ಊಹಾಪೋಹಗಳಿಗೆ ತೆರೆ ಎಳೆದ ಸಂಕೇಶ್ವರ್: ರಾಜೀವ್ ಚಂದ್ರಶೇಖರ್​ಗೆ ಟಿಕೆಟ್ ನೀಡಿದ್ದಕ್ಕೆ ಸಮರ್ಥನೆ


Updated:March 13, 2018, 1:02 PM IST
ಊಹಾಪೋಹಗಳಿಗೆ ತೆರೆ ಎಳೆದ ಸಂಕೇಶ್ವರ್: ರಾಜೀವ್ ಚಂದ್ರಶೇಖರ್​ಗೆ ಟಿಕೆಟ್ ನೀಡಿದ್ದಕ್ಕೆ ಸಮರ್ಥನೆ

Updated: March 13, 2018, 1:02 PM IST
ನ್ಯೂಸ್ 18 ಕನ್ನಡ

ಹುಬ್ಬಳ್ಳಿ(ಮಾ.13): ಕರ್ನಾಟಕದಿಂದ ರಾಜ್ಯಸಭೆಗೆ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ವಿಜಯ ಸಂಕೇಶ್ವರ್ ಬಿಜೆಪಿಗೆ ರಾಜೀನಾಮೆ ನೀಡಿ, ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಇಂದು ಅವರು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿ ಬಹಳ ಮಹತ್ವ ಪಡೆದಿತ್ತು. ಆದರೆ ಮಾಧ್ಯಮ ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಸಂಕೇಶ್ವರ್ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಅಲ್ಲದೇ ರಾಜ್ಯಸಭೆಗೆ ರಾಜೀವ್ ಚಂದ್ರಶೇಖರ್ ಆಯ್ಕೆಯನ್ನೂ ಸಮರ್ಥಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಾನು ಮುಂದಿನ ಚುನಾವಣೆಗೆ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಪರವಾಗಿ ಪ್ರಚಾರ ನಡೆಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಉದ್ಯಮಿ ವಿಜಯ ಸಂಕೇಶ್ವರ್ ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ನನ್ನ ಹೆಸರನ್ನು ಆಯ್ಕೆ ಮಾಡಿರುವುದಾಗಿ ಪತ್ರಿಕೆ ಹಾಗೂ ಮಾಧ್ಯಮಗಳಲ್ಲೂ ವರದಿ ಬಂದಿತ್ತು. ಇದಾದ ಬಳಿಕ ಯಡಿಯೂರಪ್ಪ ಕರೆ ಮಾಡಿ ಇದನ್ನು ಖಚಿತಪಡಿಸಿದ್ದು, ಬಳಿಕ ಸುಮಾರು ನಲ್ವತ್ತು ಮುಖಂಡರು ನನ್ನ ಹೆಸರನ್ನು ಸೂಚಿಸಿರುವುದಾಗಿ ತಿಳಿಸಿದ್ದರು. ಆದರೆ ನಾನು ಟಿಕೆಟ್​ಗೆ ಲಾಭಿ ನಡೆಸಿರಲಿಲ್ಲ. ಹೀಗಿರುವಾಗ ನಿನ್ನೆಯಷ್ಟೇ ನನ್ನ ಆತ್ಮೀಯ ಗೆಳೆಯನಾಗಿರುವ ರಾಜೀವ್ ಚಂದ್ರಶೇಖರ್ ಹೆಸರು ಅಂತಿಮಗೊಳಿಸಿ ನಾಮ ನಿರ್ದೇಶನ ಮಾಡಿದ್ದಾರೆ. ಈ ವಿಚಾರ ನನಗೆ ಖುಷಿ ಕೊಟ್ಟಿದೆ ಎಂದಿದ್ದಾರೆ.

ರಾಜೀವ್ ಚಂದ್ರಶೇಖರ್​ಗೆ ಟಿಕೆಟ್ ನೀಡಿದ್ದಕ್ಕೆ ಸಮರ್ಥನೆ

ಇದೇ ಸಂದರ್ಭದಲ್ಲಿ ರಾಜ್ಯ ಸಭಾ ಚುನಾವಣೆಗೆ ಉದ್ಯಮಿ ರಾಜೀವ್ ಚಂದ್ರಶೇಖರ್ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ವಿಜಯ ಸಂಕೇಶ್ವರ್ "ರಾಜ್ಯಸಭೆಗೆ ರಾಜೀವ್ ಚಂದ್ರಶೇಖರ್​ ಆಯ್ಕೆಯ ಬಗ್ಗೆ ನನಗೆ ಅಸಮಾಧಾನವಿಲ್ಲ. ಅವರೊಬ್ಬ ಅಪ್ಪಟ ಕನ್ನಡಿಗ ರಂದು ಘಂಟಾಘೋಷವಾಗಿ ಹೇಳುತ್ತೇನೆ. ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದರೂ ನನಗಿಂತ ಹೆಚ್ಚಿನ ಶಿಕ್ಷಣ ಪಡೆದಿದ್ದಾರೆ. ಅಲ್ಲದೇ ಅವರು ಮೂರನೇ ಬಾರಿ ರಾಜ್ಯಸಭೆಗೆ ಅರ್ಜಿ ಸಲ್ಲಿಸಿದ್ದಾರೆ, ಇದು ನನಗೆ ಸಂತೋಷ ತಂದಿದೆ. ಅವರು ತಮ್ಮ ಶಿಕ್ಷಣವನ್ನು ಇಲ್ಲೇ ಮುಗಿಸಿದ್ದರು ಹಾಗೂ ಕನ್ನಡಕ್ಕೆ ಅವರು ಬಹಳಷ್ಟು ಕೊಡುಗೆ ನೀಡಿದ್ದಾರೆ.  ಹೀಗಿರುವಾಗ ಅವರು ಕನ್ನಡೇತರರು ಎಂಬ ವಾದದಡಿಯಲ್ಲಿ ಅಡ್ಡಿಪಡಿಸುವುದು ಸರಿಯಲ್ಲ. ಸೋನಿಯಾ ಗಾಂಧಿ ಇಟಲಿ ಮಹಿಳೆಯಾದರೂ, ನಮ್ಮ ಸೊಸೆ ಅನ್ನುವ ಹೆಮ್ಮೆಯಿದೆ ಅವರು ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಇಂದಿರಾ ಗಾಂಧಿಯೂ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿ ಗೆದ್ದಿದ್ದರು ಎಂಬುವುದನ್ನು ಕಾಂಗ್ರೆಸ್ ನೆನಪಿಟ್ಟುಕೊಳ್ಳಬೇಕು" ಎಂದಿದ್ದಾರೆ.

ಬಿಜೆಪಿ ಪರವಾಗಿಯೇ ಪ್ರಚಾರ:

ಇನ್ನು ಬಿಜೆಪಿ ಪರವಾಗಿ ಮಾತನಾಡಿದ ಸಂಕೇಶ್ವರ್ "ಕರ್ನಾಟಕದಿಂದ ಕಾಂಗ್ರೆಸ್ ಹಠಾವೋ ದೊಡ್ಡ ಪ್ರಮಾಣದಲ್ಲಿ ಮಾಡುತ್ತೇನೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು ಹೆಚ್ಚಿನ ಕೆಲಸ ಮಾಡುತ್ತೇನೆ ಇದಕ್ಕಾಗಿ ರಾಜ್ಯದ ಜನರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಯಾಕೆಂದರೆ ಹಿಂದುಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಬಹಳ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷ ವಿಷ ತೆಗೆದುಕೊಳ್ಳಲು ಹೇಳಿದರೂ ತೆಗೆದುಕೊಳ್ಳುತ್ತೇನೆ, ಅವರು ಎಲ್ಲಿ ಸ್ಪರ್ಧಿಸಲು ಹೇಳಿದರೂ ಸ್ಪರ್ಧಿಸುತ್ತೇನೆ" ಎಂದಿದ್ದಾರೆ.
Loading...

ಇದೇ ಸಂದರ್ಭದಲ್ಲಿ ತಮ್ಮ ಪಕ್ಷ ಸೇರಿಕೊಳ್ಳಲು ಕಾಂಗ್ರೆಸ್ ಪಕ್ಷ ಕೇಳಿಕೊಳ್ಳುತ್ತಿರುವ ವಿಚಾರವನ್ನು ತಿಳಿಸಿದ ಸಂಕೇಶ್ವರ್ "ಕಾಂಗ್ರೆಸ್‌ನವರು ನನಗೆ ಈಗಲು ಸಂಪರ್ಕ ಮಾಡುತ್ತಿದ್ದಾರೆ. ಆದರೆ ನಾನು ಬಿಜೆಪಿಯನ್ನು ಮದುವೆಯಾಗಿದ್ದು ಬಿಜೆಪಿ ಸೇವೆಯನ್ನೇ ಮಾಡುತ್ತೇನೆ. ಬಿಜೆಪಿ ಹೈಕಮಾಂಡ್ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದೆ" ಎಂದಿದ್ದಾರೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ