HOME » NEWS » State » VIDHAN PARISHAD JDS MLC BASAVARAJ HORATTI ELECTED AS KARNATAKA LEGISLATIVE COUNCIL CHAIRMAN SCT

Basavaraj Horatti | ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ

Basavaraj Horatti | ಕಾಂಗ್ರೆಸ್ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಹೀಗಾಗಿ, ಮತದಾನ ನಡೆಯದೆ ಚುನಾವಣೆ ಪೂರ್ಣಗೊಂಡಿದ್ದು, ಬಸವರಾಜ ಹೊರಟ್ಟಿಯವರನ್ನು ಸಭಾಪತಿಯೆಂದು ಘೋಷಿಸಲಾಯಿತು.

news18-kannada
Updated:February 9, 2021, 12:21 PM IST
Basavaraj Horatti | ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ
ಬಸವರಾಜ ಹೊರಟ್ಟಿ
  • Share this:
ಬೆಂಗಳೂರು (ಫೆ. 9): ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಪ್ರತಾಪ್​ಚಂದ್ರ ಶೆಟ್ಟಿ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಸಭಾಪತಿ ಸ್ಥಾನಕ್ಕೆ ಚುನಾವಣೆ ನಿಯೋಜನೆಗೊಂಡಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್​ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೂತನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ನಜೀರ್‌ ಅಹಮದ್‌ ನಾಮಪತ್ರ ಸಲ್ಲಿಸಿದ್ದರೂ ಇಂದು ಕಾಂಗ್ರೆಸ್ ಸದಸ್ಯರು ಪರಿಷತ್ ಸಭಾಪತಿ ಚುನಾವಣೆಯಲ್ಲಿ ಪಾಲ್ಗೊಳ್ಳಲಿಲ್ಲ. ಹೀಗಾಗಿ, ಹೊರಟ್ಟಿಯವರನ್ನು ಸಭಾಪತಿಯೆಂದು ಘೋಷಿಸಲಾಯಿತು.

ಇಂದು ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸತೊಡಗಿದರು. ಗೋಹತ್ಯೆ ನಿಷೇಧ ಕಾಯ್ದೆ ಖಂಡಿಸಿ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಷತ್​ನ ಆಡಳಿತ ಪಕ್ಷದ ಸದಸ್ಯರು ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ಗದ್ದಲದ ನಡುವೆಯೇ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆಯಾದರು.

ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಬಸವರಾಜ ಹೊರಟ್ಟಿಯವರನ್ನು ಸಭಾಪತಿಯೆಂದು ಘೋಷಣೆ ಮಾಡಿದರು. ಕಾಂಗ್ರೆಸ್ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಹೀಗಾಗಿ, ಮತದಾನ ನಡೆಯದೆ ಚುನಾವಣೆ ಪೂರ್ಣಗೊಂಡಿದ್ದು, ಬಸವರಾಜ ಹೊರಟ್ಟಿಯವರನ್ನು ಸಭಾಪತಿಯೆಂದು ಘೋಷಿಸಲಾಯಿತು. ನೂತನ ಸಭಾಪತಿ ಬಸವರಾಜ ಹೊರಟ್ಟಿ ಸಭಾಪತಿ ಪೀಠವನ್ನು ಅಲಂಕರಿಸಿದರು.

ಇದನ್ನೂ ಓದಿ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇಂದು ಚುನಾವಣೆ; ಬಸವರಾಜ ಹೊರಟ್ಟಿ, ನಜೀರ್ ಅಹಮದ್ ನಡುವೆ ಸ್ಪರ್ಧೆ

ವಿಧಾನ ಪರಿಷತ್​ ಸದನದಲ್ಲಿ ಗಲಾಟೆ ನಡೆದ ಬಳಿಕ ಕೆಲವು ದಿನಗಳ ಹಿಂದೆ ಕೆ. ಪ್ರತಾಪ್​ಚಂದ್ರ ಶೆಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿರುವ ಸಭಾಪತಿ ಹುದ್ದೆಗೆ ಇಂದು ಚುನಾವಣೆ ನಡೆಯಬೇಕಿತ್ತು. ಆದರೆ, ಚುನಾವಣೆ ನಡೆಯದೆ ಸಭಾಪತಿಯನ್ನು ಘೋಷಿಸಲಾಗಿದೆ. ಉಪಸಭಾಪತಿ ಆಯ್ಕೆ ವೇಳೆಯಲ್ಲೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಯಾಗಿದೆ. ಇದೀಗ ಸಭಾಪತಿ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ.

74 ವರ್ಷದ ಹೊರಟ್ಟಿ 1980ರಿಂದ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಗೊಳ್ಳುತ್ತಾ ಬಂದಿದ್ದಾರೆ. 2018ರಲ್ಲಿ ಆರು ತಿಂಗಳ ಅವಧಿಗೆ ವಿಧಾನಪರಿಷತ್‌ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಇದೀಗ ಮತ್ತೆ ಸಭಾಪತಿಯಾಗಿದ್ದಾರೆ. ಸಭಾಪತಿಯಾಗಿ ಆಯ್ಕೆ ಹಿನ್ನೆಲೆಯಲ್ಲಿ ಪರಿಷತ್ ನಲ್ಲಿ ಹೊರಟ್ಟಿ ಕುಟುಂಬಸ್ಥರು ಉಪಸ್ಥಿತರಿದ್ದರು. ಹೊರಟ್ಟಿ ಅವರ ಪತ್ನಿ ಹೇಮಲತಾ ಇಬ್ಬರು ಪುತ್ರರು ಹಾಗೂ ಪುತ್ರಿ ಉಪಸ್ಥಿತರಿದ್ದರು.
Youtube Video
ವಿಧಾನ ಪರಿಷತ್​ನಲ್ಲಿ 75 ಸದಸ್ಯ ಬಲವಿದೆ. ವಿಧಾನ ಪರಿಷತ್ 31 ಬಿಜೆಪಿ, 13 ಜೆಡಿಎಸ್, 28 ಕಾಂಗ್ರೆಸ್ ಸದಸ್ಯರನ್ನು ಹೊಂದಿದೆ. ಈಗಾಗಲೇ ಉಪ ಸಭಾಪತಿ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಟ್ಟಿರುವ ಜೆಡಿಎಸ್​ಗೆ ನಿರಾಯಾಸವಾಗಿ ಸಭಾಪತಿ ಪಟ್ಟ ಒಲಿದಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಸೋಲು ಖಚಿತ ಎಂದು ಗೊತ್ತಿದ್ದರೂ ಸಭಾಪತಿ ಸ್ಥಾನಕ್ಕೆ ನಜೀರ್ ಅಹಮದ್ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಅವರು ಇಂದು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದ ಕಾರಣ ಚುನಾವಣೆ ನಡೆಯದೆ ಸಭಾಪತಿ ಆಯ್ಕೆಯಾಗಿದೆ.
Published by: Sushma Chakre
First published: February 9, 2021, 12:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories