news18-kannada Updated:August 9, 2020, 5:42 PM IST
ಸಾಂದರ್ಭಿಕ ಚಿತ್ರ
ಕಾರವಾರ(ಆ.09): ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಕಳೆದ ಮೂರು ದಿನ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಬಾರಿಯ ಭೀಕರ ನೆರೆ ಪರಿಸ್ಥಿತಿಯನ್ನು ಅನುಭವಿಸಿದ್ದ ಜನರು ಇದೀಗ ಮತ್ತೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಕಂಗಾಲಾಗಿದ್ದಾರೆ. ಈ ನಡುವೆ ಕಳೆದ ವರ್ಷದ ಪ್ರವಾಹ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸಹ ಸನ್ನದ್ಧವಾಗಿದೆ. ಪ್ರಸ್ತುತ ಮಳೆ ಕಡಿಮೆಯಾಗಿದ್ದರೂ ಮುಂದೆ ಆತಂಕ ತಪ್ಪಿದ್ದಲ್ಲ ಎಂಬ ಮುನ್ನೆಚ್ಚರಿಕೆಯಿಂದ ಕೆಲವೊಂದು ಯೋಜನೆಯನ್ನು ರೂಪಿಸಿಕೊಂಡಿದೆ.
ಅದ್ಯಾಕೋ ಏನೋ ಉತ್ತರಕನ್ನಡ ಜಿಲ್ಲೆಯ ಮಟ್ಟಿಗೆ ಆಗಸ್ಟ್ ತಿಂಗಳು ತನ್ನ ಕರಾಳತೆಯನ್ನ ತೋರಿಸುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಕಳೆದ ವರ್ಷ ಆಗಸ್ಟ್ ಮೊದಲ ವಾರದಲ್ಲೇ ಧಾರಾಕಾರ ಮಳೆ ಸುರಿದಿದ್ದು, ಹಲವು ಗ್ರಾಮಗಳು ಜಲಾವೃತಗೊಂಡು ನೆರೆ ಪರಿಸ್ಥಿತಿ ನಿರ್ಮಾಣವಾಗುವಂತಾಗಿತ್ತು. ಈ ಬಾರಿ ಸಹ ಆಗಸ್ಟ್ ತಿಂಗಳ ಪ್ರಾರಂಭದಲ್ಲೇ ಮಳೆ ತನ್ನ ಕರಾಳತನೆಯನ್ನ ಪ್ರದರ್ಶಿಸುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ನದಿಗಳು ಮೈಂದುಂಬಿ ಹರಿಯುತ್ತಿದ್ದು, ಜಲಾಶಯಗಳು ಗರಿಷ್ಟ ಮಟ್ಟಕ್ಕೆ ತುಂಬಿಕೊಳ್ಳುವ ಹಂತಕ್ಕೆ ತಲುಪಿ ಈಗ ಜನಜೀವನ ಸಹಜ ಸ್ಥಿತಿಗೆ ಬಂದಿದೆ.
ಜಿಲ್ಲೆಯ ಕಾರವಾರ, ಅಂಕೋಲಾ, ಹೊನ್ನಾವರ, ಸಿದ್ಧಾಪುರ ಭಾಗಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದ್ದು ಕಾಳಿ, ಗಂಗಾವಳಿ, ಅಘನಾಶಿನಿ ಹಾಗೂ ಶರಾವತಿ ನದಿಗಳು ತುಂಬಿ ಹರಿಯುತ್ತಿದ್ದು, ಈಗ ಹರಿವಿನ ಪ್ರಮಾಣ ಕಡಿಮೆ ಆಗಿದೆ. ನದಿ ಪಾತ್ರದ ಬಹುತೇಕ ಗ್ರಾಮಗಳ ಮನೆಗಳು ನೀರಿನಿಂದ ಆವೃತವಾಗಿ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಈಗಾಗಲೇ ಸುಮಾರು 60ಕ್ಕೂ ಅಧಿಕ ಮಂದಿಯ ಮನೆಗಳು ಜಲಾವೃತಗೊಂಡು ಹಾನಿ ಆಗಿತ್ತು. ಇನ್ನು ಪ್ರತಿವರ್ಷ ಮಳೆ ಬಂದ ಸಂದರ್ಭದಲ್ಲಿ ಜನರು ತೊಂದರೆ ಅನುಭವಿಸುವಂತಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಜನರಿಗೆ ಆಶ್ರಯ ನೀಡಲು ಅನುಕೂಲವಾಗುವಂತೆ 10 ಕೋಟಿ ವೆಚ್ಛದಲ್ಲಿ ನೆರೆನಿರಾಶ್ರಿತರಿಗಾಗಿ ಆಶ್ರಯ ಕೇಂದ್ರವನ್ನ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಯೋಜನೆ ರೂಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಚಲನಚಿತ್ರ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
ಇನ್ನು ಜಿಲ್ಲೆಯ ಹೊನ್ನಾವರದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದ್ದು ಸುಮಾರು 16 ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ 3 ಎಕರೆ ಕಂದಾಯ ಭೂಮಿಯಲ್ಲಿ ಆಶ್ರಯ ಕೇಂದ್ರವನ್ನ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು ಹೊನ್ನಾವರಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್ ಸಹ ಕೂಡಲೇ ಅನುಮೋದನೆ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಪ್ರತಿವರ್ಷ ನೆರೆ ಎದುರಿಸುತ್ತಿರುವ ಕುಟುಂಬಗಳಿಗೆ ಬೇರೆಡೆ ಜಾಗವನ್ನ ನೀಡಲು ಸಹ ಸರ್ಕಾರ ಮುಂದಾಗಿದ್ದು, ಅವರ ಜಾಗವನ್ನ ಸರ್ಕಾರಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ವರುಣನ ಅಬ್ಬರದಿಂದ ಆತಂಕಕ್ಕೊಳಗಾಗಿರುವ ಜನರೂ ಸಹ ಜಾಗವನ್ನ ಸರ್ಕಾರಕ್ಕೆ ನೀಡಿ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿದ್ದು ಆದಷ್ಟು ಬೇಗ ನಮಗೆ ಜಾಗ ಒದಗಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ನೆರೆ ಪರಿಸ್ಥಿತಿಯಿಂದ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ತಯಾರಿ ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಇದು ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದುನೋಡಬೇಕು.
Published by:
Latha CG
First published:
August 9, 2020, 5:38 PM IST