Karnataka Bypoll Result: ಜೆಡಿಎಸ್​ ಭದ್ರಕೋಟೆಯಲ್ಲಿ ಅರಳಿದ ಕಮಲ: ಮಗ ವಿಜಯೇಂದ್ರ ಕೆಲಸಕ್ಕೆ ಅಪ್ಪ ಯಡಿಯೂರಪ್ಪ ಸಂತಸ

Karnataka Bypoll Result : ಗೌಡ ಮತಗಳೇ ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಜೆಡಿಎಸ್​ ಈಗಾಗಲೇ ಆಳವಾದ ಬೇರು ಬಿಟ್ಟಿತ್ತು. ಜೊತೆಗೆ ನಾರಾಯಣಗೌಡ ಅನರ್ಹ ಎಂಬ ಪಟ್ಟ ಹೊಂದುವ ಮೂಲಕ ಜನರ ಆಕ್ರೋಶಕ್ಕೆ ಕೂಡ ಕಾರಣರಾಗಿದ್ದರು. ಈ ಹಿನ್ನೆಲೆ ಬಿಜೆಪಿ ಗೆಲುವು ಇಲ್ಲಿ ಸುಲಭವಾಗಿರಲಿಲ್ಲ.

Seema.R | news18-kannada
Updated:December 9, 2019, 12:26 PM IST
Karnataka Bypoll Result: ಜೆಡಿಎಸ್​ ಭದ್ರಕೋಟೆಯಲ್ಲಿ ಅರಳಿದ ಕಮಲ: ಮಗ ವಿಜಯೇಂದ್ರ ಕೆಲಸಕ್ಕೆ ಅಪ್ಪ ಯಡಿಯೂರಪ್ಪ ಸಂತಸ
ಕೆಆರ್​ ಪೇಟೆ ಗೆಲುವಿಗೆ ಮಗ ವಿಜಯೇಂದ್ರನಿಗೆ ಸಿಹಿ ತಿನಿಸಿ ಸಿಎಂ ಸಂಭ್ರಮ
  • Share this:
ಬೆಂಗಳೂರು (ಡಿ.09):  ಕಳೆದ ವಿಧಾನಸಭೆಯಲ್ಲಿ ಮಂಡ್ಯದ  7 ಕ್ಷೇತ್ರಗಳಲ್ಲಿ ಜೆಡಿಎಸ್​ ಭರ್ಜರಿ ಗೆಲುವು ಸಾಧಿಸುವ ಮೂಲಕ ಜಿಲ್ಲೆ ಜೆಡಿಎಸ್​ ಭದ್ರಕೋಟೆಯಾಗಿ ರೂಪುಗೊಂಡಿತು. ಲೋಕಸಭೆ ಚುನಾವಣೆ ಬಳಿಕ ಈ ಕ್ಷೇತ್ರದತ್ತ ಹೆಚ್ಚು ಗಮನಹರಿಸಿದ ಬಿಜೆಪಿ ಈಗ ಖಾತೆ ತೆರೆಯುವ ಮೂಲಕ ಹಳೆ ಮೈಸೂರು ಭಾಗದಲ್ಲಿಯೂ ಬಿಜೆಪಿ ಧ್ವಜಹಾರಿಸಲು ಸಿದ್ಧತೆ ನಡೆಸಿತು. ಅದರ ಫಲವಾಗಿ ಈಗ ಕೆ.ಆರ್​ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವಿನ ಮೂಲಕ ಬಿಜೆಪಿ ಅಧಿಕೃತವಾಗಿ ಖಾತೆ ತೆರೆದಿದೆ. 

ಕೆಆರ್​ ಪೇಟೆ ಅನರ್ಹ ಶಾಸಕ ನಾರಾಯಣಗೌಡ ಅವರಿಗೆ ಟಿಕೆಟ್​ ನೀಡಿದ ಬಿಜೆಪಿಗೆ ಈ ಕ್ಷೇತ್ರದ ಗೆಲುವು ಪ್ರತಿಷ್ಟೆಯ ವಿಷಯವಾಗಿತ್ತು. ಕಾರಣ ಈ ಕ್ಷೇತ್ರದಲ್ಲಿ ಬರುವ ಬೂಕನಕೆರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನ್ಮಸ್ಥಳ. ಇದೇ ಕಾರಣದಿಂದ ಈ ಕ್ಷೇತ್ರದ ಗೆಲುವಿಗೆ ಸಿಎಂ ವಿಶೇಷ ಕಾಳಜಿವಹಿಸಿದ್ದರು. ಅಲ್ಲದೇ ಈ ಕ್ಷೇತ್ರದ ಉಸ್ತುವಾರಿಯನ್ನು ತಮ್ಮ ಮಗ ವಿಜಯೇಂದ್ರನಿಗೆ ನೀಡಿದರು.

ಕಳೆದ ಬಾರಿ ವರುಣಾ ವಿಧಾನಸಭಾ ಚುನಾವಣೆಯಲ್ಲಿ ಸೋಲಪ್ಪಿದ್ದ ವಿಜಯೇಂದ್ರ, ಹಳೆ ಮೈಸೂರು ಭಾಗದಲ್ಲಿ ಸುತ್ತಾಡುವ ಮೂಲಕ ಇಲ್ಲಿನ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ಮಾಡುತ್ತಲೇ ಇದ್ದರು. ಇದರ ಫಲವಾಗಿ ನಾರಾಯಣಗೌಡ ಗೆಲುವಿಗೆ ವಿಶೇಷ ಮುತುವರ್ಜಿ ಕೂಡ ವಹಿಸಿದರು.



ಗೌಡ ಮತಗಳೇ ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಜೆಡಿಎಸ್​ ಈಗಾಗಲೇ ಆಳವಾದ ಬೇರು ಬಿಟ್ಟಿತ್ತು. ಜೊತೆಗೆ ನಾರಾಯಣಗೌಡ ಅನರ್ಹ ಎಂಬ ಪಟ್ಟ ಹೊಂದುವ ಮೂಲಕ ಜನರ ಆಕ್ರೋಶಕ್ಕೆ ಕೂಡ ಕಾರಣರಾಗಿದ್ದರು. ಈ ಹಿನ್ನೆಲೆ ಬಿಜೆಪಿ ಗೆಲುವು ಇಲ್ಲಿ ಸುಲಭವಾಗಿರಲಿಲ್ಲ.

ಈ ಕಾರಣದಿಂದ ಕ್ಷೇತ್ರದಲ್ಲಿಯೇ ಬೀಡುಬಿಟ್ಟ ವಿಜಯೇಂದ್ರ, ಸ್ಥಳೀಯ ಮುಖಂಡರ ಜೊತೆ ಸತತ ಸಂಪರ್ಕ ಸಾಧಿಸುತ್ತಾ,  ಕೇಂದ್ರದ ಬಿಜೆಪಿ ಸಾಧನೆಗಳನ್ನು ಬಿಂಬಿಸುತ್ತಾ, ಯಡಿಯೂರಪ್ಪ ತವರು ಈ ಕ್ಷೇತ್ರ ಎಂದು ನೆನಪಿಸುವ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನ ನಡೆಸಿ, ಕಡೆಗೂ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್​ ಅಭ್ಯರ್ಥಿ ಬಿಎಲ್​ ದೇವರಾಜು ವಿರುದ್ಧ ಹಣಾಹಣಿಯಲ್ಲಿ ಕೇವಲ ಮೂರು ಸಾವಿರ ಅಂತರದಲ್ಲಿ ನಾರಾಯಣ ಗೌಡ ಗೆಲುವು ಸಾಧಿಸಿದ್ದಾರೆ. ಜೆಡಿಎಸ್​ ಭದ್ರಕೋಟೆಯಲ್ಲಿ ವಿಜಯಪಾತಕೆ ಹಾರಿಸಿದ ಸಂಭ್ರಮ ಬಿಜೆಪಿ ಅಭ್ಯರ್ಥಿ ನಾರಾಯಣಗೌಡಗಿಂತ ಹೆಚ್ಚು ವಿಜಯೇಂದ್ರ ಹಾಗೂ ಯಡಿಯೂರಪ್ಪಗೆ.ಮಗನ ಈ ಗೆಲುವನ್ನು ಸಿಎಂ ಯಡಿಯೂರಪ್ಪ ಕೂಡ ಸ್ವಾಗತಿಸಿದ್ದು, ಸಂಭ್ರಮಪಟ್ಟಿದ್ದಾರೆ. ಕ್ಷೇತ್ರದಲ್ಲಿ ಈ ಸಾಧನೆಗೆ ವಿಜಯೇಂದ್ರನೇ ಕಾರಣ ಎಂದು ಮಗನಿಗೆ ಗೆಲುವಿನ ಸಮರ್ಪಣೆ ಮಾಡಿದ್ದಾರೆ.

ಇದನ್ನು ಓದಿ: Karnataka Bypoll Result: ಅನರ್ಹತೆಯ ಕಳಂಕವನ್ನು ಮತದಾರರು ಸ್ವಚ್ಛಗೊಳಿಸಿದರು; ಗೆಲುವಿಗೆ ಹರ್ಷಗೊಂಡ ಶ್ರೀಮಂತ ಪಾಟೀಲ್​

ಇನ್ನು ಈ ಕುರಿತು ಮಾತನಾಡಿರುವ ವಿಜಯೇಂದ್ರ, ನಿಜವಾಗಿಯೂ ಈ ಗೆಲುವು ತುಂಬಾ ಸಂತೋಷ ತಂದಿದೆ. ಕರ್ನಾಟಕ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ವಿಷಯ ಇದು. ಯಾವಾಗ ನಾವು ಈ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದೇವು. ಆಗ ನಿಮ್ಮ ಊರಿನ ಮಗನಾಗಿರುವ ಬಿಎಸ್​ ಯಡಿಯೂರಪ್ಪ, ಈ ತಾಲೂಕಿನ ಅಭಿವೃದ್ಧಿ ಕನಸು ಕಂಡಿದ್ದಾರೆ. ಅವರ ಕನಸು ಈಡೇರಿಸಲು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಮಗೆ ಅವಕಾಶ ನೀಡಬೇಕು ಎಂದು ಮನೆ ಮನೆ ಪ್ರಚಾರ ನಡೆಸಿ ಮನವಿ ಮಾಡಿದ್ದೇವು. ಈ ಮನವಿಗೆ ಜನರು ಆಶೀರ್ವಾದಿಸಿದ್ದಾರೆ ಎಂದರು.

ಡಿಸಿಎಂ ಅಶ್ವಥ್​ ನಾರಾಯಣ್​, ಸಂಗಮೇಶ್​, ಪ್ರೀತಂಗೌಡ ಸೇರಿದಂತೆ ಬಿಜೆಪಿ ಕಾರ್ಯಕರ್ತರೆಲ್ಲಾ ನಾವು ಒಟ್ಟಾಗಿ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಅವರು ಒಂದು ಅವಕಾಶ ನೀಡಿದ್ದಾರೆ ಎಂದರು.
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ