ ನದಿ ತಟದಲ್ಲಿರುವ ಈ ಗ್ರಾಮದಲ್ಲಿ 150ಕ್ಕೂ ಹೆಚ್ಚು ದಲಿತ ಕುಟುಂಬಗಳಿವೆ. ಪ್ರತಿ ಮಳೆಗಾಲದಲ್ಲೂ ಹೇಮೆ ಹರಿಯುವುದು ಈ ಗ್ರಾಮದೊಳಗೆ. ಮನೆಯ ಗೋಡೆ ಹಾಗೂ ನೆಲದ ಶೀತವನ್ನು ಇವರು ಅರಗಿಸಿಕೊಳ್ಳುವುದಕ್ಕೆ ಅಸಾಧ್ಯ. ಅದಕ್ಕಾಗಿ ಮಳೆಗಾಲದಲ್ಲಿ ಮನೆ ತುಂಬಾ ಹೀಗೆ ಬೆಂಕಿಯನ್ನು ಹರಡುತ್ತಾರೆ. ಭೂಮಿಯ ಉಷ್ಣಾಂಶ ಹೆಚ್ಚಾದ ಮೇಲೆ ಮಲಗುತ್ತಾರೆ. ಇವರು ಕಳೆದ ಐವತ್ತು ವರ್ಷಗಳಿಂದ, ಮಳೆ ಯಥೇಚ್ಛವಾಗಿ ಸುರಿಯುವ ವರ್ಷಗಳಲ್ಲೆಲ್ಲಾ ಹೀಗೇ ಬದುಕುತ್ತಿರುವುದು. ಗ್ರಾಮವನ್ನು ಸ್ಥಳಾಂತರಿಸಿ ಎಂದು ಮಾಡಿದ ಮನವಿ ಪತ್ರಗಳ ಕಥೆಯೂ ಹೊಗೆಯೇ ಆಗಿದೆ.

ಪ್ಲಾಸ್ಟಿಕ್​ ಉಪಯೋಗದಿಂದಾಗುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಹೀಗಾ ಮಾಡೋದು?

ಮಳೆ ಹೆಚ್ಚಾಗಿ ಸುರಿದರೆ ಈ ಗ್ರಾಮವೇ ಜಲಾವೃತಗೊಳ್ಳುತ್ತೆ. ನೀರು ಮನೆಯೊಳಗೂ ಬರುತ್ತೆ, ಮನೆಯೊಳಗಿಂದ್ಲೂ ಉಕ್ಕುತ್ತೆ. ಪ್ರತಿ ಮಳೆಗಾಲದಲ್ಲೂ ಇವ್ರು ಭಯದಿಂದ ರಾತ್ರಿ ಕಳೆಯುತ್ತಾರೆ. ನೆಮ್ಮದಿಯ ನಿದ್ದೆಯೂ ಇಲ್ಲದಂತೆ. ಮಳೆಗಾಲದಲ್ಲಿ ಗ್ರಾಮಕ್ಕೆ ಹತ್ತಾರು ತೊಂದರೆ ಜೊತೆ ಅನಾರೋಗ್ಯ ಉಚಿತ. ಮಳೆಗಾಲ ಬಂತೆಂದರೆ ಇಲ್ಲಿನವರಿಗೆ ಶೀತ, ಜ್ವರ ಸೇರಿದಂತೆ ಹಲವು ಸಮಸ್ಯೆ. ಹೀಗೆ ಕಳೆದ ನಾಲ್ಕೈದು ದಶಕಗಳಿಂದ ಹೀಗೆ ಜೀವವನ್ನು ಕೈನಲ್ಲಿಟ್ಕೊಂಡು ಬದುಕ್ತಿರೋ ಇವ್ರು ನಮ್ಮನ್ನ ಸ್ಥಳಾಂತರ ಮಾಡಿ ಎಂದು ಮನವಿ ಮಾಡ್ಕೊಂಡ್ರು ಇವರ ನೋವಿನ ಕೂಗು ಸರ್ಕಾರಕ್ಕೆ ಕೇಳಿಲ್ಲ. ಮಳೆಗಾಲ ಬಂತೆಂದರೆ ಇವರು ಮಳೆ ಹಾಗೂ ಹೇಮಾವತಿ ನದಿಯನ್ನ ಎದುರಿಸಲು ಸರ್ವ ರೀತಿಯಲ್ಲೂ ಸನ್ನದ್ಧರಾಗಿರ್ತಾರೆ. ಮಳೆ ಹೆಚ್ಚಾದ ವರ್ಷದಲ್ಲೆಲ್ಲಾ ಇವರಿಗೆ ಈ ರೀತಿಯ ಬದುಕು ಸಾಮಾನ್ಯವಾಗಿ ಬಿಟ್ಟಿದೆ.

ಒಟ್ಟಾರೆ, ಬೆಂಕಿ ಜೀವನದ ಒಂದು ಭಾಗ. ಆದರೆ ಇವರಿಗೆ ಮಾತ್ರ ಮಳೆ ಹೆಚ್ಚಾದ ವರ್ಷವೆಲ್ಲಾ ಅದೇ ಒಂದು ಭಾಗ. ಇವರನ್ನು ಅಗ್ನಿ ಪುತ್ರರು ಎಂದರೂ ತಪ್ಪಿಲ್ಲ. ಮಳೆಗಾಲದಲ್ಲಿ ಮಲೆನಾಡಲ್ಲಿ ಇಂತಹ ಜೀವನ ಮಾಮೂಲಿ. ಆದರೆ ಸರ್ಕಾರಗಳು ಇವರನ್ನು ಸ್ಥಳಾಂತರ ಮಾಡದಿರುವುದೇ ದುರ್ದೈವ. ಇವರ ನೋವಿಗೆ ದನಿಯಾಗಬೇಕಿದ್ದ ರಾಜಕೀಯ ದಣಿಗಳು ಓಟ್ ಕೇಳೋಕಷ್ಟೆ ಭೇಟಿ ನೀಡೋದು. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವೂ ನೋವಿಗೆ ಸ್ಪಂದಿಸಿಲ್ಲ. ಇಷ್ಟ ದಿನದ್ದು ಹಾಳಾಗ್ ಹೋಗ್ಲಿ, ಇನ್ನಾದ್ರು ಇವ್ರನ್ನ ಸ್ಥಳಾಂತರ ಮಾಡ್ಲಿ ಅನ್ನೋದು ನಮ್ಮ ಆಶಯ.

(ವಿಶೇಷ ವರದಿ: ವೀರೇಶ್ ಜಿ ಹೊಸೂರ್)  
First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ