HOME » NEWS » State » VICTIMS OF KODAGU FLOODS MADE TO WAIT LONGER FOR HOMES RSK ZP

ದೇವರು ಕೊಟ್ಟರೂ ಪೂಜಾರಿ ಕೊಡ್ಲಿಲ್ಲ: ಇದು ಕೊಡಗಿನ ಸಂತ್ರಸ್ತರ ಪರಿಸ್ಥಿತಿ

ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಸೋಮವಾರಪೇಟೆ ಎಸಿಎಫ್ ನೆಹರು, 50 ಮರಗಳಿಗಿಂತ ಹೆಚ್ಚಿನ ಮರಗಳಿದ್ದರೆ ಅದಕ್ಕೆ ನೋಟಿಫಿಕೇಷನ್ ಆಗಬೇಕು. ಜೊತೆಗೆ ಅಕ್ಟೋಬರ್ ತಿಂಗಳು ಮುಗಿಯುವರೆಗೆ ಮಳೆಗಾಲವಿರುವುದರಿಂದ ಮರ ಕಡಿಯಲು ಅವಕಾಶ ನೀಡಿಲ್ಲ.

news18-kannada
Updated:October 12, 2020, 9:35 PM IST
ದೇವರು ಕೊಟ್ಟರೂ ಪೂಜಾರಿ ಕೊಡ್ಲಿಲ್ಲ: ಇದು ಕೊಡಗಿನ ಸಂತ್ರಸ್ತರ ಪರಿಸ್ಥಿತಿ
ಸಾಂದರ್ಭಿಕ ಚಿತ್ರ
  • Share this:
ಮಡಿಕೇರಿ (ಅ.12): ‘ದೇವರು ಕೊಟ್ಟರೂ ಪೂಜಾರಿ ಕೊಡ್ಲಿಲ್ಲ’ ಅನ್ನೋ ಹಾಗಿದೆ ಕೊಡಗಿನ ಸಂತ್ರಸ್ತರ ಪರಿಸ್ಥಿತಿ. ಸರ್ಕಾರ ಸಂತ್ರಸ್ತರಿಗೆ ನಿವೇಶನ ಹಂಚಿದ್ದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ವರ್ಷ ಕಳೆದರೂ ನಿವೇಶನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ತಮ್ಮ ನಿವೇಶನ ಇಲ್ಲೇ ಇವೆ ಎಂದು ಗೊತ್ತಿದ್ದರೂ ಮನೆ ನಿರ್ಮಿಸಿಕೊಳ್ಳಲು ನಿವೇಶನದ ಜಾಗದಲ್ಲಿರುವ ಮರಗಳು ಅಡ್ಡಿಯಾಗುತ್ತಿವೆ. ಹೌದು, ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ನೂರಾರು ಜನರು ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದರು. ಅವರಲ್ಲಿ ಸೋಮವಾರಪೇಟೆ ತಾಲ್ಲೂಕಿನ ಕಾವೇರಿ ನದಿತಟದ ನೆಲ್ಯಹುದಿಕೇರಿ, ಕುಂಬಾರಗುಂಡಿ, ಬೆಟ್ಟದ ಕಾಡು ಗ್ರಾಮಗಳ 140 ಕುಟುಂಬಗಳು ಕಳೆದ ವರ್ಷ ಮನೆ ಕಳೆದುಕೊಂಡಿದ್ದವು.

ಈ ಬಗ್ಗೆ ಶಾಶ್ವತ ಪರಿಹಾರ ಬೇಕೆಂದು ಮೂರು ವರ್ಷಗಳ ಕಾಲ ನಿರಂತರ ಧರಣಿ ನಡೆಸಿದ್ದರು. ಅವರ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಕೊನೆಗೂ ಅಬ್ಯತ್‍ಮಂಗಲ ಸಮೀಪದ ಸರ್ಕಾರಿ ಜಾಗವನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಿತ್ತು. ಅಕ್ಟೋಬರ್ 2019 ರಲ್ಲೇ ಸಂತ್ರಸ್ತರಿಗೆ ಉಪವಿಭಾಗಧಿಕಾರಿಯವರ ನೇತೃತ್ವದಲ್ಲಿ ಟೋಕನ್ ಕೂಡ ವಿತರಿಸಲಾಗಿತ್ತು.

ಅದು ಅರಣ್ಯ ಇಲಾಖೆ ಜಾಗವಾಗಿದ್ದು, ಅದರಲ್ಲಿ ನೂರಾರು ಮರಗಳಿವೆ. ಅವುಗಳನ್ನು ತೆರವು ಮಾಡಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಡಳಿತವು ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ಪತ್ರವನ್ನು ಬರೆದಿದೆ. ಆದರೂ ಅರಣ್ಯ ಇಲಾಖೆ ಮಾತ್ರ ಒಂದು ವರ್ಷ ಪೂರೈಸಿದರೂ ಇನ್ನೂ ಮರಗಳನ್ನು ತೆರವು ಮಾಡಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ರೋಸಿಹೋಗಿದ್ದ ನಿರಾಶ್ರಿತರು ಮಡಿಕೇರಿಯ ಅರಣ್ಯಭವನದ ಎದುರು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಮರ ಕಡಿಯುವುದು ದೊಡ್ಡ ಆದಾಯದ ಮೂಲವಾಗಿ ಹೋಗಿದೆ. ಆದರೆ ನಿರಾಶ್ರಿತರಿಗೆ ಹಂಚಿಕೆ ಮಾಡಿರುವ ಜಾಗದಲ್ಲಿರುವ ಮರಗಳನ್ನು ಕಡಿಯುವುದರಿಂದ ಅರಣ್ಯ ಇಲಾಖೆಗೆ ಯಾವುದೇ ಲಾಭವಿಲ್ಲ. ಹೀಗಾಗಿ ನಿರ್ಲಕ್ಷ್ಯವಹಿಸಿದೆ ಎಂದು ಸಂತ್ರಸ್ಥರು ಆಕ್ರೋಶ ವ್ಯಕ್ತಡಿಸಿದರು.

ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಸೋಮವಾರಪೇಟೆ ಎಸಿಎಫ್ ನೆಹರು, 50 ಮರಗಳಿಗಿಂತ ಹೆಚ್ಚಿನ ಮರಗಳಿದ್ದರೆ ಅದಕ್ಕೆ ನೋಟಿಫಿಕೇಷನ್ ಆಗಬೇಕು. ಜೊತೆಗೆ ಅಕ್ಟೋಬರ್ ತಿಂಗಳು ಮುಗಿಯುವರೆಗೆ ಮಳೆಗಾಲವಿರುವುದರಿಂದ ಮರ ಕಡಿಯಲು ಅವಕಾಶ ನೀಡಿಲ್ಲ. ಇದರಿಂದಾಗಿ ವಿಳಂಬವಾಗಿದೆಯೇ ಹೊರತು ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ಮಾಡಿಲ್ಲ ಎಂದು ಇಲಾಖೆಯ ಕಾರ್ಯ ವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.

Published by: zahir
First published: October 12, 2020, 9:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories