Kodagu Rains: ಗದ್ದೆಯಲ್ಲೇ ಕರಗುತ್ತಿದೆ ಭತ್ತ, ಹೊಲದಲ್ಲೇ ಮೊಳಕೆಯೊಡೆಯುತ್ತಿದೆ ಮೆಕ್ಕೆಜೋಳ

ಇದೂವರೆಗೆ ಯಾವುದೇ ಅಧಿಕಾರಿಯೂ ಮಳೆಯಿಂದಾಗಿರುವ ನಷ್ಟ ಪರಿಶೀಲನೆಗೆ ಬಂದಿಲ್ಲ. ನಮ್ಮ ಸಂಕಷ್ಟವನ್ನು ಆಲಿಸುವವರು ಯಾರು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲೂ ಮಳೆಯ ಎಫೆಕ್ಟ್ ರೈತರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. 

ಕೊಡಗು ಮಳೆ

ಕೊಡಗು ಮಳೆ

  • Share this:
ಕೊಡಗು : ಕೊಡಗು ಜಿಲ್ಲೆಯಲ್ಲಿ (Kodagu Rains) 2018 ರಿಂದಲೂ ನಿರಂತರವಾಗಿ ನಾಲ್ಕು ವರ್ಷಗಳಿಂದಲೂ ಭಾರೀ ಮಳೆಗೆ ಪ್ರವಾಹ ಭೂಕುಸಿತ (Rain, Flood And Landslide) ಸಂಭವಿಸಿ ಜನರು ಭಾರೀ ನಷ್ಟ ಅನುಭವಿಸಿದ್ದರು. ಈ ಬಾರಿಯೂ ಮಳೆಗಾಲದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಪರಿಣಾಮ ರೈತರು (Farmers) ಕಷ್ಟಪಟ್ಟು ಬೆಳೆದಿದ್ದ ಕಾಫಿ, ಮೆಣಸು ಎಲ್ಲವೂ ಪ್ರವಾಹದ ಪಾಲಾಗಿದ್ದವು. ಇದೀಗ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ಕೊಡಗಿನಲ್ಲೂ ಪ್ರತೀ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ಮಳೆ (Heavy Rainfall) ಸುರಿಯುತ್ತಿದೆ.

ಅಕ್ಟೋಬರ್ ಅಂತ್ಯಕ್ಕೆ ಸಂಪೂರ್ಣ ನಿಂತು ಹೋಗಬೇಕಾಗಿದ್ದ ಮಳೆ, ಈ ಬಾರಿ ನವೆಂಬರ್ ತಿಂಗಳು ಮುಗಿಯುವ ಹಂತಕ್ಕೆ ಬಂದರೂ ಇನ್ನೂ ಸುರಿಯುತ್ತಿದೆ. ರೈತರು ಬೆಳೆದ ಭತ್ತ ಕೊಯ್ಲಿಗೂ ಮುನ್ನವೇ ಗದ್ದೆಯಲ್ಲೇ ಕರಗುತ್ತಿದೆ.

ಭತ್ತದ ಗದ್ದೆಗಳಲ್ಲಿ ಅತ್ಯಧಿಕ ನೀರು ಶೇಖರಣೆ

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಗೆ ಭತ್ತ ನೆಲಕಚ್ಚಿದೆ. ಭತ್ತದ ಬೆಳೆ ಕಾಳು ಕಟ್ಟುವ ಸಮಯ ಇದಾಗಿದ್ದು, ಗದ್ದೆಗಳಲ್ಲಿ ನೀರಿನ ಅಂಶ ಕಡಿಮೆ ಇರಬೇಕಾಗಿತ್ತು. ಆದರೆ ತೀವ್ರ ಮಳೆ ಸುರಿಯುತ್ತಿರುವುದರಿಂದ ನೀರಿನ ಅಂಶ ಜಾಸ್ತಿಯಾಗಿ ಭತ್ತ ಸಂಪೂರ್ಣ ಜೊಳ್ಳಾಗುತ್ತಿದೆ. ಇದರಿಂದ ಮುಂದಿನ ಒಂದು ವರ್ಷದ ಜೀವನಕ್ಕೆ ಏನು ಮಾಡಬೇಕು ಎನ್ನೋ ಚಿಂತೆಗೆ ರೈತರು ಬಿದ್ದಿದ್ದಾರೆ.

ಇದನ್ನೂ ಓದಿ: Kolar Rain: 34 ಸಾವಿರ ಹೆಕ್ಟೇರ್ ರಾಗಿ ಬೆಳೆ ನೀರು ಪಾಲು, ಇಬ್ಬರ ಸಾವು: ಕಾಣೆಯಾದ ಜನಪ್ರತಿನಿಧಿಗಳು

ಕೊನೆ ಪಕ್ಷ ಭತ್ತದ ಹುಲ್ಲಾದರೂ ಸಿಗಬಹುದು, ಅದರಲ್ಲಾದರೂ ಸಣ್ಣದಾದ ಆದಾಯವಾದರೂ ಸಿಗುತ್ತದೆ ಎಂದುಕೊಂಡಿದ್ದ ರೈತರಿಗೆ ಅದು ಕೂಡ ಸಿಗದ ಸ್ಥಿತಿ ಎದುರಾಗಿದೆ. ಭತ್ತದ ಬೆಳೆ ಗದ್ದೆಯಲ್ಲೇ ನೆಲಕಚ್ಚಿರುವುದರ ಜೊತೆಗೆ ನೀರು ತುಂಬಿಕೊಂಡಿರುವುದರಿಂದ ಹುಲ್ಲು ಸಹ ಕರಗುತ್ತಿದೆ. ಹೀಗಾಗಿ ರೈತರು ಕಷ್ಟ ಪಟ್ಟು ಬೆಳೆದ ಭತ್ತದ ಬೆಳೆ ಕೈಗೆ ಬರದಂತಾಗಿದೆ.

ಕುಶಾಲನಗರದಲ್ಲಿ ಸಂಪೂರ್ಣ ನೆಲಕಚ್ಚಿದ ಭತ್ತ

ಕುಶಾಲನಗರ ತಾಲ್ಲೂಕಿನ ಹುಲುಸೆ ಗ್ರಾಮ ರೈತ ಜವರಪ್ಪ ಅವರು ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿ 2 ಎಕರೆ ಪ್ರದೇಶದ ಗದ್ದೆಯಲ್ಲಿ ರಾಜಮುಡಿ ತಳಿಯ ಭತ್ತ ಬೆಳೆದಿದ್ದರು. ಭಾರೀ ಮಳೆಗೆ ಎಲ್ಲವೂ ಸಂಪೂರ್ಣ ನೆಲಕಚ್ಚಿರುವುದರಿಂದ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತೆ ಆಗಿದೆ.

ಹೀಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಸರ್ಕಾರ ಗಮನಹರಿಸಿ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬಿದ್ದಿರುವ ಭತ್ತದ ಬೆಳೆಯನ್ನು ನೀರಿನಿಂದ ಮೇಲೆತ್ತಲು ರೈತ ಜವರಪ್ಪ ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ:  Karnataka Weather Today: ಇಂದು, ನಾಳೆಯೂ ಮುಂದುವರಿಯಲಿದೆ ವರುಣನ ಅಬ್ಬರ

ಮೊಳಕೆ ಒಡೆಯುತ್ತಿರುವ ಮೆಕ್ಕೆಜೋಳ

ಮತ್ತೊಂದೆಡೆ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸುತ್ತಮುತ್ತ ಸಾವಿರಾರು ರೈತರು ಬೆಳೆದಿದ್ದ ಮೆಕ್ಕೆಜೋಳ ಕೂಡ ಭಾರೀ ಮಳೆಗೆ ನೆಲಕ್ಕೆ ಬಿದ್ದು ಕರಗಿ ಹೋಗುತ್ತಿದೆ. ನಿತ್ಯ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ದರಿಂದ ಮೆಕ್ಕೆಜೋಳವನ್ನು ಕಟಾವು ಮಾಡಲಲು ಸಾಧ್ಯಲಾಗುತ್ತಿಲ್ಲ. ಹೀಗಾಗಿ ಮಳೆಗೆ ಮೆಕ್ಕೆಜೋಳದ ಬೆಳೆ ನೆಲಕಚ್ಚಿದ್ದು, ಕಟಾವಿಗೂ ಮುನ್ನವೇ ಜೋಳ ಮೊಳಕೆಯೊಡೆಯುತ್ತಿದೆ.

ಮತ್ತಷ್ಟು ಜೋಳ ಈಗಾಗಲೇ ಗಿಡಗಳಾಗಿದ್ದರೇ ಎಷ್ಟೋ ತೆನೆಗಳು ಕರಗಿ ಹೋಗುತ್ತಿವೆ. ಹೆಬ್ಬಾಲೆ ಗ್ರಾಮದ ರೈತ ರಾಜೇಶ್ ಅವರು ಎರಡು ಲಕ್ಷ ರೂಪಾಯಿ ವೆಚ್ಚ ಮಾಡಿ 15 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಈಗ ತಾವು ಮಾಡಿದ್ದ ವೆಚ್ಚವೂ ಕೈಗೆ ಸಿಗುತ್ತೋ ಇಲ್ಲವೋ ಎನ್ನೋ ಆತಂಕದಲ್ಲಿ ರೈತ ರಾಜೇಶ್ ಇದ್ದಾರೆ.

ರೈತರನ್ನು ಸಂಕಷ್ಟಕ್ಕೆ ದೂಡಿದ ಮಳೆರಾಯ

ಇದೂವರೆಗೆ ಯಾವುದೇ ಅಧಿಕಾರಿಯೂ ಮಳೆಯಿಂದಾಗಿರವ  ನಷ್ಟ ಪರಿಶೀಲನೆಗೆ ಬಂದಿಲ್ಲ. ನಮ್ಮ ಸಂಕಷ್ಟವನ್ನು ಆಲಿಸುವವರು ಯಾರು ಎಂದು ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲೂ ಮಳೆಯ ಎಫೆಕ್ಟ್ ರೈತರ ಬದುಕನ್ನು ಸಂಕಷ್ಟಕ್ಕೆ ದೂಡಿದೆ.
Published by:Mahmadrafik K
First published: