ಬೆಂಗಳೂರು: ಮಾಜಿ ಸಚಿವ, ಬಿಜೆಪಿ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿ.ಟಿ. ರವಿ (C.T. Ravi) ವಿರುದ್ಧ ರಾಜ್ಯದ ವೀರಶೈವ ಲಿಂಗಾಯತ ಸಮುದಾಯದವರು (Veerashaiva Lingayat community) ತಿರುಗಿ ಬಿದ್ದಿದ್ದಾರೆ. ಸಿ.ಟಿ. ರವಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪ್ರಕಟಣೆ ಹೊರಡಿಸಿರುವ ರಾಜ್ಯ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಮಾಜಿ ಸಚಿವರಿಗೆ ಏಕವಚನದಲ್ಲೇ ವಾರ್ನಿಂಗ್ ನೀಡಿದೆ. “ಸಿ.ಟಿ. ರವಿ ಎಲ್ಲಿಯಾದರೂ ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕಬೇಕು. ‘ಕಿತ್ತೋದ ಸಿ.ಟಿ. ರವಿ’ ಎಂದು ಘೋಷಣೆ ಕೂಗಬೇಕು” ಎಂದು ಕರೆಕೊಟ್ಟಿದೆ. ಅಷ್ಟಕ್ಕೂ ಸಿ.ಟಿ. ರವಿ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B.S. Yeddyurappa) ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ (B.Y. Vijayendra) ಅವರ ಹೇಳಿಕೆಗೆ ಸಿಟಿ ರವಿ ಪರೋಕ್ಷವಾಗಿ ತಿರುಗೇಟು ನೀಡುತ್ತಿರೋದು!
ಸಿ.ಟಿ. ರವಿ ಹೇಳಿದ್ದೇನು?
ಈ ಬಾರಿಯ ವಿಧಾನಸಭಾ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ್ದ ಸಿ.ಟಿ. ರವಿ, ಟಿಕೆಟ್ ನೀಡುವ ಬಗ್ಗೆ ಯಾವುದೇ ಒಂದು ಕುಟುಂಬದಲ್ಲಿ ತೀರ್ಮಾನವಾಗುವುದಿಲ್ಲ, ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ನಮ್ಮ ಪಕ್ಷದಲ್ಲಿ ಕಿಚನ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲ್ಲ ಅಂತ ಹೇಳಿದ್ದರು ಎನ್ನಲಾಗಿದೆ.
ವಿಜಯೇಂದ್ರ ಬಗ್ಗೆ ಸಿ.ಟಿ. ರವಿ ಹೇಳಿದ್ದೇನು?
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಸಿ.ಟಿ. ರವಿ, ವಿಜಯೇಂದ್ರ ಬಗ್ಗೆ ಕೇಳಿದ್ದೀರಿ. ಅವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ಸಮೀಕ್ಷೆಯ ಆಧಾರದ ಮೇಲೆ ಗೆಲ್ಲುವ ಮಾನದಂಡದ ಆಧರಿಸಿ ಟಿಕೆಟ್ ನೀಡುವ ಕುರಿತು ನಿರ್ಧರಿಸಲಾಗುತ್ತದೆ. ಆದರೆ ಕುಟುಂಬದಲ್ಲಿ ಸಮೀಕ್ಷೆ ನಡೆಯುವುದಿಲ್ಲ ಎಂದು ಹೇಳಿದ್ದರು ಅಂತ ಹೇಳಲಾಗಿದೆ.
ಇದನ್ನೂ ಓದಿ: RTI Report: ಅತಿಥಿ ಸತ್ಕಾರಕ್ಕಾಗಿ ರಾಜ್ಯ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ 72 ಕೋಟಿ ರೂಪಾಯಿ!
ವೀರಶೈವ ಲಿಂಗಾಯತ ಸಮುದಾಯ ಆಕ್ರೋಶ
ಸಿ.ಟಿ. ರವಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. “ಸಿ.ಟಿ. ರವಿ ಎಲ್ಲಿಯಾದರೂ ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕಬೇಕು. ‘ಕಿತ್ತೋದ ಸಿ.ಟಿ. ರವಿ’ ಎಂದು ಘೋಷಣೆ ಕೂಗಬೇಕು” ಎಂದು ಕರೆಕೊಟ್ಟಿದೆ.
ಪ್ರಕಟಣೆಯಲ್ಲಿ ಏನಿದೆ?
ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ವೀರಶೈವ ಲಿಂಗಾಯತರಿಂದ ನೆನಪಿರಲಿ ಸಿ.ಟಿ. ರವಿ, ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಅನ್ನುವ ಪತ್ರಿಕೆ ಹೇಳಿಕೆ ವಿರುದ್ಧವಾಗಿ ಕರ್ನಾಟಕ ರಾಜ್ಯದಲ್ಲಿ ಸಿ.ಟಿ. ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕುವುದು, ಅಷ್ಟೇ ಅಲ್ಲ ಕಿತ್ತೋದ ಸಿ.ಟಿ. ರವಿ ಅಂತ ಘೋಷಣೆ ಕೂಗಬೇಕು ಅಂತ ಕರೆ ಕೊಡಲಾಗಿದೆ.
“ನಿನ್ನಂತಹ ಸಾವಿರಾರು ವ್ಯಕ್ತಿಗಳನ್ನು ಮುಗಿಸಿ ಹಾಕುವುದು ನಮಗೆ ಗೊತ್ತು”
ಕಳೆದ 50 ವರ್ಷಗಳಿಂದ ಇಂತಹ ಕಿತ್ತೋದ ಸಿ.ಟಿ. ರವಿ ಅಂತಹವರು ತುಂಬಾ ಜನಗಳನ್ನು ವೀರಶೈವ ಲಿಂಗಾಯತ ಸಮಾಜ ನೋಡಿದೆ. ನಮ್ಮ ಸಮಾಜ ಎಷ್ಟೇ ಒಡೆದರೂ, ಚುನಾವಣೆಯಲ್ಲಿ ಒಂದಾಗಿ ತಕ್ಕ ಪಾಠ ಕಲಿಸುತ್ತಿರುವುದು ನೆನಪಿಲ್ಲವೆ? ವೀರಶೈವ ಲಿಂಗಾಯತ ಸಮಾಜ ತುಂಬಾ ಸೂಕ್ಷ್ಮ ಸಮಾಜ, ಯಾರನ್ನು ಕೆಣಕಲು ಹೋಗಲ್ಲ ಕಾಯಕವೇ ಕೈಲಾಸ ಎಂದು ತಿಳಿದು ತಮ್ಮ ಜೀವನ ನಡೆಸುತ್ತಿದೆ. ನಿನ್ನಂತಹ ಜೀವನ ಮಾಡಲು ನಮಗೆ ಬರುವುದಿಲ್ಲ. ಒಂದು ಸಲ ಸಿಡಿದರೆ ನಿನ್ನಂತಹ ಸಾವಿರಾರು ವ್ಯಕ್ತಿಗಳನ್ನು ಮುಗಿಸಿ ಹಾಕುವುದು ನಮಗೆ ಗೊತ್ತು ಅಂತ ಎಚ್ಚರಿಸಲಾಗಿದೆ.
“ಮಾನಸಿಕ ಅಸ್ವಸ್ಥ ಸಿಟಿ ರವಿ”
ಸಿ.ಟಿ. ರವಿಯವರೇ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಮಾತನಾಡಲಿಕ್ಕೆ ನಿನಗೆ ಏನು ನೈತಿಕತೆ ಇದೆ? ಇಂತಹವರನ್ನು ಬಿಜೆಪಿ ಪಕ್ಷ ತಕ್ಷಣವೇ ಉಚ್ಚಾಟನೆ ಮಾಡಬೇಕು. ವೀರಶೈವ ಲಿಂಗಾಯತ ಸಮಾಜಕ್ಕೆ ಕ್ಷಮೆ ಕೇಳಬೇಕು, ಇಲ್ಲದೆ ಹೋದರೆ ಒಂದು ವಾರದಲ್ಲಿ ನಿಮ್ಮ ಮನೆಗೆ ಬಂದು ಹೋರಾಟ ಮಾಡುತ್ತೇವೆ. ಮಾನಸಿಕ ಅಸ್ವಸ್ಥ ಸಿಟಿ ರವಿಯವರಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಎಚ್ಚರಿಕೆ ನೀಡುತ್ತಿದೆ ಅಂತ ಪ್ರದೀಪ್ ಕಂಕಣವಾಡಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷರು ಅಂತ ಉಲ್ಲೇಖಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ