ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election Result) ಭಾರೀ ಕುತೂಹಲ ಮೂಡಿಸಿರುವ ಕ್ಷೇತ್ರಗಳ ಪೈಕಿ ವರುಣಾ ವಿಧಾನಸಭಾ ಕ್ಷೇತ್ರ ಮತ್ತು ಮತ್ತೊಂದು ಚಾಮರಾಜನಗರ ಕ್ಷೇತ್ರ ಮುಂಚೂಣಿಯಲ್ಲಿದೆ. ವರುಣಾ (Varuna) ಕ್ಷೇತ್ರ ಸಿದ್ದರಾಮಯ್ಯ (Siddaramaiah) ಕಾರಣಕ್ಕೆ ಹೈವೋಲ್ಟೇಜ್ ಆಗಿದ್ರೆ ಅವರ ವಿರುದ್ಧ ವಿ ಸೋಮಣ್ಣ (V Somanna) ಸ್ಪರ್ಧಿಸುತ್ತಿರೋದಕ್ಕೆ ಕೂಡ ಸುದ್ದಿಯಾಗ್ತಿದೆ. ಇತ್ತ ಚಾಮರಾಜನಗರ ಕ್ಷೇತ್ರವೂ ವಿ ಸೋಮಣ್ಣ ಸ್ಪರ್ಧೆ ಮಾಡ್ತಿರೋದಕ್ಕೆ ಕುತೂಹಲ ಮೂಡಿಸಿದೆ.
ಆದರೆ ಸದ್ಯದ ಟ್ರೆಂಡ್ ಪ್ರಕಾರ ಸಚಿವರಾಗಿದ್ದ ವಿ ಸೋಮಣ್ಣ ಅವರಿಗೆ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಉಂಟಾಗಿದೆ. ಹೈಕಮಾಂಡ್ ನಿರ್ದೇಶನದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸುವ ನಿಟ್ಟಿನಲ್ಲಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿತ್ತು. ಇದರ ಜೊತೆಗೆ ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರ ಭದ್ರಕೋಟೆ ಆಗಿರೋದ್ರಿಂದ ವರುಣಾದಲ್ಲಿ ಸೋಮಣ್ಣ ಸೋಲುವ ಭೀತಿಯಿಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದಲೂ ಅವರಿಗೆ ಟಿಕೆಟ್ ನೀಡಲಾಗಿತ್ತು.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಇವಿಎಂ ಮತಗಳ ಎಣಿಕೆ, ಹಲವೆಡೆ ಕಾಂಗ್ರೆಸ್ ಮುನ್ನಡೆ
ಕಂಗಾಲಾದ ಸೋಮಣ್ಣ!
ಇದೀಗ ಈಗ ಬಂದಿರುವ ಮಾಹಿತಿ ಪ್ರಕಾರ ವಿ ಸೋಮಣ್ಣ ಅವರಿಗೆ ಚಾಮರಾಜನಗರ ಮತ್ತು ವರುಣಾ ವಿಧಾನಸಭಾ ಕ್ಷೇತ್ರ ಎರಡರಲ್ಲೂ ಹಿನ್ನಡೆ ಉಂಟಾಗಿದೆ. ಚಾಮರಾಜನಗರದಲ್ಲಿ ಸೋಮಣ್ಣ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗ ಶೆಟ್ಟಿ ಮುನ್ನಡೆ ಕಾಯ್ದಕೊಂಡಿದ್ದು, ವರುಣಾದಲ್ಲಂತೂ ಸಿದ್ದರಾಮಯ್ಯ ಭಾರೀ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಸದ್ಯ ಎರಡೂ ಕ್ಷೇತ್ರಗಳಲ್ಲೂ ಹಿನ್ನಡೆ ಉಂಟಾಗಿರೋದ್ರಿಂದ ವಿ ಸೋಮಣ್ಣ ಕಂಗಾಲಾಗಿದ್ದಾರೆ. ಅಲ್ಲದೇ ವರುಣಾದಿಂದ ಮಾಧ್ಯಮಗಳಿಗೆ ಪ್ರತಿಕ್ರಿಯೆಯೂ ನೀಡದೆ ನೇರವಾಗಿ ಕಾರ್‌ನಲ್ಲಿ ಕುಳಿತು ಹೊರಟಿದ್ದಾರೆ.
ಎಷ್ಟು ಅಭ್ಯರ್ಥಿಗಳು ಕಣದಲ್ಲಿ?
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2615 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಆ ಪೈಕಿ 2430 ಮಂದಿ ಪುರುಷ ಅಭ್ಯರ್ಥಿಗಳಾದ್ರೆ, 184 ಮಂದಿ ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಜೊತೆಗೆ ಓರ್ವ ಲೈಂಗಿಕ ಅಲ್ಪಸಂಖ್ಯಾತ (ಟ್ರಾನ್ಸ್‌ಜೆಂಡರ್) ಸಮುದಾಯದ ಅಭ್ಯರ್ಥಿ ಇದ್ದಾರೆ. ಅಭ್ಯರ್ಥಿಗಳ ಪೈಕಿ ಬಿಜೆಪಿಯಿಂದ 224, ಕಾಂಗ್ರೆಸ್ನಿಂದ 223, ಜೆಡಿಎಸ್ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇನ್ನು 918 ಮಂದಿ ಪಕ್ಷೇತರ ಅಭ್ಯರ್ಥಿಗಳಾದ್ರೆ, ಎಎಪಿ 209, ಸಿಪಿಐಎಂ 4, ಬಿಎಸ್ಪಿ 133 ಹಾಗೂ ಎನ್ಸಿಪಿ ಇಬ್ಬರು ಅಭ್ಯರ್ಥಿಗಳನ್ನು ಕದನಕ್ಕೆ ಇಳಿಸಿದೆ.
ಇದನ್ನೂ ಓದಿ: Karnataka Election Result 2023: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರು ಹಿನ್ನಡೆ? ಯಾರು ಮುನ್ನಡೆ? ಇಲ್ಲಿದೆ ಡೀಟೇಲ್ಸ್
ಖಾಕಿ ಸರ್ಪಗಾವಲು
ಇನ್ನು ರಾಜ್ಯಾದ್ಯಂತ ನಡೆಯುತ್ತಿರುವ ಚುನಾವಣಾ ಫಲಿತಾಂಶ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಪ್ರತಿಯೊಂದು ಮತ ಎಣಿಕೆ ಕೇಂದ್ರಗಳಲ್ಲೂ ಅಸಂಖ್ಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಿನ್ನೆ ರಾತ್ರಿ 10ರಿಂದ ಇಂದು ರಾತ್ರಿ 12ರ ತನಕ ಮದ್ಯ ಮಾರಾಟವನ್ನು ನಿಷೇಧಿಲಾಗಿದ್ದು, ಮುಖ್ಯವಾಗಿ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಹಾಕಲಾಗಿದ್ದು, ಮತ ಎಣಿಕೆ ಕೇಂದ್ರದ ಬಳಿ 5ಕ್ಕಿಂತ ಹೆಚ್ಚು ಜನ ಸೇರೋದು, ವಿಜಯೋತ್ಸವ, ಮೆರವಣಿಗೆ ಇನ್ನಿತರ ಸಮಾರಂಭಗಳನ್ನು ನಿಷೇಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ