ಈ ಜಿಲ್ಲಾಸ್ಪತ್ರೆಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ; ಸಂಬಂಧಿಕರೇ ಸ್ಟ್ರೆಚರ್‌ನಲ್ಲಿ ರೋಗಿಯನ್ನು ಕರೆದೊಯ್ಯಬೇಕು

ಇದು ಕೇವಲ ರವಿ ಮತ್ತು ಆತನ ಸಂಬಂಧಿಕರೊಬ್ಬರ ಸಮಸ್ಯೆಯಷ್ಟೇ ಅಲ್ಲ. ಬಹುತೇಕ ಎಲ್ಲ ರೋಗಿಗಳೊಂದಿಗೆ ಇಲ್ಲಿನ ಸಿಬ್ಬಂದಿ ಹೀಗೆ ವರ್ತಿಸುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಪದೇ ಪದೇ ಯಡವಟ್ಟುಗಳಾಗುತ್ತಿದ್ದರೂ ಆಡಳಿತ ಮಂಡಳಿ ಸುಧಾರಣೆ ಕ್ರಮಗಳನ್ನು ಮಾತ್ರ ಕೈಗೊಳ್ಳುತ್ತಿಲ್ಲ.

ರೋಗಿಯನ್ನು ಸಂಬಂಧಿಕರೆ ಕರೆದೊಯ್ಯುತ್ತಿರುವುದು.

ರೋಗಿಯನ್ನು ಸಂಬಂಧಿಕರೆ ಕರೆದೊಯ್ಯುತ್ತಿರುವುದು.

  • Share this:
ವಿಜಯಪುರ: ಈ ಆಸ್ಪತ್ರೆಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ. ಬಡವರು ಇಲ್ಲಿಗೆ ರೋಗಿಯನ್ನು ಕರೆದುಕೊಂಡು ಬಂದ ತಪ್ಪಿಗೆ, ರೋಗಿಯನ್ನು ಸ್ಟ್ರೆಚರ್​ನಲ್ಲಿ ಸಂಬಂಧಿಗಳೇ ಕರೆದೊಯ್ಯಬೇಕು. ವಿಜಯಪುರದ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಪದೇಪದೆ ಪುನರಾವರ್ತನೆಯಾಗುತ್ತಿದೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದ 26 ವರ್ಷದ ರವಿ ಅರೆಶಂಕರ ಎಂಬಾತನಿಗೆ ಮುದ್ದೇಬಿಹಾಳ ಬಳಿ 15 ದಿನಗಳ ಹಿಂದೆ ಟ್ರ್ಯಾಕ್ಟರ್ ಹಾಯ್ದ ಪರಿಣಾಮ ಗಾಯಗೊಂಡಿದ್ದ. ಅಪಘಾತದಿಂದಾಗಿ ಆತನಿಗೆ ಕಾಲು ಮತ್ತು ಕಿಡ್ನಿಗೂ ಪೆಟ್ಟಾಗಿತ್ತು. ರವಿ ಅಣ್ಣ ಪರಸು ಅರೆಶಂಕರ ಮತ್ತು ಸಂಬಂಧಿಕರು ಆತನನ್ನು ಮೊದಲಿಗೆ ಮಹಾರಾಷ್ಟ್ರದ ಮಿರಜ್​ನಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್ ತಮ್ಮೂರಿಗೆ ಕರೆ ತಂದಿದ್ದರು. ಆದರೆ, ರವಿಗೆ ಮತ್ತೆ ಅನಾರೋಗ್ಯ ಹೆಚ್ಚಾದ ಕಾರಣ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭದಲ್ಲಿ ವೈದ್ಯರು ಎಕ್ಸರೆ ಮತ್ತು ಇತರ ತಪಾಸಣೆಗೆ ಹೇಳಿದ್ದಾರೆ.  ಆಗ, ರೋಗಿಯ ಸಂಬಂಧಿಕರು ವಾರ್ಡ್​ ಸಿಬ್ಬಂದಿಯನ್ನು ಕೇಳಿದರೂ ಸ್ಪಂದಿಸದ ಸಿಬ್ಬಂದಿ, ನೀವೇ ಕರೆದುಕೊಂಡು ಹೋಗಿ ಎಂದಿದ್ದಾರಂತೆ. ಹೀಗಾಗಿ ರೋಗಿಯ ಅಣ್ಣ ಮತ್ತು ಮಹಿಳೆ ಸ್ಟ್ರೆಚರ್ ಸಹಾಯದಿಂದ ರವಿ ಅರೆಶಂಕರನನ್ನು ತಪಾಸಣೆಗೆ ಕರೆದೊಯ್ದಿದ್ದಾರೆ.

ಇದು ಕೇವಲ ರವಿ ಮತ್ತು ಆತನ ಸಂಬಂಧಿಕರೊಬ್ಬರ ಸಮಸ್ಯೆಯಷ್ಟೇ ಅಲ್ಲ. ಬಹುತೇಕ ಎಲ್ಲ ರೋಗಿಗಳೊಂದಿಗೆ ಇಲ್ಲಿನ ಸಿಬ್ಬಂದಿ ಹೀಗೆ ವರ್ತಿಸುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಪದೇ ಪದೇ ಯಡವಟ್ಟುಗಳಾಗುತ್ತಿದ್ದರೂ ಆಡಳಿತ ಮಂಡಳಿ ಸುಧಾರಣೆ ಕ್ರಮಗಳನ್ನು ಮಾತ್ರ ಕೈಗೊಳ್ಳುತ್ತಿಲ್ಲ.

ಈ ಹಿಂದೆ ಇದೇ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವಾರ್ಡಿನಲ್ಲಿ ರೋಗಿಯೊಬ್ಬರು ನಗ್ನಾವಸ್ಥೆಯಲ್ಲಿ ನಾಯಿಯೊಂದಿಗೆ ದಾಖಲಾಗಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.  ಈಗ ಮತ್ತೆ ಇಂಥದ್ದೆ ಘಟನೆ ನಡೆದಿರುವುದು ವಿಜಯಪುರ ಜಿಲ್ಲಾಸ್ಪತ್ರೆಯ ಮಾನ-ಮರ್ಯಾದೆ ಹರಾಜಿಗೆ ಹಾಕಿದಂತಾಗಿದೆ. ವಿಜಯಪುರ ಜಿಲ್ಲಾಸ್ಪತ್ರೆಯ ಸಿಬ್ಬಂದಿಯಲ್ಲಿ ಮಾನವೀಯತೆ ಮಾಯವಾಗಿದೆ. ಮೂರ್ನಾಲ್ಕು ವೈದ್ಯರು ಮತ್ತು ಕೆಲವು ಸಿಬ್ಬಂದಿಯನ್ನು ಹೊರತುಪಡಿಸಿದರೆ ಉಳಿದವರು ತಮ್ಮ ಸೌಜನ್ಯವನ್ನೇ  ಮರೆತಂತಿದೆ. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಬರುವ ವಿಜಯಪುರ ಜಿಲ್ಲಾಸ್ಪತ್ರೆ ಪದೇ ಪದೇ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿರುವುದು ಮಾತ್ರ ವಿಪರ್ಯಾಸ.

ಇದನ್ನು ಓದಿ: ಮುಗ್ದ ಬಾಲಕಿಗೆ ಕಾಡುತ್ತಿವೆ ವಿಚಿತ್ರ ಕಾಯಿಲೆ- ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ

ಇನ್ನು ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಜಿಲ್ಲಾಸ್ಪತ್ರೆಯ ಪ್ರಭಾರಿ ಶಸ್ತ್ಸ ಚಿಕಿತ್ಸಕ ಡಾ.ಲಕ್ಕಣ್ಣವರ, ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇಲ್ಲ. ವಾರ್ಡಿನಿಂದ ನಮ್ಮ ಸಿಬ್ಬಂದಿಗಳೇ 4ನೇ ನಂಬರ್ ರೂಮ್​ಗೆ ಡ್ರೇಸಿಂಗ್​ಗಾಗಿ ಸ್ಟ್ರೇಚರ್​ನಲ್ಲಿ ಕರೆದೊಯ್ದಿದ್ದಾರೆ. ಡ್ರೇಸ್ಸಿಂಗ್ ಮುಗಿದ ನಂತರ ತಿಳಿಸಿ ವಾರ್ಡ್​ಗೆ ಬರ್ತಿನಿ ಅಂತಾ ಹೇಳಿ ಹೋಗಿದ್ದಾರೆ. ಆದರೆ, ಡ್ರೆಸ್ಸಿಂಗ್ ಮುಗಿದ ನಂತರ ಬರಲಿಲ್ಲ ಎಂದು ರೋಗಿಯ ಸಂಬಂಧಿಕರು ತಾವೇ ಖುದ್ದಾಗಿ ಸ್ಟ್ರೇಚರ್​ನಲ್ಲಿ ರೋಗಿಯನ್ನು ಕರೆದೊಯ್ದಿದ್ದಾರೆ. ರೋಗಿ ರವಿ ಅರೆಶಂಕರ್​ಗೆ ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
First published: