ನವದೆಹಲಿ, ಮೇ 23: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ (Vidhana Parishat) ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆಗೆ ನಾಮಪತ್ರ (Nomination) ಸಲ್ಲಿಸಲು ನಾಳೆಯೇ ಕಡೆ ದಿನ. ಆದರೆ ಈವರೆಗೆ ಕಾಂಗ್ರೆಸ್ (Congress), ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಆಕಾಂಕ್ಷಿಗಳ ಸಂಖ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷದ ವರಿಷ್ಠರಿಗೂ ಅಭ್ಯರ್ಥಿಗಳನ್ನು (Candidate) ಆಯ್ಕೆ ಮಾಡುವುದು ಕಗ್ಗಂಟಾಗಿ ಪರಿಣಮಿಸಿದೆ. ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಹಿರಿಯ ನಾಯಕರು ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು
ಪಕ್ಷಗಳು ಹೊಂದಿರುವ ಶಾಸಕರ ಸಂಖ್ಯೆಗೆ ಅನುಗುಣವಾಗಿ ಬಿಜೆಪಿ ನಾಲ್ವರು, ಕಾಂಗ್ರೆಸ್ ಇಬ್ಬರು ಮತ್ತು ಜೆಡಿಎಸ್ ಒಬ್ಬರನ್ನು ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಕಳುಹಿಸಬಹುದು. ಒಟ್ಟು ಏಳು ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹಾಗಾಗಿಯೇ ಅಭ್ಯರ್ಥಿಗಳ ಆಯ್ಕೆ ವಿಳಂಬವಾಗುತ್ತಿದೆ.
ಇದನ್ನೂ ಓದಿ: Cabinet Expansion: ಬಿ.ವೈ. ವಿಜಯೇಂದ್ರ ಸಚಿವ ಸಂಪುಟ ಸೇರ್ಪಡೆ ಅನುಮಾನ! ದೆಹಲಿಯಲ್ಲಿ ಪ್ರಭಾವ ಬೀರುತ್ತಿದ್ದಾರಾ 'ಆ' ನಾಯಕ?
ಬಿಜೆಪಿ ತಲೆನೋವು ಏನು?
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರಗೆ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಸ್ಥಾನ ನೀಡಬೇಕೆ? ಬೇಡವೇ? ವಿಜಯೇಂದ್ರಗೆ ಸ್ಥಾನ ನೀಡಿದರೆ ಹೋಗುವ ಸಂದೇಶ ಏನು? ವಿಜಯೇಂದ್ರಗೆ ಸ್ಥಾನ ನೀಡದಿದ್ದರೆ ಪರಿಣಾಮ ಏನಾಗಬಹುದು? ವಿಜಯೇಂದ್ರಗೆ ಸ್ಥಾನ ನೀಡದಿದ್ದರೆ ಯಡಿಯೂರಪ್ಪ ಮುನಿಸಿಕೊಳ್ಳದೆ ಇರುವರೇ? ಎಂದು ಬಿಜೆಪಿ ಹೈಕಮಾಂಡ್ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ.
ಕಾಂಗ್ರೆಸ್ ಲೆಕ್ಕಾಚಾರ ಏನು?
ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ರಾಜ್ಯದ ನಾಯಕರದ್ದೇ ತಲೆನೋವಾಗಿದೆ. ರಾಜ್ಯದ ನಾಯಕರೇ ಪರಿಷತ್ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಹೈಕಮಾಂಡ್ ಹೇಳಿದೆ. ಆದರೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಒಮ್ಮತ ಮೂಡಿಲ್ಲ. ಇಬ್ಬರು ಅಭ್ಯರ್ಥಿಗಳ ಆಯ್ಕೆಗೆ ಇಬ್ಬರು ನಾಯಕರಲ್ಲಿ ಭಾರೀ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ತಿಳಿದು ಬಂದಿದೆ.
ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಪರ ಸಿದ್ದರಾಮಯ್ಯ
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಸ್ಥಾನ ಕೊಡಬೇಕೆಂದು ಸಿದ್ದರಾಮಯ್ಯ ಒತ್ತಾಯ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಪೈಕಿ ಬಲಿಜ ಸಮುದಾಯದ ಎಂ.ಆರ್. ಸೀತಾರಾಂ ಮತ್ತು ಗಂಗಾಮತ ಸಮುದಾಯದ ತಿಪ್ಪಣ್ಣ ಹೆಸರನ್ನು ಸೂಚಿಸಿದ್ದಾರೆ.
ಕಲಬುರಗಿಯವರಾದ ತಿಪ್ಪಣ್ಣ ಅವರಿಗೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲ ಕೂಡ ಇದೆ ಎಂದು ಹೇಳಲಾಗುತ್ತಿದೆ. ಅಲ್ಪಸಂಖ್ಯಾತರ ಪೈಕಿ ಈ ಬಾರಿ ಕ್ರಿಶ್ಚಿಯನ್ ಸಮುದಾಯಕ್ಕೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಒತ್ತಾಯ ಹೇರುತ್ತಿದ್ದಾರೆ. ಅದರಲ್ಲೂ ತಮ್ಮ ಆಪ್ತ ಐವಾನ್ ಡಿಸೋಜಾ ಪರ ಲಾಬಿ ಮಾಡುತ್ತಿದ್ದಾರೆ. ಇದಲ್ಲದೆ ಕ್ರಿಶ್ಚಿಯನ್ ಸಮುದಾಯದ ಪರ ದೆಹಲಿ ಮಟ್ಟದಲ್ಲಿ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತಾ ಆಳ್ವಾ ಲಾಬಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಾನು ಕಾಂಗ್ರೆಸ್ಗೆ ಹೋಗ್ತೀನೋ, ಸಿದ್ದೂನೇ ಈ ಕಡೆ ಬರ್ತಾರಾ ಕಾದು ನೋಡಿ ಎಂದ JDS ರಾಜ್ಯಾಧ್ಯಕ್ಷ
ಒಕ್ಕಲಿಗ, ಲಿಂಗಾಯತರ ಪರ ಡಿಕೆಶಿ ಒಲವು
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಈ ಬಾರಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಅವಕಾಶ ಕೊಡಬೇಕೆಂದು ಡಿಕೆ ಶಿವಕುಮಾರ್ ಒತ್ತಡ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ವಿರೋಧಿ ಎಸ್.ಆರ್. ಪಾಟೀಲ್ ಮತ್ತು ಮಾಜಿ ಸಂಸದ ಮುದ್ದಹನುಮೇಗೌಡ ಹೆಸರನ್ನು ಸೂಚಿಸಿದ್ದಾರೆ.
ಕಾದು ನೋಡುತ್ತಿರುವ ಜೆಡಿಎಸ್
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡೆಯನ್ನು ಕಾದು ನೋಡುತ್ತಿರಯವ ಜೆಡಿಎಸ್ ಈ ಎರಡೂ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಮಾಡಿದ ಬಳಿಕ ತನ್ನ ಅಭ್ಯರ್ಥಿ ಹೆಸರನ್ನು ಪ್ರಕಟ ಮಾಡಲಿದೆ. ಜೆಡಿಎಸ್ ನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರದೇ ಅಂತಿಮ ತೀರ್ಮಾನ ಆಗಿರುವುದರಿಂದ ಅವರು ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ