ಭಗೀರಥ ಪ್ರಯತ್ನಕ್ಕೆ ಸಿಕ್ಕ ಫಲ; ಬರದ ನಾಡಿನಲ್ಲಿ ತುಂಬಿದ ಕೆರೆಯಿಂದ ರೈತರಿಗೆ ಸಿಗುತ್ತಿದೆ ಲಾಭಾ

ಬಬಲೇಶ್ವರ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ನೀರು ಉಕ್ಕಿ ಹರಿಯುತ್ತಿದೆ.  ಈ ಬಾರಿ ಈ ಕೆರೆಗೆ ನೀರು ತುಂಬಿಸಿದ್ದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ

ಭರ್ತಿಯಾದ ಕೆರೆ

ಭರ್ತಿಯಾದ ಕೆರೆ

  • Share this:
ವಿಜಯಪುರ, ಜ. 22- ಜನಪ್ರತಿನಿಧಿಗಳು ಈಗ ಮಾಡುವ ಕೆಲಸಗಳು ಭವಿಷ್ಯದಲ್ಲಿ ಹೇಗೆ ಜನೋಪಯೋಗಿ ಆಗುತ್ತವೆ ಎಂಬುದಕ್ಕೆ ಇದು ತಾಜಾ ಉದಾಹರಣೆ.  ಈ ಹಿಂದೆ ರೂಪಿಸಿ ಅನುಷ್ಠಾನಕ್ಕೆ ತಂದ ಯೋಜನೆಯೊಂದು ಬರದ ನಾಡಿನಲ್ಲಿ ಈಗ ಜೀವಜಲ ಉಕ್ಕಲು ಕಾರಣವಾಗಿದೆ. ಅಂದು ಮಾಡಿದ ಭಗೀರಥ ಪ್ರಯತ್ನ ಈಗ ಈ ಭಾಗದಲ್ಲಿ ರೈತರಿಗೆ ನೀರಾವರಿ ಸೌಲಭ್ಯಕ್ಕೆ ಅನುಕೂಲವಾಗಿದೆ.  ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ. ಬಿ. ಪಾಟೀಲ ಜಿಲ್ಲೆಯ ಅತೀ ಹಿಂದುಳಿದ ವಿಜಯಪುರ ಜಿಲ್ಲೆಗೆ ನೀರಾವರಿ ಸೌಲಭ್ಯ ಒದಗಿಸಲು ಸಾಕಷ್ಟು ಅನುದಾನ ತಂದು ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದರು.  ಕಾಲುವೆಗಳನ್ನು ನಿರ್ಮಿಸಿದರು.  ಕೆರೆಗಳನ್ನು ತುಂಬಿಸಿದರು.  ಹಳ್ಳಕೊಳ್ಳಗಳಿಗೆ ಬ್ಯಾರೇಜುಗಳನ್ನು ಕಟ್ಟಿ ನೀರು ಇಂಗಲು ಇಂಗು ಕೆರೆಗಳನ್ನೂ ನಿರ್ಮಾಣ ಮಾಡಿದರು.  ಈ ಎಲ್ಲ ಪ್ರಯತ್ನಗಳ ಫಲ ಈಗ ಹಲವಾರು ಕಡೆಗಳಲ್ಲಿ ಜೀವಜಲದಿಂದ ಭೂತಾಯಿ ಸಮೃದ್ಧವಾಗಲು ಕಾರಣವಾಗಿದೆ.

ಇಂಥದ್ದೆ ಯೋಜನೆಯಾದ ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ಈಗ  ಜಿಲ್ಲೆಯ ಬಬಲೇಶ್ವರ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ನೀರು ಉಕ್ಕಿ ಹರಿಯುತ್ತಿದೆ.  ಈ ಬಾರಿ ಈ ಕೆರೆಗೆ ನೀರು ತುಂಬಿಸಿದ್ದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದ್ದು, ಈ ಹಿಂದೆ ರೈತರೇ ಆಧುನಿಕ ಭಗೀರಥ ಎಂದು ಬಿರುದು ನೀಡಿದ್ದ ಎಂ. ಬಿ. ಪಾಟೀಲ ಅವರ ಕಾರ್ಯಕ್ಕೆ ಫಲ ಸಿಗತೊಡಗಿದೆ.ಸಿದ್ಧರಾಮಯ್ಯ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಬಲೇಶ್ವರದ ಹಾಲಿ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ರೂ. 3,600 ಕೋ. ವೆಚ್ಚದಲ್ಲಿ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದರು.  ಈಗ ಈ ಏತ ನೀರಾವರಿ ಯೋಜನೆಯ ಕಾಲುವೆಗಳ ಮೂಲಕ ಬಾಬಾನಗರ ಕೆರೆಗೆ ನೀರು ಹರಿದು ಬಂದಿದ್ದು, ಕೆರೆಯೀಗ ಸಂಪೂರ್ಣ ಭರ್ತಿಯಾಗಿದೆ.  ಅಷ್ಟೇ ಅಲ್ಲ, ಈ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಹಳ್ಳಕ್ಕೂ ಹರಿಯುತ್ತಿರುವುದರಿಂದ ಈ ಹಳ್ಳದ ಸುತ್ಮಮುತ್ತ ವಾಸಿಸುವ ಜಲಚರಗಳು, ಪ್ರಾಣಿ, ಪಕ್ಷಿ ಸಂಕುಲಗಳಿಗೂ ಈಗ ಜೀವಜಲ ಸಿಕ್ಕಂತಾಗಿದೆ.  ಸಧ್ಯಕ್ಕೆ ಇರುವ ಜಲರಾಶಿಯನ್ನು ನೋಡಿದರೆ, ಬೇಸಿಗೆಯಲ್ಲಿ ಪಶು, ಪಕ್ಷಿಗಳು, ದನಕರುಗಳಿಗೆ ನೀರಿನ ಸಮಸ್ಯೆಯಾಗುವುದು ತಪ್ಪಲಿದೆ.

ಬಾಬಾನಗರ ರಾಜ್ಯದ ದ್ರಾಕ್ಷಿ ಕಣವೇ ಆಗಿದೆ.  ಈ ಭಾಗದಲ್ಲಿ ಬಹುತೇಕ ರೈತರು ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ.  ಪ್ರತಿ ವರ್ಷ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ದ್ರಾಕ್ಷಿ ಕಟಾವಿಗೆ ಬರುತ್ತಿತ್ತು.  ಅಲ್ಲದೇ, ಜನವರಿಯಲ್ಲಿ ನೀರಿನ ಕೊರತೆ ಉಂಟಾಗಿ ದ್ರಾಕ್ಷಿ ಇಳುವರಿ ಕುಂಠಿತವಾಗುತ್ತಿತ್ತು.  ಆದರೆ, ಈ ವರ್ಷ ಈ ಕೆರೆ ಭರ್ತಿಯಾಗಿರುವುದು ದ್ರಾಕ್ಷಿ ಬೆಳೆ ಸಮೃದ್ಧವಾಗಿ ಬೆಳೆಯಲು ಅನುಕೂಲವಾಗಲಿದೆ.

ಅಷ್ಟೇ ಅಲ್ಲ, ಈ ಗ್ರಾಮವೊಂದರಲ್ಲಿಯೇ ಇರುವ ಮತ್ತು ಬತ್ತಿಹೋಗಿದ್ದ ನೂರಾರು ಕೊಳವೆ ಭಾವಿಗಳಿಗೆ ಈಗ ಅಂತರ್ಜಲ ಹೆಚ್ಚಾಗಿದ್ದರಿಂದ ನೀರು ಬರತೊಡಗಿದೆ.  ಈ ಭಾಗದಲ್ಲಿ ಸುಮಾರು 2000 ಕ್ಕೂ ಹೆಚ್ಚು ಕೊಳವೆ ಭಾವಿಗಳಲ್ಲಿ  ಅಂತರ್ಜಲ ಹೆಚ್ಚಾಗಿ.  ಪರಿಣಾಮ 2021ರಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಉತ್ತಮ ಇಳುವರಿ ನಿರೀಕ್ಷಿಸುವಂತಾಗಿದೆ ಎನ್ನುತ್ತಾರೆ ಈ ಭಾಗದ ಯುವ ರೈತರಾದ ಸಿದ್ದು ಗೌಡನವರ, ಸುಭಾಷ ಅಕ್ಕಿ, ಗುರು ಮಾಳಿ.

ಇದನ್ನು ಓದಿ: ಶಿವಮೊಗ್ಗ ಸ್ಫೋಟ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ

ಬಾಬಾನಗರ ಗ್ರಾಮವೊಂದರಲ್ಲಿಯೇ ಸುಮಾರು 3500 ರಿಂದ 4000 ಎಕರೆ ದ್ರಾಕ್ಷಿ ಬೆಳೆಯಲಾಗುತ್ತಿದೆ.  1500 ಜನರ ಹೆಸರಿನಲ್ಲಿ ಜಮೀನು ನೋಂದಣಿಯಿದ್ದು, ಸರಾಸರಿ ಎರಡಂತರೆ ಪರಿಗಣಿಸಿದರೂ 3000 ಸಾವಿರಕ್ಕೂ ಹೆಚ್ಚು ಕೊಳವೆ ಭಾವಿಗಳಾಗುತ್ತವೆ.  ಈಗ ಗ್ರಾಮದಲ್ಲಿರುವ ಮೂರು ಕೆರೆಗಳಲ್ಲಿ ಒಂದು ಕೆರೆ ಸಂಪೂರ್ಣ ಭರ್ತಿಯಾಗಿ ತುಂಬಿ ತುಳುಕುತ್ತಿದ್ದು, ಎರಡನೇ ಕೆರೆಗೆ ಈಗ ನೀರು ಬಿಡಲಾಗಿದೆ. ಮೂರನೆ ಕೆರೆಗೆ ನೀರು ಬಿಡಲು ಜಲಸಂಪನ್ಮೂಲ ಇಲಾಖೆ ಸಿದ್ಧವಾಗಿದ್ದರೂ, ರೈತರೇ ನೀರು ಹೆಚ್ಚಾಗಿ ಭೂಮಿಗೆ ಹಾನಿಯಾಗುವ ಭೀತಿಯ ಹಿನ್ನೆಲೆಯಲ್ಲಿ ಸಧ್ಯಕ್ಕೆ ಬಿಡಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಕೆರೆ ಭರ್ತಿಯಾಗಿ ಹಳ್ಳಕ್ಕೆ ನೀರು ಹರಿಯುತ್ತಿರುವುದರಿಂದ ಹಳ್ಳಕ್ಕೆ ಅಲ್ಲಲ್ಲಿ ನಿರ್ಮಿಸಲಾಗಿರುವ ಚೆಕ್ ಡ್ಯಾಂ ಗಳೂ ಕೂಡ ಭರ್ತಿಯಾಗುತ್ತಿವೆ.  ಇದೂ ಕೂಡ ಈ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.  ಈ ಮುಂಚೆ ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿರುವ ತಿಕೋಟಾ ತಾಲೂಕಿನ ಬಿಜ್ಜರಗಿ, ಬಾಬಾನಗರ ಮುಂತಾದ ಭಾಗಗಳಿಗೆ ನೀರಾವರಿ ಯೋಜನೆ ಸಾಧುವಲ್ಲ ಎಂದು ಅಧಿಕಾರಿಗಳು ಮತ್ತು ತಜ್ಞರು ಹೇಳುತ್ತಿದ್ದರು.  ಆದರೆ, ಆ ಮಾತು ಈಗ ಹುಸಿಯಾಗಿದ್ದು, ಎಂ. ಬಿ. ಪಾಟೀಲ ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ಮಾಡಿದ ಭಗೀರಥ ಪ್ರಯತ್ನದಿಂದಾಗಿ ಈ ಭಾಗದಲ್ಲಿ ಈಗ ಭೂತಾಯಿ ಹಸಿರಾಗುವಂತಾಗಿದೆ.  ಮಾತ್ರವಲ್ಲ ಈ ಹಳ್ಳದ ನೀರು ಮಹಾರಾಷ್ಟ್ರದ ಹಳ್ಳಗಳನ್ನೂ ಸೇರಿ ಆ ಭಾಗಕ್ಕೂ ಕೂಡ ನೀರು ಹೋಗುತ್ತಿರುವುದು ನೀರಾವರಿ ಯೋಜನೆಗಳು ಸಮರ್ಪಕವಾಗಿ ಜಾರಿಯಾದರೆ ಯಾವ್ಯಾವ ರೂಪದಲ್ಲಿ ರೈತರಿಗೆ ನೆರವಾಗಲಿವೆ ಎಂಬುದಕ್ಕೆ ಈ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಸಾಕ್ಷಿಯಾಗಿದೆ.
Published by:Seema R
First published: