ಕೈ ವಶದಲ್ಲಿರುವ ಉತ್ತರ ಕನ್ನಡ ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ!

news18
Updated:August 29, 2018, 1:32 PM IST
ಕೈ ವಶದಲ್ಲಿರುವ ಉತ್ತರ ಕನ್ನಡ ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ!
news18
Updated: August 29, 2018, 1:32 PM IST
- ಮಂಜುನಾಥ್ ಗಾಣಿಗ /ರಾಜೆಂದ್ರ ಸಿಂಗನಮನೆ, ನ್ಯೂಸ್ 18 ಕನ್ನಡ

ಉತ್ತರ ಕನ್ನಡ ( ಆಗಸ್ಟ್ 29) :  ಕಳೆದ ಅವಧಿಯಲ್ಲಿ ಕೈ ವಶದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳನ್ನು ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಿದೆ. ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳಲ್ಲಿ 3 ನಗರ ಸಭೆಗಳು(ಕಾರವಾರ, ಶಿರಸಿ, ದಾಂಡೇಲಿ ) 3 ಪುರಸಭೆಗಳು (ಅಂಕೋಲಾ, ಕುಮಟಾ, ಹಳಿಯಾಳ) ಹಾಗೂ 2 ಪಟ್ಟಣ ಪಂಚಾಯಿತಿ (ಯಲ್ಲಾಪುರ, ಮುಂಡಗೋಡ )ಸೇರಿ 8 ಸಂಸ್ಥೆಗಳ 200 ವಾರ್ಡ್ ಗಳಿಗೆ ಚುನಾವಣೆ ಘೋಷಣೆಯಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ಬಹುತೇಕ ಎಲ್ಲ ವಾರ್ಡ್ ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿವೆ. ಆದರೆ, ಜೆಡಿಎಸ್ ಕೆಲವೆಡೆ ಮಾತ್ರ ಸ್ಪರ್ಧೆಯಲ್ಲಿದೆ. ಒಟ್ಟಾರೆ ಕಾಂಗ್ರೆಸ್ ಬಿಜೆಪಿ ನೇರ ಹಣಾಹಣಿಗೆ ಕಣ ಸಜ್ಜಾಗಿದೆ. ಕಳೆದ ಐದು ವರ್ಷಗಳಲ್ಲಿ ನಗರೋತ್ಥಾನ ಕಾಮಗಾರಿ ಅಸಮರ್ಪಕತೆ, ವಿವಿಧ ಕಾಮಗಾರಿಗಳಲ್ಲಿ ಕೌನ್ಸಿಲ್​ರಗಳ ಭ್ರಷ್ಟಾಚಾರ ಮುಂತಾದ ವಿಚಾರಗಳಿಂದ ಆಡಳಿತಾರೂಢ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಸವಾಲಾಗಿದ್ದರೆ. ಬಿಜೆಪಿಗೆ ಭಿನ್ನಮತವೇ ಸವಾಲಾದರೆ, ಜೆಡಿಎಸ್​ ಅಭ್ಯರ್ಥಿಗಳ ಕೊರತೆ ಶಾಪವಾಗಿದೆ.

ಸ್ಪರ್ಧೆಯ ಅಖಾಡ....

ಕಾರವಾರ ನಗರಸಭೆಯ 31 ವಾರ್ಡ್‍ಗಳಿಗೆ ಚುನಾವಣೆ ನಡೆದಿದೆ. ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಜೆಡಿಎಸ್ ಕೆಲವೆಡೆ ಮಾತ್ರ ಸ್ಪರ್ಧೆಯಲ್ಲಿದೆ. ಬಿಜೆಪಿ ಮತದಾರರು ಹೆಚ್ಚಿರುವ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷೇತರರನ್ನು ಬೆಂಬಲಿಸಿ ಗೆಲ್ಲುವ ತಂತ್ರ ರೂಪಿಸಿದೆ. ಒಳಚರಂಡಿ ಅವ್ಯವಸ್ಥೆ, ನಗರೋತ್ಥಾನ ಯೋಜನೆಯ ರಸ್ತೆ ಕಾಮಗಾರಿಗಳ ಅಸಮರ್ಪಕತೆ, ಶಿಥಿಲಗೊಂಡ ಗಾಂಧಿ ಮಾರುಕಟ್ಟೆಯ ಅಂಗಡಿಕಾರರ ತೆರವು ವಿಚಾರ ಚುನಾವಣೆಯ ಪ್ರಮುಖ ಅಂಶಗಳನ್ನುಇಟ್ಟುಕೊಂಡು ಮಾಜಿ ಸಚಿವ ಆನಂದ ಅಸ್ನೋಟಿಕರ್, ಮಾಜಿ ಶಾಸಕ ಸತೀಶ ಸೈಲ್ ಹಾಗೂ ಹಾಲಿ ಶಾಸಕಿ ರೂಪಾಲಿ ನಾಯ್ಕ ಕಣವನ್ನು ಪ್ರತಿಷ್ಠೆಯಾಗಿ ಪಡೆದಿದ್ದಾರೆ.

ಒಂದೇ ಕುಟುಂಬದ 3 ನಾಮಪತ್ರ ಸಲ್ಲಿಕೆ

ಕಾರವಾರ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಪಕ್ಷೇತರರಲ್ಲಿ ಮಾಜಿ ಸದಸ್ಯ ಸತೀಶ್ ಕೊಳಂಬಕರ್ ಕುಟುಂಬದ ಮೂವರು ನಾಮಪತ್ರ ಸಲ್ಲಿಸಿದ್ದಾರೆ. ಸತೀಶ್ ಜೊತೆ ಅವರ ಪತ್ನಿ, ಮಗಳು ಸಹ ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ಕೆಲವು ವಾರ್ಡ್ ಗಳಲ್ಲಿ ಪತಿ, ಪತ್ನಿ ಸಹ ನಾಮಪತ್ರ ಸಲ್ಲಿಸಿದ್ದಾರೆ.
Loading...

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹಾಗೂ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಬ್ಬರ ಸ್ವ ಕ್ಷೇತ್ರ ಶಿರಸಿಯಲ್ಲಿ ಬಿಜೆಪಿಗೆ ಭಿನ್ನಮತದ ಕಾಟ ಗೆಲುವಿಗೆ ತೊಡಕುಂಟುಮಾಡುತ್ತಿದೆ. ಆದರೆ, ಕಾಂಗ್ರೆಸ್‍ಗೂ ಬಂಡಾಯದ ಬಿಸಿ ತಟ್ಟಿದ್ದರಿಂದ ಎರಡೂ ಪಕ್ಷಗಳ ನಡುವೆ ಸಮಬಲದ ಹೋರಾಟ ನಡೆದಿದೆ.

ಜೆಡಿಎಸ್ ಕೂಡ ಕೆಲವೆಡೆ ಸ್ಪರ್ಧೆಯೊಡ್ಡುತ್ತಿದೆ. ಮನೆ ನಿರ್ಮಾಣಕ್ಕೆ ಅನುಮತಿ ನೀಡುವ ಫಾರ್ಮ್ ನಂಬರ್ 3 ವಿಚಾರ, ಮನೆ, ಮನೆ ಕಸ ಸಂಗ್ರಹಣೆ ಸೇರಿ ಹಲವು ಸಮಸ್ಯೆಗಳು ನಗರಸಭೆಯಲ್ಲಿ ಕೋಲಾಹಲ ಎಬ್ಬಿಸುತ್ತಿವೆ. ರಾಜ್ಯದ ಪ್ರಭಾವಿ ಸಚಿವ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಪ್ರತಿನಿಧಿಸುವ ಕ್ಷೇತ್ರದ ದಾಂಡೇಲಿ ನಗರಸಭೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಮಾಜಿ ಶಾಸಕ ಸುನೀಲ ಹೆಗಡೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದರಿಂದ ಇದೇ ಮೊದಲ ಬಾರಿಗೆ ಬಿಜೆಪಿ ಕೂಡ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡುತ್ತಿದೆ. ಜೆಡಿಎಸ್ ಕೆಲವೆಡೆ ಸ್ಪರ್ಧೆಯಲ್ಲಿದೆ. ಆದರೆ, ಎರಡೂ ಪಕ್ಷಗಳಿಗೆ ಭಿನ್ನಮತೀಯರ ಕಾಟ ವಿಪರೀತವಾಗಿದ್ದು, ಯಾವುದೇ ಪಕ್ಷ ಬಹುಮತ ಪಡೆಯುವ ಲಕ್ಷಣ ಕಾಣುತ್ತಿಲ್ಲ.

ಕಳೆದ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಾಕಷ್ಟು ಅನುದಾನ ಬಂದರೂ ಕಮೀಷನ್ ದಂಧೆಯಿಂದ ಕಾಮಗಾರಿಗಳು ಕಳಪೆಯಾಗಿವೆ ಎಂಬ ಆರೋಪ ಬಿಜೆಪಿಗೆ ಚುನಾವಣೆಯ ಪ್ರಬಲ ಅಸ್ತ್ರವಾಗಿದೆ. ಇನ್ನು ಹಳಿಯಾಳದಲ್ಲಿ ಪುರಸಭೆ ಚುನಾವಣೆ ಎಂಬುದಕ್ಕಿಂತ ಸಚಿವ ಆರ್.ವಿ.ದೇಶಪಾಂಡೆ, ಎಂಎಲ್‍ಸಿ ಶ್ರೀಕಾಂತ ಘೋಟ್ನೇಕರ್ ಹಾಗೂ ಬಿಜೆಪಿಯ ಸುನೀಲ ಹೆಗಡೆ ಅವರ ನಡುವಿನ ಜಂಗಿ ಕುಸ್ತಿ ಎಂದೇ ಹೇಳಬಹುದು.

ಇಷ್ಟು ವರ್ಷ ಪಟ್ಟಣ ಪಂಚಾಯಿತಿಯಾಗಿದ್ದ ಹಳಿಯಾಳ ವರ್ಷದ ಹಿಂದೆ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ನಂತರ ನಡೆಯುತ್ತಿರುವ ಮೊದಲ ಚುನಾವಣೆ. ಬಿಜೆಪಿ ಮೊದಲ ಬಾರಿಗೆ ಕಾಂಗ್ರೆಸ್‍ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಟ್ಟಣ ಪಂಚಾಯಿತಿಯಲ್ಲಿ ವಸತಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಬಿಜೆಪಿ ಎತ್ತಿ ಹೇಳುತ್ತಿದೆ.

ದಿನಕರ ಶೆಟ್ಟಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿ ಶಾಸಕರಾಗಿದ್ದರಿಂದ ಜೆಡಿಎಸ್ ಕುಮಟಾ ಪುರಸಭೆಯಲ್ಲಿ ಬಡವಾಗಿದೆ. ಬಿಜೆಪಿ-ಕಾಂಗ್ರೆಸ್ ನಡುವೆ ಪೈಪೋಟಿ ನಡೆದಿದೆ. ಒಳಚರಂಡಿ ಕಾಮಗಾರಿ ಅಸಮರ್ಪಕತೆ, ಕುಡಿಯುವ ನೀರಿನ ಪೂರೈಕೆ ವಿಚಾರ ಚುನಾವಣೆ ಸಂದರ್ಭದಲ್ಲಿ ಚರ್ಚಿತ ಪ್ರಮುಖ ಇಶ್ಯೂಗಳು. ಇನ್ನು ಪಟ್ಟಣ ಪಂಚಾಯಿತಿಯಾಗಿದ್ದ ಅಂಕೋಲಾ ವರ್ಷದ ಹಿಂದೆ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. 23 ವಾರ್ಡ್‍ಗಳಲ್ಲಿ ಜೆಡಿಎಸ್ 17 ರಲ್ಲಿ ಮಾತ್ರ ಸ್ಪರ್ಧೆಯಲ್ಲಿದೆ. ಕಾಂಗ್ರೆಸ್, ಬಿಜೆಪಿ ನಡುವೆ ಸ್ಪರ್ಧೆ ಜೋರಾಗಿದೆ. ರಸ್ತೆ, ಚರಂಡಿ ಅವ್ಯವಸ್ಥೆಗಳು ಸಾಕಷ್ಟಿವೆ.

ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ ಸ್ವ ಕ್ಷೇತ್ರ ಯಲ್ಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಕೈಗೆ ಕಮಲ ಪೈಪೋಟಿ ನೀಡುತ್ತಿದೆ. ಜೆಡಿಎಸ್ ನಿತ್ರಾಣವಾಗಿದೆ. ಕುಡಿಯುವ ನೀರಿನ ಪೂರೈಕೆ ಅವ್ಯವಸ್ಥೆ ಯಲ್ಲಾಪುರ ಪಟ್ಟಣದ ಜನರ ಪ್ರಮುಖ ಸಮಸ್ಯೆ. ಇನ್ನು ಮುಂಡಗೋಡ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ವಸತಿ ಯೋಜನೆ ಮನೆಗಳ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರ ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳಿಗೆ ಪ್ರಮುಖ ಅಸ್ತ್ರವಾಗಿದೆ. ಕಾಂಗ್ರೆಸ್ ಬಿಜೆಪಿ ನಡುವೆ ಭಾರೀ ಸ್ಪರ್ಧೆ ಇದೆ.

ಪಕ್ಷೇತರರು ಎಲ್ಲೆಲ್ಲಿ ನಾಮಪತ್ರ ಸಲ್ಲಿಸಿದ್ದಾರೆ?

ಕಾರವಾರ ನಗರಸಭೆ 65, ಶಿರಸಿ ನಗರಸಭೆ 36, ಹಳಿಯಾಳ 80, ಅಂಕೋಲಾ 27, ಕುಮಟಾ 13, ಹಳಿಯಾಳ 14, ಯಲ್ಲಾಪುರ 11, ಮುಂಡಗೋಡ 31 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ

ಅಂಕಿಅಂಶ.. ( ಮತದಾರರು)
ಸಂಸ್ಥೆ ಮತದಾರರು
ಕಾರವಾರ 52,304
ಶಿರಸಿ 48,468
ದಾಂಡೇಲಿ 40,261
ಅಂಕೋಲಾ 18,522
ಕುಮಟಾ 22,685
ಹಳಿಯಾಳ 18,119
ಯಲ್ಲಾಪುರ 13,732
ಮುಂಡಗೋಡ 13,552
...........
ಒಟ್ಟು -200 ವಾರ್ಡ್‍ಗಳಿಗೆ 752 ಅಭ್ಯರ್ಥಿಗಳು -ಕುಮಟಾ ಪುರಸಭೆಗೆ ಒಬ್ಬ ಸದಸ್ಯೆ ಅವಿರೋಧ ಆಯ್ಕೆ.

ಕಾಂಗ್ರೆಸ್-197 ವಾರ್ಡ್‍ಗಳಿಗೆ ಸ್ಪರ್ಧೆ
ಬಿಜೆಪಿ -194 ವಾರ್ಡ್‍ಗಳಿಗೆ ಸ್ಪರ್ಧೆ
ಜೆಡಿಎಸ್ 145 ವಾರ್ಡ್‍ಗಳಿಗೆ ಸ್ಪರ್ಧೆ
ಪಕ್ಷೇತರರು -216
--------------------------------------------------------------------------------------

ಕಾರವಾರ ನಗರಸಭೆ
31 ವಾರ್ಡ್‍ಗಳಿಗೆ 136 ಅಭ್ಯರ್ಥಿಗಳು.
ಕಾಂಗ್ರೆಸ್-29
ಬಿಜೆಪಿ-31
ಜೆಡಿಎಸ್-25
ಪಕ್ಷೇತರರು -52
.........
ಶಿರಸಿ ನಗರಸಭೆ
31 ವಾರ್ಡ್‍ಗಳಿಗೆ 120 ಅಭ್ಯರ್ಥಿಗಳು.
ಕಾಂಗ್ರೆಸ್-31
ಬಿಜೆಪಿ -31
ಜೆಡಿಎಸ್-26
ಪಕ್ಷೇತರರು -32
.........
ದಾಂಡೇಲಿ ನಗರ ಸಭೆ
31 ವಾರ್ಡ್‍ಗಳಿಗೆ 138 ಅಭ್ಯರ್ಥಿಗಳು.
ಕಾಂಗ್ರೆಸ್-31
ಬಿಜೆಪಿ -29
ಜೆಡಿಎಸ್-19
ಪಕ್ಷೇತರ -59
......
ಹಳಿಯಾಳ ಪುರಸಭೆ
23 ವಾರ್ಡ್‍ಗಳಿಗೆ 70 ಅಭ್ಯರ್ಥಿಗಳು
ಕಾಂಗ್ರೆಸ್-23
ಬಿಜೆಪಿ-23
ಜೆಡಿಎಸ್-15
ಪಕ್ಷೇತರರು 9
............
ಅಂಕೋಲಾ ಪುರಸಭೆ
23 ವಾರ್ಡ್‍ಗಳಿಗೆ 85 ಅಭ್ಯರ್ಥಿಗಳು
ಕಾಂಗ್ರೆಸ್-23
ಬಿಜೆಪಿ-23
ಜೆಡಿಎಸ್-16
ಪಕ್ಷೇತರ -23
............
ಕುಮಟಾ ಪುರಸಭೆ
22 ವಾರ್ಡ್‍ಗಳಿಗೆ 70 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2 ನೇ ವಾರ್ಡ್‍ಗೆ ಕಾಂಗ್ರೆಸ್‍ನ ಲಕ್ಷ್ಮೀ ಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್-22
ಬಿಜೆಪಿ -21
ಜೆಡಿಎಸ್ -17
ಪಕ್ಷೇತರರು-10
..........
ಯಲ್ಲಾಪುರ ಪಟ್ಟಣ ಪಂಚಾಯಿತಿ
19 ವಾರ್ಡ್‍ಗಳಿಗೆ 63 ಅಭ್ಯರ್ಥಿಗಳು
ಕಾಂಗ್ರೆಸ್-19,
ಬಿಜೆಪಿ -19
ಜೆಡಿಎಸ್-13
ಪಕ್ಷೇತರರು -12
...........
ಮುಂಡಗೋಡ ಪಟ್ಟಣ ಪಂಚಾಯಿತಿ
19 ವಾರ್ಡ್‍ಗಳಿಗೆ 70 ಅಭ್ಯರ್ಥಿಗಳು
ಕಾಂಗ್ರೆಸ್ -19
ಬಿಜೆಪಿ -17
ಜೆಡಿಎಸ್-14
ಪಕ್ಷೇತರ-20
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...