ಬೆಂಗಳೂರು (ಅ. 10): ಕೊರೋನಾ ಭೀತಿಯಿಂದಾಗಿ ಇನ್ನೂ ಶಾಲೆಗಳನ್ನು ತೆರೆಯದ ಕಾರಣ ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಿತ್ತು. ವಿದ್ಯಾಗಮದಿಂದಾಗಿಯೇ ಅನೇಕ ವಿದ್ಯಾರ್ಥಿಗಳಿಗೆ ಕೊರೋನಾ ಹರಡುತ್ತಿದೆ ಎಂದು ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಫೇಸ್ಬುಕ್ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ತಾತ್ಕಾಲಿಕವಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.
ವಿದ್ಯಾಗಮ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಈ ಯೋಜನೆಯನ್ನು ಸ್ಥಗಿತಗೊಳಿಸಲು ಸೂಚಿಸಿದ್ದರು. ಸಿಎಂ ಆದೇಶದ ಮೇರೆಗೆ ಈ ಯೋಜನೆಯನ್ನು ಕೈಬಿಡಲಾಗಿದೆ. ಜಿಲ್ಲಾವಾರು ಅಂಶಗಳ ಸ್ವೀಕಾರ ಹಾಗೂ ಅದರ ಅಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೂ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧಾರ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ವಿದ್ಯಾಗಮ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು.
ಸೋಮವಾರದೊಳಗೆ ವಿದ್ಯಾಗಮ ಯೋಜನೆಯನ್ನು ಕೈಬಿಡದಿದ್ದರೆ ನನ್ನ ಜೀವ ಹೋದರೂ ಪರವಾಗಿಲ್ಲ. ಮಂಗಳವಾರದಿಂದ ಸರ್ಕಾರದ ಅನಾಗರಿಕ, ನಿರ್ಲಜ್ಜ ನೀತಿ, ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸುತ್ತೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಎಚ್ಚರಿಸಿದ್ದರು.
ಇದನ್ನೂ ಓದಿ: HD Kumaraswamy: ಸೋಮವಾರದೊಳಗೆ ವಿದ್ಯಾಗಮ ಯೋಜನೆ ನಿಲ್ಲಿಸದಿದ್ದರೆ ಅಹೋರಾತ್ರಿ ಧರಣಿ; ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ
ಅದಾದ ಕೆಲವೇ ಗಂಟೆಗಳಲ್ಲಿ ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಿ, ಆದೇಶ ಹೊರಡಿಸಿದೆ. ಶಿಕ್ಷಕರು ಹಾಗೂ ಪೋಷಕರಿಂದಲೂ ವಿದ್ಯಾಗಮ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ರಾಜ್ಯದಲ್ಲಿ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ವಿದ್ಯಾಗಮ ಸಮಾಜದ ಕೆಳಸ್ತರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳು ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮವಾಗಿತ್ತು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಜಾರಿ ತಂದಿರುವ #ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ...
Posted by Suresh Kumar S on Saturday, October 10, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ