HOME » NEWS » State » VATAL NAGARAJ SAYS KARNATAK BANDH ON DEC 5TH WILL BE HUGE SKTV SNVS

ಡಿ. 5ರಂದು ಹಿಂದೆಂದೂ ಕಾಣದ ರೀತಿಯಲ್ಲಿ ಕರ್ನಾಟಕ ಬಂದ್: ವಾಟಾಳ್ ನಾಗರಾಜ್

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ಡಿಸೆಂಬರ್ 5ರಂದು ಕರ್ನಾಟಕ ಬಂದ್ ತಡೆಯಲಿ. ಹಿಂದೆಂದೂ ಕಾಣದ ರೀತಿಯಲ್ಲಿ ಅಂದು ಕರ್ನಾಟಕ ಬಂದ್ ನಡೆಯಲಿದೆ ಎಂದು ಕನ್ನಡ ಒಕ್ಕೂಟ ಮುಖ್ಯಸ್ಥ ವಾಟಾಳ್ ನಾಗರಾಜ್ ಹೇಳಿದ್ದಾರೆ.

news18-kannada
Updated:November 28, 2020, 2:23 PM IST
ಡಿ. 5ರಂದು ಹಿಂದೆಂದೂ ಕಾಣದ ರೀತಿಯಲ್ಲಿ ಕರ್ನಾಟಕ ಬಂದ್: ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
  • Share this:
ಬೆಂಗಳೂರು(ನ. 28): ಡಿಸೆಂಬರ್ ಐದರಂದು ಹಿಂದೆಂದೂ ನಡೆಯದ ರೀತಿಯಲ್ಲಿ ಕರ್ನಾಟಕ ಬಂದ್ ನಡೆಯುತ್ತದೆ. ಅಂದು ರಸ್ತೆಯಲ್ಲಿ ಊಟ ನೀರು ತಿಂಡಿ ಸಿಗುವುದಿಲ್ಲ. ಯಾರೂ ಬೀದಿಗೆ ಬರಬೇಡಿ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡುತ್ತೇನೆ. ಈ ಕರ್ನಾಟಕ ಬಂದ್ ಕನ್ನಡ ಶಕ್ತಿಯ ಬಂದ್ ಆಗಲಿದೆ. ಎಲ್ಲಾ ಸಂಘಟನೆಗಳು ಕರ್ನಾಟಕ ಬಂದ್​ಗೆ ಬೆಂಬಲ ನೀಡಿವೆ. ಡಿಸೆಂಬರ್ 5ರಂದು 1,400 ಕನ್ನಡಪರ ಸಂಘಟನೆಗಳು ಬಂದ್​ನಲ್ಲಿ ಭಾಗವಹಿಸಲಿವೆ. ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ಬಂದ್ ಅನ್ನು ನಿಲ್ಲಿಸಲಿ ಎಂದು ವಾಟಾಳ್ ನಾಗರಾಜ್ ಅವರು ಸವಾಲು ಹಾಕಿದರು. ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕೆಆರ್ ಪುರಂನಲ್ಲಿ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡುತ್ತಿದ್ದ ಅವರು, ಕರ್ನಾಟಕ ಬಂದ್ ನಂತವೂ ಮರಾಠಾ ಪ್ರಾಧಿಕಾರ ಮುಂದುವರಿದರೆ ಜೈಲು ಚಳವಳಿ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಕನ್ನಡವನ್ನು ಹಾಳುವ ಮಾಡುವ ಏಕೈಕ ಮುಖ್ಯಮಂತ್ರಿ ಇದ್ದರೆ ಅದು ಯಡಿಯೂರಪ್ಪ. ಸುಳ್ಳು ಅಂದರೆ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಸುಳ್ಳು. ಯಾರೂ ಅವರನ್ನ ನಂಬಬೇಡಿ. ಆತ ಮೋಸಗಾರ. ಕರ್ನಾಟಕದ ಜನರಿಗೆ ಭಾರೀ ಮೋಸ ಮಾಡಿದ್ದಾರೆ. ಈ ಊರಿಗೆ ತಿರುವಳ್ಳುರ್ ಪ್ರತಿಮೆ ತಂದವರು ಅವರು. ಮರಾಠಾ ಪ್ರಾಧಿಕಾರ ರಚನೆ ಮಾಡಿದ್ದು ಅವರು. ಯಾವುದೇ ಜಾತಿಯವರೂ ಕೂಡ ಯಡಿಯೂರಪ್ಪ ಅವರನ್ನ ನಂಬಬಾರದು. ಅವರ ಮತ್ತು ಅವರ ಮಗನ ಅಧಿಕಾರಕ್ಕೆ ಮಾತ್ರ ಯಡಿಯೂರಪ್ಪ ಪ್ರಯತ್ನ ಮಾಡುತ್ತಾರೆ ಎಂದು ವಾಟಾಳ್ ನಾಗರಾಜ್ ಟೀಕಿಸಿದರು.

ಯಡಿಯೂರಪ್ಪ ಅಧಿಕಾರದಲ್ಲಿ ಇದ್ರೆ ನಮ್ಮ ಭಾಗಗಳು ಮಹಾರಾಷ್ಟ್ರದ ಪಾಲಾಗುತ್ತೆ: ವಾಟಾಳ್

ಯಡಿಯೂರಪ್ಪ ಮುಂದುವರಿದರೆ ನಿಪ್ಪಾಣಿ, ಕಾರವಾರ ಮತ್ತು ಬೆಳಗಾವಿ ಮಹಾರಾಷ್ಟ್ರ ಪಾಲಾಗುತ್ತದೆ. ಮರಾಠಾ ನಿಗಮ ರಚನೆಯು ಬಸವಕಲ್ಯಾಣ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಯಡಿಯೂರಪ್ಪ ಆಡುತ್ತಿರುವ ನಾಟಕ. ಅವರು ಬರೀ ಬೋಗಸ್ ಹೇಳಿಕೆ ಕೊಡುತ್ತಿದ್ದಾರೆ. ಮಂತ್ರಿಮಂಡಲ, ಶಾಸನ ಸಭೆಯಲ್ಲಿ ಚರ್ಚಿಸದೆಯೇ ಪ್ರಾಧಿಕಾರ ರಚನೆ ಮಾಡಿದರು. ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ. ಬಳ್ಳಾರಿಯನ್ನು ಎರಡು ಭಾಗ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರು ಸುಮ್ಮನೆ ಕುಳಿತುಕೊಳ್ಳಬಾರದು. ಸಿದ್ದರಾಮ್ಯ ಕೂಡ ಹೊರಗೆ ಬಂದು ಹೋರಾಟ ಮಾಡಬೇಕು ಎಂದು ವಾಟಾಳ್ ನಾಗರಾಜ್ ಕರೆ ನೀಡಿದರು.

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೂರಾರು ಬೆಂಬಲಿಗರ ಮೆರವಣಿಗೆ ನಡೆಯಿತು. ಕೆಆರ್ ಪುರಂನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಯಿತು. ರಸ್ತೆಯಲ್ಲಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಇದೇ ವೇಳೆ, ನ. 30ರಂದು ನಗರದ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಬಂದ್​ಗೆ ಪೂರ್ವಭಾವಿಯಾಗಿ ಭಾರೀ ಸಭೆ ನಡೆಸಲು ನಿರ್ಧರಿಸಲಾಯಿತು.

ವರದಿ: ಸೌಮ್ಯಾ ಕಳಸ
Published by: Vijayasarthy SN
First published: November 28, 2020, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories