ಹುಬ್ಬಳ್ಳಿ(ಏ.29): ಉಚಿತ ಅಕ್ಕಿ ಕೇಳಿದವರಿಗೆ ಹಗುರವಾಗಿ ಮಾತನಾಡಿದ ಸಚಿವ ಉಮೇಶ್ ಕತ್ತಿ ಬಗ್ಗೆ ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವಿಷಾದ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತಮ್ಮ ಹೇಳಿಕೆಗೆ ಸಂಬಂಧಿಸಿ ಉಮೇಶ್ ಕತ್ತಿ ಅವರೇ ಸ್ವತಃ ವಿಷಾದ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಸಹ ಉಮೇಶ್ ಕತ್ತಿ ಹೇಳಿಕೆ ತಪ್ಪೆಂದು ಹೇಳಿದ್ದಾರೆ. ವಿಷಯ ಮುಗಿದಿದ್ದು, ಅದನ್ನು ಮತ್ತೆ ಮತ್ತೆ ಬೆಳೆಸೋದ್ರಲ್ಲಿ ಅರ್ಥವಿಲ್ಲ ಎಂದರು.
ರಾಜ್ಯದಲ್ಲಿ ಕೊರೋನಾ ಅನಿರೀಕ್ಷಿಗವಾಗಿ ವೇಗ ಪಡೆದಿದೆ. 2 ನೇ ಅಲೆ ಬರುತ್ತೆ ಅಂತ ಲೆಕ್ಕ ಇತ್ತು. ಆದರೆ ಇಷ್ಟು ಸ್ಪೀಡ್ ನಲ್ಲಿ ಬರುತ್ತೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇಂತಹ ವಿಷಯಗಳಲ್ಲಿಯೂ ಪ್ರತಿಪಕ್ಷಗಳು ರಾಜಕೀಯ ಮಾಡ್ತಿವೆ. ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಚೀಪ್ ಪಾಲಿಟಿಕ್ಸ್ ಮಾಡ್ತಿದಾರೆ ಎಂದು ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರ ಬಗ್ಗೆ ಹೇಳೋಕೆ ಸಿದ್ಧರಾಮಯ್ಯ ಬಳಿ ಏನೂ ಇಲ್ಲ. ಹೀಗಾಗಿ ಕೊರೋನಾ ನೆಪ ಇಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆ ಕಾರಣದಿಂದಾಗಿ ದೇಶದಲ್ಲಿ ಕೊರೋನಾ ಹೆಚ್ಚಾಯಿತೆಂದು ಹೇಳ್ತಿದಾರೆ. ಚತ್ತೀಸ್ಗಢ ದಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳಿವೆ. ಆದ್ರೆ ಅಲ್ಲಿ ವಿಧಾನಸಭೆ ಚುನಾವಣೆ ಇರಲಿಲ್ಲ. ಕೇರಳದಲ್ಲಿ ರಾಹುಲ್ ಗಾಂಧಿ ಗಲ್ಲಿ ಗಲ್ಲಿಗಳಲ್ಲಿ ಪ್ರಚಾರ ಮಾಡಿದ್ರು. ರಾಜ್ಯದಲ್ಲಿಯೂ ಉಪ ಚುನಾವಣೆ ನಡೆಯೋ ಮುಂಚೆ ಸಿದ್ಧರಾಮಯ್ಯ ಏನೂ ಮಾತನಾಡಲಿಲ್ಲ. ಆಗಲೇ ಉಪ ಚುನಾವಣೆ ಬೇಡ ಅನ್ನಬಹುದಿತ್ತು. ಅದನ್ನು ಬಿಟ್ಟು ಈಗ ಬೇಜವಾಬ್ದಾರಿ ಹೇಳಿಕೆ ನೀಡ್ತಿದಾರೆ. ಸಿದ್ಧರಾಮಯ್ಯ ಚೀಪ್ ಪಾಲಿಟಿಕ್ಸ್ ಮಾಡೋದನ್ನು ಬಿಡಬೇಕು ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಕೊರೋನಾ ಸೋಂಕಿತರ ಮೂತ್ರ ಪರೀಕ್ಷೆಯಿಂದ ರೋಗದ ತೀವ್ರತೆ ಊಹಿಸಲು ಸಾಧ್ಯ: ಅಧ್ಯಯನ
ಆ್ಯಂಬುಲೆನ್ಸ್ ಉದ್ಘಾಟನೆ
ಬಿಜೆಪಿಯ ಯುವ ಮೋರ್ಚಾ ಆರಂಭಿಸಿರೋ ನೂತನ ಆ್ಯಂಬುಲೆನ್ಸ್ ಸೇವೆಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. ಕೋವಿಡ್ ಸೋಂಕಿತರಿಗಾಗಿಯೇ 24 ತಾಸುಗಳ ಸೇವೆಗೆಂದು ಬಿಜೆಪಿ ಯುವ ಮೋರ್ಚಾ ಆರಂಭಿಸಿರೊ ಆ್ಯಂಬುಲೆನ್ಸ್ ಸೇವೆಗೆ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ಹೌಸ್ ಆವರಣದಲ್ಲಿ ಪ್ರಹ್ಲಾದ್ ಜೋಶಿ ಹಸಿರು ನಿಶಾನೆ ತೋರಿದರು.
ಕೊರೋನಾ ಸೋಂಕಿತರಿಗೆ ತುರ್ತು ಸೇವೆಗೆ ಆ್ಯಂಬುಲೆನ್ಸ್ ನರವಾಗಲಿ. ಆರಂಭದಲ್ಲಿ ಇರೋ ಉತ್ಸಾಹ ಕೊನೆಯವರೆಗೂ ಇರಲಿ. ಬಡ ರೋಗಿಗಳಿಗೆ ನೆರವಾಗುವಂತಾಗಲಿ ಎಂದು ಯುವ ಮೋರ್ಚಾ ಕಾರ್ಯಕರ್ತರಿಗೆ ಜೋಶಿ ಕರೆ ನೀಡಿದರು.
ಉಮೇಶ್ ಕತ್ತಿ ವಿರುದ್ಧ ಪ್ರತಿಭಟನೆ
ಲಾಕ್ ಡೌನ್ ಸಂದರ್ಭದಲ್ಲಿ ಉಚಿತ ಅಕ್ಕಿ ಕೇಳಿದವರಿಗೆ ಅವಹೇಳನಕಾರಿಯಾಗಿ ಮಾತನಾಡಿ, ಪದೇ ಪದೇ ಉದ್ಧಟತನ ಹೇಳಿಕೆ ನೀಡ್ತಿರೋ ಸಚಿವ ಉಮೇಶ್ ಕತ್ತಿ ರಾಜೀನಾಮೆಗೆ ಆಗ್ರಹಿಸಿ ಕಳಸಾ ಬಂಡೋರಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮಿನಿ ವಿಧಾನ ಸೌಧದ ಎದುರು ಸಾಂಕೇತಿಕ ಪ್ರತಿಭಟನೆ ಮಾಡಲಾಯಿತು. ಸಚಿವ ಉಮೇಶ್ ಕತ್ತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಜವಾಬ್ದಾರಿಯುತ ಸ್ಥಾನದಲ್ಲಿರೋ ಉಮೇಶ್ ಕತ್ತಿ ಅವರು ಪದೇ ಪದೇ ಬೇಜವಾಬ್ದಾರಿಯುತ ಹೇಳಿಕೆ ನೀಡ್ತಿದಾರೆ. ಬಾಯಿಗೆ ಬಂದಂತೆ ಹೇಳಿಕೆ ನೀಡೋ ಉಮೇಶ್ ಕತ್ತಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬ ಬಡವರಿಗೂ 10 ಕೆ.ಜಿ ಅಕ್ಕಿ ಉಚಿತ ವಿತರಣೆಗೆ ಆಗ್ರಹಿಸಿ, ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ