'ನಾವು ಪೌರತ್ವ ಕಾಯ್ದೆ ಬೆಂಬಲಿಸುತ್ತೇವೆ'; ಮದುವೆ ಆಹ್ವಾನ ಪತ್ರಿಕೆ ಮೇಲೆ ಬರೆದು ಸಿಎಎ ಬಗ್ಗೆ ವಿಶೇಷ ಅಭಿಯಾನ

ಈಗಾಗಲೇ ನೂರಾರು ಜನರಿಗೆ ಈ ಹಿರೇಮಠ ಕುಟುಂಬ ತಮ್ಮ ಮನೆಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಆಮಂತ್ರಣ ಪತ್ರಿಕೆಯ ಮೇಲೆ ನಾವು ಪೌರತ್ವ ಕಾಯ್ದೆಯನ್ನು ಬೆಂಬಲಿಸುತ್ತೇವೆ ಎಂದು ಬರೆಯುವ ಮೂಲಕ ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.

ಆಹ್ವಾನ ಪತ್ರಿಕೆಯೊಂದಿಗೆ ವಧು ಮತ್ತು ಆಕೆಯ ಅಣ್ಣ.

ಆಹ್ವಾನ ಪತ್ರಿಕೆಯೊಂದಿಗೆ ವಧು ಮತ್ತು ಆಕೆಯ ಅಣ್ಣ.

  • Share this:
ವಿಜಯಪುರ: ಈಗ ದೇಶಾದ್ಯಂತ ಪೌರತ್ವ ಕಾಯಿದೆ ವಿರೋಧಿ ಮತ್ತು ಪರ ಹೋರಾಟಗಳು ಸಾಮಾನ್ಯವಾಗಿವೆ. ಆದರೆ, ಇಲ್ಲೊಬ್ಬ ಅಣ್ಣ ತನ್ನ ತಂಗಿಯ ಮದುವೆಯನ್ನು ಪೌರತ್ವ ಕಾಯ್ದೆಯನ್ನು ಬೆಂಬಲಿಸುವ ಅಭಿಯಾನದ ರೂಪದಲ್ಲಿ ಬಳಸಿಕೊಂಡಿದ್ದಾರೆ. ನಾನಾ ರಾಜಕೀಯ ಪಕ್ಷಗಳು ಈ ಕಾಯಿದೆಯ ಪರ ಮತ್ತು ವಿರೋಧವಾಗಿ ತಮ್ಮದೇ ಶೈಲಿಯಲ್ಲಿ ಹೋರಾಟ ನಡೆಸುತ್ತಿದ್ದರೆ, ಈ ಯುವಕನ ವಿನೂತನ ಅಭಿಯಾನಕ್ಕೆ ಅವರ ತಂಗಿ ಮತ್ತು ಮನೆಯವರು ಬೆಂಬಲಿಸಿದ್ದಾರೆ.

ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ "ನಾವು ಪೌರತ್ವ ಕಾಯ್ದೆಯನ್ನು ಬೆಂಬಲಿಸುತ್ತೇವೆ," ಎಂದು ಮುದ್ರಿಸುವ ಮೂಲಕ ಸಿಎಎಗೆ ಬೆಂಬಲ ಸೂಚಿಸಿದ್ದಾರೆ. ಬಸವನಾಡು ವಿಜಯಪುರದ ಹಿರೇಮಠ ಕುಟುಂಬ ಈ ಈ ಕಾಯ್ದೆಯನ್ನು ಬೆಂಬಲಿಸಿ ವಿನೂತನವಾಗಿ ಅಭಿಯಾನ ಕೈಗೊಂಡಿದೆ. ತಂಗಿ ಸಂಜೀವಿನಿ ಮದುವೆಯ ಆಮಂತ್ರಣ ಪತ್ರಿಕೆಯ ಹೊರಭಾಗದಲ್ಲಿ ಅಣ್ಣ ವಿಜಯ ಮಹಾಂತೇಶ ಹಿರೇಮಠ 'ನಾವು ಪೌರತ್ವ ಕಾಯ್ದೆಯನ್ನು ಬೆಂಬಲಿಸುತ್ತೇವೆ' ಎಂದು ಮುದ್ರಿಸಿ, ಬಂಧು-ಬಳಗ, ಸ್ನೇಹಿತರಿಗೆ ಹಂಚಿದ್ದಾರೆ.  ಅಷ್ಟೇ ಅಲ್ಲ, ಈ ವಾಕ್ಯದ ಬಗ್ಗೆ ಪ್ರಶ್ನಿಸಿದವರಿಗೆ ತಮ್ಮದೇ ಆದ ಶೈಲಿಯಲ್ಲಿ ಸಮರ್ಥನೆಯನ್ನು ನೀಡುತ್ತಾ ಬಂದಿದ್ದಾರೆ.

"ನಾನು ಪೌರತ್ವ ಕಾಯ್ದೆಯನ್ನು ಬೆಂಬಲಿಸುತ್ತೇನೆ. ಇದರಿಂದ ಭಾರತೀಯರಿಗೆ ಅನುಕೂಲವಾಗಲಿದೆ. ನಮ್ಮಣ್ಣ ಮತ್ತು ನಮ್ಮ ಕುಟುಂಬದವರೂ ಇದಕ್ಕೆ ಬೆಂಬಲಿಸುತ್ತಿರುವುದು ಹೆಮ್ಮೆಯ ವಿಷಯ," ಎಂದು ಸಂಜೀವಿನ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ. "ಈ ಕಾಯ್ದೆ ಜಾರಿಗೆ ಬಂದಾಗಿನಿಂದ ಕೆಲವರು ಪೌರತ್ವ ಕಾಯ್ದೆಯಿಂದ ಒಂದು ಸಮುದಾಯಕ್ಕೆ ಅಪಾಯವಿದೆ ಎಂದು ರಾಜಕೀಯ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ.  ಆದರೆ, ಇದರಿಂದ ಯಾರಿಗೂ ಅಪಾಯವಿಲ್ಲ. ಭಾರತೀಯ ಪ್ರಜೆಗಳಿಗಂತೂ ತೊಂದರೆಯಿಲ್ಲ. ಈ ಹಿನ್ನೆಲೆಯಲ್ಲಿ ಹೀಗೆ ಆಮಂತ್ರಣ ಪತ್ರಿಕೆಯ ಮೇಲೆ ಬರೆಯುವ ಮೂಲಕ ಜನಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ," ಎಂದು ವಿಜಯ ಮಹಾಂತೇಶ ಹಿರೇಮಠ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ನಾವು ಸಿಎಎ ಬೆಂಬಲಿಸುತ್ತೇವೆ ಎಂದು ಆಹ್ವಾನ ಪತ್ರಿಕೆ ಮೇಲೆ ಬರೆದಿರುವುದು.


ಇದನ್ನು ಓದಿ: ಹಲವು ಆರೋಪ ಹೊತ್ತ ನನ್ನ ಕಾಂಗ್ರೆಸ್​​ಗೆ ಹೇಗೆ ಸೇರಿಸಿಕೊಂಡ್ರಿ?: ಸಿದ್ದರಾಮಯ್ಯಗೆ ಆನಂದ್​​ ಸಿಂಗ್ ಪ್ರಶ್ನೆ​​​

ನಾಳೆ ಮಂಗಳವಾರ ಯುವತಿಯ ಮದುವೆ ಬಸವನ ಬಾಗೇವಾಡಿ ತಾಲೂಕಿನ ಬಸವನಹಟ್ಟಿಯ ಹೆಸ್ಕಾಂ ನೌಕರ ಈರಯ್ಯ ಉರುಫ್ ವೀರೇಶ್ ಜೊತೆ ನಡೆಯುತ್ತಿದೆ.  ಈಗಾಗಲೇ ನೂರಾರು ಜನರಿಗೆ ಈ ಹಿರೇಮಠ ಕುಟುಂಬ ತಮ್ಮ ಮನೆಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಆಮಂತ್ರಣ ಪತ್ರಿಕೆಯ ಮೇಲೆ ನಾವು ಪೌರತ್ವ ಕಾಯ್ದೆಯನ್ನು ಬೆಂಬಲಿಸುತ್ತೇವೆ ಎಂದು ಬರೆಯುವ ಮೂಲಕ ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.
First published: