ಕೇಂದ್ರ ಸಚಿವರ ಶೋಭಾ ಮಂದಿರ: ಇದುವೇ ಅವರ ಶಕ್ತಿಕೇಂದ್ರ

news18
Updated:February 14, 2018, 8:12 PM IST
ಕೇಂದ್ರ ಸಚಿವರ ಶೋಭಾ ಮಂದಿರ: ಇದುವೇ ಅವರ ಶಕ್ತಿಕೇಂದ್ರ
news18
Updated: February 14, 2018, 8:12 PM IST
ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ (ಫೆ.14): ಆಗ್ರಾದಲ್ಲಿರುವ ತಾಜ್ ಮಹಲ್ ನ್ನು ಯಾರು ಮತ್ತು ಯಾಕೆ ನಿರ್ಮಿಸಿದ್ದು ಎಂಬುದು ಎಲ್ಲಿರಿಗೂ ಗೊತ್ತಿರುವ ವಿಷಯ. ಷಹಾಜಹಾನ್ ತನ್ನ ಪತ್ನಿ ಮುಮ್ತಾಜ್ ಗಾಗಿ ನಿರ್ಮಿಸಿರುವ ತಾಜ್ ಮಹಲ್ ಇಂದಿಗೂ ವಿಶ್ವಾದ್ಯಂತ ಪ್ರೇಮ ಸೌಧ ಎಂದೇ ಹೆಸರುವಾಸಿ. ಇಂಥದ್ದೆ ಒಂದು ಭಾವನಾತ್ಮಕ ಸಂಬಂಧ ಮಂದಿರವೊಂದು ಉತ್ತರ ಕರ್ನಾಟಕದಲ್ಲಿದೆ. ಅದು ಅಂತಿಂಥವರು ನಿರ್ಮಿಸಿದ್ದಲ್ಲ.

ಕಳೆದ 40 ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿರುವ ಜನಪ್ರತಿನಿಧಿ ಒಬ್ಬರು ತಮ್ಮ ಮಡದಿಯ ನೆನಪಿನಲ್ಲಿ ನಿರ್ಮಿಸಿರುವ ಮಂದಿರ. ಅದುವೇ ಶೋಭಾ ಮಂದಿರ. ಇದನ್ನು ನಿರ್ಮಿಸಿದ್ದು  ಕೇಂದ್ರ ಸಚಿವ ರಮೇಶ ಜಿಗಜಿಣಗಿ.

ರಮೇಶ ಜಿಗಜಿಣಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾದಲ್ಲಿ ಜನಿಸಿದವರು. ಹಂತಹಂತವಾಗಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ ರಮೇಶ ಜಿಗಜಿಣಗಿ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಕಟ್ಟಾ ಅನುಯಾಯಿ. ಒಂದು ಹಂತದಲ್ಲಿ ಸಿಎಂ ಆಗುವವರೆಗೂ ಇವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ನಂತರ ಜನತಾ ದಳ, ಲೋಕಶಕ್ತಿ ಮತ್ತು ಈಗ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದು, ಸಧ್ಯಕ್ಕೆ ಕೇಂದ್ರ ಸರಕಾರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವರೂ ಆಗಿದ್ದಾರೆ.

ರಮೇಶ ಜಿಗಜಿಣಗಿ ಅವರಿಗೆ ಪತ್ನಿ ಶೋಭಾ ಎಂದರೆ ಎಲ್ಲಿಲ್ಲದ ಪ್ರೀತಿ. ರಮೇಶ ಜಿಗಜಿಣಗಿ ರಾಜಕೀಯದಲ್ಲಿ ಬ್ಯುಸಿಯಾಗಿ ಜನರನ್ನು ಸಂಭಾಳಿಸುತ್ತಿದ್ದರೆ ಇತ್ತ ಇವರ ಕುಟುಂಬವನ್ನು ಸಾಕಿ, ಸಲಹಿ ಎಲೆ ಮಹೆಯ ಕಾಯಿಯಂತೆ ಕುಟುಂಬವನ್ನು ಸಂರಕ್ಷಿಸಿಕೊಂಡು ಬಂದವರು ಶೋಭಾ. ಇವರು 21.06.2006 ರಂದು ನಿಧನರಾದರು. ಆಗ ರಮೇಶ ಜಿಗಜಿಣಗಿ ಅವರಿಗೆ ಆದ ಅಘಾತ ಅಷ್ಟಿಷ್ಟಲ್ಲ. ವಿಜಯಪುರ ನಗರದ ಹೊರ ವಲಯದ ಭೂತ್ನಾಳ ಕೆರೆಯ ಪಕ್ಕದಲ್ಲಿರುವ ವಿನೋದ ಫಾರ್ಮನಲ್ಲಿ ವಾಸಿಸುತ್ತಿದ್ದ ಜಿಗಜಿಣಗಿ ಅವರ ಇಬ್ಬರು ಮಕ್ಕಳು ಹಾಗೂ ಸಂಬಂಧಿಗಳನ್ನು ಇವರೆ ನಿಭಾಯಿಸುತ್ತಿದ್ದರು.

ರಮೇಶ ಜಿಗಜಿಣಗಿ ಶಾಸಕ, ಸಚಿವ, ಸಂಸದರಾದರೂ ಅವರ ಪತ್ನಿ ಶೋಭಾ ಎಂದಿಗೂ ಬಹಿರಂಗವಾಗಿ ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಂಡವರಲ್ಲ. ಪತಿಯ ರಾಜಕೀಯ ಜೀವನದಲ್ಲಿ ಎಂದೂ ಹಸ್ತಕ್ಷೇಪ ಮಾಡಿದವರಲ್ಲ. ಇವರ ಬಹುತೇಕ ಬೆಂಬಲಿಗರು ಹಾಗೂ ಹಿತೈಷಿಗಳು ಅವರ ಮುಖವನ್ನೂ ನೋಡಿರಲಿಲ್ಲ. ಅಷ್ಟೋಂದು ಸರಳ ಜೀವನ ಶೋಭಾ ರಮೇಶ ಜಿಗಜಿಣಗಿ ಅವರದ್ದಾಗಿತ್ತು

ಈ ಹಿಂದೆ ರಮೇಶ ಜಿಗಜಿಣಗಿ ಶಾಸಕರಾಗಿ, ರಾಜ್ಯ ಸಂಪುಟದಲ್ಲಿ ಸಚಿವರಾಗಿದ್ದಾಗ ಕುಟುಂಬ ನಿರ್ವಹಣೆಗಾಗಿ ಗಮನ ಹರಿಸುವುದು ಕಷ್ಟವಾಗಿತ್ತು. ಆದರೆ, ಅವರ ಪತ್ನಿ ಶೋಭಾ ರಮೇಶ ಜಿಗಜಿಣಗಿ ಮಾತ್ರ ತಮ್ಮ ಕುಟುಂಬವನ್ನು ಸಲಹುತ್ತ ಕುಟುಂಬ ನಿರ್ವಹಣೆಗಾಗಿ ಪತಿ ನೀಡುತ್ತಿದ್ದ ಹಣದಲ್ಲಿ ಉಳಿತಾಯ ಮಾಡಿ ನಾಲ್ಕಾರು ಎಕರೆ ಬಂಜರು ಜಮೀನು ಖರೀದಿಸಿದ್ದರು. ಆ ಹೊಲವೇ ಈಗ ಹತ್ತಾರು ಕೋಟಿ ಬೆಲೆ ಬಾಳುತ್ತಿದೆ. ಇದೆಲ್ಲ ಸಚಿವರಿಗೆ ಗೊತ್ತಾಗಿದ್ದು, ಶೋಭಾ ಅವರು ತೀರಿಕೊಂಡ ಮೇಲೆಯೇ.
Loading...

ತಮ್ಮಲ್ಲಿ ಎಂದೂ ಏನನ್ನೂ ಬೇಡದ ಪತ್ನಿ ಶೋಭಾ ಬಗ್ಗೆ ಜಿಗಜಿಣಗಿ ಅಪಾರ ಪ್ರೀತಿ ಹೊಂದಿದ್ದರು. ತಮಗಾಗದ ಕುಟುಂಬ ನಿರ್ವಹಣೆ ಹಾಗೂ ಸಂಬಂಧಗಳನ್ನು ಜೋಪಾನವಾಗಿ ಉಳಿಸಿಕೊಂಡು ಬಂದ ಪತ್ನಿಯ ಮೇಲೆ ಅವರಿಗೆ ಎಲ್ಲಿದ್ದ ಗೌರವವಿದೆ. ಹೀಗಾಗಿಯೇ ಅದೇ ವಿನೋದ ಫಾರ್ಮ್ ನಲ್ಲಿ ತಮ್ಮ ಪತ್ನಿಯ ಸಮಾಧಿಗೆ ದೇವಸ್ಥಾನ ನಿರ್ಮಿಸಿದ್ದಾರೆ.

ಸಚಿವರು ವಾಸ ಮಾಡುವುದು ಕೂಡ ಇದೇ ವಿನೋದ ಫಾರ್ಮ್ ನಲ್ಲಿ. ಈಗ ಕೇಂದ್ರ ಸಚಿವಾರದ ಮೇಲಂತೂ ರಾಜಕೀಯ ಕೆಲಸ ಹೆಚ್ಚಾಗಿದ್ದರೂ ವಿಜಯಪುರಕ್ಕೆ ಬಂದು ವಾಸ್ತವ್ಯ ಮಾಡಿದಾಗ ಪ್ರತಿದಿನ ತಪ್ಪದೇ ಪತ್ನಿ ಶೋಭಾ ಅವರ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ತಮ್ಮ ರಾಜಕೀಯ ಜೀವನದ ಉನ್ನತಿಗೆ ಕಾರಮರಾದ ಪತ್ನಿ ಹಾಗೂ ಶಕ್ತಿದೇವತೆಯಾಗಿರುವ ಇಂದಿಗೂ ಸ್ಮರಿಸುತ್ತಾರೆ.

ಇವರ ಮಕ್ಕಳಾದ ವಿನೋದ ಮತ್ತು ಆನಂದ ಅಷ್ಟೇ ಇದುವರೆಗೆ ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ವೇದಿಕೆಯನ್ನು ಹತ್ತಿಲ್ಲ. ಯಾರೇ ಮನೆಗೆ ಬಂದೂರ ಅಷ್ಟೇ, ವಿನಯದಿಂದ ಬರಮಾಡಿಕೊಂಡು ಉಪಚಾರ ಮಾಡುತ್ತಾರೆ. ರಾಜಕೀಯವಾಗಿಯೂ ಯಾವುದೇ ಮಾತನಾಡುವುದಿಲ್ಲ. ತಾವಾಯಿತು, ತಮ್ಮ ಕಾಯಕವಾಯಿತು.

ಇಂದಿಗೂ ರಮೇಶ ಜಿಗಜಿಣಗಿ ಪ್ರತಿವರ್ಷ ತಮ್ಮ ಪತ್ನಿಯ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡುತ್ತಾರೆ. ಆ ಮೂಲಕ ತಮ್ಮ ಕುಟುಂಬದ ಉದ್ಧಾರಕ್ಕಾಗಿ ಶ್ರಮಿಸಿದ ಪತ್ನಿಯನ್ನು ಸ್ಮರಿಸುತ್ತಾರೆ. ಇದು ರಮೇಶ ಜಿಗಜಿಣಗಿ ಅವರಿಗೆ ಶೋಭಾಯಮಾನವೂ ಆಗಿದೆ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ