HOME » NEWS » State » USE OF MLA AND MP PHOTO IN ELECTION CAMPAIGN BROCHURE IN GP CANDIDATES RBK HK

ಗ್ರಾಮ ಪಂಚಾಯತ್ ಚುನಾವಣಾ ಪ್ರಚಾರದ ಕರಪತ್ರದಲ್ಲಿ ಶಾಸಕ, ಸಂಸದರ ಭಾವಚಿತ್ರ ಬಳಕೆ: ಅಭ್ಯರ್ಥಿಗಳಿಂದ ನೀತಿಸಂಹಿತೆ ಉಲ್ಲಂಘನೆ

ಸಂಸದ, ಶಾಸಕರ ಭಾವಚಿತ್ರ ಬಳಸಿದ ಕರಪತ್ರ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು. ಅಧಿಕಾರಿಗಳು ಕರಪತ್ರ ಮುಟ್ಟುಗೋಲು ಹಾಕಿಕೊಂಡಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ರಹಿತವಾದ ಚುನಾವಣೆಯಾಗಿದೆ.

news18india
Updated:December 17, 2020, 7:19 AM IST
ಗ್ರಾಮ ಪಂಚಾಯತ್ ಚುನಾವಣಾ ಪ್ರಚಾರದ ಕರಪತ್ರದಲ್ಲಿ ಶಾಸಕ, ಸಂಸದರ ಭಾವಚಿತ್ರ ಬಳಕೆ: ಅಭ್ಯರ್ಥಿಗಳಿಂದ ನೀತಿಸಂಹಿತೆ ಉಲ್ಲಂಘನೆ
ಸಾಂದರ್ಭಿಕ ಚಿತ್ರ
  • Share this:
ಬಾಗಲಕೋಟೆ(ಡಿಸೆಂಬರ್. 17): ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದ ಕಾವು ಪಡೆದುಕೊಂಡಿದೆ. ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲು ಹಲವು ರೀತಿಯಾದ ಕಸರತ್ತು ನಡೆಸುತ್ತಿದ್ದಾರೆ. ಬೀಳಗಿ ತಾಲೂಕಿನ ಅರಕೇರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರು ಅಭ್ಯರ್ಥಿಗಳು ಬಿಜೆಪಿ ಶಾಸಕ, ಸಂಸದರ ಭಾವಚಿತ್ರ ಕರಪತ್ರದಲ್ಲಿ ಬಳಸಿ ಪ್ರಚಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅರಕೇರಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ 3 ರ ಅಭ್ಯರ್ಥಿಗಳಾದ ದಾಳವ್ವ ನಡಗೇರಿ, ದುರ್ಗಪ್ಪ ಚಂಡಕಿ, ಹೇಮಾ ಆಗೋಜಿ ಎಂಬುವರು ಬಾಗಲಕೋಟೆ ಬಿಜೆಪಿ ಸಂಸದ ಪಿ ಸಿ ಗದ್ದಿಗೌಡರ, ಬೀಳಗಿ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ, ಹಾಗೂ ವಿಧಾನಪರಿಷತ್ ಸದಸ್ಯ ಹೆಚ್ ಆರ್ ನಿರಾಣಿ ಭಾವಚಿತ್ರ ಬಳಸಿ ಕರಪತ್ರ ಮುದ್ರಿಸಿ, ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಸಂಸದ, ಶಾಸಕರ ಭಾವಚಿತ್ರ ಬಳಸಿದ ಕರಪತ್ರ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು. ಅಧಿಕಾರಿಗಳು ಕರಪತ್ರ ಮುಟ್ಟುಗೋಲು ಹಾಕಿಕೊಂಡಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ರಹಿತವಾದ ಚುನಾವಣೆಯಾಗಿದೆ. ಹಾಗಾಗಿ ರಾಜಕೀಯ ಮುಖಂಡರ ಪಕ್ಷದ ಭಾವಚಿತ್ರ ಬಳಸಿ ಕರಪತ್ರ, ಕಟೌಟ್, ಜಾಹೀರಾತು ಕೊಡದಂತೆ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಈಗಾಗಲೇ ಸೂಚನೆ ನೀಡಿದ್ದಾರೆ.  ಜಿಲ್ಲೆಯ ಕೆಲವೆಡೆ ನಿಯಮ ಉಲ್ಲಂಘಿಸಿರುವ ಪ್ರಕರಣ ಬೆಳಕಿಗೆ ಬರುತ್ತಿವೆ.

ಇನ್ನು ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿಗಳ ಚುನಾವಣೆಯಲ್ಲಿ ಅಂತಿಮವಾಗಿ 89 ಗ್ರಾಮ ಪಂಚಾಯತಿಗಳ 1397 ಸ್ಥಾನಗಳಿಗೆ 3382 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಸಂಸದ, ಶಾಸಕರ ಭಾವಚಿತ್ರ ಬಳಸಿದ ಕರಪತ್ರ


ಜಿಲ್ಲೆಯ ಮೊದಲ ಹಂತದ 89 ಗ್ರಾಮ ಪಂಚಾಯತಿಗಳ ಒಟ್ಟು 1592 ಸ್ಥಾನಗಳಲ್ಲಿ 41 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿವೆ. 154 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 3382 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. ಜಮಖಂಡಿ ತಾಲೂಕಿನಲ್ಲಿ 1070, ರಬಕವಿ-ಬನಹಟ್ಟಿಯಲ್ಲಿ 791, ಮುಧೋಳ 819, ಬೀಳಗಿ 702 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದರು.

ಮೊದಲ ಹಂತದ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಕೋವಿಡ್-19 ಹಿನ್ನಲೆಯಲ್ಲಿ ಸುರಕ್ಷತಾ ಕ್ರಮ ಅನುಸರಿಸಲಾಗುತ್ತಿದೆ. ಚುನಾವಣಾ ಕಾರ್ಯಕ್ಕೆ ನೇಮಕವಾದ ಎಲ್ಲ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ. ಡಿಸೆಂಬರ 16 ರಂದು ಜಮಖಂಡಿ ಮತ್ತು ಮುಧೋಳ, 17 ರಂದು ರಬಕವಿ-ಬನಹಟ್ಟಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಗೆ ಗ್ರಾ.ಪಂ ಚುನಾವಣಾ ವೀಕ್ಷಕರಾಗಿ ಶಶಿಧರ ಕುರೇರ ನೇಮಕಗೊಂಡಿದ್ದು, ಈಗಾಗಲೇ ಜಿಲ್ಲೆಗೆ ಆಗಮಿಸಿ ವೀಕ್ಷಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಕಲ್ಯಾಣ ಕರ್ನಾಟಕಕ್ಕೆ ತಿರುಪತಿ ಮತ್ತಷ್ಟು ಹತ್ತಿರ ; ಹೊಸ ವರ್ಷಕ್ಕೆ ವಿಮಾನ ಸೇವೆ ಕೊಡುಗೆಜಿಲ್ಲೆಯಲ್ಲಿ 2 ಹಂತಗಳಲ್ಲಿ ನಡೆಯಲಿರುವ ಚುನಾವಣೆಗೆ ಮೊದಲನೇ ಹಂತಕ್ಕೆ 1050 ಪೊಲೀಸ್ ಸಿಬ್ಬಂದಿ, ಎರಡನೇ ಹಂತಕ್ಕೆ 1117 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಜಿಲ್ಲೆಯ ಮುಖ್ಯ ರಸ್ತೆಗಳಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೊದಲನೇ ಹಂತದಲ್ಲಿ 5, ಎರಡನೇ ಹಂತದಲ್ಲಿ 6 ಚೆಕ್‍ಪೋಸ್ಟ್​​ಗಳನ್ನು ಹಾಕಲಾಗುತ್ತಿದೆ.

ಜಿಲ್ಲೆಯಲ್ಲಿ 1564 ರೌಡಿಸೀಟರ್ಸ್ ಹಾಗೂ ಹಳೆಯ ಚುನಾವಣೆಯಲ್ಲಿ ಭಾಗಿಯಾದ ಪ್ರಕರಣಗಳಲ್ಲಿ ದಾಖಲಾದ 366 ಆರೋಪಿತರ ಮೇಲೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 905 ಆಯುಧಗಳನ್ನು ಜಮಾ ಮಾಡಿಸಲಾಗಿದೆ. ಮೊದಲನೇ ಹಂತದಲ್ಲಿ 162 ಹಾಗೂ ಎರಡನೇ ಹಂತದಲ್ಲಿ 166 ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ವಲಬನ್ ಏರಿಯಾಗಳನ್ನು ಗುರುತಿಸಲಾಗಿದ್ದು, ಸಿಪಿಐ, ಡಿಎಸ್ಪಿಗಳ ಜಂಟಿ ತಂಡ ಮಾಡಿ ಪರಿಶೀಲನೆ ನಡೆಸಿವೆ.
Published by: G Hareeshkumar
First published: December 17, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories