news18-kannada Updated:August 28, 2020, 3:52 PM IST
ಉತ್ತರ ಕನ್ನಡದ ಶಿರಸಿಯಲ್ಲಿ ಬಂಧನಕ್ಕೊಳಗಾದ ಆರೋಪಿಗಳು
ಕಾರವಾರ (ಆ. 28): ಜನರು ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ. ನಕಲಿ ಕರೆನ್ಸಿ, ನಕಲಿ ವಸ್ತುಗಳು, ನಕಲಿ ಸರ್ಟಿಫಿಕೇಟ್ ಮಾಡಿ ಸಂಬಂಧಪಟ್ಟ ಇಲಾಖೆಯನ್ನು ಯಾಮಾರಿಸಲು ಹಲವು ಕರಾಳ ದಂಧೆಯ ಜಾಲ ರಾಜ್ಯದ ಹಲವೆಡೆ ಕಾರ್ಯಾಚರಿಸುತ್ತಿವೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ನಕಲಿ ಪಾಸ್ ಪೋರ್ಟ್ ಗ್ಯಾಂಗ್ವೊಂದನ್ನು ಬಲೆಗೆ ಕೆಡವಿದ್ದಾರೆ. ಇದರ ಕಿಂಗ್ ಫಿನ್ ಮಹಿಳೆಯಾಗಿದ್ದು, ರಾಜ್ಯದ ಇತರೆಡೆಯೂ ಕೂಡ ಈ ಗ್ಯಾಂಗ್ ಕಣ್ಣಿಗೆ ಮಣ್ಣೆರೆಚಿದ ಸಾಧ್ಯತೆ ಇದೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ನಕಲಿ ಪಾಸ್ ಪೋರ್ಟ್ ದಂಧೆಕೋರರನ್ನು ಬಂಧಿಸಿದ್ದಾರೆ. ಶಿರಸಿಯ ಹುಲೇಕಲ್ ಗ್ರಾಮದ ಅಬ್ದುಲ್ ರೆಹಮಾನ್ನ ತಂದೆ ಅಬ್ದುಲ್ ಗಫರ್, ಈತನ ಗೆಳೆಯ ನಿಯಾಜ್ ಅಹಮದ್ ಮತ್ತು ಹುಬ್ಬಳ್ಳಿಯ ಶ್ವೇತಾ ಅಲಿಯಾಸ್ ಲಕ್ಷ್ಮೀ ಬಂಧಿತರಾಗಿದ್ದಾರೆ. 22 ವರ್ಷ ಅಬ್ದುಲ್ ರಹಮನ್ ಗಲ್ಪ್ ದೇಶಕ್ಕೆ ಹೋಗುವ ಸಲುವಾಗಿ ಪಾಸ್ಪೋರ್ಟ್ಗೆ ಇಸಿಎನ್ ಆರ್ ಕೆಟಗೆರಿಯಲ್ಲಿ ಅರ್ಜಿ ಸಲ್ಲಿಸಿದ್ದ. ಕೇವಲ ಮೂರನೇ ತರಗತಿ ಓದಿದ್ದ ಈತನಿಗೆ ಇಸಿಎನ್ ಆರ್ ಕೆಟಗೆರಿಯಲ್ಲಿ ಕ್ಲಿಯರೆನ್ಸ್ ಸಿಗೋದು ದೂರದ ಮಾತಾಗಿತ್ತು.ಆದರೆ ಹೇಗಾದ್ರೂ ಮಾಡಿ ತಾನು ಇಸಿಎನ್ಆರ್ ಪಡೆಯೋ ಸಲುವಾಗಿ ಅರ್ಜಿ ಸಲ್ಲಿಸಿ ಆಗಿತ್ತು. ಪಾಸ್ ಪೋರ್ಟ್ ಅಥಾರಿಟಿಯಿಂದ ಶಿರಸಿ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದರಿಂದ ಪೊಲೀಸರು ತನಿಖೆ ಶುರು ಮಾಡಿದ್ದರು. ಆಗ ಅಬ್ದುಲ್ ಗಫಾರ್ ನಕಲಿ ಸರ್ಟಿಫಿಕೇಟ್ ಕೊಟ್ಟಿರೋದು ಬೆಳಕಿಗೆ ಬಂದಿದೆ.
ಶಿರಸಿ ಡಿವೈಎಸ್ಪಿ ಜಿ.ಟಿ ನಾಯಕ ನೇತೃತ್ವದ ತಂಡ ಎಳೆಎಳೆಯಾಗಿ ತನಿಖೆ ನಡೆಸುತ್ತಾ ಹೋಗಿದ್ದರಿಂದ ಈ ಕರಾಳ ದಂದೆಯ ಹಿಂದೆ ದೊಡ್ಡ ಗ್ಯಾಂಗ್ ಇರೋದು ಗೊತ್ತಾಗಿದೆ. ಇನ್ನು ಈ ತನಿಖೆ ಇಷ್ಟಕ್ಕೆ ಮುಗಿಲಿಲ್ಲ ಇದರ ಹಿಂದೆ ದೊಡ್ಡ ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎಂಬ ಬಗ್ಗೆ ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ, ಈಗಾಗಲೆ ಈ ದಂಧೆಯ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಶಿರಸಿ ಪೋಲಿಸರು ಇವರ ಕಬಂಧ ಬಾಹು ಎಲ್ಲಿಯವರೆಗೆ ವ್ಯಾಪಿಸಿದೆ ಎಂಬ ಬಗ್ಗೆ ಮಾಹಿತಿ ಕೆದಕಿ ತೆಗೆಯುತ್ತಿದ್ದಾರೆ. ಪೊಲೀಸ್ ಮಾಹಿತಿ ಪ್ರಕಾರ ರಾಜ್ಯ ಹೊರ ರಾಜ್ಯದಲ್ಲೂ ಈ ಗ್ಯಾಂಗ್ ಸೈಲೆಂಟ್ ಆಗಿ ಕಾರ್ಯ ನಿರ್ವಹಿಸಿ ಅಮಾಯಕರ ಕಣ್ಣಿಗೆ ಮಣ್ಣೆರಚಿದೆ.
ಇದನ್ನೂ ಓದಿ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ; ಕೆ.ಜೆ. ಜಾರ್ಜ್ಗೆ ಮತ್ತೆ ಸಮನ್ಸ್ ಜಾರಿ
ಸಾಮಾನ್ಯವಾಗಿ ಪಾಸ್ಪೋರ್ಟ್ ಇಸಿಎನ್ಆರ್ ಪಡೆಯಬೇಕೆಂದರೆ ಗ್ರಾಜ್ಯುವೇಟ್ ಆಗಿರಬೇಕು. ಕನಿಷ್ಠ ಅಂದರೂ ಎಸ್ಎಸ್ಎಲ್ಸಿ ಪಾಸ್ ಆಗಿರಲೇಬೇಕು. ಅಂದರೆ ಮಾತ್ರ ಗಲ್ಪ್ ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಆದರೆ ಕೆಲವರು ನಕಲಿ ಸರ್ಟಿಫಿಕೇಟ್ ಮಾಡಿಸಿಕೊಂಡು ಪಾಸ್ಪೋರ್ಟ್ ಮಾಡಿಕೊಳ್ಳುತ್ತಿರೋದು ಬಹಿರಂಗವಾಗಿದೆ. ಅಬ್ದುಲ್ ಗಫಾರ್ ಕೂಡ ನಕಲಿ ದಾಖಲೆ ನೀಡಿ ಪಾಸ್ ಪೋರ್ಟ್ ಪಡೆಯಲು ಯತ್ನಿಸಿದ್ದ. ಹುಬ್ಬಳ್ಳಿಯ ಶ್ವೇತಾ ಅಲಿಯಾಸ ಲಕ್ಷ್ಮೀ ಎಂಬಾಕೆಗೆ 25 ಸಾವಿರಕ್ಕೂ ಹೆಚ್ಚು ಹಣ ನೀಡಿದ್ದಾನೆ. ಆದರೆ ಈ ವ್ಯವಹಾರದ ಹಿಂದೆ ರಾಜ್ಯದ ಹಲವು ಪಾಸ್ಪೋರ್ಟ್ ಇಲಾಖೆಯ ಅಧಿಕಾರಿಗಳು ಇರುವ ಸಾಧ್ಯತೆ ಇದೆ. ಇಲ್ಲಿ ದುಡ್ಡಿನ ವ್ಯವಹಾರ ಹೇಗೆ ಆಗುತ್ತಿದೆ ಎಂಬುದರ ತನಿಖೆಯನ್ನ ಪೊಲೀಸರು ನಡೆಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಪಾಸ್ಪೋರ್ಟ್ ದಂದೆಯಲ್ಲಿ ತೊಡಗಿರುವ ಶ್ವೇತಾ ತನ್ನ ಗ್ಯಾಂಗಿನಿಂದ ಇದುವರೆಗೆ ಎಷ್ಟು ಜನರಿಗೆ ಪಾಸ್ ಪೋರ್ಟ್ ಮಾಡಿಸಿಕೊಟ್ಟಿದ್ದಾಳೆಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹುಬ್ಬಳ್ಳಿ ಮತ್ತು ಕಲಬುರ್ಗಿ ಲಿಂಕ್ ಇರೋದಾಗಿ ಗೊತ್ತಾಗಿದೆ. ಇನ್ನು ಎಷ್ಟು ಅರ್ಜಿ ಹೋಗಿದೆ. ಯಾರು ಪಾಸ್ಪೋರ್ಟ್ ಮಾಡಿದ್ದರೆಂಬುದರ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ದಂಧೆಯಲ್ಲಿ ಸರ್ಕಾರಿ ನೌಕರರು ಶಾಮೀಲಾಗಿದ್ದಾರೆ. ಕಲಬುರ್ಗಿ ಪಾಸ್ಪೋರ್ಟ್ ಆಫೀಸನಲ್ಲಿರುವವರ ಶಾಮೀಲಾಗಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಪಾಸ್ಪೋರ್ಟ್ ಮಾಡಿಸಬೇಕೆಂದರೆ ದಾಖಲೆಗಳು ಸರಿಯಾಗಿರಬೇಕು. ಸರಿ ಇಲ್ಲದಿದ್ದಲ್ಲಿ ರಿಜೆಕ್ಟ್ ಆಗುತ್ತದೆ. ಆದ್ರೆ ನಕಲಿ ದಾಖಲೆ ನೀಡಿ ಪಾಸ್ಪೋರ್ಟ್ ಪಡೆಯೋದು ಅಪರಾಧವಾಗಿದೆ. ಹೀಗಾಗಿ ಪ್ರಕರಣ ಸಂಬಂಧ 108/2020, 121ಬಿ ಇಂಡಿಯನ್ ಪಾಸ್ರ್ಟ್ಪೋರ್ಟ್ ಆ್ಯಕ್ಟ್, 464, 468, 471 ಫೋರ್ಜರಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿತರು ಪೊಲೀಸ್ ಕಸ್ಟಡಿಯಲ್ಲಿದ್ದು ತನಿಖೆ ನಡೆಸಲಾಗಿದೆ.
Published by:
Sushma Chakre
First published:
August 28, 2020, 3:52 PM IST