HOME » NEWS » State » VACCINE WILL BE DISTRIBUTED AT 243 CENTRES ACROSS THE STATE RHHSN

ಇಂದು ರಾಜ್ಯಾದ್ಯಂತ ಕೊರೋನಾ ಲಸಿಕೆ ವಿತರಣೆ; 237 ಕಡೆ ಕೋವಿಶೀಲ್ಡ್, 6 ಕಡೆ ಕೋವ್ಯಾಕ್ಸಿನ್

ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೊದಲ ಡೋಸ್ ಪಡೆದ 28 ದಿನಗಳ ನಂತರ 2ನೇ ಡೋಸ್ ನೀಡಲಾಗುತ್ತದೆ. ಜನರು ಯಾವುದೇ ಆತಂಕವಿಲ್ಲದೆ ವಿಶ್ವಾಸದಿಂದ ಲಸಿಕೆ ಪಡೆಯಿರಿ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

news18-kannada
Updated:January 16, 2021, 7:07 AM IST
ಇಂದು ರಾಜ್ಯಾದ್ಯಂತ ಕೊರೋನಾ ಲಸಿಕೆ ವಿತರಣೆ; 237 ಕಡೆ ಕೋವಿಶೀಲ್ಡ್, 6 ಕಡೆ ಕೋವ್ಯಾಕ್ಸಿನ್
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು; ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ ಕೊರೋನಾ ವೈರಸ್​ಗೆ ಕೊನೆಗೆ ಲಸಿಕೆ ಕಂಡುಹಿಡಿಯಲಾಗಿದೆ. ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮಗಳು ಆರಂಭವಾಗಿವೆ. ಭಾರತದಲ್ಲೂ ಇಂದಿನಿಂದ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಲಿದೆ. ಅದರಂತೆ ಇಂದು ರಾಜ್ಯದಲ್ಲೂ ಸಹ ವ್ಯಾಕ್ಸಿನ್ ಹಾಕುವ ಅಭಿಯಾನ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಮೊದಲಿಗೆ ಕೊರೋನಾ ವಾರಿಯರ್ಸ್​ಗಳಿಗೆ ಲಸಿಕೆ ಹಾಕಲಾಗುತ್ತದೆ. ಬಳಿಕ ಹಂತಹಂತವಾಗಿ ರಾಜ್ಯದ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ.

ರಾಜ್ಯದ 243 ಕಡೆ ಕೊರೋನಾ ಲಸಿಕೆ ವಿತರಣೆ ಮಾಡಲಾಗುವುದು. ಅದರಲ್ಲಿ 237 ಕಡೆ ಕೋವಿಶೀಲ್ಡ್ ಹಾಗೂ 6 ಕಡೆ ಕೋವ್ಯಾಕ್ಸಿನ್ ನೀಡಲಾಗುವುದು. ಬೆಂಗಳೂರಿನಲ್ಲಿ ಲಸಿಕೆ ವಿತರಣೆಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ.  ರಾಜ್ಯದ 243 ಕಡೆಗಳಲ್ಲಿ ಶನಿವಾರ ಕೊರೊನಾ ಲಸಿಕೆ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 10 ಕಡೆಗಳಲ್ಲಿ ಲಸಿಕೆ ನೀಡಲಾಗುವುದು.

ಈ ಸಂಬಂಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ.  ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ಒಂದರಲ್ಲೇ 10 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು. ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ನೀಡಲಾಗುವುದು. ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯದ 237 ಕೇಂದ್ರ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಲಸಿಕೆ ನೀಡಲು ಮೊದಲಿಗೆ ಜನಪ್ರತಿನಿಧಿಗಳನ್ನೇ ಆರಿಸಬಹುದಿತ್ತು. ಆದರೆ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವವರಿಗೆ ಮೊದಲ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುತ್ತಿದೆ. ಬಳಿಕ ಇತರೆ ರೋಗಗಳಿಂದ ಬಳಲುವವರಿಗೆ ಲಸಿಕೆ ನೀಡಲಾಗುವುದು. 7,17,439 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಮೊದಲ ದಿನ 24,300 ಮಂದಿಗೆ ನೀಡುವ ಗುರಿ ಇದೆ. ನಮ್ಮಲ್ಲಿ ಒಟ್ಟು 8,14,500 ಡೋಸ್ ಲಸಿಕೆ ಲಭ್ಯವಿದ್ದು, ಒಂದು ವಾರದೊಳಗೆ ಮೊದಲ ಹಂತದ ವಿತರಣೆ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ ಎಂದರು.

ಇದನ್ನು ಓದಿ: ರಾಜ್ಯದಲ್ಲಿ ಶುರುವಾದ ಮೀಸಲಾತಿ ದಂಗಲ್; ಪಂಚಮಸಾಲಿ, ಕುರುಬ ಸಮಾಜದ ಪಾದಯಾತ್ರೆಯಿಂದ ಇಕ್ಕಟ್ಟಿಗೆ ಸಿಲುಕುತ್ತಾರಾ ಸಿಎಂ ಬಿಎಸ್​ವೈ?

ಸರ್ಕಾರಿ ಮಾಹಿತಿ ಮಾತ್ರ ನಂಬಿ

ಲಸಿಕೆಯಿಂದ ಅಡ್ಡಪರಿಣಾಮ ಉಂಟಾದರೆ, ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಿ ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಸರ್ಕಾರದ ಸಾಮಾಜಿಕ ಜಾಲತಾಣಗಳಿಂದ ಬಿಡುಗಡೆ ಮಾಡುವ ಮಾಹಿತಿ ಮಾತ್ರ ಅಧಿಕೃತ ಹಾಗೂ ಸತ್ಯ ಎಂದು ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೊದಲ ಡೋಸ್ ಪಡೆದ 28 ದಿನಗಳ ನಂತರ 2ನೇ ಡೋಸ್ ನೀಡಲಾಗುತ್ತದೆ. ಜನರು ಯಾವುದೇ ಆತಂಕವಿಲ್ಲದೆ ವಿಶ್ವಾಸದಿಂದ ಲಸಿಕೆ ಪಡೆಯಿರಿ. ರಾಜ್ಯದಲ್ಲಿ 10 ವಾಕ್-ಇನ್ ಕೂಲರ್, 4 ವಾಕ್-ಇನ್ ಫ್ರೀಜರ್, 3,210 ಐಎಲ್ ಆರ್, 3,312 ಕೋಲ್ಡ್ ಬಾಕ್ಸ್, 46,591 ಲಸಿಕೆ ಕ್ಯಾರಿಯರ್, 2,25,749 ಐಸ್ ಪ್ಯಾಕ್ ಇದೆ ಎಂದು ಸಚಿವರು ಮಾಹಿತಿ ನೀಡಿದರು.
Published by: HR Ramesh
First published: January 16, 2021, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories