• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Assembly Session - ವಿಧಾನಸಭೆಯಲ್ಲಿ ಶಾಲೆ ಸಮಸ್ಯೆ ಬಗ್ಗೆ ಧ್ವನಿ; ‘ಹೊಂದಾಣಿಕೆ’ ಬಗ್ಗೆ ಸ್ವಾರಸ್ಯಕರ ಚರ್ಚೆ

Assembly Session - ವಿಧಾನಸಭೆಯಲ್ಲಿ ಶಾಲೆ ಸಮಸ್ಯೆ ಬಗ್ಗೆ ಧ್ವನಿ; ‘ಹೊಂದಾಣಿಕೆ’ ಬಗ್ಗೆ ಸ್ವಾರಸ್ಯಕರ ಚರ್ಚೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿಕ್ಷಣ ವಿಚಾರದಲ್ಲಿ ಮೈಸೂರು ಭಾಗಕ್ಕೆ ಕೊಡುವ ಆದ್ಯತೆ ಉತ್ತರ ಕರ್ನಾಟಕದವರಿಗೆ ಸಿಗುತ್ತಿಲ್ಲ ಎಂದು ಆ ಭಾಗದ ಹಲವು ಶಾಸಕರು ಇಂದು ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಸಚಿವ ಸುರೇಶ್ ಕುಮಾರ್ ಈ ವಿಚಾರದಲ್ಲಿ ಮುತುವರ್ಜಿ ವಹಿಸುವುದಾಗಿ ಭರವಸೆ ನೀಡಿದರು.

  • Share this:

    ಬೆಂಗಳೂರು(ಮಾ. 18): ವಿಧಾನಸಭೆ ಅಧಿವೇಶನದಲ್ಲಿ ಇಂದು ಶಾಲಾ ಸಮಸ್ಯೆ ವಿಚಾರ ಸಾಕಷ್ಟು ಹೊತ್ತು ಚರ್ಚೆಯಾಯಿತು. ಶಿಕ್ಷಕರ ಕೊರತೆ, ಪ್ರಾದೇಶಿಕವಾಗಿ ನಿರ್ಲಕ್ಷ್ಯತೆ, ಮೊಬೈಲ್ ನೆಟ್​ವರ್ಕ್ ಸಮಸ್ಯೆ ಇತ್ಯಾದಿ ಬಗ್ಗೆ ಸದಸ್ಯರು ಧ್ವನಿ ಎತ್ತಿದರು. ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಭರವಸೆ ನೀಡಿದರು. ಇದರ ಜೊತೆಗೆ ಅರಣ್ಯ ಇಲಾಖೆ ಕಾರ್ಯವೈಖರಿ, ಹಾಗೂ ಕಲ್ಲುಗಣಿಗಾರಿಕೆ ಸ್ಫೋಟ ಘಟನೆಗಳ ಬಗ್ಗೆ ಚರ್ಚೆಗಳೂ ಆದವು.


    ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ಅವರು ತಮ್ಮ ಕ್ಷೇತ್ರದ ಶಾಲೆಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರು. ತಮ್ಮ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಿಗೆ ಆದ್ಯತೆ ಕೊಟ್ಟಿದ್ದೇವೆ. ಇದರ ಪರಿಣಾಮವಾಗಿ ಕಳೆದ ಬಾರಿ ಉತ್ತಮ ಫಲಿತಾಂಶ ಬಂದಿದೆ. ಇಲ್ಲಿ ಓದುತ್ತಿರುವ ಎಲ್ಲಾ ಮಕ್ಕಳೂ ಬಡ ಕುಟುಂಬದವರೇ. ಆದರೆ, ಇಲ್ಲಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಸರ್ಕಾರಿ ಹೈಸ್ಕೂಲುಗಳಲ್ಲಿ ಇಂಗ್ಲೀಷ್ ಶಿಕ್ಷಕರ ಕೊರತೆ ಇದೆ. ಶಿಕ್ಷಕರಿಲ್ಲದೆ ಫಲಿತಾಂಶ ಹೇಗೆ ಕೊಡಲು ಆಗುತ್ತದೆ. ಶಿಕ್ಷಕರ ನೇಮಕ ಮಾಡಲು ಅಗದಿದ್ದರೆ ಸರ್ಕಾರಿ ಶಾಲೆಗಳನ್ನ ಖಾಸಗಿಯವರಿಗೆ ಅಡ ಇಟ್ಟುಬಿಡಿ ಎಂದು ಕಲಾಪದ ವೇಳೆ ಮಾಜಿ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಗುಡುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಅಧಿವೇಶನ ಮುಗಿಯುತ್ತಿದ್ದಂತೇ ರೇವಣ್ಣ ಜೊತೆ ಹೊಳೆನರಸೀಪುರ ಕ್ಷೇತ್ರಕ್ಕೆ ಪ್ರವಾಸ ಹೋಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.


    ಇದೇ ವೇಳೆ, ಶಿಕ್ಷಣ ವಿಚಾರದಲ್ಲಿ ಮೈಸೂರು ಭಾಗಕ್ಕೆ ಆದ್ಯತೆ ಕೊಡುವ ಸರ್ಕಾರ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕವನ್ನು ನಿರ್ಲಕ್ಷಿಸುತ್ತಿದೆ. ಬಳ್ಳಾರಿ, ರಾಯಚೂರು ಬಹಳ ಹಿಂದುಳಿದ ಪ್ರದೇಶವಾಗಿದ್ದು ಆ ಕಡೆಯೂ ಮುತುವರ್ಜಿ ವಹಿಸಿ, ನಾವೂ ಕೂಡ ಇದೇ ರಾಜ್ಯದಲ್ಲಿ ಇದ್ದೇವೆ. ಸಚಿವರು ಭರವಸೆ ಕೊಡುತ್ತಾರೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಶಾಸಕರಾದ ನಾಡಗೌಡ, ಆನಂದ್ ನ್ಯಾಮಗೌಡ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಚಿವ ಸುರೇಶ್ ಕುಮಾರ್ ಅವರು ತಾವೇ ಖುದ್ದಾಗಿ ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.


    ಇದನ್ನೂ ಓದಿ: ಕನ್ನಡ ಶಾಲು ಕಂಡರೆ ಹೊಡೆಯುತ್ತೇವೆ ಎನ್ನುವ ಶಿವಸೇನೆ, ಎಂಇಎಸ್ ನಮ್ಮ ಮೈಮುಟ್ಟಲಿ: ಕರವೇ ಪ್ರವೀಣ್ ಶೆಟ್ಟಿ ಸವಾಲು


    ಇನ್ನು, ಶಿವಮೊಗ್ಗದ ಸಾಗರ ಕ್ಷೇತ್ರದ ಹರತಾಳು ಹಾಲಪ್ಪ ಅವರು ಅನ್​ಲೈನ್ ಕ್ಲಾಸ್​ಗೆ ಅಗತ್ಯ ಇರುವ ಮೊಬೈಲ್ ನೆಟ್​ವರ್ಕ್​ನ ಸಮಸ್ಯೆಯನ್ನು ಪ್ರಸ್ತಾಪ ಮಾಡಿ, ಟವರ್ ಸಮಸ್ಯೆ ಪರಿಹರಿಸಲು ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಮಲೆನಾಡಿನ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಜಗದೀಶ್ ಶೆಟ್ಟರ್, ಇದು ಮಲೆನಾಡು ಭಾಗ ಮಾತ್ರವಲ್ಲ ರಾಜ್ಯದ ಹಲವು ಭಾಗಗಳಲ್ಲಿ ಸಮಸ್ಯೆ ಇದೆ. ಈ ಬಗ್ಗೆ ಕೇಂದ್ರದ ಸಂಬಂಧಿತ ಸಚಿವರಿಗೆ ಸಿಎಂ ಪತ್ರ ಬರೆದಿದ್ದಾರೆ. ಶೀಘ್ರವೇ ಮೊಬೈಲ್ ಟವರ್ ಕೊರತೆ ಸಮಸ್ಯೆಗೆ ಕ್ರಮ ವಹಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.


    ಜಿಲೆಟಿನ್ ಸ್ಫೋಟ ಪ್ರಕರಣ: ಸಿದ್ದರಾಮಯ್ಯ ಗುಡುಗು:


    ಶಿವಮೊಗ್ಗದ ಹುಣಸೋಡು ಹಾಗೂ ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿಯಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಜಿಲೆಟಿನ್ ಸ್ಫೋಟ ಪ್ರಕರಣಗಳ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ಎರಡು ಪ್ರಕರಣಗಳಲ್ಲಿ 12 ಕಾರ್ಮಿಕರು ಸಾವನ್ನಪ್ಪಿದ್ದು, ಇದಕ್ಕೆ ಕೊನೆ ಇಲ್ಲವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹುಣಸೋಡು ಘಟನೆಯಲ್ಲಿ ಬಿಜೆಪಿಯ ಗುಡಿಬಂಡೆ ನಾಗರಾಜ್ ಇರುವುದು ಕಂಡುಬಂದಿದ್ದು, ಆತನನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದೆ. ಅದರಂತೆ ಆತನನ್ನು ಬಂಧಿಸಲಾಗಿದೆ. ಇಬ್ಬರು ಇನ್ಸ್​ಪೆಕ್ಟರ್ ಅಮಾನತುಗೊಂಡಿದ್ದಾರೆ. ಉಳಿದ ಆರೋಪಿಗಳು ಈಗಲೂ ರಾಜಾರೋಷವಾಗಿ ಓಡಾಡುತ್ತಿದ್ಧಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.


    ‘ಹೊಂದಾಣಿಕೆ’ ಚರ್ಚೆ:


    ಜಿಲೆಟಿನ್ ಸ್ಫೋಟ ಘಟನೆ ಬಗ್ಗೆ ಸಿದ್ದರಾಮಯ್ಯ ಸಿಡಿಗುಟ್ಟುತ್ತಿದ್ದ ವೇಳೆಯೇ ಸದನದಲ್ಲಿ ಹೊಂದಾಣಿಕೆ ಪದ ಅಚಾನಕ್ಕಾಗಿ ಬಂದು ಕೆಲ ಹೊತ್ತು ಸದನವನ್ನು ನಗೆಗಡಲಿನಲ್ಲಿ ತೇಲಿಸಿತು. ಸಿದ್ದರಾಮಯ್ಯ ಅವರು ಸ್ಫೋಟ ಘಟನೆ ಬಗ್ಗೆ ಸಿದ್ದರಾಮಯ್ಯ ಚರ್ಚೆ ಮಾಡುವಾಗ ಜಗದೀಶ್ ಶೆಟ್ಟರ್ ಅವರು ಆಕ್ಷೇಪಿಸಿ, ಇದರ ಸುದೀರ್ಘ ಚರ್ಚೆಗೆ ಇನ್ನೊಮ್ಮೆ ಅವಕಾಶ ಕೊಡಿ ಎಂದು ಸ್ಪೀಕರ್​ಗೆ ಮನವಿ ಮಾಡಿದರು. ಆಗ ಸಿದ್ದರಾಮಯ್ಯ ತಾನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಭಾಧ್ಯಕ್ಷಕರು ಹೇಳಿದಾಗ ಚರ್ಚೆ ನಿಲ್ಲಿಸುತ್ತೇನೆ ಎಂದರು. ಆಗ ಸ್ಪೀಕರ್ ಅವರು ನಮ್ಮ ಮತ್ತು ನಿಮ್ಮ ನಡುವೆ ಹೊಂದಾಣಿಕೆ ಇದೆಯಲ್ಲ ಎಂದರು.


    ಇದನ್ನೂ ಓದಿ: Karnataka Coronavirus: ಬೆಂಗಳೂರಿನ ಮಲ್ಲೇಶ್ವರದ ಹಾಸ್ಟೆಲ್​ನಲ್ಲಿ ಕೊರೋನಾ ಅಟ್ಟಹಾಸ; ಮಂಗಳೂರು ನರ್ಸಿಂಗ್ ಕಾಲೇಜಿನ 51 ವಿದ್ಯಾರ್ಥಿಗಳಿಗೆ ಕೊರೋನಾ!


    ಹೊಂದಾಣಿಕೆ ಅಂದರೆ ಬೇರೆಯವರು ತಪ್ಪಾಗಿ ತಿಳಿದುಕೊಳ್ತಾರೆ ಎಂದು ಸಿದ್ದರಾಮಯ್ಯ ತಮಾಷೆ ಮಾಡಿದರು. ಆಗ ನಕ್ಕ ಸ್ಪೀಕರ್ ಕಾಗೇರಿ, ಪತ್ರಕರ್ತರು ಹೊಂದಾಣಿಕೆ ಬಗ್ಗೆ ತಪ್ಪು ತಿಳಿದುಕೊಳ್ಳುವುದು ಬೇಡ ಎಂದರು.


    ಅರಣ್ಯ ಇಲಾಖೆ ಕಾರ್ಯವೈಖರಿಗೆ ಬೇಸರ: 


    ಇನ್ನು, ಇವತ್ತಿನ ಕಲಾಪದ ಆರಂಭದಲ್ಲಿ ಕೆಲ ಸದಸ್ಯರು ಅರಣ್ಯ ಇಲಾಖೆಯ ಬೇಜವಾಬ್ಧಾರಿತನದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೊಡಗಿನ ಪೊನ್ನಂಪೇಟೆಯಲ್ಲಿ ಹುಲಿ ಸಿಗುತ್ತದೋ ಇಲ್ಲವೋ ಎಂದು ಸ್ಪೀಕರ್ ಕಾಗೇರಿ ಅವರೇ ಶಾಸಕ ಕೆಜಿ ಬೋಪಯ್ಯ ಅವರ ಕಾಲೆಳೆದರು. ಇದಕ್ಕೆ ಉತ್ತರಿಸಿದ ಬೋಪಯ್ಯ, ಅರಣ್ಯ ಇಲಾಖೆಯವರು ಹುಲಿ ಹುಡುಕುತ್ತಿದ್ಧಾರೆ. ಆದರೆ ಪರಿಸರವಾದಿಗಳಿಂದಲೇ ನಮ್ಮ ಮೇಲೆ ದೂರು ದಾಖಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


    ತೀರ್ಥಹಳ್ಳಿಯಲ್ಲಿ ರೈತರ ಬೆಳೆಗಳನ್ನ ಪ್ರಾಣಿಗಳು ಹಾನಿ ಮಾಡುತ್ತಿವೆ. ಇವುಗಳನ್ನ ಕೊಲ್ಲು ರೈತರಿಗೆ ಅನುಮತಿ ನೀಡಿ ಎಂದು ಅರಗ ಜ್ಞಾನೇಂದ್ರ ಒತ್ತಾಯಿಸಿದರು. ಹಾಗೆಯೇ ತೀರ್ಥಹಳ್ಳಿಯಲ್ಲಿ ಮಂಕಿ ಪಾರ್ಕ್ ಮಾಡಿಕೊಡಿ. ಮಂಗಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದರು. ಇದಕ್ಕೆ ಸಚಿವ ಅರವಿಂದ್ ಲಿಂಬಾವಳಿ ಪರವಾಗಿ ಉತ್ತರಿಸಿದ ಜಗದೀಶ್ ಶೆಟ್ಟರ್, ಮಂಕಿ ಪಾರ್ಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ರೈತರ ಬೆಳೆ ನಾಶ ಪರಿಹಾರದ ಹಣ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.


    ವರದಿ ಕೃಪೆ: ಕೃಷ್ಣ ಜಿ.ವಿ.

    Published by:Vijayasarthy SN
    First published: