‘ನಮ್ಮ ಮೆಟ್ರೋ’ ( Metro) ಅಂತ ಹೆಸರು ಕೇಳಿದರೆ ಸಾಕು ಜನರು ನಮ್ಮ ಬೆಂಗಳೂರು ನಗರದ ಮೆಟ್ರೋ ಅಂತ ತಕ್ಷಣವೇ ಹೇಳಿ ಬಿಡುತ್ತಾರೆ. ಮೊದಲೆಲ್ಲಾ ಬೆಂಗಳೂರಿನಲ್ಲಿ ಈ ವಾಹನ ದಟ್ಟಣೆಯಿಂದ ಅನೇಕ ಕಡೆಗಳಲ್ಲಿ ಟ್ರಾಫಿಕ್ ಜಾಮ್ (Traffic Jam) ಸಮಸ್ಯೆ ಆಗುತ್ತಿದ್ದು, ಜನರಿಗೆ ಒಂದು ದೊಡ್ಡ ತಲೆ ನೋವಾಗಿತ್ತು. ಆದರೆ ಪ್ರಸ್ತುತ, ಬೆಂಗಳೂರು ನಗರದಲ್ಲಿ ‘ನಮ್ಮ ಮೆಟ್ರೋ’ ಅನೇಕ ಜನರಿಗೆ (People) ಒಂದು ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ ಅಂತಾನೆ ಹೇಳಬಹುದು. ಈ ಟ್ರಾಫಿಕ್ ಸಮಸ್ಯೆಯಿಂದ ಎಷ್ಟೋ ಜನರಿಗೆ ಮುಕ್ತಿ ನೀಡಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. 2012 ರಲ್ಲಿ ಈ ‘ನಮ್ಮ ಮೆಟ್ರೋ’ ಪ್ರಾರಂಭವಾದಾಗ, ಇದು ದಕ್ಷಿಣ ಭಾರತದ ಮೊದಲ ಭೂಗತ ಮೆಟ್ರೋ ವ್ಯವಸ್ಥೆಯಾಯಿತು.
ಬೆಂಗಳೂರಿನ ನಿವಾಸಿಗಳಿಗೆ ಇಲ್ಲಿದೆ ಒಂದು ಒಳ್ಳೆಯ ಸುದ್ದಿ
ಈಗ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ವಂದೇ ಮೆಟ್ರೋ ರೈಲನ್ನು ಸಹ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ. ಇದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಿನಿ ಆವೃತ್ತಿಯಾಗಿದೆ. ಮತ್ತು ವಂದೇ ಮೆಟ್ರೋವನ್ನು ಪರಿಚಯಿಸುವ ದೇಶದ ಮೊದಲ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗುವ ಸಾಧ್ಯತೆಯಿದೆ.
ಆದರೆ ನಿಮಗೆ ಈ ವಂದೇ ಮೆಟ್ರೋ ಎಂದರೆ ಏನು ಅಂತ ಸ್ವಲ್ಪ ಗೊಂದಲವಾಗುವುದಂತೂ ಖಂಡಿತ ಅಂತ ಹೇಳಬಹುದು. ಅನೇಕರಲ್ಲಿ ವಂದೇ ಮೆಟ್ರೋ ಈಗಿರುವ ‘ನಮ್ಮ ಮೆಟ್ರೋ’ ಗಿಂತ ಹೇಗೆ ಭಿನ್ನವಾಗಿದೆ ಎಂಬ ಪ್ರಶ್ನೆ ಉದ್ಭವಿಸುವುದಂತೂ ಗ್ಯಾರಂಟಿ ಅಂತ ಹೇಳಬಹುದು.
ವಂದೇ ಮೆಟ್ರೋ ಈಗಿರುವ ‘ನಮ್ಮ ಮೆಟ್ರೋ’ ಗಿಂತ ಹೇಗೆ ಭಿನ್ನವಾಗಿದೆ?
ಈಗ ಬೆಂಗಳೂರು ನಗರದಲ್ಲಿರುವ ‘ನಮ್ಮ ಮೆಟ್ರೋ’ ಪ್ರಾಥಮಿಕವಾಗಿ ನಗರದೊಳಗಿನ ವಿವಿಧ ಸ್ಥಳಗಳನ್ನು ಸಂಪರ್ಕಿಸುವ ಅಂತರ-ನಗರ ಜಾಲವಾಗಿದೆ. ಆದರೆ ವಂದೇ ಮೆಟ್ರೋ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎರಡು ವಿಭಿನ್ನ ನಗರಗಳನ್ನು ಸಂಪರ್ಕಿಸುತ್ತದೆ ಅಂತ ಹೇಳಬಹುದು. ಅಥವಾ ಸರಳವಾಗಿ ಹೇಳುವುದಾದರೆ, ಇದು ಪ್ರಾದೇಶಿಕ ರೈಲು ಅಂತ ಹೇಳಬಹುದು.
ಇದನ್ನೂ ಓದಿ; Puttur: ಕಾರ್ ಬಂಪರ್ನಲ್ಲಿ 70 ಕಿಲೋ ಮೀಟರ್ ಸಂಚರಿಸಿದ ನಾಯಿಯ ಮಡಿಲು ಸೇರಿದ ಮರಿಗಳು!
ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರ ಪ್ರಕಾರ, ವಂದೇ ಮೆಟ್ರೋ ಬೆಂಗಳೂರು ಮತ್ತು ತುಮಕೂರು ಅಥವಾ ಬೆಂಗಳೂರು ಮತ್ತು ಹಿಂದೂಪುರ ನಡುವೆ ಚಲಿಸುವ ನಿರೀಕ್ಷೆಯಿದೆ. ಆದಾಗ್ಯೂ, ಅಂತಹ ಯಾವುದೇ ಅಧಿಕೃತ ಪ್ರಕಟಣೆ ಇನ್ನೂ ಹೊರ ಬಂದಿಲ್ಲ.
ಇದು 100 ಕಿಲೋ ಮೀಟರ್ ಗಿಂತ ಕಡಿಮೆ ಅಂತರದಲ್ಲಿ ಎರಡು ನಗರಗಳ ನಡುವೆ ಮೆಟ್ರೋ ಸೇವೆಯಂತೆ ಚಲಿಸುತ್ತದೆ. ವಿವರಗಳನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ರೈಲುಗಳು ಎಂಟು ಬೋಗಿಗಳನ್ನು ಹೊಂದುವ ಸಾಧ್ಯತೆಯಿದೆ.
ವಂದೇ ಮೆಟ್ರೋ ಎರಡು ನಗರಗಳ ನಡುವೆ ಓಡಾಡುವ ಜನಕ್ಕೆ ಅನುಕೂಲವಾಗಲಿದೆಯಂತೆ
ವಂದೇ ಮೆಟ್ರೋ ಪ್ರಯಾಣಿಕರಿಗೆ ತ್ವರಿತ ವಿಶ್ವದರ್ಜೆಯ ಶಟಲ್ ತರಹದ ಅನುಭವವಾಗಲಿದೆ. ರೈಲಿನ ವಿನ್ಯಾಸವು ಈ ವರ್ಷ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜನರು ತಮ್ಮ ಊರುಗಳಿಂದ ದೊಡ್ಡ ನಗರಗಳಲ್ಲಿನ ಕಚೇರಿಗಳಿಗೆ ಪ್ರತಿದಿನ ಆರಾಮವಾಗಿ ಪ್ರಯಾಣಿಸಲು ಸಹಾಯ ಮಾಡಲು ಈ ರೈಲನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಇದಕ್ಕೂ ಮುನ್ನ ರೈಲ್ವೆ ಸಚಿವರು, "ವಂದೇ ಮೆಟ್ರೋ ಪ್ರಾದೇಶಿಕ ರೈಲಿನ ಪರಿಕಲ್ಪನೆಯಾಗಿದೆ. ಉದಾಹರಣೆಗೆ, ಯುರೋಪ್ ನಲ್ಲಿ 100 ಕಿಲೋ ಮೀಟರ್ ಗಿಂತ ಕಡಿಮೆ ಅಂತರದಲ್ಲಿ ಇರುವ ಎರಡು ನಗರಗಳ ನಡುವೆ ಆಗಾಗ್ಗೆ ಚಲಿಸುವ ರೈಲುಗಳ ಬಗ್ಗೆ ನೀವು ಕೇಳಿರುತ್ತೀರಿ. ಇದು ಸಹ ಅದೇ ರೀತಿಯ ಪ್ರಾದೇಶಿಕ ರೈಲಿನ ಪರಿಕಲ್ಪನೆಯಾಗಿದೆ” ಎಂದು ಹೇಳಿದರು.
ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಲಕ್ನೋ ಮೂಲದ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ ಆರ್ಗನೈಸೇಷನ್ (ಆರ್‌ಡಿಎಸ್ಒ) ಜನರಲ್ ಮ್ಯಾನೇಜರ್ ಗಳಿಗೆ (ಜಿಎಂ) ಎಂಟು ಕೋಚ್ ಗಳ ವಂದೇ ಭಾರತ್ ರೈಲುಗಳ ರೇಕ್ ಗಳನ್ನು ಶೀಘ್ರವಾಗಿ ಹೊರತರುವಂತೆ ಅವರು ನಿರ್ದೇಶನ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ