HOME » NEWS » State » VATAL NAGARAJ GETS THREAT CALLS FROM TAMIL GROUPS ZP

ನಾಮಫಲಕ ತೆರವು ಹಿನ್ನಲೆ, ತಮಿಳರಿಂದ ನೂರಾರು ಬೆದರಿಕೆ ಕರೆ ಬರುತ್ತಿದೆ: ವಾಟಾಳ್ ನಾಗರಾಜ್

ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂಬ ಹೋರಾಟದ ಮುಂದುವರಿದ ಭಾಗವಾಗಿ ಫೆಬ್ರುವರಿ 13 ರಂದು ಚಾಮರಾಜನಗರ ಜಿಲ್ಲೆಯ ಪುಣಜನೂರು ಬಳಿ ಕರ್ನಾಟಕ ತಮಿಳುನಾಡು ಗಡಿ ಬಂದ್ ಮಾಡಲಾಗುವುದು ಎಂದು ಅವರು ತಿಳಿಸಿದರು. 

news18-kannada
Updated:January 17, 2021, 6:16 PM IST
ನಾಮಫಲಕ ತೆರವು ಹಿನ್ನಲೆ, ತಮಿಳರಿಂದ ನೂರಾರು ಬೆದರಿಕೆ ಕರೆ ಬರುತ್ತಿದೆ: ವಾಟಾಳ್ ನಾಗರಾಜ್
Vatal Nagaraj
  • Share this:
ಚಾಮರಾಜನಗರ (ಜ.17):  ಜಿಲ್ಲೆಯ ಗಡಿಭಾಗದಲ್ಲಿ ಹಾಕಲಾಗಿದ್ದ  ತಮಿಳು ನಾಮಫಲಕಗಳನ್ನು ಕಿತ್ತು ಹಾಕಿದ್ದಕ್ಕೆ  ತಮಿಳರಿಂದ ತಮಗೆ ನೂರಾರು ಬೆದರಿಕೆ ಕರೆಗಳು ಬರುತ್ತಿವೆ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಆಗ್ರಹಿಸಿ ಚಾಮರಾಜನಗರದಲ್ಲಿ ನಡುರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ ಅವರು ಕಳೆದ ವಾರ ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ಜಾಗದಲ್ಲಿ ಹಾಕಿದ್ದ ತಮಿಳು ನಾಮಫಲಕಗಳನ್ನು ಕಿತ್ತು ಹಾಕಿದ ಮೇಲೆ ಕೆನಡಾ, ಅಮೇರಿಕಾ, ಮಲೇಷ್ಯಾ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳ ನೂರಾರು ತಮಿಳರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿದರು.

ಅತ್ಯಂತ ಕೆಟ್ಟ ರೀತಿಯ ಬೆದರಿಕೆ ಕರೆಗಳು ಬಂದಿವೆ. ಸದ್ಯ ಅದರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದ ಅವರು  ನನಗೆ ಬಂದಿರುವ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿ, ಗೃಹಸಚಿವರು, ಮುಖ್ಯಕಾರ್ಯದರ್ಶಿ ಅವರಿಗೆ ದೂರು ಸಲ್ಲಿಸುತ್ತೇನೆ. ಅಲ್ಲದೆ ಪೊಲೀಸರಿಗೂ ದೂರು ನೀಡುತ್ತೇನೆ ಎಂದರು .

ಕೇವಲ ತಮಿಳರಷ್ಟೇ ಅಲ್ಲ, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಹೋರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಮರಾಠಿಗರು ಸಹ ಬೆದರಿಗೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ ವಾಟಾಳ್ ನಾಗಾರಾಜ್, ನಾನು ಯಾವ ಬೆದರಿಕೆಗು ಮಣಿಯುವುದಿಲ್ಲ, ನನ್ನ ಪ್ರಾಣ ಹೋದರು ಚಿಂತೆ ಇಲ್ಲ, ನನ್ನ ಹೋರಾಟ ಮುಂದುವರಿಸುತ್ತೇನೆ ಎಂದರು. ಕನ್ನಡ ನಾಡುನುಡಿ ರಕ್ಷಣೆಗೆ ನನ್ನ ಪ್ರಾಣಾರ್ಪಣೆ ಮಾಡುತ್ತೇನೆಯೇ ಹೊರತು ಯಾರಿಗೂ ಹೆದರುವುದಿಲ್ಲ ಎಂದು ಅವರು ಹೇಳಿದರು.

ತಾಳವಾಡಿ ಅಚ್ಚ ಕನ್ನಡಿಗರೇ ಇರುವ ಪ್ರದೇಶ. ತಾಳವಾಡಿ ಸುತ್ತಮುತ್ತ ಇರುವ ಹಳ್ಳಿಗಳು ಸೇರಿದಂತೆ ತಾಳವಾಡಿ ಫಿರ್ಕಾ ಕರ್ನಾಟಕಕ್ಕೆ ಸೇರಬೇಕೆಂದು 1969 ರಲ್ಲೇ  ತಾಳವಾಡಿಗೆ, ಮುತ್ತಿಗೆ ಹಾಕಿ ಭಾರಿ ಪ್ರತಿಭಟನೆ ನಡೆಸಿದ್ದೆ. ಅಂದು ಚಾಮರಾಜನಗರ ಶಾಸಕರಾಗಿದ್ದ  ಪುಟ್ಟಸ್ವಾಮಿ ಅವರು ಸಹ ಈ ಚಳವಳಿಯಲ್ಲಿ ಭಾಗವಹಿಸಿದ್ದರು. ಆದರೆ ನನ್ನನ್ನು ಮಾತ್ರ ಬಂಧಿಸಿದ ತಮಿಳುನಾಡು ಪೊಲೀಸರು ಗೋಪಿಚೆಟ್ಟಿಪಾಳ್ಯದ ಜೈಲಿನಲ್ಲಿಟ್ಟಿದ್ದರು. ನಂತರದ ದಿನಗಳಲ್ಲಿ ಈ ವಿಷಯದ ಬಗ್ಗೆ ಕರ್ನಾಟಕ ಸರ್ಕಾರವಾಗಲಿ, ಅಧಿಕಾರಿಗಳಾಗಲೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ವಾಟಾಳ್ ನಾಗರಾಜ್  ಆರೋಪಿಸಿದರು.

ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂಬ ಹೋರಾಟದ ಮುಂದುವರಿದ ಭಾಗವಾಗಿ ಫೆಬ್ರುವರಿ 13 ರಂದು ಚಾಮರಾಜನಗರ ಜಿಲ್ಲೆಯ ಪುಣಜನೂರು ಬಳಿ ಕರ್ನಾಟಕ ತಮಿಳುನಾಡು ಗಡಿ ಬಂದ್ ಮಾಡಲಾಗುವುದು ಎಂದು ಅವರು ತಿಳಿಸಿದರು.  ನನ್ನನ್ನು ಬೆದರಿಸುವ ತಂತ್ರ ಮಾಡಿದರೆ ಇಡೀ ರಾಜ್ಯಾದ್ಯಂತ ಹೋರಾಟ ಮಾಡಲಾಗವುದು. ತಮಿಳು ಚಿತ್ರಗಳ ಪ್ರದರ್ಶನ ಬಂದ್ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದರು.
Youtube Video

ಕಳೆದ ವಾರ ಅಟ್ಟುಗೂಳಿಪುರ ಬಳಿ  ತಮಿಳು ನಾಮಫಲಕ ತೆರವುಗೊಳಿಸಿರುವುದು ಕರ್ನಾಟಕಕ್ಕೆ ಸೇರಿದ ಜಾಗ, ರಾಜ್ಯ ಪುನರ್ ವಿಂಗಡಣಾ ಸಮಿತಿ ಪ್ರಕಾರ ಎಲ್ಲೆಕಟ್ಟೆಯವರೆಗೂ ಕರ್ನಾಟಕಕ್ಕೆ ಸೇರಿದೆ ಎಂದ ಅವರು,  ಈ ಬಗ್ಗೆ ಜಂಟೀ ಸರ್ವೆ ನಡೆಸಿ ಗಡಿ ಗುರುತಿಸಬೇಕು ಎಂದು ಆಗ್ರಹಿಸಿದರು.  ಮತ್ತೊಂದೆಡೆ ತಾಳವಾಡಿ ಕರ್ನಾಟಕಕ್ಕೆ ಸೇರುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರುವರದಿ: ಎಸ್.ಎಂ.ನಂದೀಶ್-ಚಾಮರಾಜನಗರ
Published by: zahir
First published: January 17, 2021, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories