ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಭಾರತೀಯ ಸಾಮಗಾನ ಸಭಾವು ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ವಂದೇ ಭಾರತ ಮಾತರಂ ಎನ್ನುವ ಬಹು ಅಂಶ ಒಳಗೊಂಡ ವಿಡಿಯೋ ಬಿಡುಗಡೆ ಮಾಡುತ್ತಿದೆ.
ಸಂಗೀತ ಪ್ರಧಾನವಾದ ಈ ವಿಡಿಯೋ ವಿಶೇಷತೆ ಅಂದರೆ, ಮಹರ್ಶಿ ವೇದವ್ಯಾಸರಿಂದ ರಚಿತವಾದ ವಿಷ್ಣು ಪುರಾಣದ ಶ್ಲೋಕವನ್ನು ಅಳವಡಿಸಿಕೊಳ್ಳಲಾಗಿದೆ. ಸಾವಿರಾರು ವರ್ಷಗಳ ಹಿಂದೆ ರಚನೆ ಮಾಡಲಾದ ವಿಷ್ಣು ಪುರಾಣದಲ್ಲಿ ಭಾರತ ಮಾತೆಯನ್ನು ವರ್ಣಿಸುವ ಅರ್ಥಪೂರ್ಣ ಶ್ಲೋಕ ಇರುವುದು ವಿಶೇಷ ಮತ್ತು ಎಷ್ಟೋ ಜನರಿಗೆ ಇಂದಿಗೂ ತಿಳಿದಿಲ್ಲ. ಭಾರತೀಯ ಸಾಮಗಾನ ಸಭಾ ಈ ವಿಶೇಷ ಶ್ಲೋಕವನ್ನು ಹುಡುಕಿ ವಿಡಿಯೋ ಮೂಲಕ ಹೊರತರುವ ಕಾರ್ಯ ಮಾಡುತ್ತಿದೆ.
ಈ ಗೀತಚಿತ್ರಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ರಾಗ ಸಂಯೋಜನೆ ಮಾಡಲಾಗಿದೆ. ಪ್ರಸಿದ್ಧ ಪಿಟೀಲು ವಾದಕರಾದ ಪದ್ಮಶ್ರೀ ವಿದುಷಿ ಎ. ಕನ್ಯಾಕುಮಾರಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ಲೋಕದ ಅರ್ಥವನ್ನು ಸಾಂಕೇತಿಕವಾಗಿ ವಿವರಿಸುವ ದೃಶ್ಯ ಸಂಯೋಜನೆ ಮಾಡಲಾಗಿದೆ. ಜತೆಗೆ ಭಾರತೀಯ ಸಂಸ್ಕೃತಿಯ ಕೆಲವು ವಿಶಿಷ್ಟ ಛಾಪುಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಶ್ಲೋಕದ ಅರ್ಥ ಸರಳವಾಗಿ ಅರ್ಥವಾಗುವಂತೆ ತರ್ಜುಮೆ ಮಾಡಲಾಗಿದ್ದು, ಸಬ್ ಟೈಟಲ್ ನೀಡಲಾಗಿದೆ.
ಈ ವಂದೇ ಭಾರತ ಮಾತರಂ ಹಾಡು ದೇಶದ ನಾಗರಿಕರಲ್ಲಿ ರಾಷ್ಟ್ರೀಯತೆಯ ಭಾವವನ್ನು ಹೊರಹೊಮ್ಮಿಸಲು ಸಹಾಯ ಮಾಡಲಿದೆ ಎಂಬುದು ಸಭಾದ ಅಭಿಪ್ರಾಯ. ಜೊತೆ ಇದು ರಾಷ್ಟ್ರವೈಭವ ಮತ್ತು ಶ್ರೀಮಂತ ಪರಂಪರೆಯನ್ನು ನೆನಪಿಸುತ್ತದೆ ಎನ್ನುತ್ತಾರೆ ಸಭಾ ಸದಸ್ಯರು. ಸಾಂಕ್ರಾಮಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ವಂದೇ ಭಾರತಮಾತಂ ಹಾಡು ನಮ್ಮ ಶಾಸ್ತ್ರೀಯ ಸಂಗೀತಗಾರರನ್ನು ಉತ್ತೇಜಿಸುತ್ತದೆ ಮತ್ತು ಬೆಂಬಲಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ