• Home
 • »
 • News
 • »
 • state
 • »
 • ಸರ್ಕಾರ ಏನೇ ಹರಸಾಹಸ ಮಾಡಿದರೂ ಡಿ. 5ರ ಕರ್ನಾಟಕ ಬಂದ್ ನಿಲ್ಲಲ್ಲ: ವಾಟಾಳ್ ನಾಗರಾಜ್

ಸರ್ಕಾರ ಏನೇ ಹರಸಾಹಸ ಮಾಡಿದರೂ ಡಿ. 5ರ ಕರ್ನಾಟಕ ಬಂದ್ ನಿಲ್ಲಲ್ಲ: ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್

ಡಿಸೆಂಬರ್ 5ರಂದು ಕರ್ನಾಟಕ ಬಂದ್ ಆಗುವುದು ನಿಶ್ಚಿತ. ಅದಕ್ಕೆ ಮುನ್ನ ವಿವಿಧೆಡೆ ಪ್ರತಿಭಟನೆಗಳನ್ನ ನಡೆಸುತ್ತೇವೆ. ಎಲ್ಲಾ ಕನ್ನಡಪರ ಸಂಘಟನೆಗಳು ಬಂದ್ಗೆ ಬೆಂಬಲ ನೀಡುತ್ತವೆ ಎಂದು ಇವತ್ತಿನ ಕನ್ನಡ ಒಕ್ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದೆ.

 • Share this:

  ಬೆಂಗಳೂರು(ನ. 25): ಯಾರು ಏನೇ ಅಡಚಣೆ ಮಾಡಿದರೂ ಕರ್ನಾಟಕ ಬಂದ್ ನಿಲ್ಲಿಸಲು ಆಗುವುದಿಲ್ಲ. ಡಿಸೆಂಬರ್ 5ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ಆಗುವುದು ನಿಶ್ಚಿತ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ವಿವಿಧ ಸಂಘಟನೆಗಳ ಮುಖಂಡರ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡಪರ ಸಂಘಟನೆಗಳು ಎಲ್ಲವೂ ಒಂದಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದರು. ಬಂದ್ ನಡೆಸಲು ಕನ್ನಡಪರ ಸಂಘಟನೆಗಳು ಹೆಣಗುತ್ತಿವೆ ಎಂಬ ಆರೋಪವನ್ನು ಇದೇ ವೇಳೆ ತಳ್ಳಿಹಾಕಿದ ವಾಟಾಳ್ ನಾಗರಾಜ್, ಬಂದ್ ತಡೆಯಲು ರಾಜ್ಯ ಸರ್ಕಾರವೇ ಹರಸಾಹಸ ಮಾಡುತ್ತಿದೆ. ಆದರೆ, ಏನೇ ಮಾಡಿದರೂ ಬಂದ್ ನಿಲ್ಲಿಸಲು ಆಗುವುದಿಲ್ಲ. ಬಳ್ಳಾರಿಯಲ್ಲಿ ಮಾಡಿದ ಗಡಿ ಬಂದ್​ಗೆ ಉತ್ತಮ ಬೆಂಬಲ ದೊರೆತಿದೆ. ಡಿಸೆಂಬರ್ 5ರಂದು ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ, ನಾಳೆ ನ. 26ರ ಗುರುವಾರದಂದು ಅತ್ತಿಬೆಲೆ ಗಡಿ ಬಂದ್ ಮಾಡಲಿದ್ದೇವೆ. ನ. 28, ಶನಿವಾರ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಅವರು ಬಂದ್ ಪೂರ್ವ ಕ್ರಮಗಳ ಮಾಹಿತಿ ನೀಡಿದರು.


  ಯಾರನ್ನ ಕೇಳಿ ಮರಾಠಾ ಅಭಿವೃದ್ಧಿ ನಿಗಮ ರಚನೆ ಮಾಡಿದಿರಿ? ಸರ್ವಪಕ್ಷ ಸಭೆ ಕರೆದಿಲ್ಲ, ವಿಧಾನಸಭೆಯಲ್ಲೂ ಚರ್ಚೆ ಮಾಡಲಿಲ್ಲ. ಯಾರ ವಿಶ್ವಾಸವನ್ನೂ ತೆಗೆದುಕೊಳ್ಳದೆ ಏಕಾಏಕಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಪ್ರಾಧಿಕಾರ ರಚನೆ ಹಿಂಪಡೆಯಲು ನವೆಂಬರ್ 30ರವರೆಗೂ ಗಡುವು ನೀಡಿದ್ದೇವೆ. ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡುವುದು ನಿಶ್ಚಿತ. ಬಂದ್ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.


  ಸರ್ಕಾರ ನಮ್ಮ ಮೇಲೆ ಕೇಸ್ ಹಾಕಲು ತಯಾರಿ ಮಾಡುತ್ತಿದ್ದಾರೆ. ಯಾವ ಕೇಸ್ ಹಾಕಿದರೂ, ನಮ್ಮನ್ನ ಜೈಲಿಗೆ ಕಳುಹಿಸಿದರೂ ನಮ್ಮ ಹೋರಾಟ ಮತ್ತು ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಹೇಳಿದ ಅವರು, ಬಸ್, ಆಟೋ, ಕಾರು, ಓಲಾ-ಊಬರ್ ಇತರೆ ವಾಹನಗಳು ಡಿಸೆಂಬರ್ 5ರಂದು ಸಂಚಾರ ನಿಲ್ಲಿಸಬೇಕು. ಇದು ಕನ್ನಡಿಗರ ಅಸ್ಮಿತೆಯ ಪ್ರಶ್ನೆಯಾದ್ದರಿಂದ ಎಲ್ಲರೂ ಬಂದ್​ಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.


  ಇದನ್ನೂ ಓದಿ: ಮರಾಠ, ವೀರಶೈವ-ಲಿಂಗಾಯತ ನಿಗಮದ ಕಿಚ್ಚು; ಈಡಿಗ ನಿಗಮ ಸ್ಥಾಪನೆಗೆ ಮಾಲೀಕಯ್ಯ ಗುತ್ತೇದಾರ ಒತ್ತಾಯ


  ನಾಡು ನುಡಿಗೆ ಧಕ್ಕೆ ತರುವ ವಿಚಾರ ಎಂದ ಚಂದ್ರು:


  ಇದಾದ ಬಳಿಕ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ನಾಡು ನುಡಿಗೆ ಧಕ್ಕೆ ತರುವ ವಿಚಾರವಾದ್ದರಿಂದ ಬಂದ್​ಗೆ ಎಲ್ಲರೂ ಬೆಂಬಲ ನೀಡಬೇಕೆಂದು ಕೇಳಿಕೊಂಡರು.


  ಸಾಮಾನ್ಯವಾಗಿ ನಾನು ಎಲ್ಲಾ ಬಂದ್​ಗೆ ಬೆಂಬಲ ಕೊಡುವುದಿಲ್ಲ. ಆದರೆ, ಈ ಬಂದ್ ಅಗತ್ಯ ಮತ್ತು ವಿಶೇಷವಾದುದು. ನಾಡು ನುಡಿಗೆ ಧಕ್ಕೆ ತರುವ ವಿಚಾರವಾದ್ದರಿಂದ ಇದಕ್ಕೆ ಬೆಂಬಲ ಕೊಟ್ಟಿದ್ದೇನೆ. ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸಂವಿಧಾನಿಕವಾಗಿ ಅಂಗೀಕೃತವಾಗಿಲ್ಲ. ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿಲ್ಲ. ಸಂಬಂಧಪಟ್ಟವರ ಜೊತೆ ಚಾವಡಿ ಮಾಡಿಲ್ಲ. ಏಕಾಏಕಿ ಪ್ರಾಧಿಕಾರ ಮಾಡಲಾಗಿದೆ. ಇದರ ಉದ್ದೇಶ ಏನು? ಯಡಿಯೂರಪ್ಪನವರೇ ನೀವು ನೈತಿಕವಾಗಿದ್ದೀರಾ? ಎಂದು ಮುಖ್ಯಮಂತ್ರಿ ಚಂದ್ರ ಪ್ರಶ್ನೆ ಮಾಡಿದರು.


  ಕನ್ನಡಪರ ಹೋರಾಟಗಾರರು ರೋಲ್​ಕಾಲ್ ಗಿರಾಕಿಗಳು ಎಂದು ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ‘ಮುಖ್ಯಮಂತ್ರಿ’ ಚಂದ್ರು, ನಾವೆಲ್ಲಾ ರೋಲ್​ಕಾಲ್ ಗಿರಾಕಿಗಳಾದರೆ ನಿಮ್ಮ ಸರ್ಕಾರ ರೋಲ್​ಕಾಲ್ ಸರ್ಕಾರವಾಗಿದೆ. ಇಂಥ ಅರ್ಥವಿಲ್ಲದ ಆರೋಪ ಮಾಡುವುದನ್ನ ಬಿಟ್ಟು ಕನ್ನಡದ ಬೇಡಿಕೆ ಏನಿದೆ ಅದಕ್ಕೆ ಮೊದಲು ಸ್ಪಂದಿಸಿ. ಇಲ್ಲದಿದ್ದರೆ ನೀವು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


  ಎಲ್ಲಾ ಸಂಘಟನೆಗಳು ಸೇರಿ ಕನ್ನಡದ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇವೆ. ಇದು ನಮ್ಮ ವೈಯಕ್ತಿಕ ವಿಚಾರ ಅಲ್ಲ, ಕನ್ನಡದಕ್ಕಾಗಿ ಮಾಡುತ್ತಿರುವ ಹೋರಾಟ. ನೀವು ಗಂಭೀರವಾಗಿ ಯೋಚಿಸಿ ನಮ್ಮ ಜೊತೆ ಕೈಜೋಡಿಸಿ ಎಂದು ಕನ್ನಡ ಪರ ಸಂಘಟನೆಗಳಿಗೆ ಚಂದ್ರು ಮನವಿ ಮಾಡಿಕೊಂಡಿದರು.


  ಇದನ್ನೂ ಓದಿ: ಬಿಡದಿಯಲ್ಲಿ ಟೊಯೋಟಾ ಲಾಕ್ ಔಟ್; ಆಡಳಿತ ಮಂಡಳಿ, ಕಾರ್ಮಿಕರು ಹೇಳುವುದೇನು?


  ಮರಾಠರ ವಿರುದ್ಧದ ಹೋರಾಟವಲ್ಲ ಎಂದ ಸಾ.ರಾ. ಗೋವಿಂದು:


  ನಂತರ ಮಾತನಾಡಿದ ಡಾ. ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು, ಈ ಕನ್ನಡಪರ ಹೋರಾಟವನ್ನ ಜಾತಿ ಹೋರಾಟವೆಂದು ಸರ್ಕಾರ ಬಿಂಬಿಸುತ್ತಿದೆ. ನಾವು ಮರಾಠ ಸಮುದಾಯದ ವಿರುದ್ಧ ಹೋರಾಡುತ್ತಿದ್ದೇವೆಂದು ಆರೋಪಿಸುತ್ತಿದೆ. ಹಿಂದುಳಿದ ವರ್ಗದ ಯಾವ ಸಮುದಾಯಕ್ಕಾದರೂ ಬೆಂಬಲ ಕೊಟ್ಟರೆ ನಮಗೆ ವಿರೋಧ ಇಲ್ಲ. ಆದರೆ, ಕನ್ನಡ ರಾಜ್ಯೋತ್ಸವದಂದು ಕಪ್ಪು ಬಾವುಟ ಹಿಡಿಯುವವರಿಗಾಗಿ ನೀವು ಪ್ರಾಧಿಕಾರ ಮಾಡುತ್ತಿದ್ದೀರಿ. ಇದೇನಾ ನಿಮಗೆ ಕನ್ನಡದ ಬಗ್ಗೆ ಇರುವ ಕಾಳಜಿ ಮತ್ತು ಅಭಿಮಾನ? ಎಂದು ಪ್ರಶ್ನಿಸಿದರು.


  ಎಲ್ಲೂ ಚರ್ಚೆ ಮಾಡದೆ ಈ ನಿರ್ಧಾರ ಹೇಗೆ ತೆಗೆದುಕೊಂಡಿರಿ ಯಡಿಯೂರಪ್ಪನವರೇ? ಯಾವ ಹಿರಿಯ ಹೋರಾಟಗಾರರ ಬಳಿ ಚರ್ಚೆ ಮಾಡಿದ್ದೀರಿ? ನಮ್ಮ ಭಾವನೆಗಳನ್ನ ಅರ್ಥ ಮಾಡಿಕೊಳ್ಳಿ. ಮರಾಠಾ ಅಭಿವೃದ್ಧಿ ಪ್ರಾಧಿಕಾರ ಬದಲು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಅಂತ ಮಾಡಬಹುದಿತ್ತಲ್ಲಾ? ಈ ಭಾಗದಲ್ಲಿ ಮರಾಠರೇ ಹೆಚ್ಚಿದ್ದಾರೆ ಅಂತ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದ್ದೀರಾ ನೀವು. ನಿಮ್ಮ ಜೊತೆಯಲ್ಲಿ ಇರುವವರು ಮೌನಕ್ಕೆ ಶರಣಾಗಿದ್ದಾರೆ. ಅವರಿಗೇ ಇದನ್ನು ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ನೀವು ಏಕಾಂಗಿ ನಿರ್ಧಾರ ತೆಗೆದುಕೊಂಡಿದ್ಧೀರಿ ಎಂದು ಸಾ.ರಾ. ಗೋವಿಂದು ಟೀಕಿಸಿದರು.


  ಅನುಮಾನಾಸ್ಪದ ವಿಡಿಯೋ ರೆಕಾರ್ಡಿಂಗ್ ಅವಾಂತರ:


  ಬಂದ್ ವಿಚಾರವಾಗಿ ಚರ್ಚಿಸಲು ಕನ್ನಡ ಒಕ್ಕೂಟದಿಂದ ಇವತ್ತು ವುಡ್​ಲ್ಯಾಂಡ್ಸ್ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಇದಕ್ಕೆ ಕಾರಣವಾಗಿದ್ದು ಕೆಮರಾಮ್ಯಾನ್​ವೊಬ್ಬರಿಂದ ಆದ ಚಿತ್ರೀಕರಣ. ಇವರು ಅನುಮಾನಾಸ್ಪದವಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದುದನ್ನು ಕಂಡು ಕನ್ನಡ ಪರ ಹೋರಾಟಗಾರರು ಕರೆದು ಪ್ರಶ್ನೆ ಮಾಡಿದರು. ತಾನು ಪೊಲೀಸ್ ಕಡೆಯಿಂದ ಬಂದಿರುವ ಕ್ಯಾಮೆರಾಮ್ಯಾನ್ ಎಂದು ಹೇಳಿದ ಆ ವ್ಯಕ್ತಿ ಕೆಲ ಹೊತ್ತಿನ ಬಳಿಕ ತನ್ನನ್ನು ಜೇಮ್ಸ್ ಎಂಬುವವರು ಕಳುಹಿಸಿದ್ದು ಎಂದು ಹೇಳಿದ. ಇದರಿಂದ ಕೆರಳಿದ ಕಾರ್ಯಕರ್ತರು ಗಲಾಟೆ ಮಾಡಿದರು. ಈತನನ್ನು ಬಿಜೆಪಿಯವರು, ಆರೆಸ್ಸೆಸ್​ನವರು ಕಳುಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.


  ಇದನ್ನೂ ಓದಿ: ಅಂತರ್ಜಾತಿ ಮದುವೆಯಾದ ಪ್ರೇಮಿಗಳಿಗೆ ಪೋಷಕರಿಂದ ಬೆದರಿಕೆ; ಪ್ರಾಣರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲೇರಿದ ನವದಂಪತಿ


  ಇವತ್ತಿನ ಕನ್ನಡ ಒಕ್ಕೂಟ ಸಭೆಯಲ್ಲಿ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಚಂದ್ರು, ಸಾ.ರಾ. ಗೋವಿಂದು ಅವರಲ್ಲದೆ, ಲಾರಿ ಮಾಲಿಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಓಲಾ-ಊಬರ್ ಚಾಲಕರ ಸಂಘಟನೆಯ ಅಧ್ಯಕ್ಷ ತನ್ವೀರ್, ವಕೀಲರ ಸಂಘದ ಅಧ್ಯಕ್ಷ ರಂಗನಾಥ್, ಪೌರ ಕಾರ್ಮಿಕರ ಒಕ್ಕೂಟ ಅಧ್ಯಕ್ಷ ದಾಡಿ ಬಾಬು, ಕರವೇಯ ಶಿವರಾಮೇಗೌಡ, ಪ್ರವೀಣ್ ಶೆಟ್ಟಿ, ಗಿರೀಶ್ ಗೌಡ, ಹಿರಿಯ ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯಕ್ ಮೊದಲಾದವರು ಭಾಗವಹಿಸಿದ್ದರು.


  ಬಂದ್​ಗೆ ಮುನ್ನ ಎಲ್ಲೆಲ್ಲಿ ಪ್ರತಿಭಟನೆ?
  ನ. 26: ಅತ್ತಿ ಬೆಲೆ ಗಡಿ ಬಂದ್ - ಬೆಳಗ್ಗೆ 10 ಗಂಟೆಗೆ
  ನ. 28: ಕೆ ಆರ್ ಪುರಂನಲ್ಲಿ ಪ್ರತಿಭಟನೆ – ಬೆಳಗ್ಗೆ 10 ಗಂಟೆಗೆ
  ನ. 30 ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆ - ಬೆಳಗ್ಗೆ 11 ಗಂಟೆಗೆ
  ಡಿ. 1: ವಿಜಯಪುರದ ಡಿಸಿ‌ ಕಚೇರಿ ಮುಂಭಾಗದಲ್ಲಿ 1000 ಸಂಘಟನೆಗಳು ಸೇರಿ ಪ್ರತಿಭಟನೆ - ಬೆಳಗ್ಗೆ 10 ಗಂಟೆಗೆ


  ವರದಿ: ಆಶಿಕ್ ಮುಲ್ಕಿ

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು