ಬೆಂಗಳೂರು (ಜನವರಿ 15): ಕೊನೆಗೂ ನಾಳೆ ಬಹು ನಿರೀಕ್ಷಿತ ಲಸಿಕೆ ಹಂಚಿಕೆ ಮಹಾ ಅಭಿಯಾನ ಶುರುವಾಗಲಿದೆ. ಪ್ರಧಾನಿ ಮೋದಿ ಈ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದಾರೆ. ಹಾಗಾದ್ರೆ ಬೆಂಗಳೂರು ವ್ಯಾಪ್ತಿಯಲ್ಲಿ ನಾಳೆ ಎಲ್ಲೆಲ್ಲಾ ಕೊರೋನಾ ಲಿಸಿಕೆ ಹಂಚಿಕೆಯಾಗಲಿದೆ..? ಏನೆಲ್ಲಾ ಸಿದ್ಧತಗೆಳು ಮಾಡಿಕೊಳ್ಳಲಾಗಿದೆ. ಇಲ್ಲಿದೆ ಮಾಹಿತಿ. ಕೊರೋನಾ ಮಹಾಮಾರಿ ಕಳೆದ ಒಂದು ವರ್ಷದಿಂದ ಇಡೀ ಮನುಕುಲವನ್ನೇ ಬೆಚ್ಚಿ ಬೀಳಿಸಿದೆ. ಈ ಮಹಾ ರೋಗಕ್ಕೆ ಮದ್ದಿಲ್ಲದೆ ಭಾರತ ಸೇರಿದಂತೆ ಇಡೀ ಜಗತ್ತು ತಲ್ಲಣಗೊಂಡಿತ್ತು. ಆದರೀಗ ಭಾರತ ವ್ಯಾಕ್ಸಿನ್ ಕಂಡು ಹಿಡಿದು ಹಂಚಿಕೆ ಮಾಡೋದಕ್ಕೆ ಮುಂದಾಗಿದೆ. ನಾಳೆ ಅಧಿಕೃತವಾಗಿ ಪ್ರಧಾನಿ ಮೋದಿಯವರು ವ್ಯಾಕ್ಸಿನ್ ಉದ್ಘಾಟನೆ ಮಾಡಿ, ಲಸಿಕೆ ಜನರ ಕೈಗಿಡಲಿದ್ದಾರೆ.
ಬೆಂಗಳೂರಿನ 8 ಕಡೆ ಲಸಿಕೆ ಹಂಚಿಕೆ.!
• ವಿಕ್ಟೋರಿಯಾ ಆಸ್ಪತ್ರೆ
• ಕೆ.ಸಿ.ಜನರಲ್ ಆಸ್ಪತ್ರೆ
• ಸಿ.ವಿ.ರಾಮನ್ ನಗರ ಜಿ.ಹೆಚ್
• ಜಯನಗರ ಜಿ.ಹೆಚ್
• ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು
• ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ
• ಈಸ್ಟ್ ಪಾಯಿಂಟ್ ಕಾಲೇಜು
• ಯಲಹಂಕ ಆರೋಗ್ಯ ಕೇಂದ್ರ
ನಾಳೆ ಪ್ರತಿ ಕೇಂದ್ರಗಳಲ್ಲೂ ತಲಾ 100 ಮಂದಿ ಕೊರೋನಾ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಮೊದಲ ದಿನವೇ 800 ಮಂದಿಗೆ ವ್ಯಾಕ್ಸಿನ್ ಹಂಚಿಕೆಯಾಗಲಿದೆ. ಈಗಾಗಲೇ ಎರಡು ಬಾರಿ ಡ್ರೈ ರನ್ ಯಶಸ್ವಿಯಾಗಿದ್ದು ಅದರಂತೆಯೇ ನಾಳೆಯ ದಿನ ಲಸಿಕೆ ಹಂಚಿಕೆಯಾಗಲಿದೆ. ಒಟ್ಟು ಮೂರು ಹಂತವಾಗಿ ಫಲಾನುಭವಿಗಳು ಲಸಿಕೆ ಹಾಕಿಸಿಕೊಳ್ಳಬೇಕು.
1. ಕಾಯುವ ಕೊಠಡಿ : ಲಸಿಕೆ ಹಾಕುವುದಕ್ಕೂ ಮುನ್ನ ಫಲಾನುಭವಿಗಳು ಇಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯಬೇಕು.
2. ಲಸಿಕೆ ಕೊಠಡಿ : ಇಲ್ಲಿ ಫಲಾನುಭವಿಗಳಿಗೆ ವೈದ್ಯರು ಅಥವಾ ವೈದ್ಯಾಧಿಕಾರಿ ಲಸಿಕೆ ಹಾಕುತ್ತಾರೆ.
3. ಮೇಲ್ವಿಚಾರಣಾ ಕೊಠಡಿ : ಲಸಿಕೆ ಪಡೆದ ಬಳಿಕ ವ್ಯಕ್ತಿಯನ್ನು 30 ನಿಮಿಷಗಳ ಕಾಲ ಮೇಲ್ವಿಚಾರಣೆ ಕೊಠಡಿಯಲ್ಲಿ ಇರಿಸಿಕೊಂಡು, ಆತನ ಮೇಲೆ ಲಸಿಕೆಯ ಪ್ರತಿಕ್ರಿಯೆಯನ್ನು ನಿಗಾ ಇಡಲಾಗುತ್ತದೆ.
ಇದನ್ನೂ ಓದಿ: CD Politics: ಆಕ್ಷೇಪಾರ್ಹ ಸಿಡಿ ಇದ್ದರೆ ಮೊದಲ ಬಹಿರಂಗಪಡಿಸಿ ಆನಂತರ ಮಾತನಾಡಿ; ಯತ್ನಾಳ್ಗೆ ಸಚಿವೆ ಹೆಬ್ಬಾಳ್ಕರ್ ಸವಾಲು
ಇನ್ನು ನಾಳೆ ಕೋವೀಶೀಲ್ಡ್ ಲಸಿಕೆ ಹಂಚಿಕೆಯಾಗಲಿದೆ. 1,05,000 ಕೋವಿಶೀಲ್ಡ್ ಲಸಿಕೆ ಬಿಬಿಎಂಪಿಗೆ ಸಿಕ್ಕಿದೆ. ಜೊತೆಗೆ 20 ಸಾವಿರ ಕೋವ್ಯಾಕ್ಸಿನ್ ಎನ್ನುವ ಲಸಿಕೆ ಇದೆ. ಆದರೆ ನಾಳೆ ಕೋವಿಶೀಲ್ಡ್ ಹಂಚಿಕೆಯಾಗಲಿದ್ದು, ಸಕಲ ಸಿದ್ಧತೆಗಳನ್ನೂ ಪಾಲಿಕೆ ಮಾಡಿಕೊಂಡಿದೆ. 5ml ಪ್ರಮಾಣದ ಡೋಸ್ ಲಸಿಕೆ ಹಂಚಿಕೆಯಾಗಲಿದೆ. ಮೊದಲ ಹಾಗೂ ಎರಡನೇ ಡೋಸ್ ನಡುವೆ ಸುಮಾರುಬ 28 ದಿನಗಳ ಅಂತರ ಇರಲಿದೆ. ಎಲ್ಲಾ ಫಲಾನುಭವಿಗಳ ಮಾಹಿತಿಗಳನ್ನು ಪಡೆದು, ಲಸಿಕೆ ಪಡೆದುಕೊಂಡ ಬಳಿಕವೂ ಅವರ ಮೇಲೆ ನಿಗಾ ಇರಲಿದೆ. ಇದಕ್ಕೂ ವಿಶೇಷ ತಂಡ ಇರಲಿದ್ದು, ಮೊದಲ ಹಂತದ ಲಸಿಕೆ ಮಹಾ ಅಭಿಯಾನ ನಾಳೆ 9ಗಂಟೆಗೆ ಶುರುವಾಗಲಿದೆ.
ಇದರ ಹೊರತಾಗಿ ಸೋಮವಾರದಿಂದ ಲಸಿಕೆ ಹಂಚಿಕೆ ಕೇಂದ್ರಗಳ ಸಂಖ್ಯೆಯೂ ಹೆಚ್ಚಾಗಲಿದೆ. ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ 760 ಕೇಂದ್ರಗಳನ್ನು ಗೊತ್ತು ಮಾಡಲಾಗಿದೆ. ಅಗತ್ಯ ಬಿದ್ದಲ್ಲಿ ಕೆಲ ಕಾಲೇಜುಗಳನ್ನು ಲಸಿಕೆ ಹಂಚಿಕೆ ಕೇಂದ್ರಗಳನ್ನಾಗಿ ಮಾಡುವ ಚಿಂತನೆಯೂ ಅಧಿಕಾರಿಗಳು ನಡೆಸಿದ್ದಾರೆ. ಇನ್ನು ಪ್ರತಿ ಕೇಂದ್ರಗಳಲ್ಲೂ ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಇರಲಿದೆ. ಹೀಗೆ ಎಲ್ಲಾ ಸಿದ್ಧತೆಗಳೊಂದಿಗೆ ನಾಳೆ ಮೊದಲ ಹಂತದ ವ್ಯಾಕ್ಸಿನೇಷನ್ ಮಹಾ ಅಭಿಯಾನ ಶುರುವಾಗ್ತಿದೆ. ಪ್ರಧಾನಿ ಮೋದಿ ಈ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ.
(ವರದಿ- ಆಶಿಕ್ ಮುಲ್ಕಿ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ