ಬೆಂಗಳೂರು(ನ. 20): ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ವಾಟಾಳ್ ನಾಗರಾಜ್ ಡಿಸೆಂಬರ್ 5ರಂದು ಬಂದ್ಗೆ ನೀಡಿರುವ ಕರೆಗೆ ಕನ್ನಡ ಪರ ಸಂಘಟನೆಗಳಿಂದಲೇ ಅಪಸ್ವರ ಏಳುತ್ತಿದೆ. ಕೊರೋನಾ ಬಳಿಕ ಜನರು ಸಂಕಷ್ಟದಲ್ಲಿದ್ದು, ಈ ಹೊತ್ತಿನಲ್ಲಿ ಏಕಾಏಕಿ ಬಂದ್ ಘೋಷಣೆ ಮಾಡಿದ್ದು ಸರಿಯಲ್ಲ. ಈಗ ಬಂದ್ ಮಾಡಿದರೆ ಜನರ ಕೋಪಕ್ಕೆ ಗುರಿಯಾಗಬೇಕಾಗಬಹುದು. ಸರ್ಕಾರದ ನಿರ್ಧಾರದ ವಿರುದ್ಧ ಹೋರಾಡಲು ಬಂದ್ ಒಂದೇ ದಾರಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ. ಆದರೂ ಕೂಡ ವಾಟಾಳ್ ನಾಗರಾಜ್ ಅವರು ಡಿಸೆಂಬರ್ 5ರಂದು ಕರ್ನಾಟಕ ಬಂದ್ ಆಚರಿಸುವ ನಿರ್ಧಾರಕ್ಕೆ ಬದ್ಧವಾಗಿದ್ದಾರೆ. ಹಾಗೆಯೇ, ನವೆಂಬರ್ 26ರಂದು ಅತ್ತಿಬೆಲೆಯಲ್ಲಿರುವ ಕರ್ನಾಟಕ-ತಮಿಳುನಾಡು ಗಡಿ ಬಂದ್ ಮಾಡಲು ಅವರು ಕರೆ ನೀಡಿದ್ದಾರೆ.
ಸತತ ಮೂರು ದಿನಗಳಿಂದ ವಾಟಾಳ್ ನಾಗರಾಜ್ ನಡೆಸುತ್ತಿರುವ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರ ಸಭೆಗೆ ಕರವೇಯ ಎರಡು ಬಣಗಳು ಗೈರಾಗಿವೆ. ಕರವೇಯ ಪ್ರವೀಣ್ ಶೆಟ್ಟಿ ಮತ್ತು ನಾರಾಯಣಗೌಡ ಬಣಗಳ ಮುಖಂಡರೂ ಇವತ್ತಿನ ಸಭೆಯಲ್ಲಿ ಭಾಗವಹಿಸಲಿಲ್ಲ. ಇಂದು ಬೆಳಗ್ಗೆ 11:30ಕ್ಕೆ ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ನಡೆದ ಈ ಸಭೆಯಲ್ಲಿ ಸಾ.ರಾ. ಗೋವಿಂದ್, ಕೆ.ಆರ್. ಕುಮಾರ್, ಗಿರೀಶ್ ಗೌಡ, ಶಿವರಾಮೇಗೌಡ, ಮುಖ್ಯಮಂತ್ರಿ ಚಂದ್ರು ಅವರು ಭಾಗಹಿಸಿದ್ದರು.
ಇದನ್ನೂ ಓದಿ: ಪೋಷಕರ ನಿರ್ಲಕ್ಷ್ಯಕ್ಕೆ ಮಂಡ್ಯದಲ್ಲಿ ಮತ್ತೊಂದು ಹಸುಳೆ ಬಲಿ; ಬೈಕ್ನಿಂದ ಬಿದ್ದು 1 ವರ್ಷದ ಮಗು ಸಾವು
ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮರಾಠಾ ನಿಗಮ ಸ್ಥಾಪನೆಗೆ ಸರ್ಕಾರದ ನಿರ್ಧಾರವನ್ನು ಬಲವಾಗಿ ಖಂಡಿಸಿದರು. ಈ ಸರ್ಕಾರದ್ದು ವಿನಾಶಕಾಲದ ವಿಪರೀತ ಬುದ್ಧಿಯಾಗಿದೆ. ಕನ್ನಡವನ್ನು ಮರೆತು ಬೇರೆ ಭಾಷೆಗೆ ಪ್ರಾಮುಖ್ಯತೆ ಕೊಡುತ್ತಿದೆ. ಎಲ್ಲರೊಂದಿಗೆ ಚರ್ಚೆ ಮಾಡಿ ನಿಗಮ ಅಥವಾ ಪ್ರಾಧಿಕಾರ ರಚನೆಯ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಕನ್ನಡ ಅಭಿವೃದ್ಧಿಗೆ ಎರಡು ಕೋಟಿ ಕೂಡ ಸರಿಯಾಗಿ ಕೊಡದ ಈ ಸರ್ಕಾರದಿಂದ ರಾಜ್ಯಕ್ಕೆ ಏನೂ ಉಪಯೋಗ ಇಲ್ಲ ಎಂದು ಚಂದ್ರು ಬೇಸರ ವ್ಯಕ್ತಪಡಿಸಿದರು.
ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಮಾಡುವ ಸರ್ಕಾರದ ನಿರ್ಧಾರಕ್ಕೆ ಬಹುತೇಕ ಎಲ್ಲಾ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆಯಾದರೂ ಡಿ. 5ರಂದು ಬಂದ್ ಆಚರಿಸುವ ಬಗ್ಗೆ ಮಾತ್ರ ಕೆಲ ಭಿನ್ನಾಭಿಪ್ರಾಯಗಳು ಬಂದಿವೆ. ಬಂದ್ ಮಾಡುವುದಕ್ಕಿಂತ ಬೇರೆ ರೀತಿಯಲ್ಲಿ ಪ್ರತಿಭಟನೆಗಳ ಮೂಲಕ ಹೋರಾಟ ಮಾಡುವುದು ವಿವಿಧ ಸಂಘಟನೆಗಳ ಇಂಗಿತವಾಗಿದೆ. ನವೆಂಬರ್ 27ರಂದು ಕರವೇಯ ನಾರಾಯಣಗೌಡ ಮತ್ತು ಪ್ರವೀಣ್ ಶೆಟ್ಟಿ ಬಣಗಳು ಪ್ರತ್ಯೇಕ ಸಭೆ ಕರೆದಿದ್ದು, ಡಿ. 5ರ ಬಂದ್ ಬಗ್ಗೆ ತಮ್ಮ ಅಂತಿಮ ನಿಲುವನ್ನ ತಳೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ: ನಾಡು-ನುಡಿ ರಕ್ಷಣಗೆಗಾಗಿ 500 ಕಿಲೋ ಮೀಟರ್ ಪಾದಯಾತ್ರೆ ನಡೆಸುತ್ತಿದ್ದಾನೆ ಈ ಕನ್ನಡದ ಕುವರ
ಒಂದೊಂದು ಭಾಷಿಕ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಮಾಡುತ್ತಾ ಹೋದರೆ ತಮಿಳು, ತೆಲುಗು, ಹಿಂದಿ, ಗುಜರಾತಿ ಇತ್ಯಾದಿ ಭಾಷಿಕರೂ ಕೂಡ ನಿಗಮಕ್ಕೆ ಒತ್ತಾಯ ಮಾಡುತ್ತಾರೆ. ಇದಕ್ಕೆ ಯಾವ ಅರ್ಥವಿಲ್ಲ. ರಾಜ್ಯ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂಬುದು ಕನ್ನಡಪರ ಸಂಘಟನೆಗಳ ಪ್ರಮುಖ ಅಕ್ಷೇಪವಾಗಿದೆ.
ವರದಿ: ಸೌಮ್ಯಾ ಕಳಸ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ