ಉತ್ತರಕನ್ನಡ ಜಿಲ್ಲೆಯಲ್ಲಿ ನಿಲ್ಲದ ಮಳೆಯಬ್ಬರ; ಕದ್ರಾ ಡ್ಯಾಂನಿಂದ ಕಾಳಿ ನದಿಗೆ 60 ಕ್ಯೂಸೆಕ್ಸ್​​ ನೀರು; ಆತಂಕದಲ್ಲಿ ನದಿ ಪಾತ್ರದ ಜನ

ಕಾಳಿ ನದಿ ತಟದ ಹತ್ತಕ್ಕೂ ಹಚ್ಚು ಗ್ರಾಮಗಳು ಮುಳುಗುವ ಭಯ ಎದುರಿಸುತ್ತಿವೆ. ಕದ್ರಾ, ಸಿದ್ದರ, ಕಿನ್ನರ, ದೇವಳಮೆಕ್ಕಿ ಸೇರಿ ವಿವಿಧ ಗ್ರಾಮಗಳ ಜನರಿಗೆ ನಡುಕ ಶುರುವಾಗಿದೆ. ನಿರಂತರವಾಗಿ ಕದ್ರಾ ಜಲಾಶಯದಿಂದ ನೀರನ್ನು ಕಾಳಿ ನದಿಗೆ ಹರಿಸಲಾಗುತ್ತಿದ್ದು, ಈಗಾಗಲೆ ಕದ್ರಾ ಗ್ರಾಮಕ್ಕೆ ನೀರು ಮೇಲೆ ಏರುತ್ತಿದೆ.

ಕದ್ರಾ ಜಲಾಶಯದಿಂದ ಕಾಳಿ ನದಿಗೆ ನೀರು ಬಿಟ್ಟಿರುವ ದೃಶ್ಯ

ಕದ್ರಾ ಜಲಾಶಯದಿಂದ ಕಾಳಿ ನದಿಗೆ ನೀರು ಬಿಟ್ಟಿರುವ ದೃಶ್ಯ

  • Share this:
ಕಾರವಾರ(ಆ.06): ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅರ್ಭಟ ಮುಂದುವರೆದಿದೆ. ಜಿಲ್ಲೆಯ ಗಂಗಾವಳಿ, ಕಾಳಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕಾಳಿ ನದಿ ಪಾತ್ರದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಹಾನಿಯಾದರೆ, ಗಂಗಾವಳಿ ನದಿ ಪಾತ್ರ ಜನರ ಸ್ಥಿತಿಯೂ ಅದೇ ಆಗಿದೆ. ಕಳೆದ ವರ್ಷ ಪ್ರವಾಹದಿಂದ ಬದುಕು ಕಳೆದುಕೊಂಡ ಜನರಿಗೆ ಮತ್ತೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಹೌದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿ, ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಮಳೆಯಿಂದಾಗಿ ನದಿಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶದ ಜನವಸತಿ ಪ್ರದೇಶಗಳು ನೀರಿನಿಂದ ತುಂಬಿ ನದಿಯಂತಾಗಿದೆ. ಜಿಲ್ಲೆಯ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ಇಲ್ಲಿನ ದ್ವೀಪ ಗ್ರಾಮಗಳ ಜನರು ಸಂಕಷ್ಟದಲ್ಲಿ ಇದ್ದಾರೆ. ಕೆಲವೆಡೆ ತೋಟಕ್ಕೆ ನುಗ್ಗಿದ ನೀರು ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದೆ. ಗಂಗಾವಳಿ ಪಾತ್ರದ ಶಿರೂರು, ಕಲ್ಲೇಶ್ವರ, ಹಳವಳ್ಳಿ, ಗುಳ್ಳಾಪುರ, ರಾಮನಗುಳಿ, ಡೋಂಗ್ರಿ ಹೀಗೆ ವಿವಿಧ ಗ್ರಾಮಗಳಿಗೆ ಗಂಗಾವಳಿ ನದಿ ನೀರು ನುಗ್ಗಿದೆ.

‘ಕೊಬ್ಬರಿಗೆ 11,300 ರೂ. ಬೆಂಬಲ ಬೆಲೆ‘ - ಸಚಿವ ಜೆ.ಸಿ ಮಾಧುಸ್ವಾಮಿ

ನಿನ್ನೆ ಗಂಗಾವಳಿ ಪ್ರವಾಹಕ್ಕೆ ವ್ಯಕ್ತಿಯೋರ್ವ ಕೊಚ್ಚಿ ಹೋಗಿದ್ದು, ಇವತ್ತು ಶವವಾಗಿ ಪತ್ತೆ ಆಗಿದ್ದಾನೆ. ಕಳೆದ ವರ್ಷ ಇದೆ ದಿನಾಂಕದಂದು ಸಂಭವಿಸಿದ ಪ್ರವಾಹ ಈ ಬಾರಿಯೂ ಸಂಭವಿಸಿ ಸಾಕಷ್ಟು ಸಂಕಷ್ಟ ತಂದಿರಿಸಿದೆ. ಕಳೆದ ವರ್ಷ ಮನೆ ಕಳೆದುಕೊಂಡಿದ್ದವರಿಗೆ ಸರಕಾರದಿಂದ ಪರಿಹಾರ ಬರುವ ಮುಂಚೆಯೇ ಮತ್ತೆ ಪ್ರವಾಹ ಬಂದೆರಗಿ ಜೀವನವೇ ಸಾಕು ಎನಿಸಿ ಬಿಟ್ಟಿದೆ. ಬಹುತೇಕ ಕಡೆ ಜನ ಮನೆ ಕಳೆದುಕೊಳ್ಳುವ ಭಯದಲ್ಲಿದ್ದಾರೆ.

ಕಾಳಿ ನದಿಯ ರೌದ್ರಾವತಾರ


ಇನ್ನು, ಕಾರವಾರ ತಾಲೂಕಿನಲ್ಲಿ ಮಳೆಯ ಅಬ್ಬರ ನಿರಂತರವಾಗಿದ್ದು, ಇಲ್ಲಿನ ಕದ್ರಾ ಜಲಾಶಯ ಭರ್ತಿ ಆಗಿದೆ. ಕದ್ರಾ ಜಲಾಶಯದಿಂದ 60 ಕ್ಯೂಸೆಕ್ಸ್ ನೀರನ್ನು ಕಾಳಿ ನದಿಗೆ ಹರಿಬಿಡಲಾಗಿದೆ. ಕಾಳಿ ನದಿ ತಟದ ಹತ್ತಕ್ಕೂ ಹಚ್ಚು ಗ್ರಾಮಗಳು ಮುಳುಗುವ ಭಯ ಎದುರಿಸುತ್ತಿವೆ. ಕದ್ರಾ, ಸಿದ್ದರ, ಕಿನ್ನರ, ದೇವಳಮೆಕ್ಕಿ ಸೇರಿ ವಿವಿಧ ಗ್ರಾಮಗಳ ಜನರಿಗೆ ನಡುಕ ಶುರುವಾಗಿದೆ. ನಿರಂತರವಾಗಿ ಕದ್ರಾ ಜಲಾಶಯದಿಂದ ನೀರನ್ನು ಕಾಳಿ ನದಿಗೆ ಹರಿಸಲಾಗುತ್ತಿದ್ದು, ಈಗಾಗಲೆ ಕದ್ರಾ ಗ್ರಾಮಕ್ಕೆ ನೀರು ಮೇಲೆ ಏರುತ್ತಿದೆ.ಕಳೆದ ವರ್ಷ ಕದ್ರಾ ಜಲಾಶಯದಿಂದ  ಕಾಳಿ ನದಿಗೆ ನೀರು ಹರಿಬಿಟ್ಟ ಪರಿಣಾಮ ಮುನ್ನೂರಕ್ಕೂ ಹೆಚ್ಚು ಜನರ ಮನೆಗಳು ಮುಳುಗಿದ್ದವು.  ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿ ಬದುಕು ಕಳೆದುಕೊ‌ಂಡಿದ್ದರು. ಕಳೆದ ವರ್ಷ ಸಂಭವಿಸಿದ ಪ್ರವಾಹದಿಂದ ಚೇತರಿಕೆ ಕಾಣುವ ಮೊದಲೇ ಈಗ ಮತ್ತೆ ಅದೇ ಕಾರಾಳ ದಿನ ಕಣ್ಣ ಮುಂದೆ ಇದೆ. ಇನ್ನು ಮುಂದಿ‌ನ ನಾಲ್ಕು ದಿನ ನಿರಂತರ ಮಳೆ‌ಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಇದರಿಂದಾಗಿ ಇಲ್ಲಿನ ಜನ ಮತ್ತೆ ಕಂಗಾಲಾಗಿದ್ದಾರೆ.

ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮತ್ತೆ ನಿರಂತರ ಮುಂದುವರೆದರೆ, ಬಹುತೇಕ ಗ್ರಾಮಗಳು ಮುಳುಗಡೆಯಾಗಲಿವೆ. ಕಳೆದ ವರ್ಷದ ಪ್ರವಾಹಕ್ಕೆ ಮೂರಾಬಟ್ಟೆಯಾದ ಬದುಕು ಮತ್ತೆ ಮಳೆಗೆ ಕೊಚ್ಚಿ ಹೋಗುತ್ತದೆ ಎನ್ನುವುದೇ ಆತಂಕ.
Published by:Latha CG
First published: