ನನ್ನನ್ನು ಗೆಲ್ಲಿಸಿ, ವಿಧಾನಸಭೆಯಲ್ಲಿ ಮಂತ್ರಿಗಳ ಚಡ್ಡಿಯಲ್ಲಿ ನೀರು ಇಳಿಸುತ್ತೇನೆ; ಗುಡುಗಿದ ವಾಟಾಳ್ ನಾಗರಾಜ್

ಟಿಪ್ಪು ಸುಲ್ತಾನ್ ಈ ದೇಶದ ವೀರ. ಇವರು ಟಿಪ್ಪುವಿನ ವಿಷಯವನ್ನು ಪಠ್ಯದಿಂದ ತೆಗೆದು ಹಾಕುತ್ತೇವೆ ಎನ್ನುತ್ತಿದ್ದಾರೆ. ಯುದ್ಧ ಆದರೂ, ಲಕ್ಷಾಂತರ ಜನರು ಜೈಲಿಗೆ ಹೋದರೂ ನಾವು ಇದಕ್ಕೆ ಆಸ್ಪದ ಮಾಡಿಕೊಡುವುದಿಲ್ಲ ಎಂದು ವಾಟಾಳ್​ ನಾಗರಾಜ್​ ಗುಡುಗಿದರು.

Rajesh Duggumane | news18-kannada
Updated:November 1, 2019, 3:24 PM IST
ನನ್ನನ್ನು ಗೆಲ್ಲಿಸಿ, ವಿಧಾನಸಭೆಯಲ್ಲಿ ಮಂತ್ರಿಗಳ ಚಡ್ಡಿಯಲ್ಲಿ ನೀರು ಇಳಿಸುತ್ತೇನೆ; ಗುಡುಗಿದ ವಾಟಾಳ್ ನಾಗರಾಜ್
ವಾಟಾಳ್​ ನಾಗರಾಜ್
  • Share this:
ಬೆಂಗಳೂರು (ನ.1): ಇಂದು ಕನ್ನಡ ರಾಜ್ಯೋತ್ಸವ. ರಾಜ್ಯಾದ್ಯಂತ ನಾಡ ಬಾವುಟ ಹಾರಾಡುತ್ತಿದೆ. ಈ ಸಂಭ್ರಮದ ನಡುವೆ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ತುಂಬಾನೇ ಸಿಟ್ಟಾಗಿದ್ದರು. ಸರ್ಕಾರದ ವಿರುದ್ಧ ನಾಗರಾಜ್​ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ನನ್ನನ್ನು ಗೆಲ್ಲಿಸಿ, ವಿಧಾನಸಭೆಯಲ್ಲಿ ಮಂತ್ರಿಗಳ ಚಡ್ಡಿಯಲ್ಲಿ ನೀರು ಇಳಿಸುತ್ತೇನೆ‌‌ ಎಂದು ಗುಡುಗಿದ್ದಾರೆ. ಅಷ್ಟಕ್ಕೂ ವಾಟಾಳ್ ಈ ರೀತಿ ಸಿಟ್ಟಾಗಲು ಕಾರಣ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ.

64ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಕನ್ನಡಾಂಬೆ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಉತ್ಸವ ಹಾಗೂ ಮೆರವಣಿಗೆಗೆ ಸಿಎಂ ಚಾಲನೆ ಕೊಡಬೇಕಿತ್ತು. ಆದರೆ, ವಾಟಾಳ್​ ನಾಗರಾಜ್​ ಕಾರ್ಯಕ್ರಮದಲ್ಲಿ ಉಪಸ್ಥಿರಿರುತ್ತಾರೆ ಎನ್ನುವ ಕಾರಣಕ್ಕೆ ಬಿಎಸ್​ವೈ ಬಂದಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ ಬರುವುದಿಲ್ಲ ಎನ್ನುವುದು ಗೊತ್ತಾದ ಕೂಡಲೇ ಸರ್ಕಾರದ ವಿರುದ್ಧ ವಾಟಾಳ್​ ವಾಗ್ದಾಳಿ ಆರಂಭಿಸಿದರು. “ಮುಖ್ಯಮಂತ್ರಿಗಳಿಗೆ ಕಾಯುವುದು ನನ್ನ ಜನ್ಮದಲ್ಲೇ ಇಲ್ಲ. ಸಂಪ್ರದಾಯದಂತೆ ಅವರನ್ನು ಕರೆಯಬೇಕಿತ್ತು. ಅದಕ್ಕಾಗಿ ಅವರನ್ನು ಆಹ್ವಾನ ಮಾಡಿದ್ದೆ. ಬರಲಿಲ್ಲ ಎಂದರೆ ಏನು ಮಾಡಲೂ ಆಗುವುದಿಲ್ಲ,” ಎಂದು ಗುಡುಗಿದರು.

“ಮಹಾಲಕ್ಷ್ಮಿ ಲೇಔಟ್ ನಿಂದ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ ಒತ್ತಡ ಬರುತ್ತಿದೆ. ತುಂಬಾ ಜನರು ನನಗೆ ಒತ್ತಡ ಹಾಕಿದ್ದಾರೆ. ಹೀಗಾಗಿ ನಾನು ಚುನಾವಣೆಗೆ ನಿಲ್ಲುತ್ತೇನೆ. ನನ್ನನ್ನು ಗೆಲ್ಲಿಸಿ, ವಿಧಾನಸಭೆಯಲ್ಲಿ ಮಂತ್ರಿಗಳ ಚಡ್ಡಿಯಲ್ಲಿ ನೀರು ಇಳಿಸುತ್ತೇನೆ‌‌,” ಎಂದು ಎಚ್ಚರಿಸಿದರು.

ಇದನ್ನೂ ಓದಿ: ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಇಲ್ಲ; ಈಗವರು ಒಬ್ಬಂಟಿ: ವಾಟಾಳ್ ನಾಗರಾಜ್ ಅನುಕಂಪ

ಟಿಪ್ಪು ಪಠ್ಯವನ್ನು ಬಿಡುವುದಕ್ಕೆ ನಾವು ಬಿಡುವುದಿಲ್ಲ ಎಂದ ವಾಟಾಳ್​ ನಾಗರಾಜ್​, “ಟಿಪ್ಪು ಸುಲ್ತಾನ್ ಈ ದೇಶದ ವೀರ. ಇವರು ಟಿಪ್ಪುವಿನ ವಿಷಯವನ್ನು ಪಠ್ಯದಿಂದ ತೆಗೆದು ಹಾಕುತ್ತೇವೆ ಎನ್ನುತ್ತಿದ್ದಾರೆ. ಯುದ್ಧ ಆದರೂ, ಲಕ್ಷಾಂತರ ಜನರು ಜೈಲಿಗೆ ಹೋದರೂ ನಾವು ಇದಕ್ಕೆ ಆಸ್ಪದ ಮಾಡಿಕೊಡುವುದಿಲ್ಲ,” ಎಂದರು.

ಬಿಎಸ್​ವೈ ಬಗ್ಗೆ ವ್ಯಂಗ್ಯ:

ಕಾರ್ಯಕ್ರಮಕ್ಕೆ ಬಿಎಸ್​ವೈ ಆಗಮಿಸದ ಹಿನ್ನೆಲೆಯಲ್ಲಿ ವಾಟಾಳ್​ ವ್ಯಂಗ್ಯವಾಡಿದ್ದಾರೆ. “ಸಿಎಂ ಯಡಿಯೂರಪ್ಪಗೆ ಹೊಟ್ಟೆ ಹಸಿದಿದೆಯಂತೆ. 2 ಗಂಟೆಗೆ ಅವರು ಊಟ ಮಾಡಲೇ ಬೇಕಂತೆ. ಅವರು ಊಟ ಮಾಡದೆ ಇರೋದಕ್ಕೆ ಕಷ್ಟ ಆಗುತ್ತಂತೆ. ಅದಕ್ಕೆ ನಾನೇ ಮುಖ್ಯಮಂತ್ರಿ ಆಗಿ ಈ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದ್ದೇನೆ,” ಎಂದು ಕುಹಕವಾಡಿದರು.“ಮುಖ್ಯಮಂತ್ರಿಗಳಿಗೆ ಕೇಂದ್ರ ಸರ್ಕಾರ, ಅವರ ಪಕ್ಷದ ನಾಯಕರ ಕಾಟವಿದೆ. ಒಂದು ನೂರು ನಾಗರ ಹಾವುಗಳ ಮೇಲೆ ಅವರು ಮಲಗಿದ್ದಾರೆ. ಈ ರಸ್ತೆಯಲ್ಲಿ ಸಿಎಂ ಯಡಿಯೂರಪ್ಪ ಹೋಗಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಬಂದಿಲ್ಲ,” ಎಂದು ವಾಗ್ದಾಳಿ ನಡೆಸಿದ್ದರು.

ಮುಂದಿನ ಮುಖ್ಯಮಂತ್ರಿ ನಾನೇ

ಕರ್ನಾಟಕ ಒಡೆಯುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದ ವಾಟಾಳ್​​, “ಉಮೇಶ್​ ಕತ್ತಿಯವರೇ ಈ ರಾಜ್ಯದ ಮುಂದಿನ ಮುಖ್ಯಮಂತ್ರಿ ನಾನೇ. ಈ ರಾಜ್ಯಾದ್ಯಂತ ನಾನು ಹೋರಾಟ ಮಾಡುತ್ತೇನೆ. ನಾನು ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತೇನೆ,” ಎಂದರು.

(ವರದಿ: ಕೃಷ್ಣ ಜಿವಿ)

First published: November 1, 2019, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading