Puttur: ಪುತ್ತೂರಿನಲ್ಲೊಂದು ಅವೈಜ್ಞಾನಿಕ ರೈಲ್ವೇ ಮೇಲ್ಸೇತುವೆ; ಎಚ್ಚರ ತಪ್ಪಿದ್ರೆ 50 ಅಡಿ ಆಳಕ್ಕೆ ಬೀಳ್ತೀರಿ

ಜನರ ಸಮಸ್ಯೆಗೆ ಪರಿಹಾರ ನೀಡಲೆಂದು ನಿರ್ಮಾಣಗೊಂಡ ಈ ಮೇಲ್ಸೇತುವೆ ಇದೀಗ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣಗೊಂಡ ಈ ಮೇಲ್ಸೇತುವೆ ಜನರಿಗೆ ಉಪಕಾರವಾಗುವ ಬದಲು ಸಮಸ್ಯೆಯಾಗಿ ಬದಲಾಗಿರುವುದು ಮಾತ್ರ ವಿಪರ್ಯಾಸವೇ.

ಫ್ಲೈ ಓವರ್

ಫ್ಲೈ ಓವರ್

  • Share this:
ಜನರ ಮನವಿ ಹಾಗೂ ಒತ್ತಡಕ್ಕೆ ಮಣಿದು ಸರಕಾರ (Government) ಕೆಲವು ಕಾಮಗಾರಿಗಳನ್ನೇನೋ ಕೈಗೊಳ್ಳುತ್ತದೆ. ಆದರೆ ಆ ಕಾಮಗಾರಿ ಜನರ ಸಮಸ್ಯೆಗೆ ಪರಿಹಾರ ನೀಡ ಬಲ್ಲದೇ ಎನ್ನುವುದರ ಬಗ್ಗೆ ಆಲೋಚನೆಯನ್ನು ಮಾಡೋದು ಬಹಳ ಕಡಿಮೆಯೇ. ಇಂಥಹುದೇ ಒಂದು ಕಾಮಗಾರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ (Puttur, Dakshina Kannada). ರೈಲ್ವೆ ಕ್ರಾಸಿಂಗ್ ನಲ್ಲಿ ಮೇಲ್ಸೇತುವೆ (Railway Flyover) ನಿರ್ಮಿಸಬೇಕೆನ್ನುವ ಹಲವು ವರ್ಷಗಳ ಒತ್ತಾಯದ ಫಲವಾಗಿ ನಿರ್ಮಾಣಗೊಂಡ ಮೇಲ್ಸೇತುವೆಯೊಂದು ಇದೀಗ ಜನರಿಗೆ ಉಪಕಾರಿಯಾಗುವ ಬದಲು ಸಮಸ್ಯೆಯಾಗಿಯೇ ಬದಲಾಗಿದೆ. ಇದ್ದ ರಸ್ತೆಯನ್ನು ಮುಚ್ಚಿ, ಅಂಕುಡೊಂಕಾದ ರಸ್ತೆಯ (Zigzag Road) ಮಧ್ಯೆಯೊಂದು ಅವೈಜ್ಞಾನಿಕ ಮೇಲ್ಸೇತುವೆ (Unscientific Flyover) ನಿರ್ಮಿಸುವ ಮೂಲಕ ವಾಹನ ಸವಾರರು ಬಹಳಷ್ಟು ತೊಂದರೆಯನ್ನು ಎದುರಿಸುವಂತಾಗಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುರ ಎಂಬಲ್ಲಿ ರೈಲ್ವೆ ಇಲಾಖೆ (Indian Railway) ನೂತನವಾಗಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ. ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಿಂದ (Mani- mysuru State Highway) ಕೆದಿಲ ಮಾರ್ಗವಾಗಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ (National Highway) ಸಂಪರ್ಕ ಕಲ್ಪಿಸುವ ರಸ್ತೆಗೆ ಈ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ.

ಹಲವು ವರ್ಷಗಳ ಬೇಡಿಕೆ ಈಡೇರಿಕೆ

ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಮುರ ರೈಲ್ವೇ ಕ್ರಾಸಿಂಗ್ ಬಳಿ ಮೇಲ್ಸೇತುವೆ ನಿರ್ಮಿಸಬೇಕೆಂಬ ಈ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆ ಇದೀಗ ನೆರವೇರಿದೆ. ಆದರೆ ಹಿಂದೆ ನೇರ ಇದ್ದ ರಸ್ತೆಯನ್ನು ಇದೀಗ ಅಂಕುಡೊಂಕಾಗಿ ಮಾಡಿ , ಮೇಲ್ಸೇತುವೆಯನ್ನು ನಿರ್ಮಿಸಿರುವುದು ವಾಹನ ಸವಾರರ ಆಕ್ರೋಶಕ್ಕೂ ಕಾರಣವಾಗಿದೆ.

ಇದನ್ನೂ ಓದಿ:  Puttur: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ

ನೇರ, ಅಡ್ಡವಾಗಿ ಮೇಲ್ಸೇತುವೆ ನಿರ್ಮಾಣ

ರಸ್ತೆಗೆ ನೇರವಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ರಸ್ತೆ ಬದಿಯಿರುವ ಅಂಗಡಿಗಳನ್ನು ತೆರವುಗೊಳಿಸುವುದನ್ನು ತಪ್ಪಿಸುವುದಕ್ಕಾಗಿ ರಸ್ತೆಯನ್ನೂ, ಮೇಲ್ಸೇತುವೆಯನ್ನೂ ಕೆಲವೆಡೆ ನೇರ, ಇನ್ನು ಕೆಲವೆಡೆ ಅಡ್ಡವಾಗಿ ನಿರ್ಮಿಸಲಾಗಿದೆ. ಇದರಿಂದಾಗಿ ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸುವ ವಾಹನಗಳಿಗೆ ಎದುರುಗಡೆಯಿಂದ ಬೇರೆ ವಾಹನ ಬರುವುದು ಕಾಣಿಸುತ್ತಿಲ್ಲ.

ಎಚ್ಚರ ತಪ್ಪಿದ್ರೆ 50 ಅಡಿ ಆಳಕ್ಕೆ ಬೀಳ್ತೀರಿ

ಹಗಲು ಹೊತ್ತಿನಲ್ಲಿ ಇದರಿಂದ ಸಮಸ್ಯೆಯಾಗದಿದ್ದರೂ, ರಾತ್ರಿ ಮಾತ್ರ ವಾಹನ ಸವಾರಿಗೆ ಭಾರೀ ತೊಂದರೆಯಾಗುತ್ತಿದೆ. ಒಂದು ವೇಳೆ  ಮೇಲ್ಸೇತುವೆಯಲ್ಲಿ ಕಣ್ತಪ್ಪಿ ನೇರವಾಗಿ ಚಲಾಯಿಸಿದ್ದೇ ಆದಲ್ಲಿ 50 ಅಡಿ ಪಾತಾಳಕ್ಕೆ ಬೀಳಬೇಕಾದ ಪರಿಸ್ಥಿತಿಯಿದೆ.

ಮಣ್ಣು ಕುಸಿಯುವ ಆತಂಕ

ಈ ಮೇಲ್ಸೇತುವೆಯಲ್ಲಿ ವಾಹನ ಚಲಾಯಿಸಿಕೊಂಡು ಬಂದ ಸಂದರ್ಭದಲ್ಲಿ ಸೇತುವೆಯ ಕೊನೆ ಭಾಗದಲ್ಲಿ ರಸ್ತೆ ಎಲ್ಲಿದೆ ಎಂದು ಹುಡುಕುವಂತಹ ಸ್ಥಿತಿಯಿದೆ. ಒಂದು ವೇಳೆ ರಸ್ತೆ ನೇರವಾಗಿಯೇ ಇದೆ ಎಂದು ವಾಹನ ಚಲಾಯಿಸಿದಲ್ಲಿ ಪಾತಾಳಕ್ಕೆ ಬೀಳೋದು ಗ್ಯಾರೆಂಟಿಯಾಗಿದೆ. ಅಲ್ಲದೆ ಮೇಲ್ಸೇತುವೆಯ ಬದಿಯಲ್ಲಿ ಕಳೆದ ಬಾರಿಯ ಮಳೆಗೆ ಮಣ್ಣು ಕುಸಿತವೂ ಆಗಿದ್ದು, ಈ ಬಾರಿಯೂ ಕುಸಿತವಾಗುವ ಭೀತಿಯಲ್ಲಿ ಇಲ್ಲಿನ ಸವಾರರಿದ್ದಾರೆ.

ಉಪಕಾರವಾಗುವ ಬದಲು ಸಮಸ್ಯೆಯೇ ಹೆಚ್ಚು

ಜನರ ಸಮಸ್ಯೆಗೆ ಪರಿಹಾರ ನೀಡಲೆಂದು ನಿರ್ಮಾಣಗೊಂಡ ಈ ಮೇಲ್ಸೇತುವೆ ಇದೀಗ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣಗೊಂಡ ಈ ಮೇಲ್ಸೇತುವೆ ಜನರಿಗೆ ಉಪಕಾರವಾಗುವ ಬದಲು ಸಮಸ್ಯೆಯಾಗಿ ಬದಲಾಗಿರುವುದು ಮಾತ್ರ ವಿಪರ್ಯಾಸವೇ.

ರೇಲ್ವೇ ಮೇಲ್ಸುತವೆ ಏನೋ ನಿರ್ಮಾಣವಾಗಿದೆ. ಈಗ ರಸ್ತೆಯ ಇಕ್ಕೆಲಗಳಲ್ಲಿ ಮಾರ್ಗಸೂಚಿ ಫಲಕಗಳು, ಬದಿಯಲ್ಲಿ ತಡೆಗೋಡೆ ನಿರ್ಮಿಸಿದ್ರೆ ಅಪಾಯ ತಡೆಯಬಹುದು ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಪುತ್ತೂರು KSRTC ಬಸ್ ನಿಲ್ದಾಣಕ್ಕೆ ಇನ್ನು ತುಳುನಾಡು ವೀರರಾದ 'ಕೋಟಿ ಚೆನ್ನಯ'ರ ಹೆಸರು

ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಈ ಮೇಲ್ಸೇತುವೆಯ ಬಗ್ಗೆ ಗಮನಹರಿಸಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
Published by:Mahmadrafik K
First published: