HOME » NEWS » State » UNLOCK 2 0 FALLOW THESE TIPS BEFORE YOU STEP OUT FROM HOME AFTER LOCKDOWN LG

ಅನ್​ಲಾಕ್​ ಆಯ್ತು ಅಂತ ಮನೆಯಿಂದ ಹೊರಗೆ ಹೋಗ್ತಿದಿರಾ..? ಹಾಗಿದ್ರೆ ಈ ವಿಷಯಗಳ ಬಗ್ಗೆ ಗಮನ ಇರಲಿ..!

ಅನ್​ಲಾಕ್​ ಬಳಿಕ ಮನೆಯಿಂದ ಹೊರಗೆ ಹೋಗುವ ಮುನ್ನ ಕೆಲವೊಂದಿಷ್ಟು ನಿಯಮಗಳು, ಸಲಹೆಗಳನ್ನು ಪಾಲಿಸಿದರೆ ಕೊರೋನಾ ನಿಮ್ಮ ಬಳಿ ಸುಳಿಯುವುದೇ ಇಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುವುದರಿಂದ ಜಾಗರೂಕತೆಯಿಂದ ಇರಿ.

news18-kannada
Updated:June 20, 2021, 7:52 AM IST
ಅನ್​ಲಾಕ್​ ಆಯ್ತು ಅಂತ ಮನೆಯಿಂದ ಹೊರಗೆ ಹೋಗ್ತಿದಿರಾ..? ಹಾಗಿದ್ರೆ ಈ ವಿಷಯಗಳ ಬಗ್ಗೆ ಗಮನ ಇರಲಿ..!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜೂ.20): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆ, ಲಾಕ್​ಡೌನ್​ ಸಡಿಲಿಕೆ ಮಾಡಲಾಗುತ್ತಿದೆ. ಈ ಮೊದಲು ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಷರತ್ತುಬದ್ಧ ಅನ್​ಲಾಕ್ ಮಾಡಲಾಗಿತ್ತು. ಈಗ 16 ಜಿಲ್ಲೆಗಳಲ್ಲಿ ಲಾಕ್​ಡೌನ್​ ನಿಯಮಗಳನ್ನು ಸಡಿಲಿಕೆ ಮಾಡಿ ಸಿಎಂ ಬಿಎಸ್​ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಅಗತ್ಯ ವಸ್ತುಗಳ ಖರೀದಿಗೆ ಮತ್ತು ಹೋಟೆಲ್​, ​​ರೆಸ್ಟೋರೆಂಟ್​ಗಳಿಗೆ ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜೊತೆಗೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ಮತ್ತು ಮೆಟ್ರೋ ಸಂಚಾರಕ್ಕೂ ಅನುಮತಿ ಕೊಡಲಾಗಿದೆ. ಶೇ.50ರಷ್ಟು ಆಸನ ಭರ್ತಿಯೊಂದಿಗೆ ಬಸ್​ಗಳು ಕಾರ್ಯಾಚರಣೆ ನಡೆಸಬಹುದಾಗಿದೆ.

ಲಾಕ್​ಡೌನ್​ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂದು ಜನರು ಮೈಮರೆಯದೆ ಜಾಗ್ರತೆಯಿಂದ ಇರಬೇಕಾಗಿರುವುದು ಮುಖ್ಯವಾಗುತ್ತದೆ. ಅನ್​ಲಾಕ್​ ಆಗಿದೆ ಎಂದು ಬೇಕಾಬಿಟ್ಟಿ ತಿರುಗಾಡುವುದು, ಅನಗತ್ಯವಾಗಿ ರಸ್ತೆಗಿಳಿಯುವುದು, ಕೋವಿಡ್ ನಿಯಮಗಳನ್ನು ಪಾಲಿಸದೆ ಬೇಜವಾಬ್ದಾರಿತನ ತೋರಿಸುವುದು.. ಇವೆಲ್ಲಾ ನಿಮ್ಮ ಆರೋಗ್ಯಕ್ಕೆ ಅಪಾಯ ತರಬಲ್ಲವು. ಹೀಗಾಗಿ ಅನ್​ಲಾಕ್​ ಬಳಿಕ ಮನೆಯಿಂದ ಹೊರಹೋಗುವ ಮುನ್ನ ಸ್ವಲ್ಪ ಎಚ್ಚರ ವಹಿಸಿ. ಯಾಕೆಂದರೆ ಈ ಸಂದರ್ಭದಲ್ಲಿ ಸುರಕ್ಷತೆಯೇ ಮುಖ್ಯ. ನೀವು ಸುರಕ್ಷಿತವಾಗಿದ್ದರೆ, ನಿಮ್ಮ ಕುಟುಂಬದವರೂ ಸಹ ಸೇಫ್​ ಆಗಿ ಇರುತ್ತಾರೆ.

ಇದನ್ನೂ ಓದಿ:Astrology: ಧನು ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸುವುದು ಅವಶ್ಯ; ಇಲ್ಲಿದೆ ದ್ವಾದಶ ರಾಶಿ ಫಲ

ಅನ್​ಲಾಕ್​ ಬಳಿಕ ಮನೆಯಿಂದ ಹೊರಗೆ ಹೋಗುವ ಮುನ್ನ ಕೆಲವೊಂದಿಷ್ಟು ನಿಯಮಗಳು, ಸಲಹೆಗಳನ್ನು ಪಾಲಿಸಿದರೆ ಕೊರೋನಾ ನಿಮ್ಮ ಬಳಿ ಸುಳಿಯುವುದೇ ಇಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುವುದರಿಂದ ಜಾಗರೂಕತೆಯಿಂದ ಇರಿ. ಕೋವಿಡ್​ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಹಾಗಿದ್ರೆ ನಿಮ್ಮ ಆರೋಗ್ಯ ಕುರಿತಾಗಿ ಕಾಳಜಿವಹಿಸಲೇಬೇಕಾಗಿರುವ ಕೆಲವೊಂದು ಸಲಹೆಗಳು ಇಲ್ಲಿವೆ.

ಮನೆಯಿಂದ ಹೊರಹೋಗುವ ಮುನ್ನ ಈ ಅಂಶಗಳನ್ನು ನೆನಪಲ್ಲಿಡಿ...

  • ಕೊರೋನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಅತೀ​​ ಹೆಚ್ಚು ಪರಿಣಾಮಕಾರಿ ಅಸ್ತ್ರವಾಗಿದೆ. ಹೀಗಾಗಿ ನೀವು ಮನೆಯಿಂದ ಹೊರಗೆ ಕಾಲಿಡುವ ಮುನ್ನ ನೀವು ನಿಮ್ಮ ಮೂಗು ಹಾಗೂ ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್​ ಧರಿಸಿ. ಡಬಲ್​ ಮಾಸ್ಕ್​ ಧರಿಸಿದರೆ ಇನ್ನೂ ಒಳಿತು. ನೀವು ಧರಿಸುವ ಮಾಸ್ಕ್​ ಸ್ವಚ್ಛವಾಗಿರಲಿ.
  • ಕೋವಿಡ್​ ಸೋಂಕಿನ ವಿರುದ್ಧದ ಯುದ್ಧದಲ್ಲಿ ಸ್ಯಾನಿಟೈಸರ್​ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮನೆಯಿಂದ ಈಚೆ ಹೋಗುವ ಮುನ್ನ ಸ್ಯಾನಿಟೈಸರ್ ಕೊಂಡೊಯ್ಯುವುದನ್ನು ಮರೆಯದಿರಿ. ಜೊತೆಗೆ ಆಗಾಗ ಸ್ಯಾನಿಟೈಸರ್​ನಿಂದ ನಿಮ್ಮ ಎರಡೂ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ.

  • ಇನ್ನು, ಅನ್​​ಲಾಕ್​​ನಲ್ಲಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಹಾಗೂ ಮೆಟ್ರೋ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಬಸ್​ ಸಂಚಾರ ಮಾಡಬೇಡಿ. ಸಾರ್ವಜನಿಕ ಸಾರಿಗೆಗಿಂತ ಸ್ವಂತ ವಾಹನದಲ್ಲಿ ಹೋಗುವುದು ಒಳಿತು. ಯಾಕೆಂದರೆ ಸಾರ್ವಜನಿಕ ಸಾರಿಗೆಗಳಲ್ಲಿ ಜನರು ವಿವಿಧ ಕಡೆಯಿಂದ ಬರುತ್ತಾರೆ. ಯಾರಿಗೆ ಸೋಂಕು ಇರುತ್ತದೆಯೋ, ಯಾರಿಂದ ಹರಡುತ್ತದೆಯೋ ಹೇಳಲು ಸಾಧ್ಯವಾಗುವುದಿಲ್ಲ. ಕ್ಯಾಬ್​ ಅಥವಾ ಆಟೋರಿಕ್ಷಾ ಬಳಸಿದರೆ ಇನ್ನೂ ಉತ್ತಮ.

  • ಕೈಗಳಿಗೆ ಕೈಗವಸುಗಳನ್ನು ಧರಿಸಿದರೆ ಒಳ್ಳೆಯದು. ಯಾಕೆಂದರೆ ಈಗ ಕೊರೋನಾ ಸೋಂಕು ಎಲ್ಲಿದೆ ಎಂದು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ವಸ್ತುಗಳನ್ನು ನೇರವಾಗಿ ಮುಟ್ಟಬೇಡಿ. ಕೈಗಳಿಗೆ ಗ್ಲೌಸ್​ ಧರಿಸಿ.

  • ಪದೇ ಪದೇ ನಿಮ್ಮ ಕಣ್ಣು, ಬಾಯಿ ಮೂಗನ್ನು ಮುಟ್ಟಿಕೊಳ್ಳಬೇಡಿ. ಆಗಾಗ್ಗೆ ಕೈಗಳಿಗೆ ಸ್ಯಾನಿಟೈಸರ್​ ಹಾಕಿಕೊಳ್ಳಿ.

  • ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಸೇರಬೇಡಿ, ಜನರ ಗುಂಪಿರುವ ಜಾಗದಲ್ಲೂ ಇರಬೇಡಿ. ಗುಂಪುಗಟ್ಟಿದ ಜನರಿಂದ ದೂರವೇ ಇರಿ.

  • ಈ ಸಮಯದಲ್ಲಿ ಆದಷ್ಟು ಮನೆಯಲ್ಲೇ ಇರುವುದು ಒಳ್ಳೆಯದು. ಹೀಗಾಗಿ ಹೊರಗೆ ಹೋದರೂ ಸಹ ಹೆಚ್ಚು ಸಮಯ ಇರಬೇಡಿ. ಬೇಗನೆ ಮನೆ ಸೇರಿಕೊಳ್ಳಿ.

  • ಮನೆಗೆ ಹಿಂದಿರುಗಿದಾಗ, ಮುಖ, ಕೈ-ಕಾಲು ತೊಳೆದುಕೊಳ್ಳುವುದನ್ನು ಮರೆಯಬೇಡಿ. ಮನೆಯಲ್ಲಿ ವಯಸ್ಸಾದವರು, ಸಣ್ಣ ಮಕ್ಕಳು ಇದ್ದರೆ ಜಾಗ್ರತೆ ವಹಿಸಿ. ಮನೆಗೆ ಬಂದ ಕೂಡಲೇ ಅವರ ಬಳಿ ಹೋಗುವುದನ್ನು ತಪ್ಪಿಸಿ.


Youtube Video

ಒಟ್ಟಾರೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ನಿಮ್ಮ ಆರೋಗ್ಯ ಕಾಳಜಿ ಮಾಡಿಕೊಳ್ಳುವುದರ ಜೊತೆಗೆ ನಿಮ್ಮ ಮನೆಯವರ ಆರೋಗ್ಯವನ್ನು ಕಾಪಾಡಿಕೊಳ್ಳಿ. ಜಾಗ್ರತೆಯಿಂದಿರಿ.
Published by: Latha CG
First published: June 20, 2021, 7:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories