ಬೆಂಗಳೂರು: ಪ್ರಧಾನಿ ಮೋದಿ (PM Narendra Modi) ಇಂದು ಮಂಡ್ಯಗೆ (Mandya) ಆಗಮಿಸಿದ್ದ ಹಿನ್ನೆಲೆಯಲ್ಲಿ ಪ್ರಧಾನಿಗಳನ್ನು ಸ್ವಾಗತಿಸಲು ಮಂಡ್ಯ ಬಿಜೆಪಿ (BJP) ಘಟಕದಿಂದ ಫ್ಯಾಕ್ಟರಿ ಸರ್ಕಲ್‌ನಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ ಹಾಕಲಾಗಿತ್ತು. ಈ ಹೆಸರಿನ ದ್ವಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಅದನ್ನು ತೆರವು ಗೊಳಿಸಲಾಗಿತ್ತು. ಸದ್ಯ ಉರಿಗೌಡ ಮತ್ತು ನಂಜೇಗೌಡ ಮಹಾದ್ವಾರ ತೆರವು ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಐಟಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Ashwath Narayan) ಅವರು, ಉರೀಗೌಡ ಮತ್ತು ನಂಜೇಗೌಡ ನಮ್ಮ ಸಮಾಜದವರು. ನಮ್ಮ ಜನರು, ನಮ್ಮ ನಾಡಿನವರು. ಅವರದ್ದು ಕಾಲ್ಪನಿಕ ಅನ್ನುವಂತಹದ್ದು ಬೇಡ, ಈ ಬಗ್ಗೆ ಇತಿಹಾಸದಲ್ಲಿದೆ (History). ಉರಿಗೌಡ ನಂಜೇಗೌಡ ಇತಿಹಾಸದಲ್ಲಿದ್ದಾರೆ. ಇತಿಹಾಸದಲ್ಲಿ ಇರುವುದನ್ನು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಮಾತಾಡಿ
ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ ಅವರು, ಇತಿಹಾಸ ಇರೋದು ಸತ್ಯ. ಇದೆ ಇದನ್ನು ಇಲ್ಲ ಅನ್ನೋ ಪ್ರಶ್ನೆ ಮಾಡೋದು ಸರಿಯಲ್ಲ. ಇವರಿಗೆ ಮತ ಸೃಷ್ಟಿಗಾಗಿ ಟಿಪ್ಪು ಪರವಾಗಿ ಮಾತನಾಡುತ್ತಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಮಾತಾಡಿ ಅವರ ಹಿರಿಮೆ ವಿಶ್ವಕ್ಕೆ ಹೇಳಿ, ಅಬ್ದುಲ್ ಕಲಾಂ ಬಗ್ಗೆ ಮಾತಾಡಿ. ಕೇವಲ ಮತ ಒಲೈಕೆಗಾಗಿ ಟಿಪ್ಪು ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಸಚಿವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: Doddaballapur: ಶನಿ ಮಹಾತ್ಮನ ದೇಗುಲದಲ್ಲಿ ಮಾಂಸ ತಂದಿಟ್ಟ ಕಿಡಿಗೇಡಿಗಳು
ಟಿಪ್ಪು ಸುಲ್ತಾನ್ ಓರ್ವ ಮತಾಂಧ, ಜನರ ಮೇಲೆ ಕ್ರೌರ್ಯ ಎಸಗಿರುವುದು ಗೊತ್ತಿದೆ. ಉರಿಗೌಡ, ನಂಜೇಗೌಡನ ಬಗ್ಗೆ ಪ್ರಶ್ನೆ ಮಾಡುವ ಬದಲು ಟಿಪ್ಪು ಬಗ್ಗೆ ಪ್ರಶ್ನೆ ಮಾಡಿ. ಆದರೆ ಮಹಾದ್ವಾರ ಯಾಕೆ ತೆರವು ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ, ಅಲ್ಲಿ ಏನಾಗಿದೆಯೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಲಾಭಕ್ಕಾಗಿ ಉರಿಗೌಡ-ನಂಜೇಗೌಡ ಹೆಸರು ಮುನ್ನೆಲೆಗೆ
ಉರಿಗೌಡ ಮತ್ತು ದೊಡ್ಡ ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ನಿಜ ಎಂದು ಬಿಜೆಪಿಯವರು ಬಣ್ಣಿಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ಟಿಪ್ಪು ಸುಲ್ತಾನ್‌ನನ್ನು ಕೊಂದ ದೋಷವನ್ನು ಒಕ್ಕಲಿಗ ಸಮುದಾಯದ ತಲೆಗೆ ಕಟ್ಟಲು ಮುಂದಾಗಿದ್ದಾರೆ ಎಂದು ಈ ಹಿಂದಿನಿಂದಲೂ ವಿರೋಧ ಕೇಳಿ ಬಂದಿತ್ತು.
ಮಹಾದ್ವಾರಕ್ಕೂ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಹೆಸರು ಇಟ್ಟಿದ್ದರಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಈ ಹಿನ್ನೆಲೆ ಎಲ್ಲೆಡೆಯಿಂದ ಕೇಳಿಬಂದ ವಿರೋಧಕ್ಕೆ ಮಣಿದ ಬಿಜೆಪಿ ಹೆಸರನ್ನು ಬದಲಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿತ್ತು.
ಇದನ್ನೂ ಓದಿ: Sumalatha Ambareesh: ಜ್ಯೋತಿಷಿ ಕಥೆ ಹೇಳಿ ಕಾಂಗ್ರೆಸ್-ಜೆಡಿಎಸ್ ಟಾಂಗ್ ನೀಡಿದ ಮಂಡ್ಯ ಸಂಸದೆ
ಈ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಅವರು ಕೂಡ ಆಕ್ರೋಶ ಹೊರ ಹಾಕಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ-ನಂಜೇಗೌಡ ಹೆಸರಿನ ಕಮಾನು ಹಾಕಿರುವುದು, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಮಂಡ್ಯಕ್ಕೆ ಮಾತ್ರವಲ್ಲ ಇಡೀ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ. ಕರ್ನಾಟಕ ಮುಖ್ಯಮಂತ್ರಿಗಳು ತಕ್ಷಣ ಮಧ್ಯೆ ಪ್ರವೇಶಿಸಿ ಈ ಸ್ವಾಗತ ಕಮಾನನ್ನು ಕಿತ್ತು ಹಾಕಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದರು.
ಇತ್ತ ಪ್ರಧಾನಿ ಮೋದಿ ರೋಡ್ ಶೋ ಮಾರ್ಗದ ಫ್ಯಾಕ್ಟರಿ ಸರ್ಕಲ್‌ನಲ್ಲಿ ಹಾಕಲಾಗಿದ್ದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ ತೆರವು ಮಾಡದಿದ್ದರೆ ಅಥವಾ ಹೆಸರು ಬದಲಾಯಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಜತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಕೂಡಾ ವಿರೋಧ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ