Gokarna Mahabaleshwar Temple: ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಪೂಜಾ ಹಕ್ಕಿಗಾಗಿ ವಿವಾದ; ಮತ್ತೆ ಜಿಲ್ಲಾಡಳಿತ ಸುಪರ್ದಿಗೆ ಬಂದ ದೇವಾಲಯ

ಸದ್ಯ ದೇವಸ್ಥಾನದಲ್ಲಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಯಾರಿಗೂ ಅವಕಾಶ ನೀಡದಂತೆ ಸಮಿತಿ ಅಧ್ಯಕ್ಷತೆ ವಹಿಸಿರುವ ಉಪವಿಭಾಗಾಧಿಕಾರಿ ರಾಹುಲ್ ಪಾಂಡೆ ಆದೇಶಿಸಿದ್ದಾರೆ

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ

  • Share this:
ಕಾರವಾರ (ಸೆ. 22): ರಾಜ್ಯದಲ್ಲಿಯೇ ಶಿವನ ಆತ್ಮಲಿಂಗವಿರುವ ಏಕೈಕ ದೇವಾಲಯ ಇರುವುದು ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ. ದಕ್ಷಿಣಕಾಶಿ ಅಂತಲೇ ಪ್ರಸಿದ್ಧಿಯಾಗಿರುವ ದೇವಾಲಯಕ್ಕೆ ರಾಜ್ಯ ಸೇರಿದಂತೆ ದೇಶದ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ಸದ್ಯ ಕೊರೊನಾ ನಿಯಮ ಸಡಿಲಿಕೆಗೊಳಿಸಿ ದೇವರ ದರ್ಶನಕ್ಕೆ ಅವಕಾಶ ಒದಗಿಸಿದ್ದು ಭಕ್ತರು ಸಹ ಆಗಮಿಸುತ್ತಿದ್ದಾರೆ. ಆದ್ರೆ ಸದ್ಯ ಸುಪ್ರೀಂ ಸುಪರ್ದಿಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಸ್ಥಳೀಯ ಉಪಾಧಿವಂತರ ನಡುವಿನ ಗಲಾಟೆಯ ಪರಿಣಾಮ ಭಕ್ತರಿಗೆ ಆತ್ಮಲಿಂಗದ ದರ್ಶನ ಇಲ್ಲದಂತಾಗಿದೆ.

ರಾಜ್ಯದಲ್ಲಿ ಕೊರೊನಾ ನಿಯಮಗಳ ಸಡಿಲಿಕೆಯೊಂದಿಗೆ ದೇವಸ್ಥಾನಗಳನ್ನ ತೆರೆಯಲು ಸರ್ಕಾರ ಅವಕಾಶ ನೀಡಿದೆ. ಈ ಹಿನ್ನಲೆ ದಕ್ಷಿಣಕಾಶಿ ಖ್ಯಾತಿಯ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ (Gokarna Mahabaleshwar Temple) ಸಹ ಭಕ್ತರಿಗೆ ತೆರೆದುಕೊಂಡಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ದೇವಸ್ಥಾನದಲ್ಲಿ ಯಾವುದೇ ಸೇವೆಗಳಿಗೆ ಅವಕಾಶ ಇಲ್ಲವಾಗಿದ್ದು ಸರ್ಕಾರದ ಆದೇಶದಂತೆ ಕೊರೊನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದ್ರೆ ಇದೀಗ ದೇವಸ್ಥಾನದಲ್ಲಿ ಅನಾದಿ ಕಾಲದಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದ ಉಪಾಧಿವಂತರ ನಡುವಿನ ಪೂಜಾ ಹಕ್ಕಿನ ಗಲಾಟೆಯಿಂದ ದೇವಸ್ಥಾನ ಮತ್ತೆ ವಿವಾದದ ಕೇಂದ್ರಬಿಂದುವಾಗುವಂತಾಗಿದೆ.

ಇದನ್ನು ಓದಿ: ಬೆಂಗಳೂರು ಇನ್ಫೋಸಿಸ್​ನಲ್ಲಿ ಉದ್ಯೋಗಾವಕಾಶ, ಸಂಬಳ, ಅರ್ಜಿ ಸಲ್ಲಿಕೆ ಪೂರ್ಣ ಮಾಹಿತಿ

ಕೊರೊನಾ ಮಾರ್ಗಸೂಚಿಗಳ ಸಡಿಲಿಕೆ ಬೆನ್ನಲ್ಲೇ ಲಾಕ್‌ಡೌನ್ ಅವಧಿಯಲ್ಲಿ ಮುಚ್ಚಲಾಗಿದ್ದ ಮಹಾಬಲೇಶ್ವರನ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಒದಗಿಸಲಾಗಿತ್ತು. ಸುಪ್ರೀಂಕೋರ್ಟ್ ನೇತೃತ್ವದ ಸಮಿತಿಯ ಆಡಳಿತದಲ್ಲಿರುವ ದೇವಸ್ಥಾನದಲ್ಲಿ ಶಿವರಾತ್ರಿ, ಶ್ರಾವಣ ಮಾಸದಂತಹ ವಿಶೇಷ ಸಂದರ್ಭಗಳಲ್ಲಿ ಉಪಾಧಿವಂತರಿಗೆ ದೇವಸ್ಥಾನಕ್ಕೆ ಆಗಮಿಸಿ ನಿಗಧಿತ ಸಮಯದಲ್ಲಿ ವೈಯಕ್ತಿಕ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದ್ರೆ ಇದೇ ವಿಚಾರವಾಗಿ ಇದೀಗ ಉಪಾಧಿವಂತರು ಹಾಗೂ ದೇವಸ್ಥಾನ ಸಮಿತಿ ನಡುವೆ ಪೂಜಾ ಹಕ್ಕಿನ ಕುರಿತು ವಾಗ್ವಾದ ಏರ್ಪಟ್ಟಿದ್ದು ದೇವಸ್ಥಾನಲ್ಲಿಯೇ ಗಲಾಟೆಗೆ ಕಾರಣವಾಗಿತ್ತು. ಈ ಹಿನ್ನಲೆ ಸದ್ಯ ದೇವಸ್ಥಾನದಲ್ಲಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಯಾರಿಗೂ ಅವಕಾಶ ನೀಡದಂತೆ ಸಮಿತಿ ಅಧ್ಯಕ್ಷತೆ ವಹಿಸಿರುವ ಉಪವಿಭಾಗಾಧಿಕಾರಿ ರಾಹುಲ್ ಪಾಂಡೆ ಆದೇಶಿಸಿದ್ದಾರೆ. ಇದರಿಂದಾಗಿ ಭಕ್ತರಿಗೂ ಸಹ ಆತ್ಮಲಿಂಗದ ದರ್ಶನ ಇಲ್ಲದಂತಾಗಿದೆ.

ಇದನ್ನು ಓದಿ: ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾ ಸಕ ಹುದ್ದೆಗೆ ಅರ್ಜಿ ಆಹ್ವಾನ

ಇನ್ನು ಈ ಹಿಂದೆ ಸರ್ಕಾರದ ಸುಪರ್ದಿಯಲ್ಲಿದ್ದ ಮಹಾಬಲೇಶ್ವರ ದೇವಸ್ಥಾನವನ್ನ 2007ರಲ್ಲಿ ಶ್ರೀ ರಾಮಚಂದ್ರಾಪುರ ಮಠದ ಆಡಳಿತಕ್ಕೆ ನೀಡಲಾಗಿತ್ತು. ಇದಾದ ಬಳಿಕ ಹಿಂದಿನಿಂದ ದೇವರಿಗೆ ಪೂಜೆ ಸಲ್ಲಿಸಿಕೊಂಡು ಬಂದಿದ್ದ ಅನುವಂಶೀಯ ಉಪಾಧಿವಂತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡದ ಹಿನ್ನಲೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವನ್ನ ಸಲ್ಲಿಸಲಾಗಿತ್ತು. ಸದ್ಯ ಈ ಕುರಿತು ಆದೇಶ ನೀಡಿದ್ದ ಸುಪ್ರೀಂಕೋರ್ಟ್ 2021ರ ಮೇ ತಿಂಗಳಿನಲ್ಲಿ ದೇವಸ್ಥಾನವನ್ನ ಮಠದ ಆಡಳಿತದಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು ಮಠದ ಆಡಳಿತದ ಪೂರ್ವದಲ್ಲಿದ್ದ ಪೂಜಾ ವಿಧಾನಗಳನ್ನ ಮುಂದುವರೆಸುವಂತೆ ಆದೇಶಿಸಿ ಆಡಳಿತ ಸಮಿತಿಯೊಂದನ್ನ ರಚನೆ ಮಾಡಿತ್ತು.

ಆದರೆ ಸಮಿತಿಯಲ್ಲಿನ ಕೆಲ ಮಠದ ಸದಸ್ಯರು ಅನುವಂಶೀಯ ಉಪಾಧಿವಂತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವುದಕ್ಕೆ ನಿರಾಕರಣ ಮಾಡಿದ್ದರಿಂದಾಗಿ ಗೊಂದಲ ಉಂಟಾಗುವಂತಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು ಈಗಾಗಲೇ ಯಾವುದೇ ರೀತಿಯ ಗೊಂದಲ ಮಾಡದಂತೆ ಸಮಿತಿಗೆ ಸೂಚನೆ ನೀಡಲಾಗಿದ್ದು ಈ ಸಂಬಂಧ ಸಭೆಯನ್ನ ಕರೆದು ಸೂಕ್ತ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದಾರೆ.

ಒಟ್ಟಾರೇ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಉಪಾಧಿವಂತರು ಹಾಗೂ ಸಮಿತಿ ನಡುವಿನ ಗೊಂದಲದಿಂದಾಗಿ ಮಹಾಬಲೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಪರದಾಡುವಂತಾಗಿರೋದಂತೂ ಸತ್ಯ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಭಕ್ತರ ದರ್ಶನಕ್ಕೆ ಅಡ್ಡಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
Published by:Seema R
First published: