ಬಸವ ನಾಡಿನಲ್ಲಿ ಪಾರಮ್ಯ ಮೆರೆಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶತಪಯತ್ನ

news18
Updated:August 29, 2018, 12:00 PM IST
ಬಸವ ನಾಡಿನಲ್ಲಿ ಪಾರಮ್ಯ ಮೆರೆಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶತಪಯತ್ನ
ಸಿ.ಎಸ್. ನಾಡಗೌಡ ಮತ್ತು ಎ.ಎಸ್. ಪಾಟೀಲ ನಡಹಳ್ಳಿ
news18
Updated: August 29, 2018, 12:00 PM IST
ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ (ಆ.29): ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಜಿಲ್ಲೆಯಲ್ಲೂ ಜೋರು ಕಾವು ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 13 ನಗರ ಸ್ಥಳೀಯ ಸಂಸ್ಥೆಗಳಿದ್ದು, ಮುದ್ದೇಬಿಹಾಳ ಪುರಸಭೆಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಕಳೆದ ಒಟ್ಟು 23 ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ ಜೆಡಿಎಸ್ 9, ಕಾಂಗ್ರೆಸ್ 4, ಬಿಜೆಪಿ 1 ಹಾಗೂ ಪಕ್ಷೇತರರು 12 ಮಂದಿ ಆಯ್ಕೆಯಾಗಿದ್ದರು. ಮೊದಲ ಅವಧಿಗೆ ಒಪ್ಪಂದದಂತೆ ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್ಸಿನ ಫಾತಿಮಾ ಢವಳಗಿ ಅಧ್ಯಕ್ಷರಾಗಿ ಮೊದಲ ಅವಧಿಗೆ ಆಯ್ಕೆಯಾಗಿದ್ದರು.  ನಂತರ ಎರಡನೇ ಅವಧಿಗೆ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಅವಧಿಯಲ್ಲಿ ಪೂರ್ಣ 5 ವರ್ಷದ ಅವಧಿಗೆ ಕಾಂಗ್ರೆಸ್ ಸದಸ್ಯೆ ಫಾತಿಮಾ ನಾಯ್ಕೋಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈವರೆಗೆ ಸತತ ನಾಲ್ಕು ಬಾರಿ ಸೇರಿದಂತೆ ಐದು ಬಾರಿ ಕಾಂಗ್ರೆಸ್ ಹಾಗೂ ಕೆಲವು ಬಾರಿ ಜನತಾದಳ ಶಾಸಕರು ಆಯ್ಕೆಯಾಗಿದ್ದ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಶಾಸಕರಾಗಿ ಎ.ಎಸ್. ಪಾಟೀಲ ನಡಹಳ್ಳಿ ಆಯ್ಕೆಯಾಗಿದ್ದು, ಮುದ್ದೇಬಿಹಾಳ ಪುರಸಭೆಯಲ್ಲಿ ಕಮಲ ಅರಳಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿರುವ ಮಾಜಿ ಶಾಸಕ ಸಿ.ಎಸ್.ನಾಡಗೌಡ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಈಗ ಮತ್ತೆ ಒಟ್ಟು 23 ಸ್ಥಾನಗಳನ್ನು ಹೊಂದಿರುವ ಮುದ್ದೇಬಿಹಾಳ ಪುರಸಭೆಯಲ್ಲಿ ಈಗಾಗಲೇ ಕಾಂಗ್ರೆಸ್ ಖಾತೆ ತೆರೆದಿದ್ದು, ಕಾಂಗ್ರೆಸ್ಸಿನ ಅಲ್ಲಾಭಕ್ಷ ಢವಳಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಮುದ್ದೇಬಿಹಾಳ ಶಾಸಕ ಎ. ಎಸ್.ಪಾಟೀಲ ನಡಹಳ್ಳಿ ಈ ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಬಿಜೆಪಿ ಪುರಸಭೆಯಲ್ಲಿ ತನ್ನ ಪಾರಮ್ಯ ಸಾಧಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. 

ಇನ್ನು ಕಳೆದ ಮೂರು ದಶಕಗಳಿಂದ ಶಾಸಕರಾಗಿದ್ದ, ಈಗ ಮಾಜಿಯಾಗಿರುವ ಸಿ. ಎಸ್. ನಾಡಗೌಡ ಕೂಡ ತಮ್ಮ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಶತಾಯ ಗತಾಯ ಪ್ರಯತ್ನ ನಡೆಸಿದ್ದಾರೆ.  ಒಂದು ಕಾಲದಲ್ಲಿ ಬಿಜೆಪಿ, ನಂತರ ಕಾಂಗ್ರೆಸ್ ಹಾಗೂ ಕಳೆದ ವಿಧಾನಸಭೆ ಚುನಾವಣೆಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋತಿರುವ ಮಂಗಳಾದೇವಿ ಬಿರಾದಾರ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಹೊತ್ತಿದ್ದಾರೆ. ಕೆಲವು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆಯಿದ್ದರೆ ಮತ್ತೆ ಕೆಲವು ಕಡೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರ ಮಧ್ಯೆ ತ್ರಿಕೋನ ಹಾಗೂ ಚತುಷ್ಕೋನ ಸ್ಪರ್ಧೆಯಿದೆ. ಬಾಕಿ ಇರುವ 22 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 75 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಬಿಜೆಪಿ-22, ಕಾಂಗ್ರೆಸ್ 20, ಜೆಡಿಎಸ್-15 ಹಾಗೂ ಪಕ್ಷೇತರರು 17 ಮಂದಿ ಸ್ಪರ್ಧಿಸುತ್ತಿದ್ದಾರೆ.  ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದು, ಈ ಬಾರಿ ಪುರಸಭೆಯಲ್ಲಿ ಕಮಲ ಅರಳುತ್ತಾ, ಮುದ್ದೇಬಿಹಾಳ ಪಟ್ಟಣದ ಜನ ಕೈ ಹಿಡಿಯುತ್ತಾರಾ ಅಥವಾ ಹೊರೆ ಹೊತ್ತುಕೊಳ್ಳುತ್ತಾರಾ ಇಲ್ಲವೇ ಮತ್ತೆ ಪಕ್ಷೇತರರಿಗೆ ಪ್ರಾಧಾನ್ಯತೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ