• Home
  • »
  • News
  • »
  • state
  • »
  • ವಿಜಯಪುರ ಪಾಲಿಕೆ ಕಮಿಷನರ್ ಕಮಿಷನ್ ಏಜೆಂಟ್; ಜೆಡಿಎಸ್ ಶಾಸಕ ಆರೋಪ

ವಿಜಯಪುರ ಪಾಲಿಕೆ ಕಮಿಷನರ್ ಕಮಿಷನ್ ಏಜೆಂಟ್; ಜೆಡಿಎಸ್ ಶಾಸಕ ಆರೋಪ

ವಿಜಯಪುರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ

ವಿಜಯಪುರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ

ವಿಜಯಪುರ ಮಹಾನಗರ ಪಾಲಿಕೆ ಕಮಿಷನರ್ ಹರ್ಷ ಶೆಟ್ಟಿ ಕಮಿಷನ್ ಕೊಟ್ಟವರಿಗೆ ಟೆಂಡರ್ ಕೊಡುತ್ತಾರೆ.  ಪ್ರತಿ ಬಾರಿ ಅದೇ ಹಳೆಯ ಮುಖಗಳಿಗೆ ಟೆಂಡರ್ ಕೊಡುತ್ತಾರೆ.  ಒಬ್ಬ ಶಾಸಕನಾಗಿ ನಾನು ಮಾಹಿತಿ ಕೇಳಿದರೆ ನೀಡುತ್ತಿಲ್ಲ ಎಂದು ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ ವಾಗ್ದಾಳಿ ನಡೆಸಿದ್ದಾರೆ.

ಮುಂದೆ ಓದಿ ...
  • Share this:

ವಿಜಯಪುರ (ಸೆ. 9): ವಿಜಯಪುರದಲ್ಲಿ ಜೆಡಿಎಸ್ ಶಾಸಕ ಮತ್ತು ಮಹಾನಗರ ಪಾಲಿಕೆ ಆಯುಕ್ತರ ಮಧ್ಯೆ ವಾರ್ಡುಗಳಿಗೆ ಅನುದಾನ ಬಿಡುಗಡೆ ವಿಚಾರ ಈಗ ಹೊಸ ಸ್ವರೂಪ ಪಡೆದಿದೆ. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ವಿರುದ್ಧ ವಿಜಯಪುರ ಜಿಲ್ಲೆಯ ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗಠಾಣ ಮೀಸಲು ಮತಕ್ಷೇತ್ರಕ್ಕೆ ಸೇರಿದ ನಾಲ್ಕು ವಾರ್ಡ್​ಗಳು ಬರುತ್ತವೆ.  ಆದರೆ, ವಿಜಯಪುರ ಮಹಾನಗರ ಪಾಲಿಕೆ ಕಮಿಷನರ್ ಒಬ್ಬ ಚಾಲಾಕಿ ಕಮಿಷನರ್.  ಇವರು ಒಬ್ಬ ಕಮಿಷನ್ ಏಜೆಂಟ್.  ಟೆಂಡರ್ ಗಳಲ್ಲಿ ಸಂಪೂರ್ಣ ‌ಅವ್ಯವಹಾರ ಮಾಡಿದ್ದಾರೆ.  14 ಮತ್ತು 15ನೇ ಹಣಕಾಸಿನಲ್ಲಿ ಅವ್ಯವಹಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಅಷ್ಟೇ ಅಲ್ಲ, ಈ ಮೊದಲು ಹಗರಣ ಮಾಡಿಯೇ ವಿಜಯಪುರದಿಂದ ವರ್ಗಾವಣೆಯಾಗಿ ಹೋಗಿದ್ದರು.  ಈಗ ಮತ್ತೆ ವಾಪಾಸ್ ಬಂದು ಅದನ್ನೇ ಮಾಡುತ್ತಿದ್ದಾರೆ.  ಸರ್ಕಾರ ಅವರಿಗೆ ಬೆಂಗಾವಲಾಗಿ ನಿಂತಿದೆ.  ಮಹಾನಗರ ಕಮಿಷನರ್ ಹುದ್ದೆ ಕಾಗೆಯ ಕೈಯಲ್ಲಿ ಕಚೇರಿ ಕೊಟ್ಟಂತಾಗಿದೆ.  ಕಳ್ಳತನ ಮಾಡುವವರ ಕೈಯಲ್ಲೇ ಚಾವಿ ಕೊಟ್ಟಂತಾಗಿದೆ.  ಅಷ್ಟೇ ಅಲ್ಲ, ಕಮಿಷನರ್ ವಿಜಯಪುರವನ್ನೇ ಖರೀದಿ ಮಾಡಿದಂತೆ ಕಮಿಷನರ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ


ವಿಜಯಪುರ ಮಹಾನಗರ ಪಾಲಿಕೆ ಕಮಿಷನರ್ ಹರ್ಷ ಶೆಟ್ಟಿ ಕಮಿಷನ್ ಕೊಟ್ಟವರಿಗೆ ಟೆಂಡರ್ ಕೊಡುತ್ತಾರೆ.  ಪ್ರತಿ ಬಾರಿ ಅದೇ ಹಳೆಯ ಮುಖಗಳಿಗೆ ಟೆಂಡರ್ ಕೊಡುತ್ತಾರೆ.  ಒಬ್ಬ ಶಾಸಕನಾಗಿ ನಾನು ಮಾಹಿತಿ ಕೇಳಿದರೆ ನೀಡುತ್ತಿಲ್ಲ. ಸರಕಾರದಿಂದ ಬಂದಿರುವ ಅನುದಾನದಲ್ಲಿ ತಾರತಮ್ಯ ಮಾಡುತ್ತಾರೆ.  ವಿಜಯಪುರ ಜಿಲ್ಲೆಯನ್ನು ಸಂಪೂರ್ಣವಾಗಿ ಲೂಟಿ ಮಾಡುತ್ತಿದ್ದಾರೆ.  ಈ ಕಮಿಷನರ್ ವಿರುದ್ದ ಬಹಿರಂಗವಾಗಿ ಸತ್ಯಾಗ್ರಹ ಮಾಡುತ್ತೇನೆ.  ಅಧಿವೇಶನದ ಬಳಿಕ ಸತ್ಯಾಗ್ರಹ ಮಾಡುವ ಯೋಚನೆ ಹಾಕಿಕೊಂಡಿದ್ದೇನೆ.  ಈ ಕುರಿತು ಜಿಲ್ಲಾಧಿಕಾರಿಗಳ ಗಮಕ್ಕೂ ತಂದಿದ್ದೇನೆ ಎಂದು ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ಓದಿ: ಸ್ಯಾಂಡಲ್​ವುಡ್​ ಡ್ರಗ್ ಮಾಫಿಯಾ; ನಟಿ ರಾಗಿಣಿ ಬಿಜೆಪಿ ಸದಸ್ಯೆಯಲ್ಲ ಎಂದ ಡಿಸಿಎಂ ಅಶ್ವಥ್ ನಾರಾಯಣ


ಶಾಸಕರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ನಾಗಠಾಣ ಮೀಸಲು ಮತಕ್ಷೇತ್ರದ ವ್ಯಾಪ್ತಿಯಲ್ಲಿ 4 ವಾರ್ಡುಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತವೆ.  ಅವುಗಳ ಅಭಿವೃದ್ಧಿಗೆ ರೂ.25 ಕೋಟಿ ಹಣ ಕೊಡಬೇಕು ಎಂದು ಶಾಸಕರು ಕೇಳಿದ್ದರು.  ಆದರೆ 15ನೇ ಹಣಕಾಸಿನಲ್ಲಿ ರೂ.10 ಕೋ. ಅನುದಾನ ಬಂದಿದೆ.  ರೂ. 10 ಕೋ. ನಲ್ಲಿ 35 ವಾರ್ಡಗಳಿಗೆ ಹಣ ಹಂಚಿಕೆ ಮಾಡಬೇಕಾಗುತ್ತದೆ.  ಅವರ ನಾಲ್ಕು ವಾರ್ಡುಗಳಿಗೆ ಎಷ್ಟು ಬರುತ್ತೋ ಅಷ್ಟು ಹಣವನ್ನು ನೀಡಬಹುದು.  ಆದರೆ ಅದಕ್ಕೆ ಶಾಸಕರು ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ.


ವಿಜಯಪುರ ನಗರದ ಪ್ರಮುಖ ರಸ್ತೆಗಳು ಹಾಳಾದ ಕಾರಣ ಅವುಗಳಿಗೆ ಮೊದಲ ಆದ್ಯತೆ ಕೊಡಬೇಕಾಗಿದೆ.  ಹೀಗಾಗಿ ವಾರ್ಡಗಳಿಗೆ ಹಣ ಕೊಡಲಾಗಲಿಲ್ಲ.  ಅದಕ್ಕೆ ಅವರು ಈ ಆರೋಪ ಮಾಡುತ್ತಿರಬಹುದು ಎಂದು ತಿಳಿಸಿದ ಅವರು, ಟೆಂಡರ್ ನಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದರು.  ಈಗಿನ ಟೆಂಡರ್ ಗಳೆಲ್ಲ ಇ-ಟೆಂಡರ್ ಮೂಲಕ ನಡೆಯುತ್ತವೆ.  ಅದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.


ಟೆಂಡರ್ ಮಹಾನಗರ ಪಾಲಿಕೆ ಆಯುಕ್ತರ ಕೈಯಲ್ಲಿ ಇಲ್ಲ.  ಅದಕ್ಕೆ 10 ಜನರ ಸಮಿತಿ ಇದೆ.  ಅವರೆಲ್ಲರ ಸಹಿ ಆದ ಮೇಲೆ ಟೆಂಡರ್ ಓಪನ್ ಆಗುತ್ತದೆ.  ಆಗ ಎಲ್-1 ಇದ್ದವರಿಗೆ ಟೆಂಡರ್ ನೀಡಲಾಗತ್ತದೆ.  ಅದಕ್ಕೂ ಜಿಲ್ಲಾಧಿಕಾರಿಗಳ ಅನುಮತಿ ನೀಡಬೇಕು.  ಶಾಸಕರು ಸುಮ್ಮನೆ ಆರೋಪ ಮಾಡುತ್ತಿದ್ದು, ಈ ಕುರಿತು ತಾವೇನೂ ಹೇಳಲ್ಲ.  ಯಾವುದರಲ್ಲಿ ಅವ್ಯವಹಾರವಾಗಿದೆ ಎಂಬುದು ನಿರ್ದಿಷ್ಟವಾಗಿ ತಿಳಿಸಬೇಕು.  ಅವರ ಆರೋಪಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ, ಎಂದು ವಿಜಯಪುರ ಮಹಾನಗರ ಪಾಲಿಕೆ ಆಯಕ್ತ ಹರ್ಶ ಶೆಟ್ಟಿ ತಿಳಿಸಿದ್ದಾರೆ.


ಒಟ್ಟಾರೆ ಶಾಸಕರು ಮತ್ತು ಮಹಾನಗರ ಪಾಲಿಕೆ ಆಯುಕ್ತರ ನಡುವಿನ ಜಟಾಪಟಿಯಲ್ಲಿ ನಗರದ ಅಭಿವೃದ್ಧಿ ಮರೀಚಿಕೆಯಾಗಬಾರದು ಎಂದು ವಿಜಯಪುರ ನಗರದ ಜನತೆ ಕಿವಿಮಾತು ಹೇಳಿದ್ದಾರೆ.

Published by:Sushma Chakre
First published: