Lockdown ಭಯಕ್ಕೆ ಊರು ಬಿಡುತ್ತಿರುವ ಕಾರ್ಮಿಕರು; ಸಂಕಷ್ಟದಲ್ಲಿ ಮೀನುಗಾರರು

ಮತ್ತೆ ಕೊರೊನಾ ಹೆಚ್ಚಳವಾಗುತ್ತಿರುವ ಆತಂಕದಿಂದಾಗಿ ಮತ್ತೆ ಊರುಗಳಿಗೆ ವಾಪಸ್ಸಾಗುತ್ತಿದ್ದಾರೆ. ಪರಿಣಾಮ ಇಲ್ಲಿನ ಮೀನುಗಾರರಿಗೆ ಮೀನುಗಾರಿಕೆ ನಡೆಸುವುದು ಸಾಧ್ಯವಿಲ್ಲದಂತೆ ಆಗಿದೆ

ಬಂದರಿನಲ್ಲೇ ನಿಂತ ಬೋಟ್​​ಗಳು

ಬಂದರಿನಲ್ಲೇ ನಿಂತ ಬೋಟ್​​ಗಳು

  • Share this:
ಕಾರವಾರ (ಜ. 11): ರಾಜ್ಯದ ಕರಾವಳಿಯ ಮೀನುಗಾರರಿಗೆ ಮೀನುಗಾರಿಕೆ (Fishery)  ನಡೆಸಲು ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಕೊರೋನಾ ಅಬ್ಬರದ ಬಳಿ ಸಂಕಷ್ಟದಲ್ಲಿದ್ದ ಮೀನುಗಾರಿಕೆ ಸ್ವಲ್ಪ ಚೇತರಿಕೆ ಕಂಡಿದ್ದು, ಉತ್ತಮ ಮೀನುಗಾರಿಕೆ ನಡೆಯುತ್ತಿತ್ತು. ಆದರೆ ಇದೀಗ ಎಲ್ಲೆಡೆ ಮತ್ತೆ ಕೊರೊನಾ (Covid) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಲಾಕ್‌ಡೌನ್ (Lockdown) ಭೀತಿಯಿಂದಾಗಿ ಬೋಟುಗಳ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದಾರೆ. ಇದರಿಂದ ಮೀನುಗಾರಿಕೆ ನಡೆಸಲು ಕಾರ್ಮಿಕರೇ ಇಲ್ಲದಂತಾಗಿದೆ.

ಬಂದರಿನಲ್ಲೇ ಉಳಿದ ಬೋಟುಗಳು

ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಮೀನುಗಾರಿಕಾ ಬಂದರಿನಲ್ಲಿ ಆಳಸಮುದ್ರಕ್ಕೆ ತೆರಳಿ ಮೀನುಗಳನ್ನ ತುಂಬಿಕೊಂಡು ಆಗಮಿಸಬೇಕಾಗಿದ್ದ ಬೋಟುಗಳು ಕಳೆದ ಒಂದು ವಾರದಿಂದ ಕಾರ್ಮಿಕರ ಕೊರತೆಯಿಂದಾಗಿ ಬಂದರಿನಲ್ಲೇ ಉಳಿಯುವಂತಾಗಿದ್ದು ನೂರಾರು ಬೋಟುಗಳು ಮೀನುಗಾರಿಕೆಗೆ ತೆರಳಲಾಗದೇ ಲಂಗರು ಹಾಕಿ ನಿಂತುಕೊಂಡಿವೆ.

ವಲಸಿಗ ಕಾರ್ಮಿಕರಲ್ಲಿ ಹೆಚ್ಚಿದ ಆತಂಕ

ಕರಾವಳಿಯಲ್ಲಿ ಬಹುತೇಕ ಕುಟುಂಬಗಳು ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೋಟುಗಳನ್ನ ತಂದು ಮೀನುಗಾರಿಕೆಯನ್ನ ನಡೆಸುತ್ತಾರೆ. ಅದರಲ್ಲೂ ಇಲ್ಲಿನ ಮೀನುಗಾರಿಕಾ ಬೋಟುಗಳಲ್ಲಿ ಕಾರ್ಯನಿರ್ವಹಿಸಲು ಜಾರ್ಖಂಡ್, ಒರಿಸ್ಸಾ, ಬಿಹಾರ ಸೇರಿದಂತೆ ಹೊರರಾಜ್ಯಗಳ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಮೀನುಗಾರಿಕೆಯ ಅವಧಿಯಲ್ಲಿ ಇಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಆದ್ರೆ ಕಳೆದ ಬಾರಿಯ ಕೊರೋನಾ ಅಬ್ಬರ ಜಿಲ್ಲೆಯ ಮೀನುಗಾರಿಕೆ ಮೇಲೆ ಸಾಕಷ್ಟು ಹೊಡೆತ ನೀಡಿದ್ದು ಹೊರ ರಾಜ್ಯಗಳ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ಸಾಗಿದ್ದರು.

ಅದಾದ ಬಳಿಕ ಬಹುತೇಕ ಕಾರ್ಮಿಕರು ಕೆಲಸಕ್ಕೆ ವಾಪಸ್ಸಾಗಿಲ್ಲವಾಗಿದ್ದು ಬಂದಿದ್ದ ಕೆಲ ಕಾರ್ಮಿಕರು ಸಹ ಇದೀಗ ಮತ್ತೆ ಕೊರೊನಾ ಹೆಚ್ಚಳವಾಗುತ್ತಿರುವ ಆತಂಕದಿಂದಾಗಿ ಮತ್ತೆ ಊರುಗಳಿಗೆ ವಾಪಸ್ಸಾಗುತ್ತಿದ್ದಾರೆ. ಪರಿಣಾಮ ಇಲ್ಲಿನ ಮೀನುಗಾರರಿಗೆ ಮೀನುಗಾರಿಕೆ ನಡೆಸುವುದು ಸಾಧ್ಯವಿಲ್ಲದಂತಾಗಿದ್ದು ಕಾಮಿಕರಿಲ್ಲದೇ ಬಂದರುಗಳಲ್ಲಿಯೇ ಬೋಟುಗಳು ಲಂಗರು ಹಾಕಿ ನಿಂತಿವೆ.

ಇದನ್ನು ಓದಿ: ರಾಜ್ಯದಲ್ಲಿ Weekend Curfew, Night Curfew ವಿಸ್ತರಣೆ.. ಎಲ್ಲಿಯವರೆಗೆ..?

ಸಂಕಷ್ಟದಲ್ಲಿ ಮಾಲೀಕರು

ಇನ್ನು ಕಾರವಾರದ ಬೈತಖೋಲ ಬಂದರಿನಲ್ಲಿ ಪರ್ಸಿನ್ ಹಾಗೂ ಟ್ರಾಲರ್ ಬೋಟು ಸೇರಿದಂತೆ ಸುಮಾರು 200ಕ್ಕೂ ಅಧಿಕ ಮೀನುಗಾರಿಕಾ ಬೋಟುಗಳಿವೆ. ಟ್ರಾಲರ್ ಬೋಟುಗಳಲ್ಲಿ 20 ರಿಂದ 30 ಮಂದಿ ಕಾರ್ಮಿಕರಿದ್ದರೆ, ಪರ್ಸಿನ್ ಬೋಟುಗಳಿಗೆ 40ಕ್ಕೂ ಅಧಿಕ ಕಾರ್ಮಿಕರ ಅಗತ್ಯತೆ ಇರುತ್ತದೆ. ಅಲ್ಲದೇ ಬಲೆಗಳನ್ನ ಎಳೆಯುವುದು ಸಾಕಷ್ಟು ಶ್ರಮದಾಯಕ ಕೆಲಸವಾಗಿರುವುದರಿಂದ ಹೊರರಾಜ್ಯದ ಕಾರ್ಮಿಕರನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ.

ಇದನ್ನು ಓದಿ: ಅನಾಥಶ್ರಮದಿಂದ ಬೀದಿಗೆ ಬಿದ್ದ ವೃದ್ಧರ ಬದುಕು

ಪರದಾಡುತ್ತಿರುವ ಮೀನುಗಾರರು

ಆದ್ರೆ ಕಳೆದ ಬಾರಿ ಕೊರೊನಾ ಉಂಟಾದಾಗಿನಿಂದ ಹೊರರಾಜ್ಯದ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದ್ದು ಸ್ಥಳೀಯವಾಗಿ ಸಹ ಕಾರ್ಮಿಕರೇ ಸಿಗುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋಟು, ಬಲೆಗಳ ರಿಪೇರಿ ಮಾಡಿಕೊಂಡಿದ್ದರೂ ಸಹ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೇ ಮೀನುಗಾರರು ಪರದಾಡುವಂತಾಗಿದೆ. ಇನ್ನೊಂದೆಡೆ ಮೀನುಗಾರಿಕೆಗಾಗಿ ಸಾಕಷ್ಟು ಮಂದಿ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದು ಇದೀಗ ಮೀನುಗಾರಿಕೆಯನ್ನೇ ನಡೆಸಲಾಗದೇ ಮನೆ, ಚಿನ್ನಾಭರಣಗಳನ್ನ ಅಡವಿಟ್ಟು ಬ್ಯಾಂಕಿಗೆ ಬಡ್ಡಿ ತುಂಬುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂತಾರೇ ಮೀನುಗಾರರು.

ಒಟ್ಟಾರೇ ಉತ್ತಮ ಮೀನುಗಾರಿಕೆ ನಡೆಯುವ ಅವಧಿಯಲ್ಲೇ ಕೊರೊನಾ ಆತಂಕದಿಂದ ಕಾರ್ಮಿಕರು ಸಿಗದೇ ಮೀನುಗಾರರು ಪರದಾಡುವಂತಾಗಿದೆ. ಈಗಾಗಲೇ ಮೀನುಗಾರಿಕೆಗಾಗಿ ಸಾಕಷ್ಟು ಮಂದಿ ಸಾಲ ಮಾಡಿಕೊಂಡಿದ್ದು ಸರ್ಕಾರವಾದರೂ ನೆರವಿಗೆ ಬರಲಿ ಎನ್ನುವ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.
Published by:Seema R
First published: