ಗೆಲುವಿನ ನಗೆ ಬೀರಿದ ಖರ್ಗೆ: ತೀವ್ರ ಮುಖಭಂಗ ಅನುಭವಿಸಿದ ಮಾಲೀಕಯ್ಯ ಗುತ್ತೇದಾರ


Updated:September 3, 2018, 3:13 PM IST
ಗೆಲುವಿನ ನಗೆ ಬೀರಿದ ಖರ್ಗೆ: ತೀವ್ರ ಮುಖಭಂಗ ಅನುಭವಿಸಿದ ಮಾಲೀಕಯ್ಯ ಗುತ್ತೇದಾರ

Updated: September 3, 2018, 3:13 PM IST
ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ(ಸೆ.03): ಕಲಬುರಗಿ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಮುಕ್ತಾಗೊಂಡಿದ್ದು, ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೆ, ಎರಡು ಕಡೆ ಕಮಲ ಅರಳಿದೆ. ಒಂದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಸ್ಥಾನ ಪಡೆದಿದ್ದು, ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಟೆಯಾಗಿತ್ತು. ಕೆಲ ಮುಖಂಡರು ಗೆಲುವಿನ ನಗೆ ಬೀರಿದರೆ, ಮತ್ತೆ ಕೆಲ ಮುಖಂಡರು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 169 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಈ ಪೈಕಿ ಕಾಂಗ್ರೆಸ್ 90, ಬಿಜೆಪಿ 63, ಜೆಡಿಎಸ್ 6, ಹಾಗೂ ಇತರೆ 9 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ವಿಜೇತ ಅಭ್ಯರ್ಥಿಗಳ ಪರ ಬೆಂಬಲಿಗರು ವಿಜಯೋತ್ಸವ ಆಚರಿಸಿ, ಸಂಭ್ರಮಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳ ಫಲಿತಾಂಶ ಹೊರಬಿದ್ದಿದೆ. ಅಫ್ಜಲ್​ಪುರ, ಚಿತ್ತಾಪುರ, ಚಿಂಚೋಳಿ ಪುರಸಭೆ ಹಾಗೂ ಶಹಾಬಾದ ನಗರಸಭೆ ಸೇರಿ ನಾಲ್ಕು ಕಡೆ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಸೇಡಂ ಮತ್ತು ಜೇವರ್ಗಿ ಪುರಸಭೆಗಳಲ್ಲಿ ಬಿಜೆಪಿಯ ಕಮಲ ಅರಳಿದೆ. ಆಳಂದ ಪುರಸಭೆಯಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸ್ಥಾನಗಳಲ್ಲಿ ಪಡೆದಿದ್ದು, ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು ಇಲ್ಲಿ ಜೆಡಿಎಸ್ ಪಕ್ಷವೇ ಕಿಂಗ್ ಮೇಕರ್ ಆಗಿದೆ. ಅಫ್ಜಲ್​ಪುರ ಪುರಸಭೆ ಕಾಂಗ್ರೆಸ್ ಪಕ್ಷ ತೆಕ್ಕೆಗೆ ಸೇರಿದ್ದು 23 ವಾರ್ಡ್​ಗಳಲ್ಲಿ ಕಾಂಗ್ರೆಸ್ ಪಕ್ಷ  16 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿ ಅಧಿಕಾರ ಗದ್ದುಗೆ ಹಿಡಿದಿದೆ. ಬಿಜೆಪಿ ಕೇವಲ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಮುಖಭಂಗ ಅನುಭವಿಸಿದ್ದಾರೆ. 1 ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಚಿತ್ತಾಪೂರ ಪುರಸಭೆಯ 23 ವಾರ್ಡ್ ಗಳ ಪೈಕಿ 18 ಕಾಂಗ್ರೆಸ್ ರಲ್ಲಿ ಕಾಂಗ್ರೆಸ್ ಗೆದ್ದಿದೆ. 5 ರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ಚಿಂಚೋಳಿ ಪುರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು 23 ವಾರ್ಡ್ ಗಳ ಪೈಕಿ ಕಾಂಗ್ರೆಸ್ ಪಕ್ಷ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಗುದ್ದುಗೆ ಹಿಡಿದಿದೆ.  ಬಿಜೆಪಿ 5, ಪಕ್ಷೇತರ 4, ಬಿಎಸ್ ಪಿ 1, ಜೆಡಿಎಸ್ 1 ಜಯಗಳಿಸಿದೆ. ಇನ್ನು ಶಹಾಬಾದ್​ ನಗರಸಭೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಬಸವರಾಜ್ ಮುತ್ತಿಮೂಡ್ ಮತ್ತು ಮಾಜಿ ಸಚಿವ ರೇವುನಾಯಕ ಬೆಳಮಗಿಗೆ ತೀವ್ರ ಮುಖಭಂಗವಾಗಿದೆ. ಶಹಾಬಾದ್ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿಯಾಗಿ ಗೆಲುವು ಸಾಧಿಸಿದೆ. 27 ವಾರ್ಡ್ ಗಳಲ್ಲಿ  ಕಾಂಗ್ರೆಸ್ 18 ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವು ತನ್ನದಾಗಿಸಿಕೊಂಡಿದೆ. ಬಿಜೆಪಿ ಕೇವಲ 5 ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಂಡಿದ್ರೆ, ಜೆಡಿಎಸ್ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮೂವರು ಪಕ್ಷೇತರರು ಗೆದ್ದಿದ್ದಾರೆ.

ಇನ್ನು ಜೇವರ್ಗಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದರೂ ಬಿಜೆಪಿ ಪಕ್ಷಕ್ಕೆ ಮತದಾರರು ಬಹುಮತ ನೀಡಿದ್ದು, ಶಾಸಕ ಅಜಯಸಿಂಗ್ ಗೆ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜೇವರ್ಗಿ ಪುರಸಭೆಯ 23 ವಾರ್ಡ್ ಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಮೂರು ಸ್ಥಾನಗಳಲ್ಲಿ ಗೆದ್ದಿವೆ. ಜೇವರ್ಗಿ ಫಲಿತಾಂಶ ತೀವ್ರ ಕುತೂಹಲಕ್ಕೆ ಕಾರಣವಾಯಿತು. ವಾರ್ಡ್ ಸಂಖ್ಯೆ 14 ರಲ್ಲಿ ಬಿಜೆಪಿಯ ಮಲ್ಲಿಕಾರ್ಜುನ ಭಾಗಪ್ಪ ಕೇವಲ 1 ಮತದ ಅಂತರದಿಂದ ಜೆಡಿಎಸ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾನೆ. ಇನ್ನು ವಾರ್ಡ್ ಸಂಖ್ಯೆ 11 ಹಾಗೂ 15 ರಲ್ಲಿ ಸಮಾನ ಮತಗಳು ಬಂದಾಗ ಲಾಟರಿ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಗಿದ್ದು, ವಾರ್ಡ್ ಸಂಖ್ಯೆ 11 ಬಿಜೆಪಿ ಮತ್ತು ವಾರ್ಡ್ ಸಂಖ್ಯೆ 15 ಜೆಡಿಎಸ್ ಪಾಲಾಗಿದೆ.

ಸೇಡಂ ಪುರಸಭೆಯಲ್ಲಿ ಮತ್ತೊಮ್ಮೆ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್​ಗೆ ತೀವ್ರ ಮುಖಭಂಗವಾಗಿದೆ. ಸೇಡಂ ಪುರಸಭೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು 23 ವಾರ್ಡ್ ಗಳ ಪೈಕಿ ಬಿಜೆಪಿ 13 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರ ಗದ್ದುಗೆ ಏರಿದೆ. 10 ಸ್ಥಾನಗಳಲ್ಲಿ ಮಾತ್ರ  ಕಾಂಗ್ರೆಸ್ ಪಕ್ಷ ಗೆಲುವು ಕಂಡಿದೆ. ಇನ್ನು ಆಳಂದ ಪುರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ ಸಮಬಲ ಆಗಿದ್ದು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. 27 ವಾರ್ಡ್ ಗಳಲ್ಲಿ 13 ಬಿಜೆಪಿ, 13 ಕಾಂಗ್ರೆಸ್, 1 ಜೆಡಿಎಸ್ ಪಕ್ಷ ಗೆಲುವು ಸಾಧಿಸಿದೆ. ಇನ್ನು ಇಲ್ಲಿ ಸಂಸದ ಮತ್ತು  ಶಾಸಕರು ಬಿಜೆಪಿ ಪಕ್ಷದವೇ ಆಗಿದ್ದರಿಂದ ಬಿಜೆಪಿ ಪಕ್ಷ ಅಧಿಕಾರಕ್ಕೇರೋದು ಬಹುತೇಕ ಖಚಿತವಾಗಿದೆ.

ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ವಿಜೇತ ಅಭ್ಯರ್ಥಿಗಳ ಬೆಂಬಲಿಗರೂ ವಿಜಯೋತ್ಸವ ಆಚರಿಸಿದರು. ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು. ಒಟ್ಟಾರೆಯಾಗಿ ಕಲಬುರ್ಗಿ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಚಾಣಾಕ್ಷ ಮತದಾರರು ಕೆಲವು ಕಡೆ ಶಾಸಕರಿಗೆ ಕೈಕೊಟ್ಟಿದ್ದಾರೆ. ಕಳೆದ ಬಾರಿಗಿಂತಲೂ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮೇಲುಗೈ ಅಗಿದ್ದು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚಾರ ವರ್ಕೌಟ್ ಆಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂಬರುವ ಲೋಕಸಭೆ ಚುನಾವಣೆ ಮೇಲೆ ಯಾವ ರೀತಿ ಎಫೆಕ್ಟ್ ಬೀಳಲಿದೆ  ಎನ್ನೋದನ್ನು ಕಾದುನೋಡಬೇಕಷ್ಟೇ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ