ಧಾರವಾಡ: ಕಾಂಗ್ರೆಸ್ ಮುಖಂಡನೊಬ್ಬ (Congress Leader) ಡ್ಯಾನ್ಸ್ ಕಾರ್ಯಕ್ರಮದ ವೇಳೆ ನರ್ತಕಿಯೊಬ್ಬಳಿಗೆ ಹಣ ಎಸೆದ (Money Showering) ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. ಧಾರವಾಡದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿರುವ ಹಿನ್ನೆಲೆ ಡ್ಯಾನ್ಸರ್‌ಗೆ ಹಣ ತೂರಿದ ಕಾಂಗ್ರೆಸ್ ಮುಖಂಡ ಕ್ಷಮೆ ಕೋರುವಂತೆ ಬಿಜೆಪಿ ಪಕ್ಷ (BJP) ಮುಖಂಡರು ಆಗ್ರಹಿಸಿದ್ದಾರೆ.
ಅಂದ ಹಾಗೆ ಧಾರವಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪರಮಾಪ್ತ, ಧಾರವಾಡದ ಕಾಂಗ್ರೆಸ್ ಮುಖಂಡ ಶಿವಶಂಕರ್ ಎಂಬ ವ್ಯಕ್ತಿ ತಮ್ಮ ಸ್ನೇಹಿತನ ಮಗಳ ಮದುವೆಯ ವೇಳೆ ಅರಿಶಿಣ ಶಾಸ್ತ್ರದ ಕಾರ್ಯಕ್ರಮದಲ್ಲಿ ಮಹಿಳಾ ಡ್ಯಾನ್ಸರ್ ಒಬ್ಬರಿಗೆ ಹಣ ಎಸೆದು ಸುದ್ದಿಯಾಗಿದ್ದಾರೆ. ಇದೀಗ ನರ್ತಕಿಗೆ ಹಣ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಕುರಿತು ಪರವಿರೋಧ ಚರ್ಚೆ ಶುರುವಾಗಿದೆ.
ಕ್ಷಮೆಯಾಚಿಸುವಂತೆ ಬಿಜೆಪಿ ಆಗ್ರಹ
ಶಿವಶಂಕರ್ ಹಂಪಣ್ಣನವರ್ ಇದೇ ಮಾರ್ಚ್ 8 ರಂದು ನಗರದಲ್ಲಿ ನಡೆದ ತಮ್ಮ ಗೆಳೆಯನ ಪುತ್ರಿಯ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆ ಸಮಾರಂಭ ಆಗಿರೋದ್ರಿಂದ ಅಲ್ಲೇ ನೃತ್ಯ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಈ ವೇಳೆ ಯುವತಿಯರು ನೃತ್ಯ ಮಾಡುತ್ತಿದ್ದರು. ಆಗ ಸ್ಥಳೀಯ ಕಾಂಗ್ರೆಸ್ ಮುಖಂಡ ಶಿವಶಂಕರ್ ಹಂಪಣ್ಣನವರ್ ನೃತ್ಯ ಮಾಡುತ್ತಿದ್ದ ಯುವತಿಗೆ ಹಣದ ಗರಿ ಗರಿ ನೋಟು ಎಸೆದು ತಾವೂ ಕುಣಿದಿದ್ದಾರೆ. ಇದನ್ನು ಯಾರೋ ಅಲ್ಲೇ ಇದ್ದವರು ವಿಡಿಯೋ ಮಾಡಿದ್ದು, ಅದು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡಿ ರಾಜಕೀಯ ತಿರುವು ಪಡೆದುಕೊಂಡಿದೆ. ಇದರ ಲಾಭವನ್ನು ಪಡೆಯಲು ಯತ್ನಿಸಿದ ಬಿಜೆಪಿ ಇದೀಗ ವಿಡಿಯೋ ವೈರಲ್ ಆಗ್ತಿದ್ದಂತೆ ಕಾಂಗ್ರೆಸ್ ಮುಖಂಡ ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ.
ಇದನ್ನೂ ಓದಿ: Priyank Kharge: ಸರ್ಕಾರದ ವಿರುದ್ಧ ಕಿಕ್ಬ್ಯಾಕ್ ಬಾಂಬ್! ಕಾಕಂಬಿ ರಫ್ತಿನಲ್ಲಿ ಭಾರೀ ಅಕ್ರಮ ಆರೋಪ; ಸ್ಫೋಟಕ ಆಡಿಯೋ ಬಿಡುಗಡೆ
ಧಾರವಾಡದ ಸ್ಥಳೀಯ ಕಾಂಗ್ರೆಸ್ ಮುಖಂಡ ಶಿವಶಂಕರ್ ಹಂಪಣ್ಣನವರ್ ನೃತ್ಯ ಮಾಡುತ್ತಿದ್ದ ಯುವತಿಗೆ ಗರಿ ಗರಿ ನೋಟು ಎಸೆದ ವಿಡಿಯೋ ಸಾಮಾಜಿಕ ಜಾಲತಾಣ ಮಾತ್ರವಲ್ಲದೇ, ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವ ಸಮಯದಲ್ಲೇ ಇಂತಹ ಘಟನೆ ನಡೆದಿರೋದು ಕಾಂಗ್ರೆಸ್ ಪಕ್ಷಕ್ಕೆ ಒಂದು ರೀತಿಯಲ್ಲಿ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ.
ಇದು ನಾಚಿಕೆಗೇಡಿನ ಸಂಗತಿ
ಡ್ಯಾನರ್ ಮೇಲೆ ಗರಿ ಗರಿ ನೋಟುಗಳನ್ನು ತೂರುತ್ತ ಆಕೆಯೊಂದಿಗೆ ಸ್ಟೆಪ್ ಹಾಕಿದ ವಿಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಿಸಿದೆ. ಈ ಬಗ್ಗೆ ಮಾತನಾಡಿರುವ ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಇದು ನಾಚಿಕೆಗೇಡಿನ ಸಂಗತಿ. ಹುಡುಗಿಯೊಬ್ಬಳ ಮೇಲೆ ಹಣವನ್ನು ಎಸೆಯಲಾಗಿದೆ. ಇವರಿಗೆ ಹಣದ ಬೆಲೆ ಗೊತ್ತಿಲ್ಲ. ಇದು ಕಾಂಗ್ರೆಸ್ನ ಸಂಸ್ಕೃತಿ ಏನೆಂದು ತೋರಿಸುತ್ತದೆ. ನಾನು ಇದನ್ನು ಖಂಡಿಸುತ್ತೇನೆ. ಕಾಂಗ್ರೆಸ್ ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ