ಕೊತ್ತಂಬರಿ ಸೊಪ್ಪನ್ನು ಚರಂಡಿ ನೀರಲ್ಲಿ ತೊಳೆದ ತರಕಾರಿ ವ್ಯಾಪಾರಿ; ವಿಡಿಯೋ ವೈರಲ್

ಮನೆ, ಅಂಗಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಳಸಿ ಬಿಡುಗಡೆ ಮಾಡುವ ಹೊಲಸು ನೀರು ಇದೇ ಕಪ್ಪು ಕಾಲುವೆ ಮೂಲಕ ಹರಿಯುತ್ತದೆ. ತ್ಯಾಜ್ಯವೆಲ್ಲ ಸೇರಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ‌‌. ಇಂತಹ ಹೊಲಸು ನೀರಲ್ಲಿಯೇ ಯುವಕ ಹೊಲದಿಂದ ಕಿತ್ತು ತಂದ ಕೊತ್ತಂಬರಿ ಸೊಪ್ಪನ್ನು ಮುಳುಗಿಸಿದ್ದಾನೆ.

ಕೊತ್ತಂಬರಿ ಸೊಪ್ಪು ತೊಳೆಯುತ್ತಿರುವ ಯುವಕ

ಕೊತ್ತಂಬರಿ ಸೊಪ್ಪು ತೊಳೆಯುತ್ತಿರುವ ಯುವಕ

  • Share this:
ಹುಬ್ಬಳ್ಳಿ(ಅ.15): ಗೃಹಿಣಿಯರೇ ತರಕಾರಿ ಸೊಪ್ಪನ್ನು ಅಡುಗೆಗೆ ಬಳಸುವ ಮುನ್ನ ಎಚ್ಚರ ವಹಿಸಿ. ಸೊಪ್ಪು-ತರಕಾರಿಗಳನ್ನು ಸ್ವಚ್ಚವಾಗಿ ತೊಳದ ಬಳಿಕವೇ ಅಡುಗೆಗೆ ಉಪಯೋಗಿಸಿ. ಯಾಕೆಂದರೆ ತರಕಾರಿ ವ್ಯಾಪಾರಿಯೊಬ್ಬ  ಕೊತ್ತಂಬರಿ ಸೊಪ್ಪನ್ನು ಚರಂಡಿ ನೀರಿನಲ್ಲಿ ತೊಳೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೌದು, ಹುಬ್ಬಳ್ಳಿಯಲ್ಲಿ ತರಕಾರಿ ವ್ಯಾಪಾರಿಯೊಬ್ಬ ಕೊತ್ತಂಬರಿ ಸೊಪ್ಪನ್ನು ಚರಂಡಿ ನೀರಲ್ಲಿ ತೊಳೆಯುವ ವಿಡಿಯೋ ವೈರಲ್ ಆಗಿದೆ. ವಾಣಿಜ್ಯ ನಗರಿಯ ಮಾರುಕಟ್ಟೆಗಳಿಗೆ ಕೊತ್ತಂಬರಿ ಪೂರೈಸುವ ಯುವಕ ಕೊಳಚೆ ನೀರಲ್ಲಿ ಸೊಪ್ಪನ್ನು ತೊಳೆದಿದ್ದಾನೆ. ಗಿರಿಯಾಲ ಮಾರ್ಗದಲ್ಲಿರುವ ನಾಲೆಯಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತದೆ. ನಗರದ ಬಹಳಷ್ಟು ತ್ಯಾಜ್ಯವನ್ನು ಇದೇ ನಾಲೆಗೆ ಹಾಕಲಾಗುತ್ತದೆ. ಮನೆ, ಅಂಗಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಳಸಿ ಬಿಡುಗಡೆ ಮಾಡುವ ಹೊಲಸು ನೀರು ಇದೇ ಕಪ್ಪು ಕಾಲುವೆ ಮೂಲಕ ಹರಿಯುತ್ತದೆ. ತ್ಯಾಜ್ಯವೆಲ್ಲ ಸೇರಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ‌‌. ಇಂತಹ ಹೊಲಸು ನೀರಲ್ಲಿಯೇ ಯುವಕ ಹೊಲದಿಂದ ಕಿತ್ತು ತಂದ ಕೊತ್ತಂಬರಿ ಸೊಪ್ಪನ್ನು ಮುಳುಗಿಸಿದ್ದಾನೆ.

ಇದನ್ನು ಗಮನಿಸಿದ ಸ್ಥಳೀಯರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಡುಗೆ ಮಾಡಲು ಬಳಸುವ ಕೊತ್ತಂಬರಿಯನ್ನು ಈ‌ ರೀತಿ ದುರ್ಗಂಧ ತುಂಬಿದ ನೀರಲ್ಲಿ ತೊಳೆಯುತ್ತೀಯಾ ಎಂದು ಜಾಡಿಸಿದ್ದಾರೆ. ಮಾಡಿದ್ದು ತಪ್ಪಾಯ್ತು ಎಂದಿರುವ ಯುವಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಈ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅವಸರದಲ್ಲಿ ಅಡುಗೆ ಮಾಡುವವರು ಇಂತಹ ಅಶುದ್ಧ ತರಕಾರಿಗಳ ಬಗ್ಗೆ ಕಾಳಜಿ ವಹಿಸಬೇಕು. ಚೆನ್ನಾಗಿ ತೊಳೆದ ತರಕಾರಿ ಸೇವಿಸಬೇಕು ಎಂದು ಕಳಕಳಿ ವ್ಯಕ್ತಪಡಿಸಿರುವ ಸ್ಥಳೀಯರು, ತರಕಾರಿ ಮಾರುವ ಯುವಕನ ಕೆಲಸಕ್ಕೆ ಛೀಮಾರಿ ಹಾಕಿದ್ದಾರೆ.

ತುಂಬಿ ಹರಿದು ಪ್ರವಾಹ ಭೀತಿ ಸೃಷ್ಟಿಸಿದ ಕಬ್ಬನ ಹಳ್ಳ

ಹುಬ್ಬಳ್ಳಿ‌ ಹಾಗೂ ಕುಂದಗೋಳ ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆ‌ ಸುರಿಯುತ್ತಿದೆ. ವರುಣನ‌ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ದಟ್ಟಣೆಯ ಮೋಡ ಕವಿದ ವಾತಾವರಣ ದೊಂದಿಗೆ ಸುರಿಯುತ್ತಿರುವ ಧಾರಾಕಾರ ಮಳೆ ರೈತರನ್ನು ಕಂಗೆಡಿಸಿದೆ. ಸೈಕ್ಲೋನ್ ಹೊಡೆತಕ್ಕೆ ಗ್ರಾಮೀಣ ಪ್ರದೇಶದ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿ ಬಳಿ ಕಬ್ಬನ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ರಭಸಕ್ಕೆ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸೇತುವೆಯ ಮೇಲ್ಮಟ್ಟದಲ್ಲಿ ಹಳ್ಳ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಮನೆ ಮಾಡಿದೆ. ಮಳೆಯ ಆರ್ಭಟ ಮುಂದುವರಿದರೆ ಬಹಳಷ್ಟು ಮನೆಗಳು ಮುಳುಗಡೆ ಆಗಲಿದ್ದು ಗ್ರಾಮಸ್ಥರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
Published by:Latha CG
First published: