ಜಮೀನಿನಲ್ಲಿ ತೊಗರಿ ಬದಲು ಬೇರೆ ಬೆಳೆ ನಮೂದು; ಗ್ರಾಮ ಲೆಕ್ಕಾಧಿಕಾರಿ ಎಡವಟ್ಟಿಗೆ ಸಾವಿರಾರು ರೈತರು ಕಂಗಾಲು

ರೈತರಿಗೆ ನೆರವಾಗಲು ಕೇಂದ್ರ ಸರಕಾರ ರೂ. 5800 ಮತ್ತು ರಾಜ್ಯ ಸರಕಾರ ರೂ.300 ಸೇರಿದಂತೆ ಪ್ರತಿ ಕ್ವಿಂಟಾಲ್‌ ತೊಗರಿಗೆ ರೂ. 6100 ಬೆಂಬಲ ಬೆಲೆ ನಿಗದಿಪಡಿಸಲಾಗಿdಎ. ಇದು ರೈತರಿಗೆ ವರದಾನವಾಗಿದೆಯಾದರೂ ತಾಂತ್ರಿಕ ಕಾರಣದಿಂದ ರೈತರು ಪರಿತಪಿಸುತ್ತಿದ್ದಾರೆ. ಪ್ರತಿನಿತ್ಯ ನೋಂದಣಿಗಾಗಿ ರೈತರು ಅಲೆದಾಡಿದ್ದೆ ಆಗಿದೆ ಹೊರತು ಪರಿಹಾರ ಮಾತ್ರ ಸಿಗುತ್ತಿಲ್ಲ.

news18-kannada
Updated:January 24, 2020, 3:08 PM IST
ಜಮೀನಿನಲ್ಲಿ ತೊಗರಿ ಬದಲು ಬೇರೆ ಬೆಳೆ ನಮೂದು; ಗ್ರಾಮ ಲೆಕ್ಕಾಧಿಕಾರಿ ಎಡವಟ್ಟಿಗೆ ಸಾವಿರಾರು ರೈತರು ಕಂಗಾಲು
ತೊಗರಿ ಬೆಳೆ.
  • Share this:
ವಿಜಯಪುರ: ಬರ ಪೀಡಿತಕ್ಕೆ ಹೆಸರಾಗಿರುವ ನಾಡು ಈಗ ತೊಗರಿ ಕಣಜವಾಗುವತ್ತ ಸಾಗಿದೆ. ಆದರೆ, ಈ ಬಾರಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಎದುರಿಸುವಂತಾಗಿದೆ. ಒಂದು ವರ್ಷ ಅನ್ನದಾತರು ಬೆಲೆ ಕುಸಿತದಿಂದ ಕಂಗಾಲಾದರೆ ಮತ್ತೊಂದು ವರ್ಷ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಆದರೆ, ಈ ವರ್ಷ ಹೊಸದೊಂದು ಸಮಸ್ಯೆ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ತೊಗರಿ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಮುಂಗಾರಿನಲ್ಲಿ 2 ಲಕ್ಷದ 75 ಸಾವಿರದ 40 ಎಕರೆಯಲ್ಲಿ ತೊಗರಿ ಬೆಳೆ ಬಿತ್ತನೆ ನಿರೀಕ್ಷಿಸಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ 3 ಲಕ್ಷದ 27 ಸಾವಿರದ 356 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ. 9 ಲಕ್ಷ ಕ್ವಿಂಟಾಲ್ ತೊಗರಿ ಬೆಳೆ ನಿರೀಕ್ಷಿಸಲಾಗಿದೆ. ಈ ಬಾರಿ ಕೇಂದ್ರ ಸರಕಾರ 11 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಜನವರಿ 17 ರಿಂದ 31ರವರೆಗೆ ತೊಗರಿ ಬೆಳೆಗಾರರ ನೋಂದಣಿಗೆ ಕರ್ನಾಟಕ ರಾಜ್ಯ ಸರಕಾರ ಮಹಾಮಂಡಳ 108 ತೊಗರಿ ನೋಂದಣಿ ಕೇಂದ್ರ ಆರಂಭಿಸಿದೆ. ಈವರೆಗೆ 5,55,110 ರೈತರು ತಮ್ಮ ಹೆಸರು ನೋಂದಾಯಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರ ಮಹಾಮಂಡಳ ವಿಜಯಪುರ ಶಾಖಾ ವ್ಯವಸ್ಥಾಪಕ ಡಿ.ಎಂ. ಲಿಂಗರಾಜು ತಿಳಿಸಿದ್ದಾರೆ.

ಈ ಹೆಸರು ನೋಂದಣಿಯೇ ಬಹುತೇಕ ತೊಗರಿ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.  ಹೆಸರು ನೋಂದಣಿಗೆ ಟಿಎಪಿಸಿಎಂಎಸ್‌ಗೆ ಹೋದರೆ ಅಲ್ಲಿ ಎದುರಾಗಿರುವ ಸಮಸ್ಯೆ ರೈತರನ್ನು ಕಂಗಾಲಾಗಿಸಿದೆ. ರೈತರು ತೊಗರಿ ನೋಂದಣಿಗೆಂದು ಕೇಂದ್ರಕ್ಕೆ ಹೋದರೆ ಉತಾರಿ ಅಂದರೆ ಪಹಣಿಯಲ್ಲಿ ತೊಗರಿಯ ಬದಲು ಬೇರೆ ಬೆಳೆ ತೋರಿಸುತ್ತಿದೆ.  ಆನ್‌ಲೈನ್‌ನಲ್ಲಿ ಎದುರಾಗಿರುವ ಈ ಸಮಸ್ಯೆಯಿಂದಾಗಿ ಬಹುತೇಕ ರೈತರು ನೋಂದಣಿ ಸಾಧ್ಯವಾಗದೆ ಅಲೆದಾಡಿ ಸುಸ್ತಾಗಿ ಕಂಗಾಲಾಗುವಂತಾಗಿದೆ. ಬೆಳೆ ಪರಿಹಾರ ನೋಂದಣಿ ಸಂದರ್ಭದಲ್ಲಿ ಗ್ರಾಮಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ನಾನಾ ಸಿಬ್ಬಂದಿ ತೊಗರಿಯ ಬದಲು ಬೇರೆ ಬೆಳೆ ನೋಂದಾಯಿಸಿ ಜಿಪಿಎಸ್‌ ಹಾಕಿದ್ದೆ ಇಷ್ಟೆಲ್ಲ ಎಡವಟ್ಟಿಗೆ ಕಾರಣವಾಗಿದೆ.

ಇದನ್ನು ಓದಿ: ಟೇಕಾಫ್​ ಆಗಲಿದೆಯಾ​​ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ; ಬಸವನಾಡಿಗರ ಕನಸು ಈಡೇರಿಸುತ್ತಾರಾ ಸಿಎಂ?

ಪ್ರತಿನಿತ್ಯ ಹೆಸರು ನೋಂದಣಿಗೆ ಬರುವ ರೈತರಲ್ಲಿ ಶೇ.30ರಷ್ಟು ಮಾತ್ರ ರೈತರು ನೋಂದಣಿ ಮಾಡಿಸಲು ಸಾಧ್ಯವಾಗುತ್ತಿದ್ದು, ಶೇ.70ರಷ್ಟು ರೈತರು ಹೆಸರು ನೋಂದಣಿ ಸಾಧ್ಯವಾಗದೆ ಕಂಗಾಲಾಗುವಂತಾಗಿದೆ ಎನ್ನುತ್ತಾರೆ ಟಿಎಪಿಸಿಎಂ ವ್ಯವಸ್ಥಾಪಕ ಎಸ್. ವಿ. ಹಂಚಿನಾಳ. ಒಂದು ಕುಟುಂಬದಲ್ಲಿ ಸಹೋದರನ ಹೊಲದಲ್ಲಿ ಬೇರೆ ಬೆಳೆ ಇದೆ. ನನ್ನ ಹೊಲದಲ್ಲಿ ತೊಗರಿ ಇದ್ದರೂ ಇಲ್ಲಿ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ. ಕೇಳಿದರೆ ಆನ್‌ಲೈನ್‌ನಲ್ಲಿ ಬೇರೆ ಬೆಳೆ ತೋರಿಸುತ್ತಿದೆ ಎಂದು ಹೇಳುತ್ತಿದ್ದಾರೆ ಬಬಲೇಶ್ವರದ ತೊಗರಿ ಬೆಳೆಗಾರರ ಶಿವಪ್ಪ ಮಹಾದೇವಪ್ಪ ಮುಳವಾಡ. ರೈತರಿಗೆ ನೆರವಾಗಲು ಕೇಂದ್ರ ಸರಕಾರ ರೂ. 5800 ಮತ್ತು ರಾಜ್ಯ ಸರಕಾರ ರೂ.300 ಸೇರಿದಂತೆ ಪ್ರತಿ ಕ್ವಿಂಟಾಲ್‌ ತೊಗರಿಗೆ ರೂ. 6100 ಬೆಂಬಲ ಬೆಲೆ ನಿಗದಿಪಡಿಸಲಾಗಿdಎ. ಇದು ರೈತರಿಗೆ ವರದಾನವಾಗಿದೆಯಾದರೂ ತಾಂತ್ರಿಕ ಕಾರಣದಿಂದ ರೈತರು ಪರಿತಪಿಸುತ್ತಿದ್ದಾರೆ. ಪ್ರತಿನಿತ್ಯ ನೋಂದಣಿಗಾಗಿ ರೈತರು ಅಲೆದಾಡಿದ್ದೆ ಆಗಿದೆ ಹೊರತು ಪರಿಹಾರ ಮಾತ್ರ ಸಿಗುತ್ತಿಲ್ಲ.
First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ