news18-kannada Updated:December 21, 2020, 3:47 PM IST
ಉತ್ತರ ಕನ್ನಡದಲ್ಲಿ ಮನೆ ನಿರ್ಮಾಣ
ಕಾರವಾರ (ಡಿ. 21): ಯಾವುದೇ ಜಾಗವನ್ನು ಖರೀದಿಸುವ ಮುನ್ನ ಅದರ ಮಾಲೀಕತ್ವದ ಕುರಿತು ಸ್ಪಷ್ಟ ಮಾಹಿತಿ ಸಿಗಲಿ ಎನ್ನುವ ಉದ್ದೇಶದಿಂದ ಸರ್ಕಾರ ಇ- ಸ್ವತ್ತು ತಂತ್ರಾಂಶವನ್ನು ರೂಪಿಸಿದೆ. ಇ-ಸ್ವತ್ತಿನಲ್ಲಿ ನೋಂದಣಿಯಾದಲ್ಲಿ ಮಾತ್ರ ಆ ಜಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇ-ಸ್ವತ್ತಿನ ಜಾರಿಯಿಂದಾಗಿ ಕೃಷಿಯೇತರ ಭೂಮಿ ನೋಂದಣಿ ಮಾಡಿಕೊಂಡಿರುವವರು ಮನೆ ಕಟ್ಟಿಕೊಳ್ಳಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ಪಶ್ಚಿಮ ಘಟ್ಟಗಳ ಸರಣಿ, ಇನ್ನೊಂದೆಡೆ ವಿಶಾಲವಾದ ಕರಾವಳಿ ತೀರ ಹೊಂದಿರುವ ವಿಶಿಷ್ಟ ಜಿಲ್ಲೆ ಉತ್ತರಕನ್ನಡ. ಜಿಲ್ಲೆಯ ಭೂ ಭಾಗದ ಶೇ. 80ರಷ್ಟು ಅರಣ್ಯ ಪ್ರದೇಶ ಹೊಂದಿದ್ದು, ಕರಾವಳಿ ನಿಯಂತ್ರಣ ವಲಯ, ರಾಷ್ಟ್ರೀಯ ಹೆದ್ದಾರಿ, ಕೊಂಕಣ ರೈಲ್ವೆಯಂತಹ ಯೋಜನೆಗಳಿಂದಾಗಿ ಬಳಕೆಗೆ ಸಿಗುವ ಭೂಭಾಗ ಕೇವಲ 10 ರಿಂದ 15 ಶೇಕಡಾ ಮಾತ್ರ. ಹೀಗಾಗಿ ಇರುವ ಅಲ್ಪ ಸ್ವಲ್ಪ ಜಾಗದಲ್ಲಿ ಮನೆ ಕಟ್ಟಿಕೊಳ್ಳೋಣವೆಂದರೆ ಜಿಲ್ಲೆಯ ಜನತೆಗೆ ಸರ್ಕಾರದ ಇ-ಸ್ವತ್ತು ಅಡ್ಡಿಯಾಗಿ ನಿಂತಿದೆ.
ಹೌದು, ಸರ್ಕಾರವೇನೋ ಜಾಗದ ಅಸಲಿ ಮಾಲೀಕತ್ವದ ಕುರಿತು ಮಾಹಿತಿ ಸಿಗುವಂತೆ ಮಾಡಲು ಇ-ಸ್ವತ್ತು ತಂತ್ರಾಂಶವನ್ನ ಜಾರಿಗೆ ತಂದಿದೆ. ಆದರೆ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾದಂತಾಗಿದ್ದು, ಇದ್ದ ಜಾಗದಲ್ಲಿ ಹೊಸದಾಗಿ ಮನೆ ಕಟ್ಟಿಕೊಳ್ಳಲು ಅನುಮತಿ ಸಿಗದೇ ಪರದಾಡುವಂತಾಗಿದೆ. ಈ ತಂತ್ರಾಂಶದ ಪ್ರಕಾರ ಮನೆ ಕಟ್ಟಿಸಲು ಜಾಗಕ್ಕೆ ಲೇಔಟ್ ಪ್ಲ್ಯಾನ್ ನೀಡುವಂತೆ ಕೇಳಲಾಗುತ್ತಿದ್ದು ಐದು, ಹತ್ತು ಗುಂಟೆ ಜಾಗಕ್ಕೆ ಲೇಔಟ್ ಪ್ಲ್ಯಾನ್ ಕೊಡುವುದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೃಷಿಯೇತರ ಜಾಗ ಹೊಂದಿದ್ದವರೂ ಸಹ ಮನೆ ಕಟ್ಟಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: HD Kumaraswamy: ಜೆಡಿಎಸ್ ವಿಲೀನದ ಮಾತೇ ಇಲ್ಲ, ನನ್ನ ನಿಜವಾದ ರಾಜಕಾರಣ ಶುರುವಾಗೋದೇ 2023ಕ್ಕೆ!; ಹೆಚ್ಡಿ ಕುಮಾರಸ್ವಾಮಿ ಸವಾಲು
ಇನ್ನು ಪಿತ್ರಾರ್ಜಿತ ಆಸ್ತಿಯನ್ನ ಹಂಚಿಕೆ ಮಾಡಿಕೊಳ್ಳಲು ಕೃಷಿಯೇತರವಾಗಿ ನೋಂದಾವಣಿಯಾಗಿರುವ ಜಾಗವನ್ನ ಒಡೆಯುವುದು ಸಾಧ್ಯವಿಲ್ಲ. ಇ-ಸ್ವತ್ತಿನಲ್ಲಿ ದಾಖಲೆಯಾಗದಿದ್ದಲ್ಲಿ ಆ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದೂ ಸಹ ಸಾಧ್ಯವಿಲ್ಲವಾಗಿದೆ. ದೊಡ್ಡ ಪ್ರಮಾಣದಲ್ಲಿ ಜಮೀನು ಹೊಂದಿದ್ದಲ್ಲಿ ಲೇಔಟ್ ಪ್ಲ್ಯಾನ್ ನೀಡುವುದು ಸಾಧ್ಯವಿದ್ದು ಸಣ್ಣ ಪ್ರಮಾಣದ ಭೂಮಿ ಹೊಂದಿರುವವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಳೆದ ಹತ್ತು ತಿಂಗಳ ಅವಧಿಯಲ್ಲಿ ಹೊನ್ನಾವರ ಪಟ್ಟಣ ಪಂಚಾಯತ್ ಒಂದರಲ್ಲೇ ಯಾವುದೇ ಕಟ್ಟಡ ನಿರ್ಮಾಣಕ್ಕೂ ಅನುಮತಿ ಸಿಕ್ಕಿಲ್ಲ. ಪರಿಣಾಮ ಕಟ್ಟಡ ಗುತ್ತಿಗೆದಾರರು, ಕಾರ್ಮಿಕರು, ಸೆಂಟ್ರಿಗಳು ಕೆಲಸವಿಲ್ಲದೇ ಪರದಾಡುವಂತಾಗಿದೆ. ಹೀಗಾಗಿ ಇ-ಸ್ವತ್ತಿನ ನಿಯಮಗಳನ್ನು ಜಿಲ್ಲೆಯ ಮಟ್ಟಿಗೆ ಸರಳೀಕರಣಗೊಳಿಸಿ ಕೊಡಬೇಕು ಎಂದು ಜಿಲ್ಲೆಯ ಎಂಜಿನಿಯರ್ಗಳು ಮನವಿ ಮಾಡಿದ್ದಾರೆ.
ಇನ್ನು, ನೆರೆಯ ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಈಗಾಗಲೇ ಭೂಮಿ ಕಡಿಮೆ ಇರುವ ಜಿಲ್ಲೆಗಳೆಂದು ಇ-ಸ್ವತ್ತು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಅದರಂತೆ ಉತ್ತರಕನ್ನಡ ಜಿಲ್ಲೆಗೂ ಅದೇ ನಿಯಮ ಅನ್ವಯವಾಗುವಂತೆ ಮಾಡಿ ಅನ್ನೋದು ಸ್ಥಳೀಯರ ಬೇಡಿಕೆಯಾಗಿದೆ. ಒಟ್ಟಾರೆ, ಭೂಮಿ ದಾಖಲಾತಿಯಲ್ಲಿನ ಅಕ್ರಮಗಳನ್ನು ತಡೆಯಲು ಸರ್ಕಾರವೇನೋ ಇ-ಸ್ವತ್ತು ತಂತ್ರಾಂಶವನ್ನು ಜಾರಿಗೆ ತಂದಿದೆ. ಆದರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಇದರಿಂದ ಅನಾನುಕೂಲವೇ ಹೆಚ್ಚಾಗಿದ್ದು, ಕಂದಾಯ ಇಲಾಖೆ ಸಚಿವರು ಇತ್ತ ಗಮನಹರಿಸಿ ನಿಯಮ ಸರಳೀಕರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.
Published by:
Sushma Chakre
First published:
December 21, 2020, 3:47 PM IST