Dakshina Kannada: ದಕ್ಷಿಣ ಕನ್ನಡದ ಶಾಂತಿನಗರ ನಿವಾಸಿಗಳ ಶಾಂತಿ ಕೆಡಿಸಿದ ತಾಲೂಕು ಕ್ರೀಡಾಂಗಣ

ಕ್ರೀಡಾಂಗಣವನ್ನು ಸಮತಟ್ಟು ಮಾಡುವ ಸಂದರ್ಬದಲ್ಲಿ ತೆಗೆದ ಮಣ್ಣನ್ನು ಕ್ರೀಡಾಂಗಣದ ಕೆಳ ಭಾಗದಲ್ಲಿರುವ ಪ್ರದೇಶದಲ್ಲಿ ಸುರಿಯಲಾಗಿದೆ. ಹೀಗೆ ಸುರಿದ ಮಣ್ಣು ಇದೀಗ ಮೈದಾನದ ಕೆಳ ಭಾಗದಲ್ಲಿರುವ ಆರು ಕುಟುಂಬಗಳಲ್ಲಿ ಪ್ರಾಣ ಭಯದ ವಾತಾವರಣವನ್ನು ನಿರ್ಮಾಣಗೊಳಿಸಿದೆ. ಅವೈಜ್ಞಾನಿಕವಾಗಿ ಲೋಡುಗಟ್ಟಲೆ ಮಣ್ಣನ್ನು ಈ ಭಾಗದಲ್ಲಿ ಸುರಿಯಲಾಗಿದ್ದು, ಸುಮಾರು 100 ಅಡಿಗೂ ಎತ್ತರದಲ್ಲಿ ಮಣ್ಣನ್ನು ರಾಶಿ ಹಾಕಲಾಗಿದೆ.

ರಾಶಿ ಹಾಕಲಾಗಿರುವ ಮಣ್ಣು

ರಾಶಿ ಹಾಕಲಾಗಿರುವ ಮಣ್ಣು

  • Share this:
ಕ್ರೀಡಾಳುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣವೊಂದು (Play Ground) ಸ್ಥಳೀಯರ ಪಾಲಿಗೆ ಕಂಟಕವಾಗಿ ಪರಿಣಮಿಸುವ ಲಕ್ಷಣಗಳು ಕಂಡು ಬರುತ್ತಿವೆ. ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಹಿನ್ನಲೆಯಲ್ಲಿ ಲೋಡುಗಟ್ಟಲೆ ಮಣ್ಣನ್ನು (Soil) ಹತ್ತಾರು ಕುಟುಂಬಗಳು ಇರುವ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ರಾಶಿ ಹಾಕಲಾಗಿದೆ. 100 ಅಡಿಗೂ ಎತ್ತರದಲ್ಲಿ ರಾಶಿ ಹಾಕಲಾಗಿರುವ ಈ ಮಣ್ಣು ಸಣ್ಣ ಮಳೆ ಬಂದರೂ, ಕೆಳ ಭಾಗದಲ್ಲಿರುವ ಮನೆಗಳ ಮೇಲೆ ಹಾಗೂ ಕೃಷಿ ತೋಟಗಳಿಗೆ (Farms) ನುಗ್ಗುವ ಸ್ಥಿತಿಯಿದೆ. ಕೋಟಿಗಟ್ಟಲೆ ರೂಪಾಯಿ ವ್ಯಯಿಸಿ ಈ ಕಾಮಗಾರಿ ನಡೆಸುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಯೋಜನೆ (Project) ನೀರಿನ ಮೇಲೆ ಹೋಮ ಇಟ್ಟಂತೆ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ನಗರದ ಹೊರವಲಯದ ಶಾಂತಿನಗರ ಎಂಬಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್. ಅಂಗಾರ ಅವರ ಮುತುವರ್ಜಿಯಲ್ಲಿ ಈ ಕ್ರೀಡಾಂಗಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಕ್ರೀಡಾಂಗಣದ ಅಗಲೀಕರಣದ ಕಾಮಗಾರಿ

ಈ ಹಿಂದೆ ಇದ್ದಂತಹ ಕ್ರೀಡಾಂಗಣವು ನೆಲ ಮಟ್ಟದಿಂದ ಎತ್ತರದಲ್ಲಿ ಇದ್ದ ಕಾರಣ, ಕ್ರೀಡಾಂಗಣವನ್ನು ಸಮತಟ್ಟು ಮಾಡುವ ಕಾಮಗಾರಿಗಾಗಿ ಹಾಗೂ ಇತರ ಅಭಿವೃದ್ಧಿ ಕೆಲಸಗಳಿಗಾಗಿ ಸುಮಾರು ಒಂದು ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಕ್ರೀಡಾಂಗಣದ ಅಗಲೀಕರಣದ ಕಾಮಗಾರಿಯು ಆರಂಭಗೊಂಡಿದೆ.

100 ಅಡಿಗೂ ಎತ್ತರದಲ್ಲಿ ಮಣ್ಣು ರಾಶಿ

ಎತ್ತರವಾಗಿದ್ದ ಕ್ರೀಡಾಂಗಣವನ್ನು ಸಮತಟ್ಟು ಮಾಡುವ ಸಂದರ್ಬದಲ್ಲಿ ತೆಗೆದ ಮಣ್ಣನ್ನು ಕ್ರೀಡಾಂಗಣದ ಕೆಳ ಭಾಗದಲ್ಲಿರುವ ಪ್ರದೇಶದಲ್ಲಿ ಸುರಿಯಲಾಗಿದೆ. ಹೀಗೆ ಸುರಿದ ಮಣ್ಣು ಇದೀಗ ಮೈದಾನದ ಕೆಳ ಭಾಗದಲ್ಲಿರುವ ಆರು ಕುಟುಂಬಗಳಲ್ಲಿ ಪ್ರಾಣ ಭಯದ ವಾತಾವರಣವನ್ನು ನಿರ್ಮಾಣಗೊಳಿಸಿದೆ. ಅವೈಜ್ಞಾನಿಕವಾಗಿ ಲೋಡುಗಟ್ಟಲೆ ಮಣ್ಣನ್ನು ಈ ಭಾಗದಲ್ಲಿ ಸುರಿಯಲಾಗಿದ್ದು, ಸುಮಾರು 100 ಅಡಿಗೂ ಎತ್ತರದಲ್ಲಿ ಮಣ್ಣನ್ನು ರಾಶಿ ಹಾಕಲಾಗಿದೆ.

ತಡೆಗೋಡೆಯೇ ಇಲ್ಲ

ಮಣ್ಣು ಕೆಳ ಭಾಗಕ್ಕೆ ಬೀಳದಂತೆ ತಡೆಗೋಡೆಯನ್ನು ನಿರ್ಮಿಸದ ಹಿನ್ನಲೆಯಲ್ಲಿ ಸಣ್ಣ ಮಳೆಗೂ ನೀರು ಸಹಿತ ಮಣ್ಣು ಕೆಳ ಭಾಗದಲ್ಲಿರುವ ಮನೆಗಳ ಮೇಲೆ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ತಡೆಗೋಡೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಶಾಸಕರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ, ಈ ವರೆಗೂ ತಡೆಗೋಡೆ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಇದನ್ನೂ ಓದಿ: Karwar to Bengaluru: ಪ್ರಯಾಣಿಕರಿಗೆ ಖುಷಿ ಸುದ್ದಿ, ಇನ್ಮೇಲೆ 45 ನಿಮಿಷ ಬೇಗನೇ ಬೆಂಗಳೂರು ತಲುಪಿ!

ವಾರದ ಹಿಂದೆ ಸುಳ್ಯ ಪರಿಸರದಲ್ಲಿ ಸುರಿದ ಸಣ್ಣ ಮಳೆಗೇ ಈ ಮಣ್ಣುಗಳ ರಾಶಿ ನೀರಿನೊಂದಿಗೆ ಕೆಳ ಭಾಗಕ್ಕೆ ಹರಿದಿದ್ದು, ಬಹುತೇಕ ಕೃಷಿ ತೋಟಗಳಲ್ಲಿ ಮಣ್ಣು ತುಂಬಿದೆ. ಭಾರೀ ಪ್ರಮಾಣದ ಮಣ್ಣಿನ ರಾಶಿ ಇರುವ ಈ ಪ್ರದೇಶದಲ್ಲಿ ನೀರು ಹಾದು ಹೋಗಲು ಸಣ್ಣ ತೋಡನ್ನು ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ಸುರಿಯುವ ಮಳೆಗೆ ಹಳ್ಳದ ಜೊತೆಗೆ ಮಣ್ಣು ಕೆಳ ಭಾಗದಲ್ಲಿರುವ ಮನೆಗಳ ಮೇಲೆ ನುಗ್ಗಿ ಕೊಡಗಿನ ಜೋಡುಪಾಲದಂತಹ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ನವನೀತ್ ಮತ್ತು ಗೌರೀಶಂಕರ್.

ಎಸ್.ಅಂಗಾರ ಸ್ಥಳಕ್ಕೆ ಭೇಟಿ

ಈ ಹಿಂದೆ ಕ್ರೀಡಾಂಗಣದ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಡೆಸಲಾಗಿತ್ತಾದರೂ, ಬಳಿಕ ಕಾಮಗಾರಿಯನ್ನು ದಿಕ್ಕು ದೆಸೆ ಇಲ್ಲದಂತೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಆಕಾಶದೆತ್ತರಕ್ಕೆ ಮಣ್ಣು ಹಾಕಿ, ಮುಂದಿನ ಆಗುಹೋಗುಗಳ ಬಗ್ಗೆ ಅರಿವೇ ಇಲ್ಲದ ಕೆಲ ವ್ಯಕ್ತಿಗಳು ಈ ಕಾಮಗಾರಿಗಳ ಮೇಲುಸ್ತುವಾರಿಯನ್ನು ವಹಿಸಿಕೊಂಡಿರುವುದು ಸದ್ಯದ ಪರಿಸ್ಥಿತಿಗೆ ಕಾರಣವಾಗಿದೆ. ಈ ಹಿಂದೆ ತಡೆಗೋಡೆ ನಿರ್ಮಿಸಿಕೊಡುವ ಭರವಸೆ ನೀಡಿದ್ದ ಸುಳ್ಯ ಶಾಸಕ ಹಾಗೂ ಸಚಿವರೂ ಆಗಿರುವ ಎಸ್.ಅಂಗಾರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಇದನ್ನೂ ಓದಿ: Rain in Karnataka: ಚನ್ನಪಟ್ಟಣದಲ್ಲಿ ಭಾರೀ ಗಾಳಿಮಳೆ, ಸಿಡಿಲಿಗೆ 16ಕ್ಕೂ ಕುರಿ, ಮೇಕೆ ಸಾವು, ರೈತರು ಅದೃಷ್ಟವಶಾತ್ ಪಾರು

ಅಲ್ಲದೆ ಮಣ್ಣು ಹಾಕಿರುವ ಪ್ರದೇಶದುದ್ದಕ್ಕೂ ಪ್ಲಾಸ್ಟಿಕ್ ಹೊದಿಕೆ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಎರಡು ಎಕರೆ ಪ್ರದೇಶದಷ್ಟು ಹರಡಿರುವ ಮಣ್ಣು ಹಾಕಿರುವ ಪ್ರದೇಶಕ್ಕೆ ಹಾಕಲು ಪ್ಲಾಸ್ಟಿಕ್ ಹೊದಿಕೆಗೆ ತಗಲುವ ವೆಚ್ಚವನ್ನು  ತಡೆಗೋಡೆಗೆ ವ್ಯಯಿಸಿದಲ್ಲಿ ಶಾಶ್ವತ ಪರಿಹಾರ ಪಡೆಯಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿ ಪೂಜಾ.

ಸರಕಾರದ ಹಣವನ್ನು ಗೊತ್ತುಗುರಿ ಇಲ್ಲದ ವ್ಯಕ್ತಿಗಳ ಕೈಗೆ ನೀಡಿದಲ್ಲಿ ಯಾವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದಕ್ಕೆ ಸುಳ್ಯದ ಶಾಂತಿನಗರ ತಾಲೂಕು ಕ್ರೀಡಾಂಗಣ ಒಂದು ಉದಾಹರಣೆಯಾಗಿ ನಮ್ಮ ಮುಂದಿದೆ. ಇನ್ನಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮಳೆಗಾಲದಲ್ಲಿ ಇಲ್ಲಿನ ಪರಿಸ್ಥಿತಿ ಕೈ ಮೀರು ಹೋಗುವ ಸಾಧ್ಯತೆಯೂ ಇದೆ.
Published by:Divya D
First published: