news18-kannada Updated:January 12, 2021, 3:03 PM IST
ವೀರಪ್ಪನ್ ಕುರಿತ ವೆಬ್ ಸೀರೀಸ್ನ ದೃಶ್ಯ
ಬೆಂಗಳೂರು (ಜ. 12): ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಕುಖ್ಯಾತಿ ಪಡೆದಿದ್ದ ದಂತಚೋರ ವೀರಪ್ಪನ್ ಕುರಿತ ವೆಬ್ ಸೀರೀಸ್ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಹಿಂದೆ ಕಾಡುಗಳ್ಳ ವೀರಪ್ಪನ್ ಕುರಿತು ಅಟ್ಟಹಾಸ ಸಿನಿಮಾ ನಿರ್ದೇಶಿಸಿದ್ದ ಎಎಂಆರ್ ರಮೇಶ್ 'ವೀರಪ್ಪನ್- ಹಂಗರ್ ಫಾರ್ ಕಿಲ್ಲಿಂಗ್' ವೆಬ್ ಸೀರೀಸ್ ನಿರ್ದೇಶನ ಮಾಡಿದ್ದಾರೆ. 4 ಭಾಷೆಗಳಲ್ಲಿ ಸಿದ್ಧವಾಗಿದ್ದ ಆ ವೆಬ್ ಸೀರೀಸ್ ಇನ್ನೇನು ಬಿಡುಗಡೆಯಾಗುವುದರಲ್ಲಿತ್ತು. ಆದರೆ, ಆ ವೆಬ್ ಸೀರೀಸ್ಗೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ಈ ವೆಬ್ ಸೀರೀಸ್ ಕುರಿತು ಬೆಂಗಳೂರಿನಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಹೇಳಿಕೆ ನೀಡಿದ್ದು, ಶುಕ್ರವಾರ ನ್ಯಾಯಾಲಯದಲ್ಲಿ ನಮ್ಮ ಅರ್ಜಿಗೆ ತಡೆಯಾಜ್ಞೆ ಸಿಕ್ಕಿದೆ. ನಿರ್ದೇಶಕ ಎಎಂಆರ್ ರಮೇಶ್ ಯಾಕೆ ವೀರಪ್ಪನ್ ಹೆಸರಲ್ಲಿ ಹಣ ಮಾಡುತ್ತಿದ್ದಾರೊ ಗೊತ್ತಿಲ್ಲ. ಇದರಿಂದ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಗೌರವಯುತ ಜೀವನಕ್ಕೆ ಧಕ್ಕೆಯಾಗುತ್ತಿದೆ. ಪದೇಪದೆ ತನ್ನ ಗಂಡನ ಹೆಸರಿನಲ್ಲಿ ಸಿನಿಮಾ ಮತ್ತು ವೆಬ್ ಸೀರೀಸ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಈ ಹಿಂದೆ 'ಅಟ್ಟಹಾಸ' ಚಿತ್ರ ನಿರ್ಮಾಣ ಸಮಯದಲ್ಲೂ ಹೀಗೇ ಮಾಡಿದ್ದರು. ಆಗಲೂ ನಾವು ಸುಪ್ರೀಂ ಕೋರ್ಟ್ವರೆಗೆ ಹೋಗಿದ್ದೆವು. ಎಎಂಆರ್ ರಮೇಶ್ ಅವರ ಸಿನಿಮಾಗಳಲ್ಲಿ ವೀರಪ್ಪನ್ ಅವರನ್ನು ತುಂಬ ಕೆಟ್ಟ ರೀತಿಯಲ್ಲಿ ತೋರಿಸುತ್ತಿದ್ದಾರೆ. ಈಗ ಅವರು ವೆಬ್ ಸೀರೀಸ್ಗೆ ಇಟ್ಟಿರುವ ಟೈಟಲ್ ನೋಡಿದರೆ ಅದರಲ್ಲಿ ಏನಿರಬಹುದು ಎಂಬುದು ಅರ್ಥವಾಗುತ್ತದೆ. ಅವರ ಕೆಟ್ಟ ವಿಚಾರಗಳನ್ನು ತೋರಿಸುವ ಹಾಗೆ ಒಳ್ಳೆಯ ವಿಚಾರಗಳನ್ನು ಕೂಡ ಹೇಳಿ. ಕರ್ನಾಟಕದಲ್ಲಿ ವೀರಪ್ಪನ್ ಎಂದರೆ ಭಯ ಹುಟ್ಟಿಸುವ ಹಾಗೆ ತೋರಿಸುತ್ತೀರ ಎಂದು ಮುತ್ತುಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Veerappan: ಕನ್ನಡದಲ್ಲಿ ಬರಲಿದೆ ಕಾಡುಗಳ್ಳ ವೀರಪ್ಪನ್ ಮೇಲಿನ ಮೊದಲ ವೆಬ್ ಸೀರೀಸ್
ದಂತಚೋರ ವೀರಪ್ಪನ್ ಕುರಿತಾಗಿ ನಿರ್ಮಾಣವಾಗಿರುವ ವೆಬ್ ಸೀರೀಸ್ ಬಿಡುಗಡೆಯ ಹಂತದಲ್ಲಿತ್ತು. 'ಅಟ್ಟಹಾಸ' ಸಿನಿಮಾದಲ್ಲಿ ವೀರಪ್ಪನ್ ಪಾತ್ರ ಮಾಡಿದ್ದ ನಟ ಕಿಶೋರ್ ವೆಬ್ ಸೀರೀಸ್ನಲ್ಲೂ ವೀರಪ್ಪನ್ ಪಾತ್ರ ನಿರ್ವಹಿಸಿದ್ದರು. ಆದರೆ, ಆ ಸೀರೀಸ್ ಅನ್ನು ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಲಾಗಿದೆ. ನಿರ್ದೇಶಕ ಎಎಂಆರ್ ರಮೇಶ್ ಅವರು 2013ರಲ್ಲಿ ವೀರಪ್ಪನ್ ಕುರಿತಾಗಿ 'ಅಟ್ಟಹಾಸ' ಚಿತ್ರ ನಿರ್ಮಿಸಿದ್ದರು. ಚಿತ್ರದಲ್ಲಿ ನಟ ಕಿಶೋರ್ ವೀರಪ್ಪನ್ ಪಾತ್ರದಲ್ಲಿ ಮಿಂಚಿದ್ದರು.
4 ಭಾಗಗಳಲ್ಲಿ ಸಿದ್ಧವಾಗಿರುವ 'ವೀರಪ್ಪನ್- ಹಂಗರ್ ಫಾರ್ ಕಿಲ್ಲಿಂಗ್' ವೆಬ್ ಸೀರೀಸ್ನಲ್ಲಿ ಕಾಡುಗಳ್ಳ ವೀರಪ್ಪನ್ ಜೀವನವನ್ನು ಕಟ್ಟಿಕೊಡಲಾಗಿದೆ. ಆತನನ್ನು ಬಂಧಿಸಲು ಪೊಲೀಸರು ಯಾವ ರೀತಿ ಹರಸಾಹಸ ಪಟ್ಟರು, ಆತ ಮಾಡಿದ್ದ ಅಪರಾಧಗಳೇನು ಎಂಬಿತ್ಯಾದಿ ಮಾಹಿತಿಗಳು ಇದರಲ್ಲಿವೆ. 10 ಗಂಟೆಗಳ ಈ ವೆಬ್ ಸೀರೀಸ್ ಪ್ರಸಾರ ಮಾಡದಂತೆ ಮುತ್ತುಲಕ್ಷ್ಮೀ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ.
Published by:
Sushma Chakre
First published:
January 12, 2021, 3:03 PM IST