news18-kannada Updated:October 3, 2020, 12:09 PM IST
ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಭಿಮಾನಿಗಳಿಗೆ ಉಡುಗೊರೆಯಾಗಿ ಸಿನಿಮಾ ನಿರ್ದೇಶನ ಮಾಡುವ ಸುದ್ದಿ ಕೊಟ್ಟಿದ್ದರು. ಅದರಲ್ಲೂ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕೊಡಗಿಗೆ ಪ್ರವಾಸಕ್ಕೆಂದು ಹೋಗಿದ್ದರು. ಅಲ್ಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಉಪ್ಪಿ ಅವರ ಪತ್ನಿ ಪ್ರಿಯಾಂಕಾ, ಅದರ ಫೋಟೋಗಳನ್ನು ಹಂಚಿಕೊಂಡಿದ್ದರು. ಜೊತೆಗೆ ಉಪೇಂದ್ರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವುಗಳು ಮುಗಿದ ನಂತರ ತಮ್ಮ ನಿರ್ದೇಶನದ ಸಿನಿಮಾದ ಕೆಲಸವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದರು. ಇದರ ನಡುವೆ ಈಗ ಅಸಮಾನ್ಯರಿಗಾಗಿ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯಕ್ಕೆ ಪರ್ಯಾಯವನ್ನು ಹುಡುಕುವ ಯತ್ನದಲ್ಲಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕೆಲ ಚುನಾವಣೆಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಸಿಳಿಸಿದ್ದಾರೆ.
ಆದರೆ ಅವರ ಪ್ರಜಾಕೀಯ ಆಲೋಚನೆಗಳು ಇನ್ನೂ ಜನರಿಗೆ ತಲುಪದ ಕಾರಣ, ಇದುವರೆಗೂ ಅವರಿಗೆ ಯಶಸ್ಸು ದೊರೆತಿಲ್ಲವಷ್ಟೆ. ಆದರೆ ಶತಾಯಗತಾಯ ಜನರಿಗೆ ಪ್ರಜಾಕೀಯ ಪರಿಕಲ್ಪನೆಯನ್ನು ಅರ್ಥ ಮಾಡಿಸಲೇಬೇಕೆಂದು ಉಪ್ಪಿ ಪಣತೊಟ್ಟಿದ್ದಾರೆ. ಅಸಾಮಾನ್ಯ ಜನರಿಗಾಗಿಯೇ ಒಂದು ಓಪನ್ ಲೆಟರ್ ಬರೆದಿದ್ದಾರೆ.
ಉಪೇಂದ್ರ ಅವರು ಬರೆದಿರುವ ಪತ್ರದ ವಿವರಐಕ್ಯತೆಯು ಮಣ್ಗೂಡಿ ಭಾರತಿಯು ಬಳಲಿರುಲು, ನಿನಗೊಬ್ಬನಿಗೆ ಮಾತ್ರ ಬರಲಿಲ್ಲ ನಿದ್ರೆ. ಬ್ರಿಟಿಷರಿಗಿಂತ ಅಪಾಯಕಾರಿ ಈ ರಾಜಕೀಯ! ಆಗ ನಮ್ಮನ್ನು ದೋಚುತ್ತಿರುವ, ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ವೈರಿ ಯಾರು ಎಂದು ಗೊತ್ತಾಗುತ್ತಿತ್ತು. ಈಗ ನಮ್ಮವರೇ ಇಂಗ್ಲಿಷರು ಬಿಟ್ಟುಹೋದ ಅಧಿಕಾರದ ಗದ್ದುಗೆ ಮೇಲೆ ಕೂತಿದ್ದಾರೆ. ಬ್ರಿಟಿಷರು ನಮ್ಮನ್ನು ಗುಲಾಮರನ್ನಾಗಿ ಮಾಡಿ ಅವರ ದೇಶಕ್ಕೆ ನಮ್ಮ ಜನರ ಪರಿಶ್ರಮ ಮತ್ತು ನೈಸರ್ಗಿಕ ಸಂಪತ್ತನ್ನು ದೋಚುತ್ತಿದ್ದರು. ಆದರೆ ಈಗ ನಮ್ಮವರೇ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ನಮ್ಮ ಜನರ ಕೌಶಲ್ಯದ ಪ್ರತಿಫಲ, ಜನರ ಪರಿಶ್ರಮದ ತೆರಿಗೆ ಹಣ ಮತ್ತು ದೇಶದ ನೈಸರ್ಗಿಕ ಸಂಪತ್ತನ್ನು ಜಾಗತೀಕರಣದ ಹೆಸರಲ್ಲಿ ಎಫ್ಡಿಐ (ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್) ಮೂಲಕ ಇಡೀ ಜಗತ್ತಿನ ಹಲವು ಬಲಾಡ್ಯ ದೇಶಗಳು ದೋಚುವಂತೆ ಸಹಕರಿಸುತ್ತಿದೆ. ಇದಕ್ಕೆಲ್ಲಾ ಕಾರಣ? ಅದೇ ಬ್ರಿಟಿಷರು ಬಿಟ್ಟು ಹೋದ ಎ ಫಾರ್ ಆಪಲ್ ಗುಲಾಮಿ ಕೆಲಸ. ಸಂಬಳಕ್ಕಾಗಿ, ಸರ್ಟಿಫಿಕೇಟ್ಗಾಗಿ ಓದುವ ಉರು ಹೊಡೆದು ಪರೀಕ್ಷೆಯಲ್ಲಿ ಕಕ್ಕುವ ಸ್ಪರ್ಧಾತ್ಮಕ ಶಿಕ್ಷಣ, ಇಸ್ರೇಲ್, ಫಿನ್ಲ್ಯಾಂಡ್ ದೇಶಗಳ ರೀತಿ ನಾವು ನವೀನ, ಕೌಶಲ್ಯ, ಸಂಶೋಧನಾ ಆವಿಷ್ಕಾರಗಳನ್ನು ಪರಪಂಚಕ್ಕೆ ಕೊಡುವಂತಹಾ ವಿದ್ಯಾರ್ಥಿಗಳನ್ನು ಸೃಷ್ಟಿಸುವಂತಹಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮ ನಾಯಕರಿ ತಲೆಕೆಡಿಸಿಕೊಳ್ಳಲೇ ಇಲ್ಲ! ಕಾರಣ? ಅದೇ ನಾಯಕ ಸಂಸ್ಕೃತಿಯ ರಾಜಕೀಯ ಎಂದು ಪತ್ರದಲ್ಲಿ ಬರೆದಿದ್ದಾರೆ ಉಪೇಂದ್ರ.

ಉಪೇಂದ್ರ
ಅಪ್ಪ ಹಾಕಿದ ಆಲದ ಮರದ ರೀತಿ ನಾಯಕ ತಾನು ತಿಳಿದಿರುವುದೇ ಶ್ರೇಷ್ಠ ಎಂದು ಅದನ್ನೇ ಜನರ ಮೇಲೆ ಹೇರುತ್ತಾ ಹೋಗಿದ್ದು ಮತ್ತು ಸ್ವಾತಂತ್ರ್ಯ ಬಂದಿದ್ದು ನಮ್ಮ ದೇಶದವರೇ ಆಳಲಿ ಎಂದು ಅದನ್ನೇ ಜನರ ಮೇಲೆ ಹೇರುತ್ತಾ ಹೋಗಿದ್ದು ಎಂದು ತಾನೂ ಬ್ರಿಟಿಷರು ಮಾಡಿದಂತೆಯೇ (ಜನ ಸಾಮಾನ್ಯನಿಗೆ ಏನೂ ಗೊತ್ತಿಲ್ಲ) ಎಂದು ನಮ್ಮ ಜನರನ್ನು ತನ್ನ ಗುಲಾಮರನ್ನಾಗಿ ಮಾಡಿ ತಾನು ನಾಯಕ ಈ ದೇಶವನ್ನು ಉದ್ಧಾರ ಮಾಡುತ್ತೇನೆಂದು ಹೊರಟು ದೇಶ ಎಂದರೆ ಅಲ್ಲಿ ವಾಸಿಸುವ ಜನ ಬುದ್ಧಿವಂತಿಕೆಯಲ್ಲಿ, ವಿಚಾರವಂತರಾಗಿ ಉದ್ದಾರವಾಗಬೇಕೆಂಬ ಸಾಮಾನ್ಯ ತಿಳುವಳಿಕೆ ಇಲ್ಲದೇ ಜನರನ್ನು ಅಂಧಕಾರದಲ್ಲೇ ಇಟ್ಟಯ ಜನರಲ್ಲಿ ಏನೂ ಬದಲಾವಣೆ ಕಾಣದಿದ್ದಾಗ ನಮ್ಮ ಜನಕ್ಕೆ ಏನೂ ಗೊತ್ತಾಗಲ್ಲ ಎಂದು ಚುನಾವಣೆ ಸಮಯದಲ್ಲಿ ತಾನು ಮಾಡಿರುವ ಕೆಲಸಗಳಲ್ಲಿ ಹಣ ಚೆಲ್ಲಿ ಪ್ರಚಾರಗಳ ಮೂಲಕ ಜನರ ತಲೆ ತುಂಬಿಸುವ ಕೆಲಸ ಶುರು ಮಾಡಿದ! ಇಲ್ಲಿಂದ ರಾಜಕೀಯ ಒಂದು ವ್ಯಾಪಾರದಂತಾಗಿ ಹಣ ಇದ್ದು ಪ್ರಚಾರ ಮಾಡುವ ಶ್ರೀಮಂತ ಮತ್ತು ತೋಳ್ಬಲದಿಂದ ಹೋರಾಟ ಮಾಡುವ ಬಲಿಷ್ಠರಿಗೆ ಮಾತ್ರ ಎಂಬಂತಾಗಿ ಪ್ರಚಾರವಿಲ್ಲದೇ ಗೆಲ್ಲುವುದು ಅಸಾಧ್ಯ ಎಂದಾದಾಗ ಜಾಹೀರಾತಿಲ್ಲದೇ ಒಂದು ವಸ್ತು ಮಾರಾಟವಾಗುವುದಿಲ್ಲ ಎಂಬಂತೆ ಪ್ರಚಾರ ಕೊಡುವುದು ಎಂಬುದೂ ಒಂದು ಹಣ ಗಳಿಸುವ ವ್ಯಾಪಾರವಾಗಿ ಕೊನೆ ಕೊನೆಗೆ ನಾಯಕರದೇ ಮಾಲೀಕತ್ವದ ಪತ್ರಿಕೆ, ಟೀವಿ ಚಾನಲ್ಗಳನ್ನೇ ಹುಟ್ಟುಹಾಕಿ ಹಲವಾರು ನಾಯಕರ ದಂಡೇ ಹುಟ್ಟಿಕೊಂಡಿತು.

ಕೊಡಗಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಉಪೇಂದ್ರ
ಪಕ್ಷ, ಪ್ರತಿಪಕ್ಷದ ಕೆಸರೆರಚಾಟ ತಾರಕಕ್ಕೇರಿ ಕೊಲೆ ಭ್ರಷ್ಟಾಚಾರ, ಅತ್ಯಾಚಾರಗಳಂತಹ ವಿಷಯಗಳನ್ನೂ ರಾಜಕೀಯಗೊಳಿಸುವ ಹೀನಾಯ ಮಟ್ಟಕ್ಕೆ ಇಂದಿ ಇಳಿದಿದೆ. ಪ್ರಜೆ ಮಾತ್ರ ಅಂದಿನಿಂದ ಇಂದಿನವರೆಗೂ ಏನೂ ಗೊತ್ತಿಲ್ಲದ ಪ್ರಚಾರ ಮತ್ತು ನಾಯಕ ಎಂಬ ದೀಪಕ್ಕೆ ಆಕರ್ಷಿತನಾಗಿ ಆ ಬೆಂಕಿಗೆ ಬಿದ್ದು ಆಹುತಿಯಾಗುವ ಹುಳುಗಳಾಗಿರುವ ಪ್ರಜೆ. ಇಂದಿಗೂ ನಾಯಕರು ವಿಜ್ರಂಭಣೆಯಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ನೋಡಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕೆಲವು ಸಮಯ ಖುಷಿ ಪಡುತ್ತಾನೆ! ನಿನಗೆ ಸ್ವಾತಂತ್ರ್ಯ ಸಿಗಬೇಕೆಂದರೆ ನೀನು ನಾಯಕನಾಗಬೇಕು, ನೀನು ಹೇಳಿದಂತೆ ಕೆಲಸ ಮಾಡುವ ಕೆಲಸಗಾರರನ್ನು ಕಿಟ್ಟುಕೋ ಎಂದರೆ ಏ ನಾಯಕ ಇಲ್ಲದೇ ಇದ್ದರೆ ಹೇಗಾಗುತ್ತೆ? ನಮ್ ಜನಕ್ಕೆ ಅಧಿಕಾರ ಕೊಟ್ರೆ ಅಷ್ಟೇ, ನಮ್ ಜನಾನೇ ಸರಿ ಇಲ್ಲ ಸಾರ್, ಅಂತಾನೆ! ಹಾಗಾದ್ರೆ ನೀನು ಜನ ಅಲ್ವಾ? ನೀನು ದನಾನ? ಅಂದ್ರೆ ಹಿಹಿಹಿ ಅಂತ ಹಲ್ ಕಿರಿತಾನೆ.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಷೇಕ್ ಅಂಬರೀಷ್: ಭರ್ಜರಿ ಉಡುಗೊರೆ ಕೊಟ್ಟ ಬ್ಯಾಡ್ ಮಾನರ್ಸ್ ಚಿತ್ರತಂಡ
ಇಷ್ಟೆಲ್ಲ ಆದರೂ ಈ ದೇಶದ ವೈಶಿಷ್ಟ್ಯವೇನೆಂದರೆ ಈಗಲೂ ತುಂಬಾ ಯುವಕರು, ಯುವತಿಯರು ಇನ್ನೂ ವಿಚಾರವಂತರಾಗೇ ಇದ್ದಾರೆ! ಈ ಪ್ರಸ್ತುತ ವ್ಯವಸ್ಥೆಯಲ್ಲೇ ಏನೋ ಸರಿ ಇಲ್ಲಾ ಎಂದು ಯೋಚಿಸುತ್ತಿದ್ದಾರೆ! ಬದಲಾಗ್ತಿದ್ದಾರೆ! ಅಂತಹ ಅಸಾಮಾನ್ಯ ಪ್ರಜೆಗಳಿಗೆ ಪ್ರಜಾಕೀಯ ಎಂಬ ಒಂದು ವೇದಿಕೆ, ಅಸಾಮಾನ್ಯ ಜನರ ಒಂದು ಪಕ್ಷ ಬಂದಿದೆ! ಇಲ್ಲಿ ಚುನಾವಣೆಗೆ ನಿಂತು ಗೆದ್ದರೆ ಅಲ್ಲಾ ಕೆಲಸ ಸಿಕ್ಕರೆ ಅವನು ಸಂಬಳ ತಗೊಂಡು ಜನರು ಹೇಳೋ ಕೆಲಸ ಮಾತ್ರ ಮಾಡೋ ಕಾರ್ಮಿಕ ಆಗ್ತಾನೆ. ಜನಗಳೇ ನಾಯಕರಾಗ್ತಾರೆ. ಜನರಿಗೆ ಇಷ್ಟ ಆಗ್ಲಿಲ್ಲಾ ಅಂದ್ರೆ ಕೆಲಸ ಬಿಟ್ಟು ಹೋಗ್ತಾನೆ. ಮತ್ತೆ ಇನ್ನೊಂದು ಚುನಾವಣೇನಾ? ಅಂತ ತಲೆ ಕೆಡಿಸಿಕೊಳ್ಳಬೇಡಿ. ಈ ಥರಾ ಒಂದೆರಡು ಕಡೆ ಆದ್ರೆ ಬೇರೆ ಜನಪ್ರತಿನಿಧಿಗಳು ಹುಷಾರಾಗ್ತಾರೆ. ನಮಗೆ ಸಂಬಳ ಕೊಡೋರು ಕೇಳ್ತಾರೆ ಅಂತ. ಇದು RIGHT TO CALL BACK ಸಂವಿಧಾನದಲ್ಲಿ ಬರಬೇಕು.
ಜನ ಈ ರೀತಿ ತಮಗೆ ಏನು ಬೇಕು ಅಂತ ಆಡಳಿತದಲ್ಲಿ ಅಧಿಕಾರದಲ್ಲಿ ಭಾಗವಹಿಸಿದರೆ ಜನರಿಗೆ ಬೇಕಾಗಿರೋ ಶಿಕ್ಷಣ, ಆರೋಗ್ಯ, ಕೆಲಸ ಹೀಗೆ ಒಂದೊಂದಾಗಿ ಬದಲಾಗುತ್ತೆ ಎಲ್ಲದಕ್ಕಿಂತಾ ಮುಖ್ಯವಾಗಿ ಜನ ಬದಲಾಗ್ತಾರೆ, ಸ್ವತಂತ್ರರಾಗಿ ವಿಚಾರ ಮಾಡುವ ಬುದ್ಧಿವಂತರಾಗ್ತಾರೆ, ಆವಿಷ್ಕಾರಗಳಾಗುತ್ತೆ, ಆತ್ಮನಿರ್ಭರ ಭಾರತ ಆಗುತ್ತೆ ನಮ್ ಕಾಲ್ಮೇಲೆ ನಾವು ನಿಲ್ತೀವಿ. ನನಗೊಬ್ಬ ನಾಯಕ ಬೇಕು ಎಂಬ ಗುಲಾಮಗಿರಿ ಹೋದ್ರೆ ತಾನೇ ನಮ್ ಜನ ? ನಾಯಕರಾಗೋದು? ಉದ್ದಾರ ಆಗೋಗು? ಅಂದ್ರೆ ಆ ಜನ ಇರೋ ಈ ದೇಶ ಉದ್ಧಾರ ಆಗೋದು. ಅದೆಲ್ಲದಕ್ಕಿಂತ ಮುಂಚೆ ಈಗ ಈ ಕ್ಷಣ ನನಗೆ ಯಾವ ತೋಲಾಂಡಿ ನಾಯಕ ಬೇಡ. ನಾನೇ ಸ್ವಯಂ ನಾಯಕ ಆಗ್ತೀನಿ ಅಂತ ಆತ್ಮವಿಶ್ವಾಸದಿಂದ ಈ ಸಂದೇಶವನ್ನು ನಾಲ್ಕು ಮಂದಿಗೆ ಫಾರ್ವರ್ಡ್ ಮಾಡ್ತೀರಾ..? ಅಂತ ಉಪೇಂದ್ರ ಮನವಿ ಮಾಡಿದ್ದಾರೆ.
Published by:
Anitha E
First published:
October 3, 2020, 11:37 AM IST