HOME » NEWS » State » VIDHANA PARISHAT SESSION BK HARIPRASAD AYANUR MANJUNATH INVOLVE IN VERBAL DUAL SHM SNVS

ಪರಿಷತ್​ನಲ್ಲಿ ಸ್ಕಾವೆಂಜಿಂಗ್ ಕುರಿತು ಬಿಸಿಬಿಸಿ ಚರ್ಚೆ; ಹರಿಪ್ರಸಾದ್, ಆಯನೂರು ಮಂಜುನಾಥ್ ಜಟಾಪಟಿ

ವಿಧಾನಪರಿಷತ್ ಕಲಾಪದಲ್ಲಿ ಮಲಸ್ವಚ್ಛತಾ ಕಾರ್ಮಿಕರ ಬವಣೆ ಬಗ್ಗೆ ನಿನ್ನೆ ಚರ್ಚೆ ನಡೆಯಿತು. ಈ ಬಿಸಿಬಿಸಿ ಚರ್ಚೆ ವೇಳೆ ಬಿ.ಕೆ. ಹರಿಪ್ರಸಾದ್ ಮತ್ತು ಆಯನೂರು ಮಂಜುನಾಥ್ ಮಧ್ಯೆ ವೈಯಕ್ತಿಕ ವಿಚಾರವಾಗಿ ವಾಗ್ಯುದ್ಧವೇ ಆಯಿತು.

news18-kannada
Updated:March 18, 2021, 1:59 PM IST
ಪರಿಷತ್​ನಲ್ಲಿ ಸ್ಕಾವೆಂಜಿಂಗ್ ಕುರಿತು ಬಿಸಿಬಿಸಿ ಚರ್ಚೆ; ಹರಿಪ್ರಸಾದ್, ಆಯನೂರು ಮಂಜುನಾಥ್ ಜಟಾಪಟಿ
ಬಿ.ಕೆ. ಹರಿಪ್ರಸಾದ್.
  • Share this:
ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಕಾನೂನು ಬಾಹಿರ ಸ್ಕ್ಯಾವೆಂಜಿಂಗ್​ನಿಂದ (ಮಲಹೊರುವ) ಕಾರ್ಮಿಕರ ಮೃತಪಡುತ್ತಿರುವ ಘಟನೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ‌ಪ್ರಶ್ನೆ‌ ಚರ್ಚೆಗೆ ತಿರುಗಿ ಆಡಳಿತ ಪಕ್ಷದ ಆಯನೂರು ಮಂಜುನಾಥ್ ಹಾಗೂ ಪ್ರತಿಪಕ್ಷದ ಹರಿಪ್ರಸಾದ್ ನಡುವೆ ಜಟಾಪಟಿಯೂ ನಡೆದು ವಾಕ್ಸಮರಕ್ಕೆ ವೇದಿಕೆಯಾಗಿ ಪರಿವರ್ತನೆಯಾದ ಘಟನೆ ನಡೆಯಿತು.

ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಮ್ಯಾನುಯಲ್ ಸ್ಕಾವೆಂಜಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು, ಕಳೆದ ಐದು ವರ್ಷದಿಂದ ಸ್ಕ್ಯಾವೆಂಜಿಂಗ್ ನಿಂದ 45 ಜನ ಮೃತಪಟ್ಟಿದ್ದಾರೆ. ಕಾನೂನು ಬಾಹಿರವಾಗಿ ಮ್ಯಾನ್ ಹೋಲ್ ಸ್ವಚ್ಛಗೊಳಿಸುವ  ಕೆಲಸ ಮಾಡಲಾಗುತ್ತಿದೆ, ಇದನ್ನು ಕಠಿಣ ಕಾನೂನು ಮೂಲಕ‌ ಸರಿಪಡಿಸಬೇಕಿದೆ. ಕಾನೂನು ಪಾಲಿಸಬೇಕು ಎನ್ನುವ ಆದೇಶವಿದ್ದರೂ ಆಗುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ವೇಳೆ ಉಪ ಪ್ರಶ್ನೆ ಕೇಳಲು ಹರಿಪ್ರಸಾದ್ ಅವರಿಗೆ ಅವಕಾಶ ನೀಡಿದ್ದು ಪ್ರಶ್ನೆ ಬದಲು ಸುದೀರ್ಘ ಭಾಷಣಕ್ಕೆ ಮುಂದಾದರು. ಇದಕ್ಕೆ ಅವಕಾಶ ನಿರಾಕರಿಸಿದ ಉಪ ಸಭಾಪತಿ ಪ್ರಾಣೇಶ್, ಚರ್ಚಿಸಬೇಡಿ ಪ್ರಶ್ನೆ ಕೇಳಿ ಎಂದರು. ಇದಕ್ಕೆ ಕೆರಳಿದ ಹರಿಪ್ರಸಾದ್ ನೀವು ಹೀಗೆ ಹೇಳಬೇಡಿ ಎಂದು ಏರಿದ ದನಿಯಲ್ಲಿ ಹೇಳಿದರು. ಇದಕ್ಕೆ ಕಿಡಿಕಾರಿದ ಉಪ ಸಭಾಪತಿ ನನಗೆ ಹಾಗೆ ಹೇಳುವಂತಿಲ್ಲ ಎಂದರು.

ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆ ಮಾಡಬಾರದು, ಪ್ರಶ್ನೆ ಕೇಳಬೇಕು. ಬಿಎಸಿಯಲ್ಲಿ ಏನು ನಿರ್ಧಾರವಾಗಿದೆ ಅದನ್ನು ಬಿಟ್ಟು ಪೀಠವನ್ನೇ ಪ್ರಶ್ನಿಸಿದರೆ ಹೇಗೆ? ಬೇರೆ ರೀತಿ ತನ್ನಿ ಚರ್ಚೆ ಮಾಡಿ ಎಂದರು. ಬೇಕಾದರೆ ನಿಯಮ 330 ಕ್ಕೆ ಬದಲಾವಣೆ ಮಾಡಿ ಅರ್ಧ ಗಂಟೆಗೆ ಅವಕಾಶ ನೀಡುವುದಾಗಿ ತಿಳಿಸಿ ಗದ್ದಲಕ್ಕೆ ತೆರೆ ಎಳೆದರು.

ನಂತರ ಉಪ ಪ್ರಶ್ನೆಗೆ ಉತ್ತರ ನೀಡಿದ ಶ್ರೀರಾಮುಲು, ಮೃತರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡಲಾಗಿದೆ. ಹೈಕೋರ್ಟ್​ನಲ್ಲಿ ಕೇಸ್ ಇದೆ. ಆರ್​ಡಿಪಿಆರ್, ಜಲಮಂಡಳಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿ ಚರ್ಚೆ ನಡೆಯುತ್ತಿದೆ. ಶಾಶ್ವತ ಪರಿಹಾರಕ್ಕೆ ಪ್ರಯತ್ನ ಕಲ್ಪಿಸಲಾಗುತ್ತದೆ. ಕಲಬುರಗಿ ಘಟನೆ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ನಂತರ ಸಚಿವರ ನೆರವಿಗೆ ಧಾವಿಸಿದ ಡಿಸಿಎಂ ಕಾರಜೋಳ, ಸಾಮಾಜಿಕ ಕಳಕಳಿ, ಕಾಳಜಿ ಇಲ್ಲದ ಕಾರಣಕ್ಕೆ ಈ ದುರಂತವಾಗುತ್ತಿವೆ. ಮನುಷ್ಯನ ಹೊಲಸನ್ನು ಮನುಷ್ಯನ ಕೈಯಿಂದ‌ ತೆಗೆಸುವುದು, ತಲೆಯ ಮೇಲೆ ಹೊರುವುದಕ್ಕೆ ನಿಷೇಧ ಇದೆ. ಸಫಾಯಿ ಕರ್ಮಚಾರಿ ಆಯೋಗ ಆರಂಭಿಸಿ ಅವರಿಗೆಲ್ಲಾ ನೆರವು ಕಲ್ಪಿಸಲಾಗುತ್ತಿದೆ. ಪೌರಕರ್ಮಿಕರು ಶೇ. 90 ರಷ್ಟು ನನ್ನ ಸಮುದಾಯವರೇ ಇದ್ದಾರೆ. ಎಸ್​ಸಿಪಿ ಟಿಎಎಸ್​ಪಿ ಅನುದಾನ ಬಳಕೆಗೆ ಅವಕಾಶ ಇದೆ. ಸಫಾಯಿ ಕರ್ಮಚಾರಿಗಳ ಅನುಕೂಲಕ್ಕೆ ಇನ್ನಷ್ಟು ಅನುದಾನ ಕೊಡಲಾಗುತ್ತದೆ. ಇದು ಸಾವಿರ ವರ್ಷದ ಪಿಡುಗು ಇನ್ನೂ ಹೋಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗುತ್ತಿದೆ. ಇನ್ಮುಂದೆ ಕಾರ್ಮಿಕರು ಸ್ಕ್ಯಾವೆಂಜಿಂಗ್ ವೇಳೆ ಮೃತರಾಗುವ ಘಟನೆ ಜರುಗಿದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: Assembly Session - ವಿಧಾನಸಭೆಯಲ್ಲಿ ಶಾಲೆ ಸಮಸ್ಯೆ ಬಗ್ಗೆ ಧ್ವನಿ; ‘ಹೊಂದಾಣಿಕೆ’ ಬಗ್ಗೆ ಸ್ವಾರಸ್ಯಕರ ಚರ್ಚೆಆಯನೂರು - ಹರಿಪ್ರಸಾದ್ ಜಟಾಪಟಿ:

ಡಿಸಿಎಂ ಉತ್ತರದ ನಂತರ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸಂಸದರಾಗಿದ್ದವರು, ಶಾಸಕರಾಗಿದ್ದವರು ಬಳಸುವ ಪದಗಳ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಕಿಡಿಕಾರಿದ ಕಾಂಗ್ರೆಸ್ ಸದಸ್ಯರು ಪ್ರಶ್ನೋತ್ತದಲ್ಲಿ ಚರ್ಚೆ ಬೇಡ ಎಂದು ನಮಗೆ ಹೇಳಿ ಆಯನೂರುಗೆ ಅವಕಾಶ ನೀಡಿದ್ದೀರಿ. ಇದು ತಾರತಮ್ಯ ಎಂದು ಅಸಮಧಾನ ಹೊರಹಾಕಿದರು.

ನಂತರ ಚರ್ಚೆಗೆ ಅವಕಾಶವಿಲ್ಲ ಎನ್ನುವ ರೂಲಿಂಗ್ ನೀಡಿ ಸಲಹೆ ನೀಡಲು ಅವಕಾಶ ಕಲ್ಪಿಸಿದರು. ನಂತರ ಮಾತು ಮುಂದುವರೆಸಿದ ಆಯನೂರು ಮಂಜುನಾಥ್, ಹರಿಪ್ರಸಾದ್ ಅವರ ಹೆಸರು ವಾಪಸ್ ಪಡೆಯುತ್ತಿದ್ದೇನೆ. ಆದರೆ ಯಾರೂ ಕೂಡ ಪೀಠವನ್ನು ಗದರಿಸುವಂತಿಲ್ಲ, ಪೀಠ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳುವಂತಿಲ್ಲ. ಹಳೆಯ ಹವ್ಯಾಸದ ವಾಸನೆಯ ಧಾಟಿಯಲ್ಲಿ ಹೇಳಿದರೆ ಇಲ್ಲಿ ಹೆದರುವವರು ಯಾರೂ ಇಲ್ಲ. ಆ ವಾಸನೆ ಇಲ್ಲಿ ನಡೆಯಲ್ಲ ಎಂದು ಹರಿಪ್ರಸಾದ್ ಅವರಿಗೆ ಟಾಂಟ್ ನೀಡಿದರು.

ಈ ವೇಳೆ ಆಯನೂರು ಮಂಜುನಾಥ್ ಮತ್ತು ಬಿಕೆ ಹರಿಪ್ರಸಾದ್ ನಡುವೆ ನೇರ ವಾಗ್ವಾದ ನಡೆಯಿತು. ನಾಲ್ಕು ನಾಲ್ಕು ಪಕ್ಷ ಬದಲಾವಣೆ ಮಾಡಿದವರಿಂದ ತಾವು ನೈತಿಕತೆ ಪಾಠ ಕಲಿಯಬೇಕಿಲ್ಲ ಎಂದು ಹರಿಪ್ರಸಾದ್ ತಿರುಗೇಟು ನೀಡಿದರು. ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ ಆಯನೂರು ಮಂಜುನಾಥ್, ಯಾರೋ ರೌಡಿಗಳಿಗೆ ಹೆದರಲ್ಲ, ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ. ಚಮಚಾಗಿರಿ ಮಾಡಿ ಬಂದಿಲ್ಲ. ಒಂದು‌ ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲ ಎಂದು ಹರಿಹಾಯ್ದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ದಾದ, ಮಾತಿನ ಚಕಮಕಿ ನಡೆಯಿತು. ನಂತರ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ ಅಸಾಂವಿಧಾನಿಕ ಪದಗಳನ್ನ ಕಡತದಿಂದ ತೆಗೆಯುವಂತೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಪಟ್ಟುಹಿಡಿದರು. ಇದಕ್ಕೆ ಸಮ್ಮತಿಸಿದ ಉಪ ಸಭಾಪತಿ ಪ್ರಾಣೇಶ್, ಅಸಂಬದ್ದವಾದ ಪದ ಇದ್ದರೆ ಕಡತದಿಂದ ತೆಗೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದರೆ ಇದಕ್ಕೆ ಅಸಮಧಾನ ವ್ಯಕ್ತಪಡಿದ ಆಯನೂರು, ಅಸಾಂವಿಧಾನಿಕ ಪದ ಇದ್ದರೆ ಮಾತ್ರ ವಾಪಸ್ ಪಡೆಯಬೇಕು, ನನ್ನ ಪದಗಳಿಗೆ ನಾನು ಜವಾಬ್ದಾರ ಇದ್ದೇನೆ. ಅದು ನನ್ನ ಹಕ್ಕು ಎಂದರು.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by: Vijayasarthy SN
First published: March 18, 2021, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories