ಬೆಂಗಳೂರು (ಆ.5): ಕಳೆದ ವರ್ಷ ಅಗಸ್ಟ್ ನಾಲ್ಕನೇ ತಾರೀಖಿನಿಂದ ಆರಂಭವಾದ ಮಳೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಪ್ರವಾಹ ಸೃಷ್ಟಿ ಮಾಡಿ ಜನರ ಬದುಕು ಮೂರಾಬಟ್ಟೆ ಮಾಡಿತ್ತು. ಈಗ ಮತ್ತೆ ಇದೇ ದಿನಾಂಕದಂದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ ಸಮೇತ ಭಾರೀ ಮಳೆ ಸುರಿಯುತ್ತಿದ್ದು ಜಿಲ್ಲೆಯ ಅಂಕೋಲಾ ತಾಲೂಕಿನ ವಿವಿಧ ಗ್ರಾಮಗಳು ಮುಳುಗಡೆ ಆಗಿವೆ.
ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಜಿಲ್ಲೆಯ ಹುಬ್ಬಳ್ಳಿ ರಸ್ತೆ ರಾಷ್ಟ್ರೀಯ ಹೆದ್ದಾರಿ 63ರ ಸುಂಕಸಾಳ ಬಳಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಗಿದೆ. ಇನ್ನು ಇಲ್ಲಿನ ಹೆಗ್ಗಾರ್, ಡೋಂಗ್ರಿ, ರಾಮನಗುಳಿ, ಸುಂಕಸಾಳ, ಹೀಗೆ ವಿವಿಧ ಗ್ರಾಮಗಳಲ್ಲಿ ನದಿನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಕಳೆದ ವರ್ಷ ಇದೆ ದಿನಾಂಕದಂದು ಗಂಗಾವಳಿ ನದಿ ಪ್ರವಾಹದ ಮಟ್ಟ ಮೀರಿ ಹರಿದಿದ್ದರಿಂದ ಇಲ್ಲಿನ ಗ್ರಾಮ ಸಂಪೂರ್ಣ ಮುಳುಗಡೆ ಆಗಿ ಜನ ಜೀವನ ಮೂರಾಬಟ್ಟೆ ಆಗಿ ಬದುಕು ಕಳೆದುಕೊಂಡಿದ್ದರು. ಮತ್ತೆ ಅದೇ ವಾತಾವರಣ ಇಲ್ಲಿ ಸೃಷ್ಟಿ ಆಗಿದ್ದು ಜನ ಮತ್ತೆ ಆತಂಕದಲ್ಲಿ ಇದ್ದಾರೆ. ಈಗಲೆ ಭಾಗಶಃ ನೀರು ತುಂಬಿ ಮನೆಗಳಿಗೆ ಹಾನಿ ಆಗಿದ್ದು ಅಪಾಯದಂಚಿನಲ್ಲಿ ಇರುವ ಕುಟುಂಬವನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ,
ಯಲ್ಲಾಪುರ ತಾಲೂಕಿನ ಬೇಡ್ತಿ ನದಿ ಕೂಡಾ ಈಗ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಲ್ಲಿನ ನದಿ ತಟದ ಜನರ ಸ್ಥಿತಿ ಮತ್ತೆ ನರಕಯಾತನೆ ಆಗಿದೆ. ಬೇಡ್ತಿ ಹಳೆ ಸೇತುವೆ ಕೊಚ್ಚಿ ಹೋಗುವ ಭಯ ಎದುರಾಗಿದೆ. ಕಳೆದ ವರ್ಷದ ಪ್ರವಾಹದಲ್ಲಿ ಬೇಡ್ತಿ ಹಳೆ ಸೇತುವೆ ಸಂಪೂರ್ಣ ಹಾಳಾಗಿ ಹೋಗಿತ್ತು, ಈಗ ಮತ್ತೆ ಅದೆ ವಾತಾವರಣ ನಿರ್ಮಾಣವಾಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದಲ್ಲಿ ಸುರಿಯುತ್ತಿರುವ ಮಳೆಗೆ ಜನ ಕಂಗಾಲಾಗಿದ್ದಾರೆ. ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣ ವಾಗಿದೆ. ತಗ್ಗು ಪ್ರದೇಶಗಳು ಜಲಾವೃತ್ತವಾಗಿ ಅಪಾಯ ತಂದಿರಿಸಿದೆ. ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು ಜನರನ್ನ ಭಯದ ಮನೆಗೆ ದೂಡಿದೆ,
ಮೀನುಗಾರಿಕೆ ಸ್ಥಗಿತ
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಮುದ್ರದ ಅಲೆಗಳ ರೌದ್ರ ನರ್ತನಕ್ಕೆ ಮೀನುಗಾರರ ಸ್ಥಿತಿ ಅಯೋಮಯವಾಗಿದೆ. ಸಮುದ್ರ ಆಳೆತ್ತರದ ಅಲೆಗಳು ತೀರಕ್ಕೆ ಅಪ್ಪಳಿಸಿ ಸಮುದ್ರ ದಂಡೆಯ ಜನರಲ್ಲಿ ನಡುಕ ಹುಟ್ಟಿಸಿದೆ. ಬಹುತೇಕ ಕಡೆ ಕಡಲ ಕೊರೆತ ಉಂಟಾಗಿ ಸಮುದ್ರದ ನೀರು ಮನೆಗಳಿಗೆ ನುಗ್ಗಿ ಅಪಾರ ಹಾನಿ ಆಗಿದೆ.ಜಿಲ್ಲೆಯ ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮತ್ತು ಆಳ ಸಮುದ್ರ ಮೀನುಗಾರಿಕೆ ಸಂಪೂರ್ಣ ಸ್ಥಗಿತವಾಗಿದೆ, ಹೊಸ ಆಸೆ ಹೊಸ ಕನಸಿನೊಂದಿಗೆ ಆರಂಭವಾದ ಈವರ್ಷದ ಮೀನುಗಾರಿಕೆ ಹಂಗಾಮಿಗೆ ಆರಂಭದಲ್ಲಿಯೇ ಪ್ರಕೃತಿ ಭಾರೀ ಪ್ರಮಾಣದಲ್ಲಿ ಹೊಡೆತ ಕೊಟ್ಟಿದೆ.
ಮತ್ತೆ ನಾಲ್ಕು ದಿನ ನಿರಂತರ ಮಳೆ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಇದೆ ಎಂದು ಹವಮಾನ ಇಲಾಖೆ ಹೇಳಿದೆ. ಇದರಿಂದ ಜನ ಕಂಗಾಲು ಬಿದ್ದಿದ್ದಾರೆ. ಒಂದೆಡೆ ಯಮನಂತೆ ಕಾಡುತ್ತಿರುವ ಕೊರೋನಾ ಸೋಂಕು ಜಿಲ್ಲೆಯ ಜನರಲ್ಲಿ ಸಮಸ್ಯೆ ತಂದಿರಿಸಿದೆ ಈನಡುವೆ ವರುಣನ ಆರ್ಭಟ ಕೂಡಾ ಜೋರಾಗಿದ್ದು ಗಾಯದ ಮೇಲೆ ಬರೆ ಬಿದ್ದಿದೆ.
ತುಂಬಿ ಹರಿಯುತ್ತಿರುವ ಜಿಲ್ಲೆಯ ನದಿಗಳು:
ಉತ್ತರ ಕನ್ನಡ ಜಿಲ್ಲೆಯ ಕಾಳಿ, ಅಘನಾಶಿನಿ, ಶರಾವತಿ, ಗಂಗಾವಳಿ ನದಿಗಳು ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಜನರನ್ನ ಸುರಕ್ಷಿತ ಸ್ಥಳಕ್ಕೆ ಹೋಗಲು ಸೂಚನೆ ನೀಡಲಾಗಿದೆ. ಗಂಗಾವಳಿ ನದಿ ಈಗಾಗಲೆ ಪ್ರವಾಹ ಸೃಷ್ಟಿ ಮಾಡಿದ್ದು ಕೆಲ ಗ್ರಾಮಕ್ಕೆ ನೀರು ನುಗ್ಗಿ ಆವಂತರ ಸೃಷ್ಟಿ ಆಗಿದೆ,
ಬಹುತೇಕ ಜಲಾಶಯಗಳು ಭರ್ತಿ ಹಂತ:
ಜಿಲ್ಲೆಯ ಪ್ರಮುಖ ಜಲಾಶಯಗಳಾದ ಕದ್ರಾ, ಕೊಡಸಳ್ಳಿ, ಸೂಪಾ, ಬೊಮ್ಮನಹಳ್ಳಿ, ಜಲಾಶಯಗಳು ಭರ್ತಿ ಹಂತ ತಲುಪಿವೆ. ಯ್ಯಾವುದೆ ಕ್ಷಣದಲ್ಲಿ ನೀರು ಹೊರ ಬಿಡುವ ಸಾದ್ಯತೆ ಇದ್ದು ಕೂಡಲೆ ನದಿ ಮತ್ತು ಜಲಾಶಯದ ಕೆಳದಂಡೆಯ ಜನರನ್ನ ಸುರಕ್ಷಿತ ಸ್ಥಳಕ್ಕೆ ಹೋಗಲು ಸೂಚನೆ ನೀಡಲಾಗಿದೆ..
ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಈ ಮಳೆ ಸದ್ಯಕ್ಕೆ ನಿಲ್ಲುವ ಲಕ್ಷಣ ಇಲ್ಲ ಎನ್ನಲಾಗಿದೆ.