ಸಡಗರ, ಸಂಭ್ರಮದ ವರಮಹಾಲಕ್ಷ್ಮಿ ಹಬ್ಬದ ಮಹತ್ವವೇನು? ವ್ರತದ ಆಚರಣೆ ಹೇಗೆ?


Updated:August 24, 2018, 11:18 AM IST
ಸಡಗರ, ಸಂಭ್ರಮದ ವರಮಹಾಲಕ್ಷ್ಮಿ ಹಬ್ಬದ ಮಹತ್ವವೇನು? ವ್ರತದ ಆಚರಣೆ ಹೇಗೆ?

Updated: August 24, 2018, 11:18 AM IST
ನ್ಯೂಸ್​ 18 ಕನ್ನಡ

ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ ಅದರಲ್ಲೂ ಹೆಣ್ಮಕ್ಕಳಿಗೆ ಅತ್ಯಂತ ಪ್ರಿಯವಾದ ತಿಂಗಳು. ಪ್ರತಿಯೊಂದು ಹಬ್ಬದಲ್ಲೂ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿಪಡುತ್ತಾರೆ. ಆದರೆ ಈ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬ ಮಾತ್ರ ಎಲ್ಲರಿಗೂ ಅತ್ಯಂತ ಪ್ರಿಯವಾದುದು.

ಭಾರತದ ದಕ್ಷಿಣ ಭಾಗದಲ್ಲಿ ಬಹಳಷ್ಟು ಅದ್ಧೂರಿಯಾಗಿ ಆಚರಿಸುವ ವರಮಹಾಲಕ್ಷ್ಮಿ ಪೂಜೆಯನ್ನು ಉತ್ತರದ ಭಾಗದಲ್ಲಿ ಮಹಾಲಕ್ಷ್ಮಿ ವ್ರತವಿಡುವ ಮೂಲಕ ಆಚರಿಸಲಾಗುತ್ತದೆ. ಆದರೆ ಇವೆರಡೂ ಭಾಗಗಳಲ್ಲಿ ಒಂದೇ ದೇವತೆ ಲಕ್ಷ್ಮಿಯನ್ನು ಕುಟುಂಬದ ಪ್ರಗತಿ ಹಾಗೂ ಸಮೃದ್ಧಿಗಾಗಿ ವಿನಯದಿಂದ ಪೂಜಿಸುತ್ತಾರೆ. ವಿವಾಹಿತ ಮುತ್ತೈದೆಯರು ವರ ಮಹಾಲಕ್ಷ್ಮಿ ಪೂಜೆ ಮಾಡುತ್ತಾರೆ. ಇನ್ನು ವರ ಎಂದರೆ ದೇವರ ಆಶೀರ್ವಾದ ಎಂದರ್ಥ. ಹೀಗೆ ವರವನ್ನು ನೀಡುವ ದೇವತೆಯ ಹಬ್ಬವನ್ನು ವರಮಹಾಲಕ್ಷ್ಮಿ ಹಬ್ಬ ಎಂದು ಆಚರಿಸಲಾಗುತ್ತದೆ.

ವರಮಹಾಲಕ್ಷ್ಮಿ ಹಬ್ಬದಂದು ವ್ರತ ಕೈಗೊಳ್ಳುವುದು ಅಷ್ಟ ಲಕ್ಷ್ಮಿಯರ ವ್ರತಕ್ಕೆ ಸಮ ಎಂಬ ನಂಬಿಕೆ ಈ ಮೊದಲಿನಿಂದಲೂ ಬಂದಿದೆ. ಸಂಪತ್ತು, ಭೂಮಿ, ವಿದ್ಯಾಭ್ಯಾಸ, ಪ್ರೀತಿ, ಖ್ಯಾತಿ, ಶಾಂತಿ, ಸಂತೋಷ ಹಾಗೂ ಶಕ್ತಿ ನೀಡುವ ದೇವತೆಗಳನ್ನು ಪೂಜಿಸುವುದರಿಂದ ಸಿಗುವ ಅನುಗ್ರಹ, ವರಮಹಾಲಕ್ಷ್ಮಿ ದೇವತೆಯನ್ನು ಪೂಜಿಸುವುದರಿಂದ ಸಿಗುತ್ತದೆ ಎನ್ನಲಾಗುತ್ತದೆ. ಶ್ರಾವಣ ಮಾಸದ ಎರಡನೇ ಶುಕ್ರವಾರ ಅಥವಾ ಹುಣ್ಣಿಮೆಯ ಹಿಂದಿನ ಶುಕ್ರವಾರ ಈ ವ್ರತವನ್ನು ಕೈಗೊಳ್ಳುವುದು ಹಿಂದಿನಿಂದಲೂ ಬಂದ ಪರಂಪರೆಯಾಗಿದೆ.

ವಿವಾಹಿತ ಮಹಿಳೆಯರು ಹೆಚ್ಚು ಶ್ರದ್ಧೆ ಭಕ್ತಿಯಿಂದ ಈ ವ್ರತವನ್ನು ಕೈಗೊಳ್ಳುತ್ತಾರೆ. ಪ್ರಾತಃ ಕಾಲದಲ್ಲೇ ಸ್ನಾನವನ್ನು ಮುಗಿಸಿ ದಿನದ ಅರ್ಧ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ. ಕುಟುಂಬ ಶಾಂತಿ ಸಮಾಧಾನ, ಏಳಿಗೆಗೆ ಮತ್ತು ಯೋಗ ಕ್ಷೇಮಕ್ಕೆ ಈ ವ್ರತವನ್ನು ಕೈಗೊಳ್ಳುತ್ತಾರೆ. ವರಮಹಾಲಕ್ಷ್ಮಿ ಪೂಜೆಯು ಆಗಸ್ಟ್ ತಿಂಗಳಿನ ಯಾವುದಾದರೊಂದು ಶುಕ್ರವಾರ ಬರುತ್ತದೆ ಮತ್ತು ಪೂಜೆಯ ತಯಾರಿ ಹಿಂದಿನ ದಿನ ಅಂದರೆ ಗುರುವಾರವೇ ಆರಂಭಿಸುತ್ತಾರೆ.

ವ್ರತಾಚರಣೆ:

ರಾಕ್ಷಸರು ಹಾಗೂ ದೇವತೆಯರು ಅಮೃತ ಪಡೆಯಲು ವಾಸುಕಿಯ ಸಹಾಯದೊಂದಿಗೆ ನಡೆಸಿದ ಸಮುದ್ರ ಮಂಥನದಲ್ಲಿ ಪರಿಶುದ್ಧವಾದ ಲಕ್ಷ್ಮಿ ಶ್ವೇತ ವರ್ಣದಲ್ಲಿ ಉದ್ಭವಿಸುತ್ತಾಳೆ. ಹೀಗಾಗಿ ವರಮಹಾಲಕ್ಷ್ಮಿ ದಿನದಂದು ಲಕ್ಷ್ಮಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆ ಉಡಿಸುವ ಪದ್ಧತಿಯೂ ಇದೆ. ಇನ್ನು ಲಕ್ಷ್ಮಿ ಮಾತೆ ಶುದ್ಧತೆಯ ಸಂಕೇತವಾಗಿರುವುದರಿಂದ ಅಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ ಬಿಡಿಸಿ, ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸುತ್ತಾರೆ. ಬಳಿಕ ಅಭ್ಯಂಜನ ಮಾಡಿ ಶುಭ್ರ ಬಟ್ಟೆ ಧರಿಸಿ ಮಡಿಯಲ್ಲಿ ನೈವೇದ್ಯ ತಯಾರಿಸುತ್ತಾರೆ. ಒಂದು ಶುದ್ಧವಾದ ಸ್ಥಳದಲ್ಲಿ ಮಂಟಪವನ್ನು ಕಟ್ಟಿ ಅದರ ನಡುವೆ 5 ಬಣ್ಣಗಳಳಿಂದ ಕೂಡಿದ ಎಂಟು ದಳದ ಪದ್ಮವನ್ನು ಬರೆದು ಕಲಶವನ್ನು ಶುದ್ಧಗೊಳಿಸಬೇಕು. ಕಲಶದೊಳಗೆ ನೀರನ್ನು ತುಂಬಿಸಿ, ಅದರೊಳಗೆ ಒಂದು ನಾಣ್ಯ ಹಾಗೂ ಪಂಚಾಮೃತ ಹಾಕಿ ಹೂವುಗಳಿಂದ ಅಲಂಕರಿಸಬೇಕು. ಇದನ್ನು ಗಂಗಾ ಕಲಶ ಎಂದು ಕರೆಯುತ್ತಾರೆ. ಬಳಿಕ ಕಲಶದ ಮೇಲೆ ವೀಳ್ಯದೆಲೆ ಇಟ್ಟು ಅದಕ್ಕೆ ಅರಶಿಣ ಕೊಂಬಿನ ಕಂಕಣ ಹಾಗೂ ಚಿನ್ನದ ಮಾಂಗಲ್ಯ ಕಟ್ಟಿ ಗೆಜ್ಜೆವಸ್ತ್ರದೊಂದಿಗೆ ಅಲಂಕರಿಸಿ ಕಲಶ ಪ್ರತಿಷ್ಟಾಪಿಸಬೇಕು. 12 ಎಳೆಗಳ ಅರಶಿನ ದದಾಳ, 12 ಎಳೆಗಳ ಗೆಜ್ಜೆವಸ್ತ್ರ ಮತ್ತು ವಿವಿಧ ಹೂವು, ಪತ್ರೆ ಹಾಗೂ ಅಕ್ಷತೆಗಳಿಂದ ಲಕ್ಷಮಿಯನ್ನು ಪೂಜಿಸಬೇಕು. ಅಂಗಪೂಜೆ, ಗ್ರಂಥಿ ಪೂಜೆ ಕುಸುಮ ಪೂಜೆ, ಪತ್ರ ಪೂಜೆ, ಅಷ್ಟೋತ್ತರ ಶತನಾಮ ಪೂಜೆ ಹಾಗೂ ಪಂಚಾಮೃತಾಭಿಚಷೇಕ ಮಾಡುವುದರಿಂದ ಲಕ್ಷ್ಮೀ ಸಂತುಷ್ಳಾಗಿ ಬೇಡಿದ ವರ ನೀಡುತ್ತಾಳೆ.
Loading...

ಪಾಕ ವೈವಿಧ್ಯ:

ಈ ಹಬ್ಬದಂದು ದೇವಿಗೆ ಗೋಧಿ ಹಿಟ್ಟಿನ ಹೂರಣದ ಹೋಳಿಗೆ ಸಮರ್ಪಿಸಲಾಗುತ್ತದೆ. ಅಡುಗೆಯಲ್ಲಿ ಗೋಧಿ ಪಾಯಸ, ಕೋಸಂಬರಿ, ಚಿತ್ರಾನ್ನ, ಮೊಸರನ್ನ, ಮಜ್ಜಿಗೆಹುಳಿ ಹಾಗೂ ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ನೈವೇದ್ಯ ಮಾಡಬೇಕು. ಅಲ್ಲದೇ ಏಳು ಮಂದಿಗೆ 12 ಭಕ್ಷ್ಯಗಳನ್ನು ದಕ್ಷಿಣೆ- ತಾಂಬೂಲಗಳೊಡನೆ ಬಾಗಿನವಾಗಿ ನೀಡಿ ಅವರ ಆಶೀರ್ವಾದ ಪಡೆಯಬೇಕು.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ