news18-kannada Updated:June 23, 2020, 11:13 PM IST
ವಿಜಯ್ ಶಂಕರ್
ಬೆಂಗಳೂರು(ಜೂನ್ 23): ಇವತ್ತು ತಮ್ಮ ನಿವಾಸದಲ್ಲಿ ನೇಣಿಗೆ ಶರಣಾದ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಅವರ ಸಾವಿಗೆ ಮಾಜಿ ಕಾರ್ಪೊರೇಟರ್ ರಾಮಮೂರ್ತಿ ಸಂತಾಪ ವ್ಯಕ್ತಪಡಿಸಿದರು. ರಾಮಮೂರ್ತಿ ಒಬ್ಬ ಒಳ್ಳೆಯ ವ್ಯಕ್ತಿ. ತುಂಬಾ ನಿಷ್ಠಾವಂತ ಅಧಿಕಾರಿಯಾಗಿದ್ದವರು. ಒಬ್ಬ ಉತ್ತಮ ಐಎಎಸ್ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದೀವಿ ಎಂದು ರಾಮಮೂರ್ತಿ ನೋವು ವ್ಯಕ್ತಪಡಿಸಿದರು.
ಐಎಂಎ ಜೂವೆಲರಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ಖಾನ್ನಿಂದ ಲಂಚ ಸ್ವೀಕರಿಸಿದ ಆರೋಪ ವಿಜಯ್ ಶಂಕರ್ ಮೇಲಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಮಮೂರ್ತಿ, 15 ದಿನಗಳ ಹಿಂದೆ ವಿಜಯ್ ಶಂಕರ್ ಪಾರ್ಕ್ನಲ್ಲಿ ತಮ್ಮನ್ನು ಭೇಟಿಯಾಗಿ ಮಾತನಾಡಿದ್ದರು. ಐಎಂಎ ಕೇಸ್ ವಿಚಾರವನ್ನೂ ಪ್ರಸ್ತಾಪಿಸಿದ್ದರು. ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆಂದು ಬೇಸರ ತೋಡಿಕೊಂಡಿದ್ದರು ಎಂದು ಹೇಳಿದರು.
ವಿಜಯ್ ಶಂಕರ್ ಭ್ರಷ್ಟಾಚಾರ ಮಾಡುವಂಥ ವ್ಯಕ್ತಿತ್ವದವರಲ್ಲ. ಅವರ ಸಾವಿನ ಬಗ್ಗೆ ತನಿಖೆಯಾಗಬೇಕು. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಮಾಜಿ ನಗರಪಾಲಿಕೆ ಸದಸ್ಯರು ಆಗ್ರಹಿಸಿದರು.
ಇದನ್ನೂ ಓದಿ: IAS Vijay Shankar Suicide: ಐಎಂಎಯಿಂದ ಹಣ ಪಡೆದ ಆರೋಪ ಎದುರಿಸುತ್ತಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಶರಣು
ವಿಜಯ್ ಶಂಕರ್ ಜಯನಗರ ಅಭಿವೃದ್ಧಿಗೆ ಸಹಕಾರಿಯಾಗಿದ್ದವರು. ತಮ್ಮ ಕುಟುಂಬ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಸಂಜೆಯವರೆಗೂ ಮನೆಯಲ್ಲೇ ಇದ್ದರು. ಮನೆಯವರ ಜೊತೆ ಮಾತಾಡಿಕೊಂಡಿದ್ದ ಅವರು ಈಗ ಈ ರೀತಿ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಶಾಂತಿ ಸಿಗಲಿ ಎಂದು ರಾಮಮೂರ್ತಿ ನೋವುಪಟ್ಟರು.
ಜಯನಗರ ಟಿ ಬ್ಲಾಕ್ನಲ್ಲಿರುವ ತಮ್ಮ ನಿವಾಸದಲ್ಲಿ ವಿಜಯ್ ಶಂಕರ್ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಪ್ರಸ್ತುತ ಸಕಾಲ ಮಿಷನ್ ನಿರ್ದೇಶಕರಾಗಿದ್ದ ವಿಜಯ್ ಶಂಕರ್ ಅವರು ಐಎಂಎ ಪ್ರಕರಣದಲ್ಲಿ ಸಿಲುಕಿ ಬಹಳ ನೋವು ಅನುಭವಿಸಿದ್ದರು. ಉನ್ನತ ಹುದ್ದೆಯಲ್ಲಿರುವಾಗಲೇ ಕೇಸ್ನಲ್ಲಿ ಎಫ್ಐಆರ್ ದಾಖಲಾಗಿತ್ತು. ಎಸ್ಐಟಿಯಿಂದ ಬಂಧನಕ್ಕೊಳಗಾಗಿದ್ದರು. ಕಳೆದ ಹಲವು ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಸಿಬಿಐ ವಿಚಾರಣೆಯಿಂದ ಅವರು ಬಹಳಷ್ಟು ಕುಗ್ಗಿ ಹೋಗಿದ್ದರೆನ್ನಲಾಗಿದೆ.ಮನ್ಸೂರ್ ಖಾನ್ನಿಂದ 1.5 ಕೋಟಿ ರೂ ಲಂಚ ಸ್ವೀಕರಿಸಿದ ಗಂಭೀರ ಆರೋಪವಿದ್ದ ವಿಜಯ್ ಶಂಕರ್ ಅವರು ಎಸ್ಐಟಿ ತನಿಖೆ ವೇಳೆ 16ನೇ ಆರೋಪಿಯಾಗಿದ್ದರು. ಆದರೆ, ತನಿಖೆ ಸಿಬಿಐಗೆ ವರ್ಗವಾದ ಮೇಲೆ 4ನೇ ಆರೋಪಿಯಾದರು. ಇದೇ ಜೂನ್ 19ರಂದು ವಿಜಯ್ ಶಂಕರ್ ಸೇರಿ ಈ ಪ್ರಕರಣದ ಎಲ್ಲಾ ಆರೋಪಿಗಳ ಪ್ರಾಸಿಕ್ಯೂಷನ್ಗೆ ಸರಕಾರ ಅನುಮತಿ ನೀಡಿತ್ತು. ಇದಾದ ಬೆನ್ನಲ್ಲೇ ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾಗಿದ್ಧಾರೆ.
First published:
June 23, 2020, 11:13 PM IST