ವಿಜಯಪುರದಲ್ಲೊಂದು ಪವಾಡ ಸ್ಥಳ: ಇಲ್ಲಿ ದೇವರಿಗೆ ಮದ್ಯವೇ ನೈವೇದ್ಯ; ಇಲ್ಲಿ ಹೇಳಿದ್ದೆಲ್ಲವೂ ಸತ್ಯವಾಗುತ್ತಂತೆ

 • News18
 • Last Updated :
 • Share this:
  - ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

  ವಿಜಯಪುರ (ಫೆ.19) : ಉತ್ತರ ಕರ್ನಾಟಕ ಹೇಳಿ ಕೇಳಿ ತರಹೇವಾರಿ ಜಾತ್ರೆಗಳಿಗೆ ಹೆಸರುವಾಸಿ. ಅದರಲ್ಲಿಯೂ ಅಣ್ಣ ಬಸವಣ್ಣನ ನಾಡು, ಶರಣರ ಬೀಡು ವಿಜಯಪುರ ಜಿಲ್ಲೆಯಲ್ಲಿ ನಡೆಯುವವಷ್ಟು ಜಾತ್ರೆಗಳು ಜಗತ್ತಿನ ಯಾವ ಮೂಲೆಯಲ್ಲಿಯೂ ನಡೆಯುವುದಿಲ್ಲ ಎಂಬ ಮಾತಿದೆ.

  ಇಂಥ ಇತಿಹಾಸ ಪ್ರಸಿದ್ಧ ಜಿಲ್ಲೆಯ ನದಿ ತೀರ ಗ್ರಾಮವೊಂದರಲ್ಲಿ ಪರ್ತಿ ವರ್ಷ ನಡೆಯುತ್ತೆ ವಿಶಿಷ್ಠ ಜಾತ್ರೆ. ಮದ್ಯಪಾನ ಮಾಡುವವರ ಬಗ್ಗೆ ಸಮಾಜದಲ್ಲಿ ಎಂಥಹ ಗೌರವವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಇಲ್ಲಿ ನಡೆಯುವ ಜಾತ್ರೆಯಲ್ಲಿ ಮದ್ಯವೇ ನೈವೇದ್ಯ. ಇದು ಇಲ್ಲದಿದ್ದರೆ ಇಲ್ಲಿ ಏನೂ ಇಲ್ಲ. ಇಂಥದ್ದೊಂದು ಜಾತ್ರೆ ಮತ್ತೆ ನಡೆದಿದೆ.

  ಈ ಬಾರಿಯೂ ಅಷ್ಟೇ, ಕೈಯಲ್ಲಿ ನಾನಾ ಬ್ರ್ಯಾಂಡ್ ಮತ್ತು ಕಂಪನಿಯ ಮದ್ಯದ ಪಾಕೇಟ್, ಬಾಟಲಿಗಳನ್ನು ಹಿಡಿದ ಭಕ್ತರು ನಾನಾ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದು ಇಲ್ಲಿನ ಗದ್ದುಗೆಗಳಿಗೆ ಮದ್ಯದ ನೈವೇದ್ಯ ಅರ್ಪಿಸಿ ಕೃಪಾರ್ಥರಾಗಿದ್ದಾರೆ.  ಅಂದಹಾಗೆ ಈ ಜಾತ್ರೆ ನಡೆದಿರುವುದು ವಿಜಯಪುರ ತಾಲೂಕಿನ ಕೃಷ್ಣಾ ತೀರದಲ್ಲಿರುವ ಬಬಲಾದಿ ಗ್ರಾಮದಲ್ಲಿ. ಅಲ್ಲಿರುವ ಚಂದ್ರಗಿರಿ ದೇವಿ ಮಠದಲ್ಲಿ. ಈ ಮಠದಲ್ಲಿರುವ ತ್ರಿಕಾಲ ಜ್ಞಾನಿ ಚಿಕ್ಕಪ್ಪಯ್ಯ ಮತ್ತು ಸದಾಶಿವ ಮುತ್ಯಾ ಅವರು ಚಂದ್ರಗಿರಿ ದೇವಿಯ ಆರಾಧಕರು. ಈ ಇಬ್ಬರು ಪವಾಡ ಪುರುಷರು ಸೇರಿ ಒಟ್ಟು 10 ಗದ್ದುಗೆಗಳು ಇಲ್ಲಿದ್ದು, ಈ ಗದ್ದುಗೆಗಳ ಮೇಲೆ ಭಕ್ತರು ಮದ್ಯವನ್ನು ಹಾಕುವ ಮೂಲಕ ನೈವೇದ್ಯ ಅರ್ಪಿಸುತ್ತಾರೆ.

  ಸಾರವಾಡ ಗ್ರಾಮದಿಂದ ಬಂದ ಚಿಕ್ಕಪ್ಪಯ್ಯ ಇಲ್ಲಿಗೆ ಬಂದು ನೆಲೆಸಿದ್ದರು. ಅಂದು ಈಗಿರುವ ಸಮಾಧಿ ಸ್ಥಳದಲ್ಲೇ ಹಾವು-ಮುಂಗಸಿ, ಇಲಿ-ಬೆಕ್ಕು, ಆಡು-ತೋಳ, ಮೊಲ-ನಾಯಿ ತುಂಬಾ ಅನ್ಯೋನ್ಯವಾಗಿ ಬದುಕಿದ್ದವು. ಸುಮಾರು 400 ವರ್ಷಗಳ ಹಿಂದೆಯೇ ತ್ರಿಕಾಲ ಜ್ಞಾನದ ಬಗ್ಗೆ ಇಲ್ಲಿ ಭವಿಷ್ಯ ಬರೆಯಲಾಗಿತ್ತು. ಇಲ್ಲಿಗೆ ಚಿಕ್ಕಪ್ಪಯ್ಯ ಸ್ವಾಮೀಜಿ ನೆಲಸಿದ ಮೇಲೆ ಅವರ ಬಳಿಕ ಸದಾಶಿವ ಮುತ್ಯಾ ಸೇರಿದಂತೆ ಇತರ ಎಂಟು ಜನ ಸಿದ್ಧಿ ಪುರುಷರು ಬಂದು ನೆಲೆಸಿದ್ದರು. ಈ ಸತ್ಪುರಷರು ಆಡಿದ, ಮಾಡಿದ ಪವಾಡಗಳಿಗೆ ಲೆಕ್ಕವಿಲ್ಲ. ಇವರು ಆಡುವ ಮಾತುಗಳು ನಿಜವಾಗುತ್ತಿದ್ದವು. ಹಾಕುವ ಶಾಪಗಳು ತಟ್ಟುತ್ತಿದ್ದವು.

  ಇವರು ಹೇಳಿದ ಭವಿಷ್ಯಗಳು ಇಂದಿಗೂ ನಿಜವಾಗುತ್ತ ಬಂದಿವೆ. ಮಠದ ಗುರುವನ್ನು ಕೃಷ್ಣಾ ನದಿಯಿಂದ ಮಠವರೆಗೆ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಾರೆ. ಕೃಷ್ಣಾ ನದಿಯಿಂದ ಮಠದ ವರೆಗೆ ನಾಲ್ಕು ಬಾರಿ ಭವಿಷ್ಯ ಹೇಳಲಾಗುತ್ತದೆ. ಐದನೇ ಬಾರಿ ಮಠದ ಗುರುಮಾತೆಯ ಎದುರು ಶಿಶುಮಗ ಭವಿಷ್ಯ ಹೇಳುತ್ತಾನೆ. ಜಗತ್ತಿನಲ್ಲಿ ಭವಿಷ್ಯದಲ್ಲಿ ನಡೆಯುವ, ಘಟಿಸಬಹುದಾದ ದುರಂತಗಳು, ಮಳೆ, ಬೆಳೆ, ಪ್ರಳಯ ಮತ್ತಿತರ ಸುಖ-ದುಃಖದ ಘಟನೆಗಳನ್ನು ಇಲ್ಲಿ ಹೇಳುವುದು ಗಮನಾರ್ಹವಾಗಿದೆ. ಇಲ್ಲಿ ನುಡಿಯುವ ಭವಿಷ್ಯ ಕರಿ ಕಲ್ಲಿನ ಮೇಲೆ ಬಿಳಿಗೆರೆ ಹೇಳಿದಷ್ಟೇ ನಿಖರವಾಗಿರುತ್ತದೆ. ರೇಡಿಯೋ, ರೈಲು ಬರಲಿವೆ ಎಂದು ಇಲ್ಲಿ ಹಲವಾರು ಶತಮಾನಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ.

  ಈ ಎಲ್ಲ ಭವಿಷ್ಯವನ್ನು ಚಿಕ್ಕಪ್ಪಯ್ಯ ಮತ್ತು ಸದಾಶಿವ ಮುತ್ಯಾ ಶತಮಾನಗಳ ಹಿಂದೆಯೇ ತಾಳೆಗರಿಗಳ ಮೇಲೆ ಬರೆದಿಟ್ಟಿದ್ದು, ಪ್ರತಿವರ್ಷ ಮಹಾಶಿವರಾತ್ರಿಯ ದಿನ ಪ್ರಸಕ್ತ ವರ್ಷಕ್ಕೆ ಸಂಬಂಧಿಸಿದ ಒಂದೇ ಪುಟವನ್ನು ತೆರೆದು ನೋಡಿ ಭವಿಷ್ಯ ಹೇಳುತ್ತಾರೆ. ಈ ಹೊತ್ತಿಗೆಯಲ್ಲಿ ಎಷ್ಟು ಪುಟಗಳಿವೆ? ಮುಂದೆನಾಗುತ್ತದೆ ಎಂಬುದನ್ನು ಯಾರೂ ನೋಡುವುದಿಲ್ಲ ಮತ್ತು ಓದುವುದಿಲ್ಲ.

  ಮದ್ಯದ ನೈವೇದ್ಯ ಏಕೆ?
  ಇಲ್ಲಿ ಮದ್ಯದ ನೈವೇದ್ಯ ಅರ್ಪಿಸಲೂ ಒಂದು ಕಾರಣವಿದೆ. ಇಲ್ಲಿನ ಸಿದ್ಧಿ ಪುರುಷ ಚಿಕ್ಕಪ್ಪಯ್ಯ ತಮ್ಮ ಸಿದ್ಧಿಗಾಗಿ ಬಿಂದುವಿನ ಪ್ರಮಾಣದಲ್ಲಿ ಮದ್ಯವನ್ನು ಸೇವಿಸಿ ಸಾಧನೆಗೆ ಕುಳಿತುಕೊಳ್ಳುತ್ತಿದ್ದರು. ಆದರೆ, ಕಾಲಾಂತರದಲ್ಲಿ ಇದನ್ನೇ ಪ್ರಮುಖವಾಗಿ ಪರಿಗಣಿಸಿರದ ಭಕ್ತರು ಈ ಗದ್ದುಗೆಗೆ ಮದ್ಯದ ನವೈದ್ಯ ಅರ್ಪಿಸಲಾರಂಭಿಸಿದರು. ಈ ಕುರಿತು ಮಠದ ಆಡಳಿತ ಮಂಡಳಿಯವರು ಎಷ್ಟೇ ತಿಳುವಳಿಕೆ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಮದ್ಯದ ನೈವೇದ್ಯ ಸಾಂಗವಾಗಿ ಮುಂದುವರೆದುಕೊಂಡು ಬಂದಿದೆ.
  ಇಲ್ಲಿ ಮದ್ಯದ ನೈವೇದ್ಯ ಅರ್ಪಿಸುವ ಭಕ್ತರು, ತಾವೂ ಮದ್ಯದ ಪ್ರಸಾದವನ್ನು ಸ್ವೀಕರಿಸಿ ಸ್ವಯಂ ನಿಯಂತ್ರಣ ಕಳೆದುಕೊಂಡು ಎಲ್ಲೆಂದರೆಲ್ಲಿ ತೂರಾಡುತ್ತಿರುತ್ತಾರೆ. ಬೇಕೆಂದರಲ್ಲಿ ಬಿದ್ದಿರುತ್ತಾರೆ. ಬಾಯಿ ತುಂಬಿದ್ದರೂ ಮದ್ಯ ಸೇವೆ ಮಾಡುತ್ತಲೇ ಇರುತ್ತಾರೆ.

  ಜುಟ್ಟು ಇಲ್ಲದ ಟೆಂಗಿನಕಾಯಿ:
  ಈ ಮಠದಲ್ಲಿ ಇನ್ನೋಂದು ವಿಶಿಷ್ಠ ಸಂಪ್ರದಾಯವಿದೆ. ಬಹುತೇಕ ಎಲ್ಲ ಮಠ ಮಂದಿರಗಳಲ್ಲಿ ಟೆಂಗಿನಕಾಯಿ ಒಡೆಯುವುದು ಸಾಮಾನ್ಯ. ಜನರೂ ಸಾಮಾನ್ಯವಾಗಿ ಜುಟ್ಟು ಇರುವ ತೆಂಗಿನಕಾಯಿಯನ್ನೇ ಒಡೆಯುತ್ತಾರೆ. ಆದರೆ, ಇಲ್ಲಿ ಮಾತ್ರ ಇದಕ್ಕೆ ತದ್ವಿರುದ್ದ. ಇಲ್ಲಿ ಜುಟ್ಟು ಇಲ್ಲದ ಬೋಳ ಟೆಂಗಿನಕಾಯಿ ಒಡೆಯುತ್ತಾರೆ. ಇದು ಯಾಕೆ ಗೊತ್ತಾ? ಹೊಳೆ ಬಬಲಾದಿ ಮಠದವರ ಜುಟ್ಟು ಯಾರ ಕೈಗೂ ಸಿಕ್ಕಿಲ್ಲ ಎಂಬುದರ ಪ್ರತೀಕ ಇದಾಗಿದೆ.

   
  First published: